ಶುಕ್ರವಾರ, ನವೆಂಬರ್ 27, 2020
20 °C

ಉಗುರಿಗೂ ಬೇಕು ಕಾಳಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮನೆಯಿಂದಲೇ ಕೆಲಸ ಮಾಡುವ ಕಾರಣದಿಂದ ನಾವು ಚರ್ಮ, ಕೂದಲು, ಉಗುರಿನ ಮೇಲೆ ಅಷ್ಟಾಗಿ ಲಕ್ಷ್ಯ ತೋರುವುದಿಲ್ಲ. ಕಚೇರಿಯ ಫೋನ್ ಕರೆ, ಜೂಮ್‌ ಕರೆಗಳನ್ನು ಸ್ವೀಕರಿಸುವ ನಡು ನಡುವೆ ಪಾತ್ರೆ ತೊಳೆಯವುದು, ಅಡುಗೆ ಮಾಡುವುದು, ತರಕಾರಿ ಹೆಚ್ಚುವುದು ಇಂತಹ ಕೆಲಸಗಳನ್ನು ಮಾಡುವುದು ಸಹಜ. ಅಲ್ಲದೇ ಕೆಲಸ ಮಧ್ಯೆ ಬಾಯಿಗೆ ರುಚಿ ಎನ್ನಿಸುವ ಕುರುಕಲು ತಿಂಡಿಗಳನ್ನು ತಿನ್ನುತ್ತಿರುತ್ತೇವೆ.

ಇದು ಕೇವಲ ದೇಹದ ಆರೋಗ್ಯ ಮಾತ್ರವಲ್ಲ. ಉಗುರಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಅಲ್ಲದೇ ಕೆಲವೊಮ್ಮೆ ಅಸಮರ್ಪಕ ಆಹಾರಕ್ರಮದಿಂದ ಉಗುರುಗಳಿಗೆ ಬೇಕಾದ ಪೌಷ್ಟಿಕಾಂಶವೂ ಸಿಕ್ಕಿರುವುದಿಲ್ಲ. ಇದರಿಂದ ಉಗುರು ತುಂಡಾಗುವುದು, ಸಿಪ್ಪೆ ಎದ್ದು ಬರುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಜೊತೆಗೆ ಉಗುರಿನ ಅಂದವೂ ಕೆಡಬಹುದು. ಹಾಗಾಗಿ ಉಗುರಿನ ಕಾಳಜಿ ಮಾಡುವುದು ಅಗತ್ಯ. 

ಸ್ವಚ್ಛ ಮಾಡಿ: ಪ್ರತಿಬಾರಿ ಮನೆ ಕೆಲಸ ಮಾಡಿದ ಮೇಲೆ, ತರಕಾರಿ ಹೆಚ್ಚಿದ ಮೇಲೆ ಅಥವಾ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸಿದ ಮೇಲೆ ಕೈಯನ್ನು ತೊಳೆಯುವ ಜೊತೆಗೆ ಉಗುರುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಊಟದ ನಂತರವೂ ಉಗುರಿನ ಎಡೆಯಲ್ಲಿ ಆಹಾರದ ಅಂಶ ಉಳಿಯದಂತೆ ಸ್ವಚ್ಚ ಮಾಡಿ.

ಉಗುರುಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಿ: ಬ್ಯೂಟಿಪಾರ್ಲರ್‌ಗಳಿಗೆ ಹೋಗಲು ಸಾಧ್ಯವಾಗದ ಕಾರಣ ಮನೆಯಲ್ಲೇ ಮೆನಿಕ್ಯೂರ್, ಪೆಡಿಕ್ಯೂರ್ ಮಾಡಿಕೊಳ್ಳುತ್ತಾರೆ. ಆದರೆ ಅದಕ್ಕೆ ಸಂಬಂಧಿಸಿದ ಸಾಧನಗಳನ್ನು ಬಳಸುವಾಗ ಎಚ್ಚರವಿರಬೇಕು. ಬ್ಲೇಡ್‌, ನೈಲ್‌ ಕಟರ್‌ ಅಥವಾ ಕ್ಯೂಟಿಕಲ್‌ ಟ್ರಿಮ್ಮರ್‌ಗಳನ್ನು ಬಳಸುವಾಗ ಉಗುರು ಹಾಗೂ ಸುತ್ತಲಿನ ಚರ್ಮಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ಉಗುರಿನ ಒಳಗೆ ಸ್ವಚ್ಛ ಮಾಡುವಾಗಲೂ ಚರ್ಮಕ್ಕೆ ಹಾನಿಯಾಗದಂತೆ ಎಚ್ಚರ ವಹಿಸಬೇಕು.

ಉಗುರುಗಳನ್ನು ಕತ್ತರಿಸಿ: ಕಾಲು ಹಾಗೂ ಕೈ ಉಗುರುಗಳನ್ನು 15 ದಿನಕ್ಕೊಮ್ಮೆ ಟ್ರಿಮ್ ಮಾಡುವುದು ಉತ್ತಮ. ಸ್ನಾನ ಮಾಡಿದ ತಕ್ಷಣ ಉಗುರುಗಳು ಮೃದುವಾಗಿರುತ್ತವೆ. ಅಲ್ಲದೇ ಸುಲಭವಾಗಿ ಕತ್ತರಿಸಲು ಸಾಧ್ಯವಾಗುತ್ತದೆ. ಹಾಗಾಗಿ ಸ್ನಾನವಾದ ಮೇಲೆ ಟ್ರಿಮ್ ಮಾಡುವುದು ಉತ್ತಮ. 

ಕ್ಯೂಟಿಕಲ್‌ಗಳನ್ನು ಕತ್ತರಿಸಬೇಡಿ: ಉಗುರಿನ ಸಂಧಿಯಲ್ಲಿ ಬೆಳೆಯುವ ಕ್ಯೂಟಿಕಲ್ಸ್‌ಗಳನ್ನು ಕತ್ತರಿಸುವುದು ತಪ್ಪು. ಅವುಗಳನ್ನು ಹಾಗೇ ಒಳಗೆ ದ‌ಬ್ಬಿ. ಅವುಗಳನ್ನು ಕತ್ತರಿಸುವುದರಿಂದ ಉಗುರಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು. ಜೊತೆಗೆ ಗಾಯಗಳಾಗಿ ಸೋಂಕು ಉಂಟಾಗಬಹುದು. ಅಲ್ಲದೇ ಕ್ಯೂಟಿಕಲ್ಸ್‌ಗಳನ್ನು ಕತ್ತರಿಸುವುದರಿಂದ ಸೂಕ್ಷ್ಮಜೀವಿಗಳು ಸುಲಭವಾಗಿ ಉಗುರಿನ ಒಳಕ್ಕೆ ಸೇರಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು