ಸೋಮವಾರ, ಮಾರ್ಚ್ 30, 2020
19 °C

ಸುಖವಾಗಿ ನಿದ್ರಿಸಿ ಆರೋಗ್ಯದಿಂದಿರಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಮಾನ್ಯವಾಗಿ ಗಡದ್ದಾಗಿ ನಿದ್ದೆ ಮಾಡುವುದು ಎಲ್ಲರಿಗೂ ಇಷ್ಟ. ಕೆಲವರಂತೂ ‘ಆಫೀಸಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ನಿದ್ದೆ ಬಿಟ್ಟು ಕೆಲಸ ಮಾಡಿದ್ದೇನೆ. ಹೀಗಾಗಿ, ಈ ಐದು ದಿನಗಳ ನಿದ್ದೆಯನ್ನು ವೀಕೆಂಡ್‌ನಲ್ಲಿ ಮಾಡಿ ಮುಗಿಸಿಬಿಡ್ತೀನಪ್ಪಾ‘ ಎನ್ನುತ್ತಾರೆ. 

‘ಹೀಗೆ ವಾರವೆಲ್ಲ ನಿದ್ದೆಗೆಟ್ಟು, ಆ ನಿದ್ದೆಯ ಕೊರತೆಯನ್ನು ವಾರಾಂತ್ಯದಲ್ಲಿ ಒಟ್ಟಿಗೆ ನೀಗಿಸಿಕೊಳ್ಳುತ್ತೇನೆ ಎಂದರೆ ಅದು ಆರೋಗ್ಯಪೂರ್ಣ ಲಕ್ಷಣವಲ್ಲ‘ ಎನ್ನುತ್ತಾರೆ ನಿಮಾನ್ಸ್‌ನ ವೈದ್ಯ ಡಾ.ಅರುಣ್‌ ಶಶಿಧರನ್‌ ಮತ್ತು ಜೀವನಶೈಲಿ ತರಬೇತುದಾರ ಲೂಕ್‌ ಕುಟಿನ್ಹೊ.

‘ವಿಶ್ವ ನಿದ್ರೆ’ ಮಾಸದ ಸಂದರ್ಭದಲ್ಲಿ ವೇಕ್‌ಫಿಟ್‌ ಕಂಪನಿ ತನ್ನ #ಸ್ಲೀಪ್‌ಇಂಡಿಯಾಸ್ಲೀಪ್‌ ಅಭಿಯಾನದ ಅಂಗವಾಗಿ ನಿದ್ರೆ ಮತ್ತು ಅದರ ಪ್ರಯೋಜನ ಕುರಿತು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಈ ಇಬ್ಬರು ತಜ್ಞರು ಹೀಗೆ ನಿದ್ರೆ ಕುರಿತು ಜನರಲ್ಲಿರುವ ತಪ್ಪು ಕಲ್ಪನೆಗಳ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಂಡರು. ಅವರೊಂದಿಗೆ ನಡೆಸಿದ ಮಾತುಕತೆಯ ಸಾರಾಂಶ ಇಲ್ಲಿದೆ...

ದೇಹಕ್ಕೆ ವಾರದ ಲೆಕ್ಕ ಗೊತ್ತಿಲ್ಲ

ನಮ್ಮ ದೇಹಕ್ಕೆ ಇವತ್ತು ಸೋಮವಾರ, ಮಂಗಳವಾರ ಎಂದೆಲ್ಲ ತಿಳಿಯುವುದಿಲ್ಲ. ಅದು ಗಂಟೆ ಲೆಕ್ಕದಲ್ಲಿ ಕೆಲಸ ಮಾಡುತ್ತದೆ. ’ಸ್ಲೀಪ್‌ ಬ್ಯಾಂಕ್‌‘ ಎನ್ನುವುದೆಲ್ಲ ಇಲ್ಲವೇ ಇಲ್ಲ. ಆಯಾ ದಿನದ ನಿದ್ದೆಯನ್ನು ಆ ದಿನವೇ ಮಾಡಬೇಕು. ಅದರಲ್ಲೂ ಒಬ್ಬೊಬ್ಬರ ದೇಹ ಪ್ರಕೃತಿಗೆ ಇಂತಿಷ್ಟು ಗಂಟೆ ನಿದ್ದೆ ಬೇಕು ಎಂದಿರುತ್ತದೆ. ಅದನ್ನ ನಾವು ಅರಿತುಕೊಳ್ಳಬೇಕು. ಹಾಗೆ ತಿಳಿದು, ಅಷ್ಟು ನಿದ್ದೆ ಮಾಡಲೇಬೇಕು. 

ಹೀಗೆ ಹೇಳಿದಾಗ ‘ಒಳ್ಳೆಯ ನಿದ್ದೆ ಮಾಡುವುದು ಹೇಗೆ ?‘ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ, ಅಲ್ಲವೇ ? ಅದಕ್ಕೆ ಉತ್ತರ, ನಾವು ಅನುಸರಿಸುವ ಆಹಾರ ಪದ್ಧತಿಯಲ್ಲಿದೆ. ನಮ್ಮ ಊಟ ಆರೋಗ್ಯಕರವಾಗಿದ್ದರೆ, ಪೌಷ್ಠಿಕಾಂಶದಿಂದ ಕೂಡಿದ್ದರೆ ಒಳ್ಳೆಯ ನಿದ್ದೆ ಮಾಡಬಹುದು. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ ಆಹಾರ ಪದ್ಧತಿ ಇರುತ್ತದೆ. ಅದೇ ಆಹಾರ ಸೇವಿಸಬೇಕು. ತೆಳ್ಳಗಾಗಲು ಆಹಾರ ಪದ್ಧತಿ ಬದಲಿಸಬಾರದು. ಬದಲಿಗೆ, ಮಿತ ಆಹಾರ ಸೇವಿಸಬೇಕು. ‌ಜತೆಗೆ ನಿತ್ಯ ವ್ಯಾಯಾಮ ಮಾಡಬೇಕು.ಆರೋಗ್ಯವೂ ಉತ್ತಮವಾಗಿರುತ್ತದೆ. ಚೆನ್ನಾಗಿ ನಿದ್ರೆ ಬರುತ್ತದೆ. ನಾವು ದಿನಾ ಯಾವ ಸಮಯಕ್ಕೆ ಮಲುಗುತ್ತೇವೋ ಅದೇ ಸಮಯಕ್ಕೆ ಮಲಗುವ ಅಭ್ಯಾಸ ರೂಢಿಸಿಕೊಳ್ಳಬೇಕು. ಆಗ ಒಳ್ಳೆಯ ನಿದ್ದೆ ಮಾಡಲು ಸಾಧ್ಯವಾಗುತ್ತದೆ.

ಯೋಗ ನಿದ್ರೆ ಬಗ್ಗೆ ತಪ್ಪು ಕಲ್ಪನೆ

ಯೋಗ ಅಭ್ಯಾಸವಿರುವ ಕೆಲವರಲ್ಲಿ ಒಂದೆರಡು ತಪ್ಪು ಕಲ್ಪನೆಗಳಿವೆ. ಅದೇನೆಂದರೆ ‘ಯೋಗ ನಿದ್ರೆ ಮಾಡಿದರೆ, ಮತ್ತೆ ನಿದ್ರೆ ಮಾಡುವ ಅವಶ್ಯಕತೆ ಇಲ್ಲ‘ ಎನ್ನುವುದು ಒಂದು. ಇನ್ನೊಂದು, ‘ಯೋಗನಿದ್ರೆ ಮಾಡಿದವರು ಕಡಿಮೆ ನಿದ್ದೆ ಮಾಡಿದರೆ ಸಾಕು‘ ಎನ್ನುವುದು. ಆದರೆ, ಯೋಗ ನಿದ್ರೆ ಎನ್ನುವುದು ಒಳ್ಳೆಯ ನಿದ್ದೆಗೆ ಪೂರಕ ಮತ್ತು ಸಹಕಾರಿಯೇ ಹೊರತು, ಅದೇ ಪರಿಪೂರ್ಣ ನಿದ್ರೆ ಅಲ್ಲ.

ನಾವು ರೋಗ ಮುಕ್ತ ಆಗಬೇಕೆಂದರೆ, ಮೊದಲು ನಮ್ಮ ಆಹಾರ ಪದ್ಧತಿ ಸರಿ ಮಾಡಿಕೊಳ್ಳಬೇಕು. ಮಲಗುವ ಕನಿಷ್ಠ ಒಂದು ತಾಸಿನ ಮುನ್ನ ಮೊಬೈಲ್‌ ನೋಡುವುದನ್ನು ಬಿಡಬೇಕು. ಆ ಸಮಯದಲ್ಲಿ ನಮ್ಮ ಕುಟುಂಬದವರೊಂದಿಗೆ ಕಾಲ ಕಳೆಯಬೇಕು. ಪುಸ್ತಕ ಓದಬೇಕು. ಈ ಎಲ್ಲವೂ ನಮ್ಮನ್ನು ಒತ್ತಡದಿಂದ ದೂರ ಇರಿಸುತ್ತದೆ ಜತೆಗೆ ಒಳ್ಳೆಯೂ ನಿದ್ದೆ ನಮ್ಮದಾಗುತ್ತದೆ.

ಕೋವಿಡ್‌ಗೆ ನಿದ್ದೆಯೇ ಮದ್ದು!

ಕೋವಿಡ್‌–19 ಜಗತ್ತಿನಾದ್ಯಂತ ಜನರನ್ನು ತಲ್ಲಣಗೊಳಿಸುತ್ತಿದೆ. ಈ ರೋಗಕ್ಕೆ ಒಳ್ಳೆಯ ಮದ್ದು ಎಂದರೆ ಪರಿಪೂರ್ಣ ನಿದ್ದೆ ಮಾಡುವುದು ಎನ್ನುತ್ತಾರೆ ಜೀವನಶೈಲಿ ತರಬೇತುದಾರ ಲೂಕ್‌ ಕುಟಿನಿಯೊ.

ಇಲ್ಲಿಯವರೆಗೆ ಈ ಸಾಂಕ್ರಾಮಿಕ ರೋಗ ತಡೆಗಟ್ಟಲು ದಿನಕ್ಕೊಂದು ಮಾರ್ಗೋಪಾಯಗಳ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಇವುಗಳಲ್ಲಿ ಹಲವು ಉಪಾಯಗಳು ಕೇವಲ ಬಾಹ್ಯ ಸೂತ್ರಗಳಾಗಿವೆಯಷ್ಟೇ. ನಮ್ಮ ಒಳ್ಳೆಯ ನಿದ್ರೆ, ಈ ಸೋಂಕು ನಿಯಂತ್ರಣದಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎನ್ನುತ್ತಾರೆ. ಚೆನ್ನಾಗಿ ನಿದ್ರೆ  ಮಾಡುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ವೈರೆಸ್‌ನೊಂದಿಗೆ ಹೋರಾಡುವಲ್ಲಿ ಸಹಾಯಕವಾಗುತ್ತದೆ ಎನ್ನುತ್ತಾರೆ ಕುಟಿನಿಯೊ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು