ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಷೇಮ–ಕುಶಲ | ‘ಎಂ–ಪಾಕ್ಸ್‌’: ಆತಂಕ ಬೇಕಿಲ್ಲ

Published : 19 ಆಗಸ್ಟ್ 2024, 23:30 IST
Last Updated : 19 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

‘ಮಂಗನ ಸಿಡುಬು’ (monkeypox) ಬಗ್ಗೆ ಈಗ ಆತಂಕ ಆರಂಭವಾಗಿದೆ. ಹಲವಾರು ದೇಶಗಳಲ್ಲಿ ಕಂಡಿರುವ ಈ ಕಾಯಿಲೆ ಪ್ರಪಂಚದ ಎಲ್ಲೆಡೆ ಹರಡಿ ಮತ್ತೊಂದು ಜಾಗತಿಕ ವಿಪತ್ತಿಗೆ ಕಾರಣವಾಗುತ್ತದೆಯೇ ಎನ್ನುವ ಭೀತಿ ಹಲವರದ್ದು. ‘ಸಿಡುಬು’ ಎನ್ನುವುದು ವೈರಸ್ ಕಾಯಿಲೆ. ಸೀತಾಳೆ ಸಿಡುಬು (ಚಿಕನ್ ಪಾಕ್ಸ್) ನಾವೆಲ್ಲರೂ ಬಲ್ಲ ಒಂದು ಪ್ರಕಾರ. ಯಾವುದೇ ಸಿಡುಬಿನ ವೈರಸ್ ಒಬ್ಬರಿಂದೊಬ್ಬರಿಗೆ ಸಾಂಕ್ರಾಮಿಕವಾಗಿ ಹರಡುತ್ತದೆ. ಅಂದರೆ, ಸಿಡುಬಿನ ರೋಗಿಯ ಸಂಪರ್ಕಕ್ಕೆ ಬಂದ ನಿರೋಗಿ ವ್ಯಕ್ತಿಯ ಶರೀರದಲ್ಲಿ ವೈರಸ್ ಪ್ರವೇಶಿಸಿದರೆ, ಅಂತಹವರಿಗೂ ಸೋಂಕು ತಗುಲುತ್ತದೆ. ಮಂಗನ ಸಿಡುಬು ಕಾಯಿಲೆಗೂ ಎರಡು ಪ್ರಭೇದಗಳ ವೈರಸ್ ಕಾರಣವಾಗಿವೆ. ಮಂಗನ ಸಿಡುಬು ರೋಗಿಯ ಶ್ವಾಸ ಸ್ರವಿಕೆಗಳಿಂದ ಎದುರಿನವರಿಗೆ, ಚರ್ಮದಿಂದ ಚರ್ಮಕ್ಕೆ, ಬಾಯಿಂದ ಚರ್ಮಕ್ಕೆ, ಹಾಗೂ ಲೈಂಗಿಕ ಸಂಪರ್ಕದಿಂದ ಹರಡುತ್ತದೆ. ಇದೇ ಅಲ್ಲದೆ, ಮಂಗನ ಸಿಡುಬಿನ ರೋಗಿಯ ಸ್ರವಿಕೆಗಳು ವಸ್ತುಗಳ ಅಥವಾ ಬಟ್ಟೆಗಳ ಮೂಲಕ ಮತ್ತೊಬ್ಬರ ಸಂಪರ್ಕಕ್ಕೆ ಬಂದರೂ ರೋಗ ಹರಡುವ ಸಾಧ್ಯತೆಗಳು ಇರುತ್ತವೆ. ಮಂಗನ ಸಿಡುಬು ಕೆಲವು ಪ್ರಾಣಿಗಳ ಮೂಲಕ ಕೂಡ ಹರಡಬಹುದು ಎನ್ನುವ ಸಂಶಯವಿದೆ. ಪ್ರಸ್ತುತ ಹಲವಾರು ದೇಶಗಳಲ್ಲಿ ಕಾಣುತ್ತಿರುವ ಮಂಗನ ಸಿಡುಬು ಕಾಯಿಲೆಯನ್ನು ವಿಶ್ವ ಆರೋಗ್ಯ ಸಂಸ್ಥೆ ‘ಎಂ-ಪಾಕ್ಸ್’ (mpox) ಎಂದು ಕರೆಯಲು ನಿರ್ಧರಿಸಿದೆ. ಸದ್ಯಕ್ಕೆ ‘ಮಂಗನ ಸಿಡುಬು’ ಮತ್ತು ‘ಎಂ-ಪಾಕ್ಸ್’ ಎನ್ನುವ ಎರಡೂ ಹೆಸರುಗಳು ಒಂದೇ ಕಾಯಿಲೆಯನ್ನು ಸೂಚಿಸುತ್ತವೆ.

ಯಾವುದೇ ವೈರಸ್ ಕಾಯಿಲೆಯಲ್ಲಿ ಕಾಣಬಹುದಾದ ಜ್ವರ, ಮೈ-ಕೈ ನೋವು, ತಲೆನೋವು, ಸುಸ್ತು, ಮಂಗನ ಸಿಡುಬಿನಲ್ಲೂ ಕಾಣುತ್ತವೆ. ಈ ಹಂತದಲ್ಲಿ ಇದು ಯಾವ ವೈರಸ್ ಸೋಂಕು ಎಂದು ತಿಳಿಯಲು ಸಾಧ್ಯವಿಲ್ಲ. ಇದು ಮುಂದುವರೆದು ಅಂಗೈ ಮತ್ತು ಪಾದಗಳೂ ಸೇರಿದಂತೆ ಚರ್ಮದ ಮೇಲೆ ಬೊಬ್ಬೆಗಳು, ವ್ರಣಗಳು ಉಂಟಾಗುತ್ತವೆ. ಈ ವ್ರಣಗಳು ಲೋಳೆಪದರಕ್ಕೂ ಹರಡಬಹುದು. ನರಗಳ ಸಂವೇದನೆ ಹೆಚ್ಚಾಗಿರುವ ಭಾಗಗಳಲ್ಲಿ ಇವು ವಿಪರೀತ ನೋವು, ಉರಿಗಳಿಗೆ ಕಾರಣವಾಗುತ್ತವೆ. ಈ ವ್ರಣಗಳ ಸಂಖ್ಯೆ ಒಂದೆರಡರಿಂದ ಹಿಡಿದು ನೂರಾರು ಇರಬಹುದು. ಎಲ್ಲಿಯವರೆಗೆ ಈ ವ್ರಣಗಳು ಚರ್ಮಕ್ಕೆ ಮಾತ್ರ ಸೀಮಿತವಾಗಿರುತ್ತವೋ, ಅಲ್ಲಿಯವರೆಗೆ ಪ್ರಾಣಾಪಾಯ ಕಡಿಮೆ. ಈ ಹಂತದಲ್ಲಿ ಚಿಕಿತ್ಸೆಯೂ ಸುಲಭ ಮತ್ತು ಪರಿಣಾಮಕಾರಿ. ಆದರೆ, ಒಮ್ಮೆ ಸೋಂಕು ಚರ್ಮದ ಮಟ್ಟವನ್ನು ಮೀರಿ ಸಿಡುಬಿನ ವ್ರಣಗಳು ಲೋಳೆಪದರಗಳಿಗೆ ಹರಡಿದರೆ, ಕಾಯಿಲೆ ಹೆಚ್ಚುತ್ತಿರುವ ಸೂಚನೆ ಎನ್ನಬಹುದು. ಈ ಹಂತದಲ್ಲಿ ರೋಗಿಯ ಆರೋಗ್ಯದ ಬಗ್ಗೆ ನಿಗಾ ಇರಬೇಕಾಗುತ್ತದೆ. ಸಿಡುಬಿನ ವ್ರಣಗಳು ಈ ಹಂತದಿಂದ ಮುಂದುವರೆದು ಒಳಗಿನ ಅಂಗಗಳನ್ನು ಪ್ರವೇಶಿಸಿದರೆ, ಕಾಯಿಲೆ ತೀವ್ರ ಸ್ವರೂಪ ಪಡೆದುಕೊಂಡಂತೆ. ಆಗ ಆಸ್ಪತ್ರೆ ಚಿಕಿತ್ಸೆಯ ಅಗತ್ಯ ಬರುತ್ತದೆ. ಈ ಹಂತದಲ್ಲಿ ಶರೀರದ ರಕ್ಷಕ ವ್ಯವಸ್ಥೆಯ ಸಾಮರ್ಥ್ಯ ಕುಗ್ಗಿ, ಹಲವಾರು ಸಮಯಸಾಧಕ ಬ್ಯಾಕ್ಟೀರಿಯಾ ಮತ್ತು ಫಂಗಸ್ ಸೋಂಕುಗಳೂ ಜೊತೆಗೂಡುತ್ತವೆ. ಮಿದುಳು, ಹೃದಯ, ಶ್ವಾಸಕೋಶಗಳು, ಮತ್ತು ಕಣ್ಣುಗಳನ್ನು ಮಂಗನ ಸಿಡುಬು ಹೆಚ್ಚು ಬಾಧಿಸುತ್ತದೆ. ರಕ್ಷಕ ವ್ಯವಸ್ಥೆಯ ಸಾಮರ್ಥ್ಯ ಕಡಿಮೆ ಇರುವ ನವಜಾತಶಿಶುಗಳು, ಗರ್ಭಿಣಿಯರು, ಮಧುಮೇಹಿಗಳು, ಯಾವುದಾದರೂ ಚಿಕಿತ್ಸೆಯ ಅಂಗವಾಗಿ ಸ್ಟೀರಾಯ್ಡ್ ಔಷಧ ಸೇವಿಸುವವರು, ಅಂಗ-ಕಸಿಯ ಕಾರಣದಿಂದ ರಕ್ಷಕ ವ್ಯವಸ್ಥೆಯ ಶಕ್ತಿಯನ್ನು ಕುಗ್ಗಿಸುವ ಔಷಧ ಪಡೆಯುವವರು, ಎಚ್.ಐ.ವಿ. ಪೀಡಿತರು ಮೊದಲಾದವರಿಗೆ ಮಂಗನ ಸಿಡುಬು ಉಲ್ಬಣಿಸುವ ಸಾಧ್ಯತೆಗಳು ಹೆಚ್ಚು.

ಶರೀರದಲ್ಲಿ ರೋಗನಿರೋಧ ಶಕ್ತಿ ಚೆನ್ನಾಗಿರುವವರಲ್ಲಿ ಮಂಗನ ಸಿಡುಬು ಪ್ರಾಣಾಪಾಯವಾಗುವುದು ಅಪರೂಪ. ಇಂತಹವರಲ್ಲಿ ಒಂದೆರಡು ವಾರ ರೋಗಲಕ್ಷಣಗಳು ಕಾಡಬಹುದು. ಚರ್ಮದ ಮೇಲಿನ ಕೊನೆಯ ವ್ರಣ ಚೆನ್ನಾಗಿ ಮಾಗಿ, ಕಪ್ಪು ಹಕ್ಕಳೆ (scab) ಕಟ್ಟಿ, ಅದರ ಅಡಿ ಹೊಸದಾದ ರೋಗರಹಿತ ಚರ್ಮ ಬಂದು, ಹಕ್ಕಳೆ ಬಿದ್ದುಹೋಗುವವರೆಗೆ ಮಂಗನ ಸಿಡುಬು ಮತ್ತೊಬ್ಬರಿಗೆ ಹರಡಬಹುದು ಎಂಬ ಅರಿವು ಇರಬೇಕು. ಅಲ್ಲಿಯವರೆಗೆ ರೋಗಿಗಳು ಇತರರ ಸಂಪರ್ಕಕ್ಕೆ ಬಾರದಂತೆ ಎಚ್ಚರ ವಹಿಸಬೇಕಾಗುತ್ತದೆ. ಸರಳ ಆಹಾರ, ಸಾಕಷ್ಟು ನೀರು, ನೋವು ನಿವಾರಕ ಔಷಧಗಳು, ಸಿಡುಬು ಯಾವ ರೀತಿ ಮುಂದುವರೆಯುತ್ತಿದೆ ಎಂಬ ಎಚ್ಚರ, ಬೇರೆ ಯಾವುದಾದರೂ ಅನಿರೀಕ್ಷಿತ ರೋಗಲಕ್ಷಣಗಳು ಕಂಡರೆ ವೈದ್ಯರಿಗೆ ತಿಳಿಸುವುದು, ಮೊದಲಾದ ಸರಳ ಚಿಕಿತ್ಸೆ ಸಾಕಾಗುತ್ತದೆ. ಮಂಗನ ಸಿಡುಬು ಈ ಹಂತವನ್ನು ದಾಟಿದರೆ ಮಾತ್ರ ಚಿಕಿತ್ಸೆಯನ್ನು ಆಯಾ ಮಟ್ಟಕ್ಕೆ ಏರಿಸಬೇಕಾಗುತ್ತದೆ.

ಕೋವಿಡ್-19 ಕಾಲದಲ್ಲಿ ಕಲಿತ ವೈಯಕ್ತಿಕ ಶುಚಿ ಮತ್ತು ಶಿಸ್ತಿನ ಅಂಶಗಳು ಬಹುತೇಕ ವೈರಸ್ ಕಾಯಿಲೆಗಳಲ್ಲಿ ನೆರವಾಗುತ್ತವೆ. ಪರಸ್ಪರ ಅಂತರ, ಕೈಗಳ ಸ್ವಚ್ಛತೆ, ವೈಯಕ್ತಿಕ ಶಿಸ್ತು, ರೋಗಿಯ ಸ್ರವಿಕೆಗಳನ್ನು ಹೊಂದಿರಬಹುದಾದ ವಸ್ತುಗಳನ್ನು ಮತ್ತೊಬ್ಬರು ಬಳಸದಿರುವುದು, ಇತರರೊಡನೆ ಅನಗತ್ಯವಾಗಿ ಸಾಮೀಪ್ಯಕ್ಕೆ ಬಾರದಂತೆ ಇರುವಿಕೆ, ಮೊದಲಾದ ಜೀವನಶೈಲಿಯನ್ನು ಪಾಲಿಸುವುದು ಸೂಕ್ತ. ಇದನ್ನು ಮೀರಿಯೂ ರೋಗಲಕ್ಷಣಗಳು ಕಂಡುಬಂದರೆ ಧೃತಿಗೆಡಬೇಕಾಗಿಲ್ಲ. ಬಹುತೇಕ ಪ್ರಸಂಗಗಳಲ್ಲಿ ಕುಟುಂಬವೈದ್ಯರು ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ನೆರವಾಗುತ್ತಾರೆ. ಮಂಗನ ಸಿಡುಬು ತೀವ್ರವಾಗಿರುವ ರೋಗಿಗಳಲ್ಲಿ ವೈರಸ್-ನಿರೋಧಕ ಔಷಧ ಲಭ್ಯವಿದೆ. ಆದರೆ ಸದ್ಯಕ್ಕೆ ಈ ಔಷಧವನ್ನು ಕೇವಲ ತೀವ್ರ ಸ್ವರೂಪದ ಕಾಯಿಲೆಯಲ್ಲಿ ಮಾತ್ರ ಬಳಸಬೇಕು. ಇಲ್ಲವಾದರೆ ಅದರ ಪರಿಣಾಮ ಕುಂಠಿತವಾಗುವ ಸಾಧತೆಗಳು ಇರುತ್ತವೆ. ಮಂಗನ ಸಿಡುಬು ಬಾರದಂತೆ ತಡೆಯಲು ಮೂರು ಬಗೆಯ ಲಸಿಕೆಗಳನ್ನೂ ಈಗಾಗಲೇ ಅಭಿವೃದ್ಧಿಗೊಳಿಸಲಾಗಿದೆ. ಆದರೆ ಸದ್ಯಕ್ಕೆ ಇದರ ಬಳಕೆ ವ್ಯಾಪಕವಾಗಿ ಬೇಕಾಗಿಲ್ಲ.

ಪ್ರಸ್ತುತ ಮಂಗನ ಸಿಡುಬು ಜಾಗತಿಕ ವಿಪತ್ತಾಗುತ್ತದೆ ಎನ್ನುವ ಊಹಾಪೋಹಗಳಿಗೆ ಯಾವುದೇ ಬಲವಾದ ಆಧಾರಗಳಿಲ್ಲ. ಜೊತೆಗೆ, ಕೋವಿಡ್-19 ನಮಗೆ ಜಾಗತಿಕ ವಿಪತ್ತನ್ನು ಹೇಗೆ ಎದುರಿಸಬೇಕು ಎನ್ನುವ ಅನುಭವವನ್ನು ನೀಡಿದೆ. ಹೀಗಾಗಿ ಮಂಗನ ಸಿಡುಬಿನ ಬಗ್ಗೆ ಆತಂಕ ಬೇಕಿಲ್ಲ. ಇಷ್ಟಾದರೂ ನಮ್ಮ ಎಚ್ಚರ ನಮಗೆ ಇರಲೇಬೇಕು. ಆರೋಗ್ಯಕರ ಜೀವನಶೈಲಿಯ ಪಾಲನೆ, ಸೋಂಕು ಬಾರದಂತೆ ಪಾಲಿಸಬೇಕಾದ ವೈಯಕ್ತಿಕ ಶಿಸ್ತುಗಳನ್ನು ಎಂದಿಗೂ ಮರೆಯಬಾರದು. ಅದೊಂದರ ಪಾಲನೆಯಿಂದಲೇ ಬಹುತೇಕ ಸಾಂಕ್ರಾಮಿಕ ರೋಗಗಳನ್ನು ವ್ಯಾಪಕವಾಗದಂತೆ ಮಣಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT