ಬುಧವಾರ, ಜುಲೈ 28, 2021
23 °C

ಅಡುಗೆ ಮನೆಯಲ್ಲಿದೆ ತುಟಿಯ ರಂಗು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಲಾಬಿ ರಂಗಿನ ತುಟಿ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ಮುಖದ ಅಂದವನ್ನು ಇನ್ನಷ್ಟು ಹೆಚ್ಚಿಸುವ ತುಟಿಗೆ ಲಿಪ್‌ಸ್ಟಿಕ್‌ ರಂಗಿನ ಮೂಲಕ ಸಿಂಗರಿಸಿಕೊಳ್ಳುತ್ತಾರೆ ಯುವತಿಯರು. ತುಟಿಯ ರಂಗು ಕೊಂಚ ಮಸುಕಾದರೂ ಮುಖ ಕಳೆಗುಂದುತ್ತದೆ. ಅನೇಕರಿಗೆ ಹುಟ್ಟುತ್ತಲೇ ತುಟಿಯ ಚರ್ಮ ಕಪ್ಪಾಗಿರುತ್ತದೆ. ಇನ್ನು ಕೆಲವರಿಗೆ ಹಾರ್ಮೋನ್‌ಗಳ ಅಸಮತೋಲನ, ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸುವುದು, ಸನ್‌ಬರ್ನ್‌, ಧೂಮಪಾನ, ಪದೇ ಪದೇ ಪೀಲಿಂಗ್‌ ಮಾಡಿಕೊಳ್ಳುವುದು ಮುಂತಾದ ಕಾರಣಗಳಿಂದಲೂ ತುಟಿಯ ಬಣ್ಣ ಕಪ್ಪಾಗಿರುತ್ತದೆ.

ಆದರೆ ಸೂಕ್ತ ಮೇಕಪ್‌ ಮೂಲಕ ತುಟಿಯ ಅಂದ ಹಾಗೂ ರಂಗನ್ನು ಹೆಚ್ಚಿಸಿಕೊಳ್ಳಬಹುದು. ನೆನಪಿಡಿ, ಇದು ಶಾಶ್ವತ ಪರಿಹಾರವಲ್ಲ. ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ತುಟಿಯ ರಂಗನ್ನು ಗುಲಾಬಿ ಬಣ್ಣಕ್ಕೆ ತಿರುಗಿಸಿಕೊಳ್ಳಬಹುದು. ಅಂತಹ ಕೆಲವು ನೈಸರ್ಗಿಕ ವಿಧಾನಗಳು ಇಲ್ಲಿವೆ. 

ಸಕ್ಕರೆಯ ಸ್ಕ್ರಬ್‌

ನಿಂಬೆಹಣ್ಣಿನ ಹೋಳನ್ನು ಒಂದು ಚಮಚ ಸಕ್ಕರೆಯಲ್ಲಿ ಅದ್ದಿ. ನಂತರ ಈ ನಿಂಬೆ ಹೋಳಿನಿಂದ ನಿಮ್ಮ ತುಟಿಯನ್ನು 5 ನಿಮಿಷಗಳ ಕಾಲ ಉಜ್ಜಿ. ಪ‍್ರತಿದಿನ ಹೀಗೆ ಮಾಡುವುದರಿಂದ ಆದಷ್ಟು ಬೇಗ ನಿಮ್ಮ ತುಟಿಯ ರಂಗು ಗುಲಾಬಿ ಬಣ್ಣಕ್ಕೆ ಮರಳುತ್ತದೆ. ಅಲ್ಲದೇ ತುಟಿ ಮೃದುವಾಗುತ್ತದೆ. ಸಕ್ಕರೆ ತುಟಿಯ ಮೇಲಿನ ಒಣ ಚರ್ಮವನ್ನು ಸ್ವಚ್ಛಗೊಳಿಸುತ್ತದೆ. ಜೊತೆಗೆ ತುಟಿಯ ಅಂದವನ್ನು ಹೆಚ್ಚುವಂತೆ ಮಾಡುತ್ತದೆ. ನಿಂಬೆರಸವು ಕಪ್ಪಾದ ತುಟಿಯ ಭಾಗವನ್ನು ಗುಲಾಬಿ ಬಣ್ಣಕ್ಕೆ ಮರಳಿಸಲು ನೆರವಾಗುತ್ತದೆ.

ಅರಿಸಿನದ ಮಾಸ್ಕ್‌

ಒಂದು ಚಿಕ್ಕ ಬೌಲ್‌ನಲ್ಲಿ ಒಂದು ಟೇಬಲ್ ಚಮಚ ಟೊಮೆಟೊ ರಸ, ಅರ್ಧ ಟೇಬಲ್ ಚಮಚ ನಿಂಬೆರಸ ಹಾಗೂ ಅರ್ಧ ಟೇಬಲ್ ಚಮಚ ಅರಿಸಿನದ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಆ ಮಿಶ್ರಣವನ್ನು ತುಟಿಗೆ ಹಚ್ಚಿ 20 ನಿಮಿಷಗಳ ನಂತರ ತಣ್ಣೀರಿನಿಂದ ತುಟಿಯನ್ನು ತೊಳೆಯಿರಿ. ವಾರದಲ್ಲಿ 3 ಬಾರಿ ಈ ರೀತಿ ಮಾಡಿ. ಅರಿಸಿನದಲ್ಲಿ ಕರ್ಕ್ಯುಮಿನ್‌ ರಾಸಾಯನಿಕ ಅಂಶವಿದ್ದು ಇದು ಮೆಲನಿನ್ ಉತ್ಪಾದನೆಯನ್ನು ಸಮತೋಲನದಲ್ಲಿಡುತ್ತದೆ. ಅಲ್ಲದೇ ಇದು ನೈಸರ್ಗಿಕವಾಗಿ ಚರ್ಮದ ರಂಗು ಹೆಚ್ಚಿಸಲು ಸಹಾಯ ಮಾಡುತ್ತದೆ. ಸನ್‌ಬರ್ನ್‌ ಕಾರಣದಿಂದ ತುಟಿಯ ಬಣ್ಣ ಕಪ್ಪಾಗಿದ್ದರೆ ಅರಿಸಿನದಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗುಣವು ತುಟಿಯ ಬಣ್ಣವನ್ನು ಮರುಕಳಿಸಲು ನೆರವಾಗುತ್ತದೆ. ನಿಂಬೆರಸ ತುಟಿಯ ಮೇಲಿನ ಕಲ್ಮಶಗಳನ್ನು ಸ್ವಚ್ಛಗೊಳಿಸಿದರೆ, ಟೊಮೆಟೊ ರಸವು ತುಟಿ ಚರ್ಮದ ಹೊಳಪನ್ನು ಹೆಚ್ಚುವಂತೆ ಮಾಡುತ್ತದೆ.

ಕ್ಯಾರೆಟ್ ರಸ

‌ಮೊದಲು ಕ್ಯಾರೆಟ್‌ ರುಬ್ಬಿಕೊಂಡು ತೆಳುವಾದ ಹತ್ತಿ ಬಟ್ಟೆಯ ಸಹಾಯದಿಂದ ರಸವನ್ನು ಹಿಂಡಿ ತೆಗೆಯಿರಿ. ಆ ರಸವನ್ನು ತುಟಿಗೆ ಹಚ್ಚಿ. ಅರ್ಧ ಗಂಟೆಗಳ ಕಾಲ ಹಾಗೇ ಒಣಗಲು ಬಿಡಿ. ಇದನ್ನು ಎರಡು ದಿನಕ್ಕೊಮ್ಮೆ ಮಾಡಿ. ಕ್ಯಾರೆಟ್‌ ರಸದಲ್ಲಿ ವಿಟಮಿನ್ ಎ ಹಾಗೂ ಆ್ಯಂಟಿ ಆಕ್ಸಿಡೆಂಟ್‌ ಅಂಶ ಅಧಿಕವಿದೆ. ಇದು ಚರ್ಮವನ್ನು ಸ್ವಚ್ಛಗೊಳಿಸುವುದಲ್ಲದೇ ತುಟಿಯ ಚರ್ಮವನ್ನು ಗುಲಾಬಿ ರಂಗಿಗೆ ತಿರುಗುವಂತೆ ಮಾಡುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು