ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲ್ಗುಡಿ ಡೇಸ್‌ | ದೇಹ ದಣಿಯದ ಸ್ಥಿತಿಯೇ ಫಿಟ್‌ನೆಸ್ –ವಿಜಯ ರಾಘವೇಂದ್ರ

Last Updated 4 ಫೆಬ್ರುವರಿ 2020, 7:36 IST
ಅಕ್ಷರ ಗಾತ್ರ

ಹುಬ್ಬಳ್ಳಿ:ಇದೇ ಫೆ. 7ರಂದು ತೆರೆ ಕಾಣಲಿರುವ ತಮ್ಮ ‘ಮಾಲ್ಗುಡಿ ಡೇಸ್‌’ ಚಿತ್ರದಲ್ಲಿ ನಟ ವಿಜಯ ರಾಘವೇಂದ್ರ ವಿಭಿನ್ನ ಪ್ರಯೋಗಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದಾರೆ. 70 ವರ್ಷದ ವೃದ್ಧನಾಗಿ ಹಾಗೂ 16 ವರ್ಷದ ಹೈಸ್ಕೂಲು ಹುಡುಗನಾಗಿ ನಟಿಸಿರುವ ಅವರು, ಹರೆಯದ ಹುಡುಗನ ಪಾತ್ರಕ್ಕಾಗಿ ಬರೊಬ್ಬರಿ 19 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ.

ಹೇಳಿ ಕೇಳಿ ಅವರು ನಿತ್ಯ ಮಾಂಸಾಹಾರಿ. ಚಾಕೊಲೇಟ್, ಐಸ್‌ ಕ್ರೀಂ ಹಾಗೂ ಕೇಕ್‌ ಪ್ರಿಯ. ಆದರೂ, ಸಿನಿಮಾವೊಂದಕ್ಕಾಗಿ ದೇಹವನ್ನು ಇಷ್ಟೊಂದು ಮಾರ್ಪಾಡು ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗಿದ್ದು ಆರಂಭದಿಂದಲೂ ಕಾಯ್ದುಕೊಂಡು ಬಂದಿದ್ದ ಫಿಟ್‌ನೆಸ್.

‘ಪಾತ್ರಗಳಿಗೆ ಮನಸ್ಸನ್ನು ಒಗ್ಗಿಸಿಕೊಂಡಷ್ಟೇ ದೇಹವನ್ನು ಹದಗೊಳಿಸಿಕೊಳ್ಳುವುದು ಕಲಾವಿದರಿಗೆ ಸವಾಲು. ಇಂಥ ಸವಾಲುಗಳು ದಿಢೀರನೆ ಎದುರಾದಾಗ, ನಿಭಾಯಿಸುವುದು ಬಹಳ ಕಷ್ಟ. ಆದರೆ, ನಾನು ಆರಂಭದಿಂದಲೂ ಫಿಟ್‌ನೆಸ್‌ ಕಡೆಗೆ ಗಮನ ಕೊಡುತ್ತಿದ್ದರಿಂದ ನನಗೆ ಕಷ್ಟವೆನಿಸಲಿಲ್ಲ’ ಎನ್ನುವುದು ವಿಜಯರಾಘವೇಂದ್ರ ಅಭಿಪ್ರಾಯ.

‘ಸೋಮಾರಿತನ ಬಿಡುವುದೇ ಫಿಟ್‌ನೆಸ್ ಮಂತ್ರ. ಊಟ–ತಿಂಡಿಯಂತೆಯೇ, ವ್ಯಾಯಾಮವೂ ದಿನಚರಿಯ ಭಾಗವಾಗಬೇಕು. ನಾನೆಷ್ಟೇ ಫುಡ್ಡಿಯಾಗಿದ್ದರೂ, ವ್ಯಾಯಾಮವನ್ನು ಮಿಸ್ ಮಾಡುವುದಿಲ್ಲ. ಹಾಗಾಗಿಯೇ, ಡಯಟ್‌ ಹಂಗಿಲ್ಲದೆ ನನಗಿಷ್ಟವಾಗಿದ್ದನ್ನು ಮನಸಾರೆ ತಿನ್ನುತ್ತೇನೆ’ ಎನ್ನುತ್ತಾರೆ ಅವರು.

ಇತ್ತೀಚೆಗೆ ‘ಸಿಕ್ಸ್‌ ಪ್ಯಾಕ್ಸ್’ ಎನ್ನುವುದು ಸಿನಿಮಾ ಮಂದಿಯ ಟ್ರೆಂಡ್ ಆಗಿದೆ. ಆದರೆ, ದೇಹವನ್ನು ಹುರಿಗೊಳಿಸಿಕೊಳ್ಳುವುದೇ ಫಿಟ್‌ನೆಸ್ ಅಲ್ಲ ಎಂಬುದನ್ನು ಅಲ್ಲಗಳೆಯುವ ವಿಜಯ ರಾಘವೇಂದ್ರ, ‘ನಡೆದರೆ, ಓಡಿದರೆ, ದೈಹಿಕ ಶ್ರಮ ಬೇಡುವಂತಹ ಕೆಲಸಗಳನ್ನು ಮಾಡಿದರೂ ದೇಹ ದಣಿಯದಂತೆ ನೋಡಿಕೊಳ್ಳುವುದೇ ಫಿಟ್‌ನೆಸ್‌. ಅದಕ್ಕೆ ಮಾನಸಿಕ ಚೈತನ್ಯವೂ ಬೇಕು’ ಎಂದು ಫಿಟ್‌ನೆಸ್ ಕುರಿತು ವ್ಯಾಖ್ಯಾನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT