ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗನ ಬಾವು ಲಸಿಕೆಯಿಂದ ಕೊಂಚ ರಕ್ಷಣೆ

Last Updated 26 ಜನವರಿ 2021, 19:30 IST
ಅಕ್ಷರ ಗಾತ್ರ

ಹಲವು ದೇಶಗಳಲ್ಲಿ ಕೋವಿಡ್‌–19ಗೆ ಲಸಿಕೆ ಹಾಕುವ ಕಾರ್ಯಕ್ರಮ ಮುಂದುವರಿದಿದೆ. ಈ ಸಂದರ್ಭದಲ್ಲಿ ಹಿಂದೆ ಮಂಗನ ಬಾವು (ಕೆಪ್ಪಟ ಅಥವಾ ಮಮ್ಸ್‌– ವೈರಾಣುವಿನಿಂದ ಬರುವಂಥದ್ದು)ಗೆ ನೀಡಿದ್ದಂತಹ ಲಸಿಕೆ ಕೋವಿಡ್‌ ವಿರುದ್ಧ ತಾತ್ಕಾಲಿಕ ರಕ್ಷಣೆ ನೀಡಬಲ್ಲದು ಎಂಬ ಮಾತು ವಿಜ್ಞಾನಿಗಳಿಂದ ಕೇಳಿ ಬರುತ್ತಿದೆ. ಕಳೆದ ನವೆಂಬರ್‌ನಲ್ಲಿ ನಡೆಸಿದ ಅಧ್ಯಯನದ ವರದಿ ಪ್ರಕಟವಾಗಿದ್ದು, ಹೆಚ್ಚು ತೀವ್ರವಲ್ಲದ ಕೋವಿಡ್‌ಗೆ ಇಂತಹ ಲಸಿಕೆಯಿಂದ ಪಡೆದ ಪ್ರತಿಕಾಯಗಳು ರಕ್ಷಣೆ ಕೊಡಬಲ್ಲವು ಎಂದು ಹೇಳಲಾಗಿದೆ.

ಈ ಅಧ್ಯಯನ ತಂಡದ ಮುಖ್ಯಸ್ಥ ಹಾಗೂ ಅಮೆರಿಕದ ವರ್ಲ್ಡ್‌ ಆರ್ಗನೈಜೇಶನ್‌ನ ಅಧ್ಯಕ್ಷ ಜೆಫರಿ ಇ. ಗೋಲ್ಡ್‌, ದಡಾರಕ್ಕೆ ತಡೆಹಾಕಲು ಲಸಿಕೆ ನೀಡುವ ಕಾರ್ಯಕ್ರಮಗಳನ್ನು ಹಲವು ದೇಶಗಳು ಹಮ್ಮಿಕೊಂಡಿವೆ. ಅಂತಹ ದೇಶಗಳಲ್ಲಿ ಕೋವಿಡ್‌ನಿಂದ ಸಂಭವಿಸಿದ ಮರಣದ ಪ್ರಮಾಣ ಕಡಿಮೆ ಎಂದು ವರದಿಯಲ್ಲಿ ಹೇಳಿದ್ದಾರೆ. ಹಾಗೆಯೇ ಕೋವಿಡ್‌ ಮೇಲೆ ಮಂಗನ ಬಾವು ಮತ್ತು ರ‍್ಯುಬೆಲ್ಲಾ ಲಸಿಕೆಯ ಪರಿಣಾಮದ ಕುರಿತೂ ಅಧ್ಯಯನ ನಡೆಸಲಾಗಿದೆ.

ದಡಾರ, ಮಂಗನ ಬಾವು ಮತ್ತು ರ‍್ಯುಬೆಲ್ಲಾ (ಎಂಎಂಆರ್‌) ಲಸಿಕೆಗಳನ್ನು ಬಾಲ್ಯದಲ್ಲೇ ನೀಡುವುದು ಸಾಮಾನ್ಯ. ಮೊದಲ ಡೋಸ್‌ ಅನ್ನು 12ರಿಂದ 15 ತಿಂಗಳಿನ ಶಿಶುಗಳಿಗೆ ಹಾಗೂ ಎರಡನೇ ಡೋಸ್‌ ಅನ್ನು 4ರಿಂದ 6 ವರ್ಷಗಳ ಮಕ್ಕಳಿಗೆ ನೀಡಲಾಗುವುದು. ಇದನ್ನು 12 ವರ್ಷ ವಯಸ್ಸಿನ ಮಕ್ಕಳಿಗೂ ನೀಡಬಹುದು.

ವಯಸ್ಕರಲ್ಲಿ ರೋಗ ನಿರೋಧಕ ಶಕ್ತಿ ಇರದಿದ್ದರೆ ಅವರಿಗೆ ಎಂಎಂಆರ್‌ ಲಸಿಕೆ ನೀಡಬಹುದು. ಈ ಬಗ್ಗೆ ಅಮೆರಿಕದ ಸಿಡಿಸಿ (ಸೆಂಟರ್ಸ್‌ ಫಾರ್‌ ಡಿಸೀಸ್ ಕಂಟ್ರೋಲ್‌ ಆ್ಯಂಡ್‌ ಪ್ರಿವೆನ್ಶನ್‌) ಪ್ರಕಟಣೆ ನೀಡಿದ್ದು, 1957ಕ್ಕಿಂತ ಮೊದಲು ಜನಿಸಿದ ಹಲವರಿಗೆ ದಡಾರ, ಮಂಗನ ಬಾವು ಅಥವಾ ರ‍್ಯುಬೆಲ್ಲಾ ಬಂದಿದ್ದು, ಲಸಿಕೆ ಪಡೆಯುವ ಅಗತ್ಯವೂ ಇಲ್ಲ ಎಂದಿದೆ.

ವೆನೆಜುವೆಲ ದೇಶದಲ್ಲಿ ಎರಡು ವರ್ಷಗಳ ಹಿಂದೆ ದಡಾರ ವ್ಯಾಪಕವಾಗಿ ಹರಡಿದಾಗ ಎಂಎಂಆರ್‌ ಲಸಿಕೆ ನೀಡಲಾಯಿತು. ಅಲ್ಲಿ ಕೋವಿಡ್‌ನಿಂದ ಪ್ರತಿ 10 ಲಕ್ಷ ಜನರಲ್ಲಿ ಕೇವಲ 39 ಸಾವು ಸಂಭವಿಸಿದೆ. ಆದರೆ ವೆನೆಜುವೆಲ ನೆರೆಯ ದೇಶಗಳಾದ ಕೊಲಂಬಿಯ ಮತ್ತು ಬ್ರೆಜಿಲ್‌ನಲ್ಲಿ ಈ ಸಾವಿನ ದರ 10 ಲಕ್ಷಕ್ಕೆ 900 ದಾಟಿದೆ.

ಹೀಗಾಗಿ ಎಂಎಂಆರ್‌ ಲಸಿಕೆ ಪಡೆದವರಲ್ಲಿ ಪ್ರತಿಕಾಯಗಳನ್ನು ಪರೀಕ್ಷಿಸಲಾಯಿತು. ಮಂಗನ ಬಾವು ಕಾಯಿಲೆಗೆ ಲಸಿಕೆ ಪಡೆದವರಲ್ಲಿ ಕೋವಿಡ್‌ ಎದುರಿಸುವಂತಹ ಪ್ರತಿಕಾಯಗಳಿವೆ ಎಂಬುದು ಕಂಡು ಬಂತು ಎಂದು ಅಮೆರಿಕದ ‘ಎಂ ಬಯೊ’ (ಅಮೆರಿಕನ್‌ ಸೊಸೈಟಿ ಫಾರ್‌ ಮೈಕ್ರೊಬಯಾಲಜಿ) ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ಇಂಥವರಿಗೆ ಕೋವಿಡ್‌ ಬಂದಾಗ ಲಕ್ಷಣಗಳು ಇರಲಿಲ್ಲ ಅಥವಾ ಅಷ್ಟೊಂದು ತೀವ್ರತರದ ಸಮಸ್ಯೆಯಾಗಲಿಲ್ಲ.

ಆದರೆ ಎಂಎಂಆರ್‌ ನೀಡುವ ಬಗ್ಗೆ ಕ್ಲಿನಿಕಲ್‌ ಪ್ರಯೋಗಗಳು ಆಗಬೇಕಿದ್ದು, ಇದರ ಫಲಿತಾಂಶ ಬಂದ ನಂತರ ವಯಸ್ಕರಿಗೆ ನೀಡುವ ಎಂಎಂಆರ್‌ ಲಸಿಕೆಯ ಡೋಸ್‌ ಅನ್ನು ನಿಗದಿಪಡಿಸಲಾಗುವುದು ಎಂದು ತಿಳಿಸಲಾಗಿದೆ. ಆದರೆ ಕೋವಿಡ್‌ ಲಸಿಕೆಯ ಬದಲು ಎಂಎಂಆರ್‌ ಲಸಿಕೆ ಕೊಡುವುದು ಅಷ್ಟು ಸೂಕ್ತವಲ್ಲ ಎಂದೂ ಅಧ್ಯಯನ ನಡೆಸಿದ ಗೋಲ್ಡ್‌ ಸ್ಪಷ್ಟಪಡಿಸಿದ್ದಾರೆ. ಅದು ತೀವ್ರತರದ ಕೋವಿಡ್‌ಗೆ ಕೊಂಚ ರಕ್ಷಣೆ ಕೊಡಬಹುದು ಅಷ್ಟೇ ಎಂದು ಅವರು ವರದಿಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT