ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ| ಆರೋಗ್ಯಕ್ಕೆ ಕುತ್ತು ಚೈನಾಸಾಲ್ಟ್‌

Last Updated 25 ಮಾರ್ಚ್ 2023, 20:30 IST
ಅಕ್ಷರ ಗಾತ್ರ

ವೀಕೆಂಡ್‌ನಲ್ಲಿ ಪ್ರಶಾಂತನಿಗೆ ಸಿಟಿಯಲ್ಲಿ ಸುತ್ತಾಡಿ ಅಮ್ಮನ ಜೊತೆ ಎಲ್ಲಾದರೂ ಒಳ್ಳೆಯ ಹೋಟೆಲ್‌ನಲ್ಲಿ ಕೋಳಿ ಮಾಂಸದ ಖಾದ್ಯ ತಿನ್ನದೇ ವಾಪಸಾದರೆ ಅದು ಅಂದಿನ ಸುತ್ತಾಟವು ಸುತ್ತಾಟ ಅಂತಲೇ ಅನಿಸುವುದಿಲ್ಲ. ಆವತ್ತೂ ಅವನು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ ಒಂದರಲ್ಲಿ ತನಗೆ ಇಷ್ಟವಾದ ಖಾದ್ಯವನ್ನು ಸವಿದೇ ಮನೆಗೆ ಬಂದಿದ್ದ. ಏಕೋ ಏನೊ ಮರುದಿನ ಬೆಳಗ್ಗೆ ಸಿಕ್ಕಾಪಟ್ಟೆ ತಲೆಸುತ್ತು ಅಂತಾ ಕೈಹೊತ್ತು ಕುಳಿತ. ಹತ್ತೊಂಬತ್ತರ ತರುಣನಿಗೆ ಹೀಗೆ ಏಕಾಏಕಿ ಏಕೆ ತಲೆಸುತ್ತು ಎಂದು ತಾಯಿ ಡಾಕ್ಟರ್‌ ಬಳಿ ಕರೆದುಕೊಂಡು ಹೋದರೆ, ಡಾಕ್ಟರ್ ಕೇಳಿದ ಮೊದಲ ಪ್ರಶ್ನೆಯೇ, ‘ರಾತ್ರಿ ಏನು ತಿಂದಿದ್ದಿರಿ’ ಅಂತಾ. ಪ್ರಶಾಂತ್‌ ಚಿಕನ್‌ ತಿಂದಿದ್ದನ್ನು ವಿವರಿಸಿದ.

ಡಾಕ್ಟರ್ ಎಲ್ಲಾ ಪರೀಕ್ಷಿಸಿ ಒಂದಷ್ಟು ಮಾತ್ರೆಗಳನ್ನು ಬರೆಯುತ್ತಾ ಅವರ ಅಮ್ಮನಿಗೆ ಹೇಳಿದ್ದು; ‘ಇನ್ನು ಮೇಲೆ ನೀವು ಹೊರಗಿನ ಖಾದ್ಯಗಳನ್ನು ಮಗನಿಗೆ ಕೊಡಿಸುವುದನ್ನು ನಿಲ್ಲಿಸಿ. ಅನಿವಾರ್ಯ ಎನಿಸಿದರೆ ಮಾತ್ರವೇ ಕೊಡಿಸಿ’ ಎಂದು ಸಲಹೆ ಇತ್ತರು. ಅಮ್ಮ ಪ್ರಶ್ನಾರ್ಥಕವಾಗಿ ಡಾಕ್ಟರ್‌ ಅನ್ನು ನೋಡುತ್ತಾ, ‘ಏನು ಡಾಕ್ಟ್ರೇ ಏನಾಗಿದೆ’ ಎಂದರು.

ಡಾಕ್ಟರ್‌ ಹೇಳುತ್ತಾ ಹೋದರು. ‘ನೋಡಿ, ನೀವು ನಿನ್ನೆ ನಿಮ್ಮ ಮಗನಿಗೆ ರುಚಿಯಾಗಿದೆ ಎಂದು ಚಿಕನ್‌ ತಿನ್ನಿಸಿದಿರಲ್ಲಾ ಅದರ ಹಿಂದಿನ ರುಚಿಯ ರಹಸ್ಯವೇ ತಲೆನೋವಿನ ಮೂಲ’ ಎಂದು ಚೈನಾ ಸಾಲ್ಟ್‌ ಪ್ರಭಾವವನ್ನು ತಮ್ಮದೇ ಮಾತುಗಳಲ್ಲಿ ಸವಿವರವಾಗಿ ತೆರೆದಿಟ್ಟರು.

‘ಮೊನೊ ಸೋಡಿಯಂ ಗ್ಲುಟಾ ಮೇಟ್‌’ (ಎಂಎಸ್‌ಜಿ) ಎಂಬುದು ರುಚಿವರ್ಧಕ, ವಾಸನೆರಹಿತ ಲವಣ. ಇದೊಂದು ಅಮೈನೊ ಆಮ್ಲವಾದ ನೈಸರ್ಗಿಕ ಧಾತು. ಹಲವಾರು ಆಹಾರ ಪದಾರ್ಥಗಳಲ್ಲಿ ಸಹಜವಾಗಿಯೇ ಇರುವಂಥದ್ದು. 1908ರ ಸುಮಾರಿಗೆ ಜಪಾನಿನ ಟೊಕಿಯೊ ವಿಶ್ವವಿದ್ಯಾಲಯದ ರಸಾಯನ ವಿಜ್ಞಾನ ವಿಭಾಗದ ಪ್ರೊ. ಕಿಕುನೆ ಇಕೇಡಾ ಇದನ್ನು ಅಧಿಕೃತವಾಗಿ ಕಂಡುಹಿಡಿದು ಇದರ ಪೇಟೆಂಟ್‌ ಗಾಗಿ ಅರ್ಜಿ ಸಲ್ಲಿಸಿದ್ದರು. ಇದರ ಹುಟ್ಟು ಜಪಾನಿನಲ್ಲಾದರೂ ಅತ್ಯಂತ ಹೆಚ್ಚಿನ ಬಳಕೆ ಆಗತೊಡಗಿದ್ದು ಚೀನಾದಲ್ಲಿ. ಹಾಗಾಗಿ, ಇದು ‘ಚೈನೀಸ್ ಸಾಲ್ಟ್‌’ ಎಂದೇ ಜನಜನಿತ. ಮೊದಲಿಗೆ ಇದನ್ನು ಜಪಾನ್‌ನ ಅಜಿನೊಮೊಟೊ ಎಂಬ ಸಂಸ್ಥೆ ಅಧಿಕೃತವಾಗಿ ಉತ್ಪಾದಿಸಲು ಪ್ರಾರಂಭಿಸಿತು. ಅದಕ್ಕಾಗಿಯೇ ಇದಕ್ಕೆ ಅಜಿನೊಮೊಟೊ ಎಂಬ ರೂಢಿ ನಾಮವೂ ಅಂಟಿಕೊಂಡಿತು. ಪ್ರಸ್ತುತ ಇದರ ಬಳಕೆ ಪ್ರಪಂಚದಾದ್ಯಂತ ಸಾವಿರಾರು ಟನ್‌ಗಳಲ್ಲಿ ಆಗುತ್ತಿದ್ದು ಭಾರತವೂ ಇದಕ್ಕೆ ಹೊರತಾಗಿಲ್ಲ.

ಎಂಎಸ್‌ಜಿ ರುಚಿವರ್ಧಕವನ್ನು ಸಾಮಾನ್ಯವಾಗಿ, ಸಂಸ್ಕರಿಸಿ ಶೇಖರಿಸಿ ಇಡಲಾಗುವ ತರಕಾರಿ, ಸೂಪ್‌, ಮಾಂಸದ ಪದಾರ್ಥ, ಡಿಢೀರ್‌ ಅಡುಗೆ ಮಿಶ್ರಣಗಳಲ್ಲಿ ಸೇರ್ಪಡೆ ಮಾಡಿ ಪ್ಯಾಕ್‌ ಮಾಡಲಾಗಿರುತ್ತದೆ. ಭಾರತದ ಅಡುಗೆ ಮನೆಯೊಳಗೆ ಇದು ಅಷ್ಟೊಂದು ಗಾಢವಾಗಿ ನುಸುಳಿಲ್ಲವಾದರೂ ಇಲ್ಲಿನ ರೆಸ್ಟೊರೆಂಟ್‌ಗಳು, ಉಪಾಹಾರ ಗೃಹಗಳಿಗೆ ಹೊಕ್ಕು ದಶಕಗಳೇ ಕಳೆದಿವೆ. ಹಾಗಾಗಿಯೇ, ಹೋಟೆಲ್‌ ಉಪಾಹಾರ ಗೃಹಗಳಲ್ಲಿ ನಮ್ಮ ಅನುಭವಕ್ಕೆ ಸಿಗುವ ವಿಲಕ್ಷಣ ರುಚಿಯೊಂದು ಮನೆಯ ಅಡುಗೆಗಳಲ್ಲಿ ಗೈರಾಗಿರುತ್ತದೆ.

ಮಿದುಳಿನ ರುಚಿ ಸಂವೇದನೆಗೆ ಒಳಗಾಗುವ ಹಲವು ಕ್ರಿಯೆಗಳ ವಿಶ್ಲೇಷಣೆಯಲ್ಲಿ ಯಾವ ರುಚಿಯು ಯಾವ ರೀತಿಯ ಪ್ರಭಾವ ಮತ್ತು ಉಲ್ಲಾಸ ಉಂಟು ಮಾಡುತ್ತದೆ ಎಂಬುದನ್ನು ಗ್ರಹಿಸುತ್ತದೆ. ಆಹಾರ ಪದಾರ್ಥಗಳಲ್ಲಿರುವ ಹಲವು ನೈಸರ್ಗಿಕ ರಸಾಯನ ಧಾತುಗಳು ನಮಗೆ ಈ ರುಚಿ ಸಂವೇದನೆಯನ್ನು ಉಂಟು ಮಾಡುತ್ತವೆ. ಷಡ್‌ರಸಗಳಲ್ಲಿ ಸಿಹಿ (ಮಧುರ), ಹುಳಿ (ಆಮ್ಲ), ಉಪ್ಪು (ಲವಣ), ಖಾರ (ಕಟು), ಕಹಿ (ತಿಕ್ತ) ಮತ್ತು ಒಗರು (ಕಷಾಯ) ಇವೆಲ್ಲಾ ಈಗಾಗಲೇ ಪರಿಚಯ ಇರುವಂಥವು. ಮೂಲ ರುಚಿಗಳಾದ ಸಿಹಿ, ಹುಳಿ, ಉಪ್ಪು ಮತ್ತು ಕಹಿ ಇವುಗಳಿಗೆ ಕಾಲಕ್ರಮೇಣ ಉಮಾಮಿ (ಸಾಮಾನ್ಯವಾಗಿ, ಇದು ಪ್ರೋಟೀನ್‌ಯುಕ್ತ ಆಹಾರಗಳಲ್ಲಿ ಇರುತ್ತದೆ) ಎಂಬ ರುಚಿ ಪ್ರಾಯಶಃ 2002ರಿಂದ ಸೇರ್ಪಡೆಯಾಗಿದೆ.

ನೈಸರ್ಗಿಕವಾಗಿ ಉಮಾಮಿ ಸ್ವಾದವನ್ನು ಹೊಂದಿರುವ ಪದಾರ್ಥಗಳನ್ನು ಉಪಯೋಗಿಸುವಾಗ ಕೃತ್ರಿಮ ಎಂಎಸ್‌ಜಿಯನ್ನು ಸೇರಿಸುವ ಅವಶ್ಯಕತೆ ಇರುವುದಿಲ್ಲ. ಮೀನು, ಮಾಂಸ, ಗಿಣ್ಣು, ಸೋಯಾ, ಅಣಬೆ, ಟೊಮೆಟೊ ಮುಂತಾದವುಗಳಲ್ಲಿ ನೈಸರ್ಗಿಕವಾಗಿ ಉಮಾಮಿ ಸ್ವಾದ ಇರುತ್ತದೆ. ಆದರೆ, ಈ ಸ್ವಾದವನ್ನು ವರ್ಧಿಸಲು ಉಪಯೋಗಿಸುವ ಕೃತಕ ರಾಸಾಯನಿಕವೇ ಎಂಎಸ್‌ಜಿ ಅಥವಾ ಉಮಾಮಿ ಉಪ್ಪು.

ಉಮಾಮಿ ರುಚಿಯು ಒಂದು ರೀತಿಯ ಮಾಂಸದ ರುಚಿಯನ್ನು ಹೋಲುವಂಥದ್ದಾಗಿರುತ್ತದೆ. ಇದರ ರುಚಿಯು ಆಹಾರ ಪದಾರ್ಥಗಳಲ್ಲಿ (ಸಿಹಿ ಆಹಾರ ಪದಾರ್ಥಗಳನ್ನು ಹೊರತುಪಡಿಸಿ) ನಮ್ಮ ಅನುಭವಕ್ಕೆ ದಕ್ಕುವುದರಿಂದ ವರ್ಧಿತ ರುಚಿಯ ಅನುಭವವಾಗುವುದರಲ್ಲಿ ಸಂದೇಹವಿಲ್ಲ. ನೀವೆಂದಾದರೂ ಗಾಯಗೊಂಡು ರಕ್ತ ಸ್ರವಿಸುವ ಬೆರಳನ್ನು ಬಾಯಲ್ಲಿ ಇಟ್ಟುಕೊಂಡಿದ್ದರೆ ಆಗ ಸಿಗುವ ವಿಲಕ್ಷಣ ರುಚಿಯೇ ಇದರಲ್ಲೂ ಕಂಡು ಬರುತ್ತದೆ!. ನಮ್ಮ ನಾಲಗೆಯಲ್ಲಿರುವ ನಾಲ್ಕು ಮೂಲ ರುಚಿಗ್ರಾಹಿಗಳ ಜೊತೆಗೆ ಉಮಾಮಿ ರುಚಿ ಗ್ರಾಹಿಗಳು ಪ್ರತ್ಯೇಕವಾಗಿ ಇವೆ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ.

ನಮ್ಮ ಸಂಬಾರ ಪದಾರ್ಥಗಳ ರುಚಿಗಳು ಈ ಹಿಂದೆ ಪಾಶ್ಚಾತ್ಯ ರಾಷ್ಟ್ರಗಳಿಗೆ ತಲುಪಿ ಆವರಿಸಿಕೊಂಡಿರುವಷ್ಟೇ ಸಹಜವಾಗಿ ಎಂಎಸ್‌ಜಿಯ ಉಮಾಮಿ ರುಚಿ ಕೂಡಾ ನಮ್ಮ ಪಾಕಶಾಲೆಗಳಲ್ಲಿ ಬಂದು ಸೇರುತ್ತಿದೆ.

ಎಂಎಸ್‌ಜಿ ಆಕ್ಷೇಪಿತ ರಾಸಾಯನಿಕ ಎಂಬ ಖಂಡನೆಗೆ ಈಡಾಗಿದ್ದರೂ ಇದು ಕ್ಲೇಶಕಾರಕವೆಂಬ ಬಗ್ಗೆ ಈತನಕ ಯಾವುದೇ ಬಲವಾದ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ. ಕೆಲವು ಸಂಶೋಧನೆಗಳ ಅನುಸಾರ ಇದರ ಬಳಕೆಯಿಂದ ತಲೆನೋವು, ಬಸುರಿಯರಿಗೆ ಮಾರಕವಾಗಿ ಪರಿಣಮಿಸಬಹುದು ಎಂದು ಹೇಳಲಾಗಿದೆ. ಹಾಗೆ ನೋಡುವುದಾದರೆ ಎಲ್ಲಾ ರುಚಿವರ್ಧಕಗಳೂ ಅಂದರೆ ಉಪ್ಪು, ಸಕ್ಕರೆ, ಆಮ್ಲಗಳು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುವಾಗ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಲ್ಲಿ ಸಂದೇಹವೇ ಇಲ್ಲ.

ಪ್ರಾಧಿಕಾರಗಳ ನಿರ್ಲಕ್ಷ್ಯ: ‘ಹೋಟೆಲ್‌ಗಳಲ್ಲಿ ಬಳಸುವ ರುಚಿವೃದ್ಧಿಯ ಪದಾರ್ಥಗಳ ಬಗ್ಗೆ ನಿಗಾ ವಹಿಸುವ ವ್ಯವಸ್ಥೆ ದುರ್ಬಲವಾಗಿದೆ. ಈಗಿರುವ ಪ್ರಾಧಿಕಾರಗಳು ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆ ಮುಂತಾದ ವಿಷಯಗಳ ಬಗ್ಗೆ ಮಾತ್ರ ಕ್ರಮ ಕೈಗೊಳ್ಳುತ್ತಿವೆಯೇ ಹೊರತು ರುಚಿ ವೃದ್ಧಿಸಲು ಬಳಸುವ ಪದಾರ್ಥಗಳ ಬಗ್ಗೆ ಗಮನಹರಿಸುತ್ತಿಲ್ಲ. ಆಹಾರ ಪದಾರ್ಥಗಳನ್ನು ಪರೀಕ್ಷೆಗೆ ಕಳುಹಿಸಿ ವಿಶ್ಲೇಷಣೆ ನಡೆಸಿದರೆ ಮಾತ್ರ ಇಂತಹ ಪದಾರ್ಥಗಳ ಬಳಕೆಯನ್ನು ಪತ್ತೆ ಮಾಡಲು ಸಾಧ್ಯ’ ಎಂಬುದು ಸಕ್ಷಮ ಪ್ರಾಧಿಕಾರದ ಅಧಿಕಾರಿಗಳ ಅನಿಸಿಕೆ.

‘ಇದುವರೆಗೆ ಅಜಿನೊ ಮೊಟೊ ಸೇರಿದಂತೆ ರುಚಿ ವೃದ್ಧಿಸುವ ಆಹಾರ ಪದಾರ್ಥಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿಲ್ಲ. ಆಹಾರ ಸುರಕ್ಷತಾ ಇಲಾಖೆ ಆಹಾರ ಗುಣಮಟ್ಟದ ಬಗ್ಗೆ ಮತ್ತು ಆರೋಗ್ಯ ನಿರೀಕ್ಷಕರು ಸ್ವಚ್ಛತೆ ಬಗ್ಗೆ ಮಾತ್ರ ಗಮನಹರಿಸುತ್ತಾರೆ. ಆದರೆ, ಆಹಾರದಲ್ಲಿ ಏನು ಮತ್ತು ಯಾವ ಪದಾರ್ಥಗಳನ್ನು ಬಳಸಲಾಗಿದೆ ಎನ್ನುವ ಬಗ್ಗೆ ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲ. ಈ ಬಗ್ಗೆ ಸ್ಪಷ್ಟ ಕಾನೂನುಗಳು ಸಹ ಇಲ್ಲ. ಹೀಗಾಗಿ, ಇದುವರೆಗೆ ಒಂದೇ ಒಂದು ಪ್ರಕರಣ ದಾಖಲಾದ ಉದಾಹರಣೆ ಇಲ್ಲ‘ ಎಂದು ಈ ಅಧಿಕಾರಿಗಳು ಹೇಳುತ್ತಾರೆ.

ಎಂಎಸ್‌ಜಿ ಪತ್ತೆ ಹೇಗೆ: ಪ್ರಾಧಿಕಾರ ಅಧಿಕಾರಿಗಳ ಪ್ರಕಾರ, ಆಹಾರದಲ್ಲಿ ಎಂಎಸ್‌ಜಿ ಬಳಕೆಯನ್ನು ಕಣ್ಣೋಟದಲ್ಲಿ, ಪರಿಮಳ ಆಸ್ವಾದಿಸಿ ಅಥವಾ ಇನ್ನಾವುದೋ ಭೌತಿಕ ವಿಧಾನದಲ್ಲಿ ಪತ್ತೆ ಮಾಡುವುದು ಅಸಾಧ್ಯ. ಅದೇನಿದ್ದರೂ, ಆಹಾರವನ್ನು ಪ್ರಯೋಗಾಲಯಗಳಲ್ಲಿ ಪರೀಕ್ಷೆ ಮಾಡಿಸಿಯೇ ತಿಳಿಯಬೇಕು. ಈಗಾಗಲೇ ತಾಜಾ ಆಹಾರಗಳಲ್ಲಿ ಎಂಎಸ್‌ಜಿ ನಿಷೇಧಿಸುವ ಕಾನೂನಿದೆ. ಇದರ ಜತೆ, ಕೆಲವೊಂದು ನಿರ್ಬಂಧಗಳನ್ನು ಕೂಡ ವಿಧಿಸಲಾಗಿದೆ. ಆಹಾರ ತಯಾರಿಕಾ ಘಟಕಗಳಿಂದ ಬಳಕೆಗೆ ಸಂಬಂಧಿಸಿದಂತೆ ಕಾನೂನು ಪರಿಪಾಲನೆ ಮತ್ತು ಇಲಾಖೆಗಳಿಂದ ಪರಿಶೀಲನೆ ಹಾಗೂ ಕಾನೂನು ಕ್ರಮಗಳು ಸಮರ್ಪಕ ರೀತಿಯಲ್ಲಿ ಆಗುತ್ತಿಲ್ಲ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ನಿಯಮದ ಪ್ರಕಾರ,‌ ತಾಜಾ ಆಹಾರ ತಯಾರಿಸುವ ಹೋಟೆಲ್, ಕೇಟರಿಂಗ್, ರೆಸ್ಟೊರೆಂಟ್, ಫಾಸ್ಟ್‌ಫುಡ್‌, ಬೀದಿ ಬದಿ ಹೋಟೆಲ್‌ಗಳಲ್ಲಿ ಎಂಎಸ್‌ಜಿ ಬಳಸುವುದನ್ನು ನಿಷೇಧಿಸಲಾಗಿದೆ. ಆದರೆ, ಈ ವಿಷಯ ಬಹುಮಂದಿಗೆ ಗೊತ್ತಿಲ್ಲ ಮತ್ತು ಈ ಬಗ್ಗೆ ತಿಳಿವಳಿಕೆಯೂ ಇಲ್ಲ. ಜನರಿಗೆ ತಿಳಿವಳಿಕೆ ಮೂಡಿಸುವ ಕಾರ್ಯವನ್ನು ಎಫ್‌ಎಸ್‌ಎಸ್ಎಐ ಸಹ ಸಮರ್ಪಕವಾಗಿ ಮಾಡುತ್ತಿಲ್ಲ ಎಂದು ಸ್ವತಂತ್ರ ಆಹಾರ ಸುರಕ್ಷತೆಯ ಆಡಿಟರ್, ಟ್ರೈನರ್ ಮತ್ತು ಕನ್ಸಲ್ಟೆಂಟ್ ಸವಿತಾ ದೇ. ಭರಮಗೌಡ್ರ ಅಭಿಪ್ರಾಯಪಡುತ್ತಾರೆ.

ಆದರೆ, ‘ರೆಡಿ ಟು ಕುಕ್‌’ನಂತಹ ಕೆಲ ಆಹಾರಗಳಲ್ಲಿ (ಪಾಸ್ತಾ, ನೂಡಲ್ಸ್‌ ವರ್ಗಕ್ಕೆ ಸೇರುವ ಆಹಾರಗಳಲ್ಲಿ) ಎಂಎಸ್‌ಜಿ ಬಳಸಲು ಅನುಮತಿ ಇದೆ. ಅದು ಕಲಬೆರಕೆ ರಹಿತವಾಗಿರಬೇಕು ಹಾಗೂ ಬೇಕಾದ ರುಚಿ ಮತ್ತು ವಾಸನೆ ಪಡೆಯಲು ಎಷ್ಟು ಬೇಕೋ ಅಷ್ಟನ್ನೇ ಮಾತ್ರ ಬಳಸಬೇಕು. ಆದರೆ, ಅದನ್ನು ಎಷ್ಟು ಬಳಸಬೇಕು ಎನ್ನುವ ಗರಿಷ್ಠ ಮಿತಿಯನ್ನು ನಿಗದಿ ಪಡಿಸಿಲ್ಲ. ‘ಎಂಎಸ್‌ಜಿ ಬಳಸಿದ ಆಹಾರ ಪೊಟ್ಟಣದ ಮೇಲೆ (ಲೇಬಲ್) ‘ಗರ್ಭಿಣಿಯರಿಗೆ ಮತ್ತು 12 ತಿಂಗಳ ಒಳಗಿನ ಹಸುಗೂಸುಗಳಿಗೆ ಈ ಆಹಾರ ಬಳಸುವುದು ಸೂಕ್ತವಲ್ಲ’ ಎಂದು ಬರೆಯುವುದು ಕಡ್ಡಾಯ. ಅಮೆರಿಕದ ಕೃಷಿ ಆಹಾರ ಇಲಾಖೆ (ಎಫ್‌ಡಿಎ) ಕೂಡ ನಿಷೇಧ ಮಾಡಿಲ್ಲ. ಆದರೆ, ಎಂಎಸ್‌ಜಿ ಬಳಸಿದ ಆಹಾರ ಪೊಟ್ಟಣದ ಮೇಲೆ, ಎಷ್ಟು ಎಂಎಸ್‌ಜಿ ಬಳಸಿದ್ದೇವೆಂದು ನಮೂದಿಸಬೇಕೆಂಬ ನಿಯಮವನ್ನು ಜಾರಿಗೆ ತಂದಿದೆ.

‘ಗ್ರಾಹಕರು, ಯಾವುದಾದರೂ ಆಹಾರ ತಯಾರಿಕಾ ಘಟಕಗಳಲ್ಲಿ ತಯಾರಾಗುವ ಆಹಾರಗಳಲ್ಲಿ ಎಂಎಸ್‌ಜಿ ಬಳಸಿದ್ದಾರೆ ಎನ್ನುವ ಅನುಮಾನ ಮೂಡಿದರೆ, ಎಫ್‌ಎಸ್‌ಎಸ್‌ಎಐಗೆ ದೂರು ನೀಡಬಹುದು. ಅಷ್ಟೇ ಅಲ್ಲ, ನಾಗರಿಕರು ಅಥವಾ ಸಂಘಟನೆಗಳು, ಅನುಮಾನ ಮೂಡಿಸುವ ಆಹಾರವನ್ನು ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿ, ಪರೀಕ್ಷೆ ಕೂಡ ಮಾಡಿಸಿ, ವರದಿ ತೆಗೆದುಕೊಂಡು ಬಂದು ಎಫ್‌ಎಸ್‌ಎಸ್‌ಎಐಗೆ ದೂರು ನೀಡಬಹುದು. ಅಕ್ರಮಗಳು ಉಂಟಾದಾಗ ಕಾನೂನು ಕ್ರಮ ಜರುಗಿಸಿ ಜನರಲ್ಲಿ, ಹೋಟೆಲ್‌ ಉದ್ಯಮದವರಲ್ಲಿ ಜಾಗೃತಿ ಮೂಡಿಸಬಹುದು. ಇದರಿಂದ ಎಂಎಸ್‌ಜಿ ಬಳಕೆ ಕಡಿಮೆಯಾಗಬಹುದು‘ ಎನ್ನುತ್ತಾರೆ ಸವಿತಾ.

ನಿಯಮಿತ ಸೇವನೆಯಿಂದ ಅಪಾಯ: ‘ಮೊನೊಸೋಡಿಯಮ್‌ ಗ್ಲುಟಾಮೇಟ್‌’ ಬಳಕೆಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅನುಮೋದನೆ ನೀಡಿದ್ದರೂ, ಅತಿಯಾದ ಸೇವನೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಇದು ಹೆಚ್ಚಿನ ಪ್ರಮಾಣದಲ್ಲಿ ಸೋಡಿಯಂ ಒಳಗೊಂಡಿರುತ್ತದೆ. ಪ್ರತಿ ಟೀ ಚಮಚದಷ್ಟು ಅಜಿನೊಮೊಟೊದಲ್ಲಿ 800 ಎಂ.ಜಿಯಷ್ಟು ಸೋಡಿಯಂ ಇರುತ್ತದೆ. ಇದನ್ನು ಸೇರಿಸುವ ಆಹಾರ ಪದಾರ್ಥಗಳ ಸೇವನೆಯಿಂದ ರಕ್ತದೊತ್ತಡ ಹೆಚ್ಚಳವಾಗಲಿದೆ. ಇದರ ವ್ಯಾಪಕ ಬಳಕೆಯು ಬೊಜ್ಜು, ಆಸ್ತಮಾ, ಮಧುಮೇಹ, ನರಸಂಬಂಧಿ ಸಮಸ್ಯೆಗಳೂ ಸೇರಿದಂತೆ ವಿವಿಧ ಅನಾರೋಗ್ಯಗಳಿಗೆ ಕಾರಣವಾಗುತ್ತದೆ. ಪ್ರಾಣಿಗಳ ಮೇಲೆ ನಡೆಸಲಾದ ಅಧ್ಯಯನಗಳಿಂದ ಇದು ದೃಢಪಟ್ಟಿದೆ’ ಎನ್ನುತ್ತಾರೆ ನಾರಾಯಣ ಹೆಲ್ತ್ ಸಿಟಿಯ ಹಿರಿಯ ಆಹಾರ ತಜ್ಞೆ ಸುಪರ್ಣಾ ಮುಖರ್ಜಿ.

‘ಆಹಾರ ಪೊಟ್ಟಣ ಖರೀದಿಸುವಾಗ ಅದರ ಮೇಲಿರುವ ಮಾಹಿತಿಯನ್ನು ಓದಬೇಕು. ಸಾಧ್ಯವಾದಷ್ಟು ಪ್ಯಾಕಿಂಗ್ ಮಾಡಿದ ಆಹಾರ ಸೇವನೆ ತ್ಯಜಿಸಬೇಕು. ಚಿಪ್ಸ್, ನೂಡಲ್ಸ್ ಹಾಗೂ ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸಬಹುದಾದ ಪೊಟ್ಟಣ ಆಹಾರಗಳನ್ನು ಮಿತವಾಗಿ ಬಳಸಬೇಕು’ ಎಂಬುದು ಮುಖರ್ಜಿ ಅವರ ಅಭಿಪ್ರಾಯ.

ಆರೋಗ್ಯದ ಮೇಲೆ ದುಷ್ಪರಿಣಾಮ: ಎಂಎಸ್‌ಜಿಯನ್ನು ಪ್ಯಾಕೇಜ್ಡ್‌ ಆಹಾರಗಳಲ್ಲಿ ಮಾತ್ರ ಬಳಸಬೇಕೆಂಬ ನಿಯಮ ಉಲ್ಲಂಘಿಸಿ, ಬಹುತೇಕ ಆಹಾರಗಳಲ್ಲಿ ನಿತ್ಯವೂ ಅತಿಯಾಗಿ ಬಳಸುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ’ ಎಂಬುದು ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ (ಸಿಎಫ್‌ಟಿಆರ್‌ಐ) ತಜ್ಞರ ಸ್ಪಷ್ಟ ನುಡಿ.

‘ಸಂಸ್ಥೆಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಶ್ಲೇಷಣಾ ಪ್ರಯೋಗಶಾಲೆ ಮುಖ್ಯಸ್ಥ ಡಾ.ಎ.
ಜಯದೀಪ್‌ ಹೇಳುವಂತೆ, ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಪ್ರಕಾರ, ಎಂಎಸ್‌ಜಿಯನ್ನು ಪೊಟ್ಟಣಗಳಲ್ಲಿರಿಸಿದ ಆಹಾರದಲ್ಲಷ್ಟೇ ಬಳಸಬಹುದು. ರಾಸಾಯನಿಕ, ಅದರ ಪ್ರಮಾಣ ಉಲ್ಲೇಖಿಸುವುದು ಕಡ್ಡಾಯ. ಗರ್ಭಿಣಿಯರು ಹಾಗು 12 ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡುವಂತಿಲ್ಲ ಎಂದು ಲೇಬಲ್‌ನಲ್ಲೂ ಉಲ್ಲೇಖಿಸಬೇಕು’ ಎಂದು ಅವರು ಹೇಳುತ್ತಾರೆ.

ಜಿಎಂಪಿ (ಗುಡ್‌ ಮ್ಯಾನ್ಯುಫ್ಯಾಕ್ಚರಿಂಗ್‌ ಪ್ರಾಕ್ಟೀಸ್‌) ಪ್ರಕಾರ ಕೆಲವು ರಾಸಾಯನಿಕಗಳನ್ನು ಸ್ವಲ್ಪವಷ್ಟೇ ಬಳಸಬೇಕು. ಆದರೆ, ಹೋಟೆಲ್‌, ಸಮಾರಂಭಗಳ ಅಡುಗೆ ತಯಾರಿಯಲ್ಲಿ ಎಗ್ಗಿಲ್ಲದೆ ಬಳಸಲಾಗುತ್ತಿದೆ. ‘ಬಿರಿಯಾನಿ, ಪುಲಾವ್‌ ಸೇರಿದಂತೆ ಅಡುಗೆ ಮಾಡುವಾಗ ಎಂಎಸ್‌ಜಿ ಸೇರಿದಂತೆ 23 ರಾಸಾಯನಿಕಗಳನ್ನು ಬಳಸುವಂತಿಲ್ಲ. ಹಾಲು, ಮೊಸರು, ಸೊ‍ಪ್ಪು– ತರಕಾರಿಗಳು, ಹಣ್ಣುಗಳು, ಮಾಂಸ, ಮೊಟ್ಟೆ, ಚಾಕೊಲೇಟ್, ಹಾಲಿನ ಉತ್ಪನ್ನಗಳು, ಸಾಂಬಾರು ಪುಡಿಗಳಲ್ಲಿ ಹಾಕುವಂತಿಲ್ಲ’ ಎಂದು ಅವರು ಸ್ಪಷ್ಟಪಡಿಸುತ್ತಾರೆ.

ನೈಸರ್ಗಿಕ ರುಚಿಕಾರಕವೇ ಒಳಿತು: ‘ಟೊಮೆಟೊ, ಮಾಂಸದಲ್ಲೂ ನೈಸರ್ಗಿಕವಾಗಿ ಗ್ಲುಟಾಮೇಟ್‌ ಆಮ್ಲವಿರುತ್ತದೆ. ಪುಲಾವ್‌ಗೆ ಮಾಂಸದ ಚೂರು ಹಾಕಿದಾಗ ರುಚಿ ಹೆಚ್ಚುತ್ತದೆ. ವಿಶ್ವಸಂಸ್ಥೆಯ ಜೆಇಸಿಎಫ್‌ಎ ಸಮಿತಿ ಪ್ರಕಾರ, ಯಾವುದೇ ರಾಸಾಯನಿಕ ಸೇರಿಸಿದ ಆಹಾರವನ್ನು ಪ್ರಾಣಿಗಳಿಗೆ ನೀಡಿದರೆ ಅದರ 100ರಷ್ಟು ಪ್ರಮಾಣವನ್ನು ಕಡಿಮೆ ಮಾಡಿ ಮನುಷ್ಯರು ಸೇವಿಸಬಹುದು. ಇಲಿಗೆ ನೀಡುವ ಆಹಾರದಲ್ಲಿ 1 ಗ್ರಾಂ ರಾಸಾಯನಿಕವಿದ್ದರೆ, ಮನುಷ್ಯರಿಗೆ ನೀಡುವ ಆಹಾರದಲ್ಲಿ 0.03ರಷ್ಟಿರಬೇಕು’ ಎಂದು ಆಹಾರ ವಿಜ್ಞಾನಿ ಅರುಣ್ ಕುಮಾರ್ ಹೇಳುತ್ತಾರೆ.

‘ವಿಜ್ಞಾನಿಗಳ ಪ್ರಕಾರ, ದೇಹದ ತೂಕಕ್ಕೆ ತಕ್ಕಂತೆ 3 ಮಿಲಿ ಗ್ರಾಂಗಿಂತ ಹೆಚ್ಚು ಗ್ಲುಟಾಮೇಟ್‌ ಬಳಸಬಾರದು. ಅತಿಯಾದರೆ ಎದೆ ಉರಿ, ಹೊಟ್ಟೆ ಭಾರವೆನ್ನಿಸುವ ಚೈನೀಸ್‌ ಸಿಂಡ್ರೋಮ್ ಬರುತ್ತದೆ. ನ್ಯೂಡಲ್ಸ್‌, ಗೋಬಿ ಮಂಚೂರಿಯಂಥ ಕುರುಕಲು ತಿಂಡಿಗಳಲ್ಲಿ ಹೆಚ್ಚೇ ರಾಸಾಯನಿಕ ಹಾಕುತ್ತಾರೆ. ಮನೆಯಲ್ಲೂ ಕೃತಕ ಬಣ್ಣ ಬಳಸುತ್ತಾರೆ. ಮೈಸೂರು ಪಾಕ್‌, ಕೇಸರಿ ಬಾತ್‌, ಸಿಹಿ ತಯಾರಿಕೆಯಲ್ಲಿ ಬೇಡವಾದರೂ ಬಳಕೆಯಾಗುತ್ತಿದೆ. ಜನರಲ್ಲಿ ಜಾಗೃತಿ ಅಗತ್ಯ. ಎಂಎಸ್‌ಜಿ ಹೆಚ್ಚು ತಿನ್ನುವಂತೆಯೂ ಉದ್ದೀಪಿಸುತ್ತದೆ. ಅವುಗಳ ಬದಲು ನೈಸರ್ಗಿಕ ರುಚಿಕಾರಕಗಳನ್ನು ಬಳಸುವುದೇ ಒಳಿತು’ ಎನ್ನುತ್ತಾರೆ.

ಪೂರಕ ಮಾಹಿತಿ: ಸಚ್ಚಿದಾನಂದ ಕುರಗುಂದ, ವರುಣ ಹೆಗಡೆ, ಮಂಜುಶ್ರೀ ಕಡಕೋಳ, ಮೋಹನ್ ಕುಮಾರ್ ಸಿ.

***

ನರಸಂಬಂಧಿ ಸಮಸ್ಯೆಗೆ ಆಹ್ವಾನ

ಆಹಾರ ಪದಾರ್ಥ ಹಾಗೂ ಸಿದ್ಧ ತಿಂಡಿ ತಿನಿಸುಗಳ ‍ಪರಿಮಳ ಹಾಗೂ ರುಚಿಯನ್ನು ಹೆಚ್ಚಿಸಲು ಅಜಿನೊಮೊಟೊ ಬಳಸಲಾಗುತ್ತಿದೆ. ಈ ಅಜಿನೊಮೊಟೊದಲ್ಲಿ ಅನಾರೋಗ್ಯಕರ ಅಂಶಗಳು ಸಾಕಷ್ಟಿವೆ. ಇದನ್ನು ಅಲ್ಪ ಪ್ರಮಾಣದಲ್ಲಿ ಬಳಸಬೇಕು. ಇದನ್ನು ಬೆರೆಸಿದ ಆಹಾರವನ್ನು ನಿರಂತರ ಸೇವಿಸಿದಲ್ಲಿ ನರಸಂಬಂಧಿ ಸೇರಿ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ.

ಅಜಿನೊಮೊಟೊ ಮಿಶ್ರಿತ ಆಹಾರವು ದೇಹಕ್ಕೆ ವಿಷಕಾರಿಯಾಗುವ ಸಾಧ್ಯತೆ ಇರುತ್ತದೆ. ಬುದ್ಧಿಯ ವಿಕಾಸದ ಮೇಲೆಯೂ ಪರಿಣಾಮ ಬೀರುತ್ತದೆ. ಕೆಲವರಿಗೆ ತೀವ್ರ ತಲೆಶೂಲೆ ಕಾಣಿಸಿಕೊಳ್ಳುತ್ತದೆ. ಜಂಕ್‌ ಫುಡ್‌ಗಳ ಸೇವನೆಯಿಂದ ಏಕಾಏಕಿ ದೇಹದ ತೂಕವೂ ಹೆಚ್ಚಾಗುತ್ತದೆ. ಇದು ನರ ಕೋಶಗಳನ್ನೂ ಹಾನಿಗೊಳಿಸುತ್ತದೆ. ಉಸಿರಾಟದ ಸಮಸ್ಯೆ, ಕೀಲು ಮತ್ತು ಸ್ನಾಯು ನೋವು, ರಕ್ತದೊತ್ತಡದ ಏರಿಳಿತ ಸೇರಿ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಪಾರ್ಕಿನ್‌ಸನ್‌, ಅಲ್ಜಮೈರ್‌ನಂತಹ ಕಾಯಿಲೆಗಳು ಸಹ ಬರುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ಆದರೆ, ಈ ಬಗ್ಗೆ ವೈಜ್ಞಾನಿಕ ಅಧ್ಯಯನದ ಅಧಿಕೃತ ವರದಿಗಳಿಲ್ಲ. ಆದಾಗ್ಯೂ, ಆರೋಗ್ಯದ ದೃಷ್ಟಿಯಿಂದ ಸಾಧ್ಯವಾದಷ್ಟು ಹೊರಗಡೆ ತಿನಿಸುಗಳಿಗೆ ಕಡಿವಾಣ ಹಾಕಿ, ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಬೇಕು.

ಡಾ. ಕೆ.ಎಸ್.ಸಂಜಯ್, ನಿರ್ದೇಶಕರು, ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ

***

ಬೇಕಿದೆ ಕಾನೂನಿನ ಕುಣಿಕೆ

ಎಂಎಸ್‌ಜಿ ನಿರ್ಬಂಧಕ್ಕೆ ಯಾವುದೇ ಕಾನೂನುಗಳು ಇಲ್ಲವಾದರೂ, ಎಫ್‌ಎಸ್‌ಎಸ್‌ಎಐ ಅಧಿನಿಯಮ ಸಂಖ್ಯೆ 3.1.11ರ ಅಡಿಯಲ್ಲಿ ಎಂಎಸ್‌ಜಿಯನ್ನು ರುಚಿವರ್ಧಕ ಐಎನ್‌ಎಸ್‌ ಸಂಖ್ಯೆ 621ರಲ್ಲಿ ನಮೂದಿಸಿ ಅನುಮತಿ ನೀಡಲಾಗಿದೆ. ಬಳಕೆ ನಿರ್ಬಂಧ ಕೋರಿ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ದಾಖಲಿಸಲಾಗಿತ್ತಾದರೂ ಅರ್ಜಿದಾರರು ಪ್ರಕರಣ ನಡೆಸದೇ ಹೋದರು. ಸದ್ಯ ಇದರ ಉತ್ಪನ್ನಗಳ ಮೇಲೆ ಎಂಎಸ್‌ಜಿಯ ಪ್ರಮಾಣ ಮತ್ತು ಎಂಎಸ್‌ಜಿ ಸಹಿತ ಅಥವಾ ಎಂಎಸ್‌ಜಿ ರಹಿತ ಎಂಬುದನ್ನು ನಮೂದಿಸಬೇಕಾಗುತ್ತದೆ. ಗ್ಲುಟಾಮೇಟ್‌ ಅನ್ನು ಕೃತ್ರಿಮವಾಗಿ ಸೇರ್ಪಡೆಗೊಳಿಸಿದಾಗ ಮಾತ್ರ ಇದನ್ನು ನಮೂದು ಮಾಡಬೇಕಾಗಿರುತ್ತದೆ. ಸದ್ಯ, ಇದನ್ನು ಶರೀರದ ಆಂತರಿಕ ಅಲರ್ಜಿಗೆ ಕಾರಣವಾಗಬಹುದಾದ ಪಟ್ಟಿಯಲ್ಲಿ ಇರಿಸಲಾಗಿದೆ. ಪಾಕಿಸ್ಥಾನವೊಂದನ್ನು ಹೊರತುಪಡಿಸಿ ಪ್ರಪಂಚದ ಬೇರಾವುದೇ ಭಾಗದಲ್ಲೂ ಎಂಎಸ್‌ಜಿಯನ್ನು ನಿರ್ಬಂಧಿಸಿಲ್ಲ.

ಎಂ.ಎಸ್‌.ಶ್ಯಾಮಸುಂದರ್, ಹಿರಿಯ ವಕೀಲ, ಹೈಕೋರ್ಟ್‌

***
ಸಾಂಪ್ರದಾಯಿಕ ವಿಧಾನವೇ ರುಚಿಗೆ ಕಾರಣ

ಚೈನಾಸಾಲ್ಟ್ ಬಳಸದೆಯೇ ಖಂಡಿತವಾಗಿಯೂ ರುಚಿಕರವಾಗಿ ಆಹಾರ ತಯಾರಿಸಬಹುದು. ನೈಸರ್ಗಿಕವಾಗಿ ದೊರೆಯುವ ಆಹಾರ ಸಾಮಗ್ರಿಗಳನ್ನು ಬಳಸಿ ಅಡುಗೆ ಮಾಡಿದರೆ ಅದು ರುಚಿಕರವಾಗಿಯೇ ಇರುತ್ತದೆ.

ನಮ್ಮದು ನೂರು ವರ್ಷಗಳಷ್ಟು ಇತಿಹಾಸವಿರುವ ಹೋಟೆಲ್. ನಮ್ಮ ತಾತನ ಕಾಲದಿಂದಲೂ ಇಂದಿನವರೆಗೆ ಸಾಂಪ್ರದಾಯಿಕ ಆಹಾರ ತಯಾರಿಕಾ ವಿಧಾನವನ್ನೇ ಉಳಿಸಿಕೊಂಡಿದ್ದೇವೆ. ನಮ್ಮಲ್ಲಿ ಮಾಂಸದ ಖಾದ್ಯಗಳಿಗೆ ಮನೆಯಲ್ಲಿ ತಯಾರಿಸುವಂತೆಯೇ ಮಸಾಲೆಯನ್ನು ತಯಾರಿಸುತ್ತೇವೆ. ನೈಸರ್ಗಿಕವಾಗಿ ದೊರೆಯುವ ಆಹಾರ ಪದಾರ್ಥಗಳ ಬಳಕೆಯೇ ನಮ್ಮ ಹೋಟೆಲಿನ ಆಹಾರಗಳ ರುಚಿಯ ಹಿಂದಿರುವ ಗುಟ್ಟು.

ರಾಜೀವ್, ಶಿವಾಜಿ ಮಿಲ್ಟ್ರಿ ಹೋಟೆಲ್, ಬೆಂಗಳೂರು

***
ತಟ್ಟೆ ಇಡ್ಲಿಗೂ ಚೈನಾಸಾಲ್ಟ್‌!

ಹದಿಹರೆಯದವರು ಹೆಚ್ಚಾಗಿ ಇಷ್ಟಪಟ್ಟು ತಿನ್ನುವ ಗೋಬಿಮಂಚೂರಿ, ಪಾನಿಪೂರಿ, ಚೈನೀಸ್ ಫುಡ್‌ಗಳಲ್ಲಿ ನಿಮಗೆ ಗೊತ್ತಿಲ್ಲದಂತೆ ರುಚಿ ಹೆಚ್ಚಿಸಲು ಚೈನಾಸಾಲ್ಟ್ ಬಳಸುತ್ತಾರೆ. ತಟ್ಟೆ ಇಡ್ಲಿಗೆ ಜನಪ್ರಿಯವಾಗಿರುವ ಹೋಟೆಲ್‌ಗಳಲ್ಲೂ ಚೈನಾಸಾಲ್ಟ್‌ನ ಕರಾಮತ್ತು ಇದೆ. ಗ್ರಾಹಕರಿಗೆ ಇದರ ಅರಿವು ಇರುವುದೇ ಇಲ್ಲ. ಆಹಾರ ಸುರಕ್ಷತಾ ಅಧಿಕಾರಿಗಳು ಹೋಟೆಲ್‌ಗಳಲ್ಲಿ ಚೈನಾಸಾಲ್ಟ್ ಬಳಸುವ ಬಗ್ಗೆ ಪರೀಕ್ಷಿಸಬೇಕು.

ಪ್ರಮಾಣೀಕೃತ ಆಹಾರದ ಬಣ್ಣಗಳನ್ನಷ್ಟೇ ಬಳಸಬೇಕು ಎನ್ನುವ ನಿಯಮವಿದೆ. ಕೆಲವು ಹೋಟೆಲ್‌ಗಳಲ್ಲಿ ಪನ್ನೀರ್ ಬಟರ್ ಮಸಾಲಾ ಅಥವಾ ಬಣ್ಣ ಹಾಕಿ ಮಾಡಿರುವ ಆಹಾರ ತಿಂದರೆ ನಿಮ್ಮ ಕೈಯಲ್ಲಿ ಬಣ್ಣ ಹಾಗೆ ಉಳಿದುಕೊಳ್ಳುತ್ತದೆ. ಅಲ್ಲೆಲ್ಲಾ ಕೃತಕ ಬಣ್ಣಗಳನ್ನು ಬಳಸಿರುತ್ತಾರೆ. ಗ್ರಾಹಕರಿಗೆ ಇದರ ಅರಿವು ಇರುವುದಿಲ್ಲ. ನೋಡಲು ಗಾಢ ಬಣ್ಣವಿರುವ ಮತ್ತು ರುಚಿ ಹೆಚ್ಚಿರುವ ಆಹಾರಗಳನ್ನು ತಿನ್ನಲು ಜನರೂ ಬಯಸುವುದರಿಂದ ಚೈನಾಸಾಲ್ಟ್ ಮತ್ತು ಕೃತಕ ಬಣ್ಣಗಳ ಬಳಕೆ ಹೆಚ್ಚಾಗಿದೆ.

ಗಿರಿಶೇಖರ್‌, ಶಿವಳ್ಳಿ ಹೋಟೆಲ್, ಚನ್ನಪಟ್ಟಣ

***
ರಾಸಾಯನಿಕ ಮುಕ್ತ ಪದಾರ್ಥ ಬಳಕೆಯೇ ಉತ್ತಮ

ಮಾರುಕಟ್ಟೆಯಲ್ಲಿ ದೊರೆಯುವ ನೈಸರ್ಗಿಕ ಆಹಾರ ಪದಾರ್ಥಗಳನ್ನು ಬಳಸಿಯೇ ನಾವು ಅಡುಗೆ ಮಾಡುವುದು. ಹಳೆಯ ಪದ್ಧತಿಯಂತೆ ಆಹಾರ ಮೆನುವಿದೆ. ಚಾಟ್ಸ್ ಮಾಡುವುದಿಲ್ಲ. ನಮ್ಮ ಹೋಟೆಲ್ ಇಡ್ಲಿ–ವಡೆ, ದೋಸೆಗಳಿಗೆ ಪ್ರಸಿದ್ಧಿ. ದಕ್ಷಿಣ ಭಾರತೀಯ ತಿಂಡಿಗಳನ್ನು ಮಾತ್ರ ತಯಾರಿಸುತ್ತೇವೆ.

ಮಾರುಕಟ್ಟೆಯಲ್ಲಿ ದೊರೆಯುವ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಆಯ್ಕೆ ಮಾಡಿ, ನಮ್ಮದೇ ಆದ ಪದ್ಧತಿಯಲ್ಲಿ ತಿಂಡಿಗಳನ್ನು ತಯಾರಿಸುತ್ತೇವೆ. ಐವತ್ತು ವರ್ಷಗಳಿಂದ ನಿರಂತರವಾಗಿ ಒಂದೇ ಗುಣಮಟ್ಟ, ರುಚಿ ಕಾಯ್ದುಕೊಳ್ಳುವುದು ಸುಲಭವಲ್ಲ. ಅದನ್ನು ಇಂದಿಗೂ ಕಾಯ್ದುಕೊಂಡಿದ್ದೇವೆ. ಸ್ವಚ್ಛತೆ ಮತ್ತು ಗುಣಮಟ್ಟದಿಂದ ಖಂಡಿತವಾಗಿಯೂ ಆಹಾರವನ್ನು ರುಚಿಕರವಾಗಿ ಮಾಡಬಹುದು ಎನ್ನುವುದು ನನ್ನ ಅಭಿಮತ.

–ಕೃಷ್ಣಮೂರ್ತಿ ಐತಾಳ್, ಹೋಟೆಲ್ ದ್ವಾರಕ

***


ಚೈನಾ ಸಾಲ್ಟ್‌ ಇಲ್ಲದೆಯೇ ರುಚಿ ಹೆಚ್ಚಿಸಲು ನೈಸರ್ಗಿಕ, ಆರೋಗ್ಯಕರವಾದ ಟೊಮ್ಯಾಟೊ, ಕಡಲೆ, ಗೋಡಂಬಿ, ಅವರೆ, ಬಟಾಣಿ ಬಳಸಬಹುದು.

-ಡಾ.ಅರುಣ್ ಕುಮಾರ್, ವಿಜ್ಞಾನಿ, ಸಿಎಫ್‌ಟಿಆರ್‌ಐ

ಚೈನಾ ಸಾಲ್ಟ್‌ ಅನ್ನು ಹೆಚ್ಚು ಬಳಸುವುದರಿಂದ ರುಚಿಕಾರಕಗಳು ಭಾರತಕ್ಕೆ ಹೆಚ್ಚು ಆಮದಾಗುತ್ತಿವೆ. ಇದು ಸ್ಫಟಿಕ ರೂಪದಲ್ಲಿದ್ದು, ಸುಲಭವಾಗಿಯೂ ಸಿಗುತ್ತಿದೆ.

- ಡಾ.ಎ.ಜಯದೀಪ್‌, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಶ್ಲೇಷಣಾ ಪ್ರಯೋಗಶಾಲೆ ಮುಖ್ಯಸ್ಥ, ಸಿಎಫ್‌ಟಿಆರ್‌ಐ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT