ಮಂಗಳವಾರ, ಮಾರ್ಚ್ 28, 2023
34 °C

PV Web Exclusive | ಹೃದ್ರೋಗ: ಆನ್‌ಲೈನ್‌ ಸಮಾಲೋಚನೆಗೆ ಒಲವು

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

ಕೋವಿಡ್‌–19 ಪರಿಣಾಮ ಕಳೆದ ಏಳು ತಿಂಗಳ ಅವಧಿಯಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಕುರಿತು ‘ಆನ್‌ಲೈನ್‌ ಸಮಾಲೋಚನೆ’ ಪಡೆಯುವವರ ಸಂಖ್ಯೆ ಹೆಚ್ಚಿದೆ. ಕೋವಿಡ್‌ ಸೋಂಕಿನ ಭೀತಿಯಿಂದಾಗಿ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುವ ಜನ ಟೆಲಿಫೋನ್ ಹಾಗೂ ಆನ್‌ಲೈನ್‌ ಸಮಾಲೋಚನೆಯತ್ತ ಹೆಚ್ಚು ಒಲವು ತೋರುತ್ತಿದ್ದಾರೆ ಎನ್ನುತ್ತದೆ ಸಮೀಕ್ಷೆಯೊಂದು.

ಹೌದು, ಕಳೆದ ಆರು ತಿಂಗಳಲ್ಲಿ ಹೃದ್ರೋಗಕ್ಕೆ ಸಂಬಂಧಿಸಿದಂತೆ ಆನ್‌ಲೈನ್ ಸಮಾಲೋಚನೆಗೆ ಒಲವು ತೋರುವವರ ಸಂಖ್ಯೆ ಶೇ 350ರಷ್ಟು ಹೆಚ್ಚಿದೆ ಎನ್ನುತ್ತದೆ ಪ್ರಾಕ್ಟೋ ಸಮೀಕ್ಷೆ. ರೋಗಿಗಳು ಹಾಗೂ ವೈದ್ಯರ ಭೇಟಿಯನ್ನು ನಿಗದಿಗೊಳಿಸುವ ಜಾಲತಾಣವಾಗಿರುವ ಪ್ರಾಕ್ಟೋ, ಕೋವಿಡ್‌–19ನ ಈ ಅವಧಿಯಲ್ಲಿ ಸಣ್ಣ–ಪುಟ್ಟ ನಗರ–ಪಟ್ಟಣಗಳಲ್ಲಿಯೂ ಆನ್‌ಲೈನ್/ಟೆಲಿಫೋನ್‌‌ ಸಮಾಲೋಚನೆಯ ಪ್ರವೃತ್ತಿ ಬೆಳೆಯುತ್ತಿದೆ ಎಂದು ವರದಿ ಮಾಡಿದೆ. ಈ ಸೇವೆಯನ್ನು ಬಳಸುವವರಲ್ಲಿ ಶೇ 30ಕ್ಕಿಂತ ಹೆಚ್ಚು ಜನರು ಇಂತಹ ನಗರ/ಪಟ್ಟಣಗಳಲ್ಲಿ ವಾಸಿಸುವವರೇ ಆಗಿದ್ದಾರೆ ಎನ್ನುತ್ತದೆ ಈ ವರದಿ. 

ಅಷ್ಟೇ ಅಲ್ಲ, ಜಾಲತಾಣಗಳಲ್ಲಿ ಹೃದಯ ಸಂಬಂಧಿ ವಿಷಯ ಕುರಿತು ತಡಕಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಅವಧಿಯಲ್ಲಿ, ‘ಕೋವಿಡ್‌–19 ಹೃದ್ರೋಗಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ?’ ಮತ್ತು ‘ಹೃದಯಾಘಾತದ ಸಂದರ್ಭದಲ್ಲಿ ಗಮನಹರಿಸಬೇಕಾದ ಅಂಶಗಳು ಯಾವುವು?’ ಎನ್ನುವ ವಿಷಯಗಳ ಕುರಿತು ಅತಿ ಹೆಚ್ಚುಜನ ಜಾಲತಾಣಗಳಲ್ಲಿ ಹುಡುಕಾಟ ನಡೆಸಿದ್ದಾರೆ.

‘ಕೋವಿಡ್‌–19 ಭೀತಿಯಿಂದಾಗಿ, ಯಾವುದೇ ಸಮಸ್ಯೆ ಕಂಡುಬಂದಲ್ಲಿ ರೋಗಿಗಳು ಮೊದಲು ಆನ್‌ಲೈನ್‌ ಸಮಾಲೋಚನೆಗೆ ಮುಂದಾಗುತ್ತಾರೆ. ವೈದ್ಯರ ಸಲಹೆ ಪಡೆದು ಅಗತ್ಯ ಕಂಡುಬಂದರೆ ಮಾತ್ರ ಆಸ್ಪತ್ರೆಗೆ ತೆರಳುತ್ತಿದ್ದಾರೆ. ಮುಂಚೆಯೂ ಈ ಸೇವೆಗಳು ಲಭ್ಯ ಇದ್ದವು. ಮೆಟ್ರೊ ನಗರಗಳಲ್ಲಿ ಈ ಸೇವೆಗಳನ್ನು ಬಳಸುವವರೂ ಇದ್ದರು. ಆದರೆ ಈಗ ಸಣ್ಣಪುಟ್ಟ ನಗರ/ಪಟ್ಟಣಗಳ ಜನರೂ ಡಿಜಿಟಲ್‌ ಆಯ್ಕೆಗಳನ್ನು ಅವಲಂಬಿಸುತ್ತಿರುವುದು ಹೊಸ ಬೆಳವಣಿಗೆ’ ಎನ್ನುತ್ತಾರೆ ಪ್ರಾಕ್ಟೋದ ಮುಖ್ಯ ಆರೋಗ್ಯ ಕಾರ್ಯತಂತ್ರ ಅಧಿಕಾರಿ ಡಾ. ಅಲೆಕ್ಸಾಂಡರ್ ಕುರುವಿಲ್ಲಾ.

‘ಹೃದಯ ಸಂಬಂಧಿ ಕಾಯಿಲೆಯ ಬಗ್ಗೆ ಹೆಚ್ಚು ಕಳವಳ ಪಡುವ ಮೆಟ್ರೊ ನಿವಾಸಿಗಳು ಅದರ ಆರಂಭಿಕ ಲಕ್ಷಣಗಳ ಬಗ್ಗೆ ಅಗತ್ಯ ಗಮನ ಹರಿಸುತ್ತಿಲ್ಲ. ಬೆನ್ನು ನೋವು, ಭುಜ ನೋವು, ಶೀತ ಬೆವರು, ದೌರ್ಬಲ್ಯ, ಎದೆಬಿಗಿತ ಅಥವಾ ಉಸಿರಾಟದ ಸಮಸ್ಯೆಯಂತಹ ಆರಂಭಿಕ ಚಿಹ್ನೆಗಳನ್ನು ನಿರ್ಲಕ್ಷಿಸುತ್ತಾರೆ. ಅಂತಹ ಕೆಲವು ಲಕ್ಷಣಗಳು ಸಾಮಾನ್ಯವೆಂದು ಕಂಡುಬಂದರೂ ಸಕಾಲದಲ್ಲಿ ಕಾಳಜಿ, ಮುನ್ನೆಚ್ಚರಿಕೆ ವಹಿಸಿ ಚಿಕಿತ್ಸೆ ಪಡೆಯದಿದ್ದರೆ, ಅದು ಮುಂದೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ’ ಎನ್ನುತ್ತಾರೆ ಅವರು. 

‘ಮೊದಲು ಆನ್‌ಲೈನ್/ಟೆಲಿಫೋನ್‌ ಸಮಾಲೋಚನೆಗೆ ಸರ್ಕಾರದ ಮಟ್ಟದಲ್ಲಿ ಹೆಚ್ಚಿನ ಮಾನ್ಯತೆ ಇರಲಿಲ್ಲ. ರೋಗಿಯನ್ನು ನೋಡದೇ ರೋಗ ನಿರ್ಣಯ ಮಾಡುವುದು ಮತ್ತು ಔಷಧಿಯನ್ನು ಸೂಚಿಸುವುದಕ್ಕೆ ಪ್ರತಿರೋಧಗಳಿದ್ದವು. ಆದರೆ ಕೋವಿಡ್‌–19ನಿಂದ ಈ ಸೇವೆಗೊಂದು ವೇಗ ಸಿಕ್ಕಿದ್ದು ನಿಜ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಟೆಲಿಮೆಡಿಸಿನ್ ಪ್ರಾಕ್ಟೀಸ್ ಮಾರ್ಗಸೂಚಿಗಳಿಗೆ ವಿನಾಯಿತಿ ನೀಡಿ ಕೆಲವು ನಿರ್ಬಂಧಗಳೊಂದಿಗೆ ಈ ಸೇವೆಯನ್ನು ಕಾನೂನುಬದ್ಧಗೊಳಿಸಿವೆ’ ಎನ್ನುತ್ತಾರೆ ಮಕ್ಕಳ ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ.

‘ಲಾಕ್‌ಡೌನ್‌ ಹಾಗೂ ಅನಂತರದ ಅವಧಿಯಲ್ಲಿ ಟೆಲಿಫೋನ್‌/ಆನ್‌ಲೈನ್‌ ಸಮಾಲೋಚನೆ ಸೇವೆಯನ್ನು ಬಳಸುವವರ ಸಂಖ್ಯೆಯೂ ಮೂರು ಪಟ್ಟು ಹೆಚ್ಚಾಗಿದೆ. ವೆಬ್‌ ಮೀಟಿಂಗ್‌, ವೆಬ್‌ ಕಾನ್ಫರನ್ಸ್‌ ಮಾಡುವಷ್ಟೇ ಸಲೀಸಾಗಿ ಆನ್‌ಲೈನ್‌ನಲ್ಲಿ ಕನ್ಸಲ್ಟೇಶನ್‌ ನಡೆಯುತ್ತಿದೆ. ಈ ಬೆಳವಣಿಗೆಯನ್ನು ಆಧರಿಸಿ ಸರ್ಕಾರ ಸ್ವಸ್ತ್‌ ಎನ್ನುವ ಆ್ಯಪ್‌ ಅನ್ನು ಪರಿಚಯಿಸಿದೆ. ಅಲ್ಲದೇ ಸಹಸ್ರಾರು ಸಂಖ್ಯೆಯಲ್ಲಿ ಖಾಸಗಿ ಆ್ಯಪ್‌ಗಳೂ ಕಾರ್ಯನಿರ್ವಹಿಸುತ್ತಿವೆ. ನಾನು ಭಾಗವಹಿಸಿದ್ದ ಆನ್‌ಲೈನ್‌ ಸಮಾಲೋಚನಾ ಕಾರ್ಯಕ್ರಮವೊಂದರಲ್ಲಿ ಕೇವಲ ಒಂದೂವರೆ ಗಂಟೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಜನ ಆನ್‌ಲೈನ್‌ನಲ್ಲಿ ಹೃದಯ ಸಂಬಂಧಿ ಪ್ರಶ್ನೆಗಳನ್ನು ಕೇಳಿದ್ದರು. ಆನ್‌ಲೈನ್‌ ಸಮಾಲೋಚನೆ ಎಷ್ಟು ವೇಗವಾಗಿ ಜನರನ್ನು ತಲುಪುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ’ ಎನ್ನುತ್ತಾರೆ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ.

ಟೆಲಿಫೋನ್‌/ಆನ್‌ಲೈನ್‌ ಸಮಾಲೋಚನೆಯ ಲಾಭಗಳು

 ·         ತುರ್ತು ಸಂದರ್ಭದಲ್ಲಿ ರೋಗಿಗೆ ವೃತ್ತಿಪರ ಸಹಾಯ ಸಿಗುತ್ತದೆ. ಇದರಿಂದ ತಕ್ಷಣ ರೋಗನಿರ್ಣಯ ಸಾಧ್ಯವಾಗಿ, ಸೂಕ್ತ ಚಿಕಿತ್ಸೆ ಲಭಿಸುತ್ತದೆ

·         24x7 ಉನ್ನತ ವೈದ್ಯರನ್ನು ಸಂಪರ್ಕಿಸಬಹುದು

·         ಕೆಲವೇ ನಿಮಿಷಗಳಲ್ಲಿ ತ್ವರಿತ ಸಮಾಲೋಚನೆಯನ್ನು ಪ್ರಾರಂಭಿಸಬಹುದು

·         ನಿಗದಿತ ಸಮಯದಲ್ಲಿ ವೀಡಿಯೊ ಸಮಾಲೋಚನೆ ಮಾಡಬಹುದು

·         ರೋಗಿಯನ್ನು ಆಸ್ಪತ್ರೆಗೆ ಕರೆತರುವವರೆಗೆ ಅಥವಾ ಆಸ್ಪತ್ರೆಯ ಸಿಬ್ಬಂದಿ ಮನೆಗೆ ಆಗಮಿಸುವವರೆಗೆ ಅನುಸರಿಸಬೇಕಿರುವ ತುರ್ತು ಕ್ರಮಗಳ ಬಗ್ಗೆ ಸಲಹೆ–ಸೂಚನೆಗಳು ಸಿಗುತ್ತವೆ

·         ಜೊತೆಗಿದ್ದವರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದರಿಂದ ಜೀವ ಉಳಿಯುತ್ತದೆ

ಇಂಡಿಯನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ, ಭಾರತ ವಿಶ್ವದಾದ್ಯಂತ ಅತಿ ಹೆಚ್ಚು ಹೃದ್ರೋಗಿಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಅರಿವಿನ ಕೊರತೆ. ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಸಾಕಷ್ಟು ಮಾಹಿತಿ ಇಲ್ಲದಿರುವುದು ಮತ್ತು ಪ್ರಾಥಮಿಕ ಹೃದಯ ಸಮಸ್ಯೆಗಳನ್ನು ಗುರುತಿಸುವಲ್ಲಿ ವಿಳಂಬ ಮಾಡುವುದು, ಚಿಕಿತ್ಸೆ ಪಡೆಯಲು ಹಿಂಜರಿಯುವುದು ಸಹ ಮುಖ್ಯ ಕಾರಣ ಎನ್ನುತ್ತಾರೆ ವೈದ್ಯರು.

ಹೃದ್ರೋಗವು ದೀರ್ಘಕಾಲದ ವೈದ್ಯಕೀಯ ಸ್ಥಿತಿಯಾಗಿದ್ದು, ಅದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕಾದ ಅಗತ್ಯವಿರುತ್ತದೆ. ಹೃದ್ರೋಗ ಒಮ್ಮೆ ಪತ್ತೆಯಾದ ನಂತರ, ತಕ್ಷಣದ ವೈದ್ಯಕೀಯ ಚಿಕಿತ್ಸೆ, ಜೀವನಶೈಲಿ ಮಾರ್ಪಾಡು, ಸ್ಥಿರ ಮತ್ತು ದೀರ್ಘಕಾಲೀನ ಮೇಲ್ವಿಚಾರಣೆಯನ್ನು ಒಳಗೊಂಡಂತೆ ಸಮಗ್ರ ಚಿಕಿತ್ಸೆಯ ಅಗತ್ಯವಿರುತ್ತದೆ. ಈ ಕ್ಷೇತ್ರದಲ್ಲಿನ ಡಿಜಿಟಲೀಕರಣವು ಈ ಪ್ರಕ್ರಿಯೆಯ ಪ್ರತಿಯೊಂದು ಹಂತವನ್ನೂ ಸುಗಮಗೊಳಿಸಿದೆ. ಸ್ವಯಂ-ರೋಗನಿರ್ಣಯವನ್ನು ಅವಲಂಬಿಸುವ ಬದಲು ಸಮಯೋಚಿತ ಸಲಹೆ ಮತ್ತು ಸಹಾಯವನ್ನು ಪಡೆಯಲು ರೋಗಿಗಳು ಈಗ ಎಲ್ಲಿಯಾದರೂ ಮತ್ತು ಯಾವುದೇ ಸಮಯದಲ್ಲಿ ವೈದ್ಯರನ್ನು ತಲುಪಬಹುದು. ರೋಗಿಗೆ, ಆನ್‌ಲೈನ್ ಮತ್ತು ಆಫ್‌ಲೈನ್ ನೋಂದಣಿ, ರೋಗನಿರ್ಣಯ ಮತ್ತು ಔಷಧ ವಿತರಣೆಗೆ ಸಹಾಯ ಮಾಡುವ ಅನೇಕ ಆ್ಯಪ್‌ಗಳು, ವೆಬ್‌ಸೈಟ್‌‌ಗಳು ಲಭ್ಯ ಇವೆ.

ಇದರಿಂದ ಆಸ್ಪತ್ರೆ/ಕ್ಲಿನಿಕ್‌ನಲ್ಲಿ ಕಾಯುವ ಸಮಯ ಉಳಿಯುತ್ತದೆ ಮತ್ತು ಕೊರೋನಾ ಸೋಂಕು ತಗಲುವ ಸಂಭವ ಕೂಡ ಕಡಿಮೆ. ಆದರೆ ಗ್ರಾಮೀಣ ಪ್ರದೇಶದ ಜನರು ಈ ಸೇವೆಯಿಂದ ವಂಚಿತರಾಗುತ್ತಾರೆ ಎನ್ನುವುದು ಈ ಸೇವೆಯ ಬಹುದೊಡ್ಡ ಮಿತಿ. ಅಲ್ಲದೇ ಈ ವ್ಯವಸ್ಥೆ ಕೇವಲ ಚಿಕ್ಕಪುಟ್ಟ ಸಮಸ್ಯೆಗೆ ಮಾತ್ರ ಸೀಮಿತವಾಗಿದ್ದು, ತುರ್ತು ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆಗಳಿಗೆ ಆಸ್ಪತ್ರೆಗಳತ್ತ ದಾವಿಸಬೇಕಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು