ಗುರುವಾರ , ಫೆಬ್ರವರಿ 25, 2021
28 °C

PV Web Exclusive: ಕ್ಷಯ ತಗ್ಗಿಸಲು ನೆರವಾದ ಮಾಸ್ಕ್!

ಕೆ.ಜೆ.ಮರಿಯಪ್ಪ Updated:

ಅಕ್ಷರ ಗಾತ್ರ : | |

ತುಮಕೂರು: ಕೊರೊನಾ ಸೋಂಕು ಹರಡದಂತೆ ತಡೆಯುವ ಸಲುವಾಗಿ ಮಾಸ್ಕ್‌ ಬಳಸಿದ್ದರಿಂದಾಗಿ ಅದು ನಿಯಂತ್ರಣಕ್ಕೆ ಬರುವುದರ ಜತೆಗೆ ಕ್ಷಯ ರೋಗಕ್ಕೂ ತಡೆಯೊಡ್ಡಿದೆ!

ಮಾಸ್ಕ್ ಬಳಸಿದ್ದರಿಂದಾಗಿ ಒಬ್ಬರಿಂದ ಒಬ್ಬರಿಗೆ ಕ್ಷಯ ಹರಡುವುದು ಕಡಿಮೆಯಾಗಿದೆ. ದೂಳು ಮತ್ತಿತರ ಕಾರಣಗಳಿಗೆ ಕ್ಷಯ ರೋಗಿಗಳಾಗುವುದನ್ನು ನಿಯಂತ್ರಿಸಿದೆ. ಜಿಲ್ಲೆಯಲ್ಲಿ ಕ್ಷಯ ರೋಗಿಗಳ ಸಂಖ್ಯೆ ಇಳಿಕೆಯಾಗಿರುವುದೇ ಇದಕ್ಕೆ ಉದಾಹರಣೆ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು.

ಜಿಲ್ಲೆಯಲ್ಲಿ ಡಿಸೆಂಬರ್ 1ರಿಂದ 31ರ ವರೆಗೆ ‘ಸಕ್ರಿಯ ಕ್ಷಯರೋಗ ಪತ್ತೆ’ ಆಂದೋಲವನ್ನು ಹಮ್ಮಿಕೊಳ್ಳಲಾಗಿತ್ತು. ಈ ಒಂದು ತಿಂಗಳ ಅವಧಿಯಲ್ಲಿ ಆರೋಗ್ಯ ಕಾರ್ಯಕರ್ತರು ಮನೆಗಳಿಗೆ ಭೇಟಿನೀಡಿ ಸಮೀಕ್ಷೆ ನಡೆಸಿ ಕ್ಷಯ ರೋಗಿಗಳನ್ನು ಪತ್ತೆ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಸುಮಾರು 5.50 ಲಕ್ಷ ಮನೆಗಳ ಸಮೀಕ್ಷೆ ಮಾಡಿದ್ದು, ಕೇವಲ 65 ಜನರಲ್ಲಿ ಮಾತ್ರ ಕ್ಷಯ ಇರುವುದು ಪತ್ತೆಯಾಗಿದೆ. ಕಳೆದ ಐದು ವರ್ಷಗಳಲ್ಲೇ 2020ರಲ್ಲಿ ಕಡಿಮೆ ಸಂಖ್ಯೆಯ ಕ್ಷಯ ರೋಗಿಗಳು ಪತ್ತೆಯಾಗಿರುವುದು ವಿಶೇಷ.

ಮಾಸ್ಕ್ ಧರಿಸಿದ್ದು ಒಬ್ಬರಿಂದ ಒಬ್ಬರಿಗೆ ಹರಡದಂತೆ ತಡೆದಿದ್ದರೆ, ಕೋವಿಡ್–19ನಿಂದಾಗಿ ಲಾಕ್‌ಡೌನ್ ಜಾರಿಯಲ್ಲಿದ್ದ ಕಾರಣ ಜನರ ಓಡಾಟ ತಗ್ಗಿದ್ದರಿಂದ ರೋಗ ಹರಡುವುದು ನಿಯಂತ್ರಣಕ್ಕೆ ಬಂದಿದೆ. ಮಾಸ್ಕ್ ಧರಿಸಿದ್ದು ಕ್ಷಯ ರೋಗ ನಿಯಂತ್ರಣಕ್ಕೆ ವರದಾನವಾಯಿತು. ಮಾಸ್ಕ್ ಹಾಕಿಕೊಳ್ಳುವುದು ಮುಂದುವರಿದರೆ ಕ್ಷಯ ರೋಗ ನಿಯಂತ್ರಿಸಲು ಸಹಕಾರಿಯಾಗಲಿದೆ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನೆ ಅಧಿಕಾರಿ ಡಾ.ಸನತ್ ಕುಮಾರ್ ತಿಳಿಸಿದರು.

ಸಮೀಕ್ಷೆ ಸಮಯದಲ್ಲಿ ಕೋವಿಡ್–19ನಿಂದ ಬಳಲುತ್ತಿದ್ದ 8 ಜನರಲ್ಲಿ ಹಾಗೂ ಕೋವಿಡ್ ಅಲ್ಲದೆ ಇತರೆ ಅನಾರೋಗ್ಯ ಸಮಸ್ಯೆಯಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 18 ಜನರಲ್ಲಿ ರೋಗ ಪತ್ತೆಯಾಗಿದೆ. ನಗರದ ಕೊಳಗೇರಿಗಳು, ಜೈಲು, ತೀರಾ ಕಡುಬಡತನ ಇರುವ ಪ್ರದೇಶಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪ್ರಮುಖವಾಗಿ ಸಮೀಕ್ಷೆ ನಡೆಸಲಾಗಿದೆ.


ಕ್ಷಯ ಪರೀಕ್ಷಿಸುವ ಸಾಧನ

2018ಕ್ಕೂ ಮುಂಚೆ ಆರೋಗ್ಯ ಇಲಾಖೆ ಕಾರ್ಯಕರ್ತರು, ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಕ್ಷಯ ರೋಗ ಪರೀಕ್ಷೆ ಮಾಡಲಾಗುತಿತ್ತು. ಕ್ಷಯ ರೋಗಿಗಳನ್ನು ಶೀಘ್ರ ಪತ್ತೆಮಾಡಿ ಚಿಕಿತ್ಸೆ ಕೊಡುವುದು ಕಷ್ಟಕರವಾಗಿತ್ತು. ಆದರೆ 2018–19ನೇ ಸಾಲಿನಿಂದ ಖಾಸಗಿ ವೈದ್ಯರು, ಪ್ರಯೋಗಾಲಯಗಳನ್ನೂ ಬಳಸಿಕೊಳ್ಳಲಾಗುತ್ತಿದೆ. ಕ್ಷಯ ರೋಗಿಯೊಬ್ಬರ ಬಗ್ಗೆ ಖಾಸಗಿ ಕ್ಲಿನಿಕ್‌ಗಳು, ವೈದ್ಯರು, ಪ್ರಯೋಗಾಲಯ ತಜ್ಞರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದರೆ ಅಂತಹವರಿಗೆ ಇಲಾಖೆಯು ₹500 ಹಣ ನೀಡುತ್ತಿದೆ. ಹಾಗಾಗಿ ಕ್ಷಯ ರೋಗ ಪತ್ತೆ ಮಾಡುವುದು ಸುಲಭವಾಗಿದ್ದು, ಸಂಖ್ಯೆಯೂ ಹೆಚ್ಚಳವಾಗಿತ್ತು. 2020ರಲ್ಲಿ ಈ ಸಂಖ್ಯೆ ಕಡಿಮೆಯಾಗಿದೆ.

ನಿರ್ಮೂಲನೆಗೆ 5 ವರ್ಷ ಬಾಕಿ
2025ರ ವೇಳೆಗೆ ದೇಶದಲ್ಲಿ ಕ್ಷಯ ರೋಗ ನಿರ್ಮೂಲನೆ ಗುರಿ ಹೊಂದಲಾಗಿದೆ. ಮನೆಮನೆಗೆ ಆರೋಗ್ಯ ಕಾರ್ಯಕರ್ತರು ಭೇಟಿನೀಟಿ ತಪಾಸಣೆ ನಡೆಸುತ್ತಿದ್ದಾರೆ. 2020ರ ವೇಳೆಗೆ ಕ್ಷಯ ರೋಗಿಗಳ ಸಂಖ್ಯೆ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಇಳಿಕೆಯಾಗಲಿದೆ. ಜಿಲ್ಲೆಯಲ್ಲಿ ಈ ಗುರಿ ಸಾಧಿಸಲು ಪ್ರಯತ್ನ ಮುಂದುವರಿಸಲಾಗಿದೆ. ಕ್ಷಯ ತೊಲಗಿಸಿ, ಗುರಿ ಸಾಧಿಸುತ್ತೇವೆ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನೆ ಅಧಿಕಾರಿ ಡಾ.ಸನತ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ವರ್ಷ–ಕ್ಷಯ ರೋಗಿಗಳ ಸಂಖ್ಯೆ
2015–
3,057
2016– 2,942
2017– 2,658
2018– 3,277
2019– 3,502
2020– 2,300

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು