ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲ; ಆರೋಗ್ಯ ಜೋಪಾನ– ಇಲ್ಲಿವೆ ಟಿಪ್ಸ್

Last Updated 25 ಜೂನ್ 2022, 4:25 IST
ಅಕ್ಷರ ಗಾತ್ರ

ಮುಂಗಾರು ಮಳೆ ಆರಂಭವಾಗಿದೆ. ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುವ ಈ ಬದಲಾವಣೆಯ ಕಾಲದಲ್ಲಿ ಆರೋಗ್ಯದಲ್ಲಿ ತುಸು ವ್ಯತ್ಯಾಸವಾಗುವುದು ಸಹಜ. ಇಂಥ ಸಮಯದಲ್ಲಿ ಮನೆಯಲ್ಲಿ ನಿತ್ಯ ಬಳಕೆಯಲ್ಲಿರುವ ವಸ್ತುಗಳನ್ನು ಬಳಸಿ ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದು. ಈ ಕುರಿತ ಟಿಪ್ಸ್ ಇಲ್ಲಿದೆ.

l→ಮಳೆಗೆ ನೆನೆದಾಗ ನೆಗಡಿ, ಜ್ವರ ಬಾಧಿಸುವುದು ಸಾಮಾನ್ಯ. ನೆಗಡಿಯಾದಾಗ ಅರಿಶಿನದ ಪುಡಿಯನ್ನು ಕೆಂಡದ ಮೇಲೆ ಹಾಕಿ ಅದರ ಹೊಗೆ ತಗೊಳ್ಳಬಹುದು.

l→ಒಂದು ಲೋಟ ಬಿಸಿ ಹಾಲು ಅಥವಾ ಬಿಸಿ ನೀರಿಗೆ ಅರಿಶಿನ ಪುಡಿ ಬೆರೆಸಿ, ಸ್ವಲ್ಪ ಬೆಲ್ಲ ಹಾಕಿ ಬೆಳಿಗ್ಗೆ ಹೊತ್ತು ಕುಡಿಯಬಹುದು. ಇದರಿಂದ ನೆಗಡಿ ನಿಯಂತ್ರಣವಾಗುತ್ತದೆ.

l→ಥಂಡಿಕಾಲದಲ್ಲಿ ನೆಗಡಿ ಜೊತೆಗೆ ಗಂಟಲು ಕೆರೆತ, ಕೆಮ್ಮು ಬಾಧಿಸುತ್ತದೆ. ಕೆಮ್ಮು ನಿವಾರಣೆಗೆ ಹೀಗೆ ಮಾಡಿ; ಶುಂಠಿ, ಹಿಪ್ಪಲಿ, ಮೆಣಸು ಮೂರು ತಲಾ 10 ಗ್ರಾಂ, ಜೇಷ್ಟಮಧು 30 ಗ್ರಾಂ. ಎಲ್ಲವನ್ನೂ ಕುಟ್ಟಿ ನುಣ್ಣಗೆ ಪುಡಿ ಮಾಡಿ. ಒಂದು ಚಮಚ ಪುಡಿಯನ್ನು ಜೇನುತುಪ್ಪದಲ್ಲಿ ಬೆರೆಸಿ, ದಿನಕ್ಕೆ ಮೂರು ಸಾರಿ ಸೇವಿಸಿ.

l→ನೀರು, ಆಹಾರದ ವ್ಯತ್ಯಾಸ, ವಾತಾವರಣದ ಏರುಪೇರಿನ ಕಾರಣಕ್ಕೆ ಮಳೆಗಾಲದಲ್ಲಿ ಗಂಟಲ ನೋವು ಬಾಧಿಸುತ್ತದೆ. ಇದರ ನಿವಾರಣೆಗೆ ಹೀಗೆ ಮಾಡಿ; ದ್ರಾಕ್ಷಿ, ಕಾಳುಮೆಣಸು, ಜೇಷ್ಠ ಮಧು ಇವೆಲ್ಲವನ್ನೂ ಸಮಪ್ರಮಾಣದಲ್ಲಿ ತೆಗೆದು ಕೊಂಡು, ಕುಟ್ಟಿ ಮಾತ್ರೆ ಮಾಡಿ. ಅದನ್ನು ಗುಳಿಗೆ ಮಾಡಿ. ದಿನಕ್ಕೆ ಮೂರು ಬಾರಿ ಸೇವಿಸಬಹುದು.

l→ಮಳೆಗಾಲದಲ್ಲಿ ನೀರಿನ ಬಗ್ಗೆಯೂ ಎಚ್ಚರವಹಿಸಬೇಕು. ಈ ಸಮಯದಲ್ಲಿ ದೇಹವೂ ತಂಪಾಗಿರುತ್ತದೆ. ಹಾಗಾಗಿ ನೀರು ಕಾಯಿಸಿ ಕುಡಿಯುವುದು ಒಳ್ಳೆಯುದು. ನೀರನ್ನು ಕಾಯಿಸುವಾಗ ಚಿಕ್ಕತುಂಡು ಶುಂಠಿ ಅಥವಾ ತುಳಸಿ ಹಾಕಿ. ಹದವಾದ ಬಿಸಿಯಲ್ಲೇ ನೀರು ಕುಡಿಯಿರಿ.

l→ಗಂಟಲು ಕಟ್ಟಿ ಧ್ವನಿ ತೊಂದರೆಯಿರುವವರು ಒಂದೆಲಗ,ಬಜೆ ಶುಂಠಿ ಹಿಪ್ಪಲಿ ಸಮಭಾಗ, ಕುಟ್ಟಿ ಪುಡಿ ಮಾಡಿಟ್ಟುಕೊಂಡು ಜೇನುತಪ್ಪದಲ್ಲಿ ಸೇರಿಸಿ, ದಿನಕ್ಕೆ ಎರಡು ಬಾರಿ ಸೇವಿಸಬಹುದು.

lಥಂಡಿ ವಾತಾವರಣಕ್ಕೆ ಮಂಡಿ ನೋವು, ಸಂದಿವಾತಗಳಂತಹ ನೋವು ಕಾಣಿಸಿ ಕೊಳ್ಳುತ್ತವೆ. ಇದಕ್ಕೆ ಪರಿಹಾರವಾಗಿ, ಹತ್ತು ಗ್ರಾಂನಷ್ಟು ದನಿಯಾ, ಒಣಶುಂಠಿ ಕುಟ್ಟಿ ಪುಡಿ ಮಾಡಿಟ್ಟುಕೊಳ್ಳಿ. ನಾಲ್ಕು ಲೋಟ ನೀರಿಗೆ ಬೆರೆಸಿ ಕಾಯಿಸಿ, ಒಂದು ಲೋಟಕ್ಕೆ ಇಳಿಸಿ. ದಿನಕ್ಕೆ ಎರಡು ಸಾರಿ ಇದನ್ನು ಕುಡಿಯಿರಿ. ಈ ವಾತದ ನೋವು ತಕ್ಕಮಟ್ಟಿಗೆ ಶಮನವಾಗುತ್ತದೆ.

l→ಮಳೆಗಾಲದಲ್ಲಿ ಜೀರ್ಣಶಕ್ತಿ ಕಡಿಮೆ ಇರುತ್ತದೆ. ಇಂಥ ಸಮಯದಲ್ಲಿ ನಿತ್ಯದ ತರಕಾರಿ ಸಾಂಬಾರಿನ ಬದಲಿಗೆ, ತೊಗರಿಬೇಳೆ, ಹುರುಳಿಕಟ್ಟಿನ ಸಾರನ್ನು ಬಳಸಿದರೆ, ಜೀರ್ಣಶಕ್ತಿಗೆ ಒಳ್ಳೆಯದು.

l→ಮಳೆಗಾಲದಲ್ಲಿ ಮೊಸರು ಬಳಸುವುದು ಬೇಡ. ಮೊಸರು ತಿನ್ನುವುದರಿಂದ ಕೆಲವರಲ್ಲಿ ಕಫವಾಗುತ್ತದೆ. ಜೀರ್ಣಶಕ್ತಿಯೂ ಕಡಿಮೆಯಾಗುತ್ತದೆ. ‘ಮೊಸರಿಲ್ಲ
ದಿದ್ದರೆ ಊಟ ಮುಗಿಯುವುದಿಲ್ಲ’ ಎನ್ನುವವರು, ಮೊಸರು ಕಡೆದು, ಅದಕ್ಕೆ ಕಾಳುಮೆಣಸಿನ ಪುಡಿ ಮತ್ತು ಉಪ್ಪು(ರುಚಿಗೆ ತಕ್ಕಷ್ಟು) ಬೆರೆಸಿ ಮಿತ ಪ್ರಮಾಣದಲ್ಲಿ ಉಪಯೋಗಿಸಬಹುದು.

l→ದಾಳಿಂಬೆ, ಮಾವಿನಕಾಯಿ ಸಾರು, ನೆಲ್ಲಿಕಾಯಿ(ಒಣಗಿದ) ಸಾರು, ನೆಲ್ಲಿಕಾಯಿ ಉಪ್ಪಿನಕಾಯಿ.. ಈ ಎಲ್ಲವೂ ಮಳೆಗಾಲದ ಆರೋಗ್ಯಕ್ಕೆ ಪೂರಕವಾದ ಆಹಾರ ಪದಾರ್ಥಗಳು.

lಒಂದು ಭಾಗ ಗೋಧಿಹಿಟ್ಟು, ಕಡ್ಲೆಹಿಟ್ಟು, ಓಮ, ಇಂಗು, ತುಪ್ಪ ಹಾಕಿ ಹಿಟ್ಟು ಕಲಸಿ. ರೊಟ್ಟಿ ಲಟ್ಟಿಸಿ. ಕೆಂಡದಲ್ಲಿ ಬೇಯಿಸಬೇಕು. ಮಳೆಗಾಲದಲ್ಲಿ ಈ ಕೆಂಡದ ರೊಟ್ಟಿ ಸೇವನೆಯಿಂದ ವಾತದ ಸಮಸ್ಯೆಯಿರುವವರಿಗೆ ಉತ್ತಮ ಔಷಧ. ಕಫ ನಿವಾರಣೆಗೆ ಉತ್ತಮ ಆಹಾರ. ಜೀರ್ಣಶಕ್ತಿ ಹೆಚ್ಚಾಗುತ್ತದೆ.

lಹೆಸರುಕಾಳು, ಮಡಕೆ ಕಾಳು ನೆನೆಸಿ ಒಗ್ಗರಣೆ ಹಾಕಿ
ಗುಗ್ಗುರಿ ಮಾಡಿಕೊಂಡು ತಿನ್ನಬಹುದು. ಇದೂ ಮಳೆಗಾಲದ ಉತ್ತಮ ಆಹಾರ.

ಚರ್ಮದ ಆರೈಕೆ

l→ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ, ಚರ್ಮ ಒರಟಾಗುತ್ತದೆ. ಮುಖದ ತ್ವಚೆಯೂ ಬಿರುಸಾಗುತ್ತದೆ. ಇದಕ್ಕೆ ಪರಿಹಾರವಾಗಿ, ಲೋಳೆಸರ/ತಿರುಳು / ಜೆಲ್ ಎರಡು ಚಮಚ, ಒಂದು ಚಮಚ ಬಾದಾಮಿ ಎಣ್ಣೆ, ಬೆಣ್ಣೆ ಅರ್ಧ ಚಮಚ, ಗುಲಾಬಿ ಜಲ(ರೋಸ್‌ವಾಟರ್‌) ಒಂದು ಚಮಚ. ಇವೆಲ್ಲವನ್ನೂ ಬೆರೆಸಿ, ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿಕೊಂಡರೆ, ಮುಖದ ಕಾಂತಿ ಹೆಚ್ಚುತ್ತದೆ.

l→ರಾತ್ರಿ ಮಲಗುವಾಗ ತುಪ್ಪ ಅಥವಾ ಬೆಣ್ಣೆ, ಮಜ್ಜಿಗೆಯನ್ನು ತುಟಿಗೆ ಹಗುರವಾಗಿ ಮಸಾಜ್ ಮಾಡಿಕೊಂಡರೆ,ತುಟಿ ಬಿರಿಯುವುದನ್ನು ತಡೆಯಬಹುದು.

ಉಬ್ಬಸ ಇರುವವರು ಆಯಾಸ, ಉಸಿರಾಟಕ್ಕೆ ತೊಂದರೆ ಇರುವವರು ಅರಿಸಿನ, ಕಾಳುಮೆಣಸು, ಹಿಪ್ಪಲಿ, ದ್ರಾಕ್ಷಿ, ಬೆಲ್ಲ, ಖಚೋರ, ಶುಂಠಿ ಇವೆಲ್ಲವನ್ನು ಸಮಭಾಗದಲ್ಲಿ ಪುಡಿ ಮಾಡಿಟ್ಟುಕೊಳ್ಳಿ. ಒಂದು ಚಮಚ ಪುಡಿಯನ್ನು ಜೇನುತುಪ್ಪದಲ್ಲಿ ಬೆರೆಸಿ. ನಿತ್ಯ ಎರಡು ಅಥವಾ ಮೂರು ಸಾರಿ ಸೇವಿಸಬಹುದು.

ಪೂರಕ ಮಾಹಿತಿ: ಡಾ. ವಸುಂಧರಾ ಭೂಪತಿ, ಆಯುರ್ವೇದ ತಜ್ಞೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT