ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ ಸಮಯದಲ್ಲಿ ಆನ್‌ಲೈನ್ ಗೇಮಿಂಗ್ ಚಾಳಿ ತಂದೀತು ಅಪಾಯ!

Last Updated 11 ನವೆಂಬರ್ 2020, 16:00 IST
ಅಕ್ಷರ ಗಾತ್ರ

ಕೋವಿಡ್ ಮಹಾಮಾರಿಯಿಂದಾಗಿ ಅನೇಕ ಜನರ ಜೀವನವು ಅಸ್ತವ್ಯಸ್ತವಾಗಿದೆ. ದೈಹಿಕ ಅಂತರ, ಲಾಕ್‌ಡೌನ್‌, ಕ್ವಾರಂಟೈನ್ ಮುಂತಾದವುಗಳಿಂದ ಅನೇಕ ಜನರು ಮಾನಸಿಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಸಾಮಾಜಿಕ ಚಟುವಟಿಕೆಗಳು, ಕ್ರೀಡೆಗಳು, ಮನರಂಜನೆ, ಪ್ರವಾಸ ಇವೆಲ್ಲದರಿಂದ ಜನರು ದೂರ ಉಳಿಯುವಂತಾಗಿರುವುದರಿಂದ ಮಾನಸಿಕ ತುಮುಲಕ್ಕೆ ಒಳಗಾಗಿದ್ದಾರೆ. ಔದ್ಯೋಗಿಕ ಹಾಗೂ ಶೈಕ್ಷಣಿಕ ಅಡ್ಡಿ ಆತಂಕಗಳನ್ನು ತಂದೊಡ್ಡಿದೆ. ಇದೆಲ್ಲದರಿಂದ ಹೊರಬರಲು ಮಕ್ಕಳು ಅಥವಾ ವಯಸ್ಕರರು ಆನ್‌ಲೈನ್ ಗೇಮಿಂಗ್‌ನತ್ತ ಮುಖ ಮಾಡಿದ್ದಾರೆ. ಆನ್‌ಲೈನ್‌ ಗೇಮಿಂಗ್‌ನಿಂದಾಗಿ ಜನರು ಮನೆಯಲ್ಲೇ ಕಾಲಕಳೆಯುವಂತಾಗಿದೆ ಹಾಗೂ ಅನಾವಶ್ಯಕವಾಗಿ ಹೊರಹೋಗಿ ವೈರಾಣುವಿನ ಹರಡುವಿಕೆಯನ್ನು ಕಡಿಮೆ ಮಾಡಿದೆ. ಆದರೆ ಇದರ ಅಭ್ಯಾಸವು ಹೆಚ್ಚಾದಲ್ಲಿ ಅನೇಕ ತರಹದ ದುಷ್ಪರಿಣಾಮಗಳಿಗೂ ಸಹ ಕಾರಣವಾಗಬಹುದಾಗಿದೆ.

ಅಧ್ಯಯನಗಳ ಪ್ರಕಾರ ಆನ್‌ಲೈನ್ ಗೇಮಿಂಗ್‌ನಿಂದಾಗುವ ಸಾಧಕ ಬಾಧಕಗಳು

*ಆನ್‌ಲೈನ್ ಗೇಮಿಂಗ್‌ನಿಂದ ಸಾಮಾಜಿಕ ಪ್ರತ್ಯೇಕತೆ ಉಂಟಾಗಿ ವೈರಾಣುವಿನ ಹರಡುವಿಕೆಯನ್ನು ಕಡಿಮೆ ಮಾಡಿದೆ.

*ಮಾನಸಿಕ ಆತಂಕ, ಖಿನ್ನತೆ, ಮಾನಸಿಕ ತುಮುಲಗಳನ್ನು ಕಡಿಮೆ ಮಾಡಿದೆ.

*ಹಲವು ಗಂಟೆಗಳು ಗೇಮಿಂಗ್ ನಲ್ಲಿ ಕಳೆಯುವುದರಿಂದ ವ್ಯಕ್ತಿಯ ಸಮಯ ನಷ್ಟವಾಗುವುದಲ್ಲದೆ ದೈನಂದಿನ ಚಟುವಟಿಕೆಗಳಲ್ಲಿ ಏರುಪೇರು ಕಾಣಬಹುದಾಗಿದೆ.

*ಮಕ್ಕಳು ಶೈಕ್ಷಣಿಕವಾಗಿ ಹಾಗೂ ವಯಸ್ಕರರು ಔದ್ಯೋಗಿಕವಾಗಿ ಹಿಂದುಳಿಯುವಂತಾಗುತ್ತದೆ.

*ಹೆಚ್ಚು ಹೊತ್ತು ದೈಹಿಕ ಚಟುವಟಿಕೆಯಿಂದ ದೂರ ಉಳಿಯುವುದರಿಂದ ಓಬೇಸಿಟಿ, ಬೊಜ್ಜು, ಜೀರ್ಣಕ್ರಿಯೆಯಲ್ಲಿ ಏರುಪೇರು ಕಂಡುಬರಬಹುದಾಗಿದೆ.

*ಬಹುಕಾಲ ಕೂತಲ್ಲೇ ಕೂರುವುದರಿಂದ, ಮಾಂಸಖಂಡಗಳ ಸೆಳೆತ, ಮಂಡಿನೋವು, ಬೆನ್ನು ನೋವಿಗೆ ಕಾರಣವಾಗಬಹುದು.

*ಬಹುಕಾಲ ಗೇಮಿಂಗ್ ಮಾಡುವುದರಿಂದ ತಲೆನೋವು, ದೃಷ್ಠಿದೋಷಗಳು ಸಹ ಕಾಣಬಹುದಾಗಿದೆ.

*ಆರ್ಥಿಕ ಸಂಕಷ್ಟ, ನೌಕರಿಗಳ ಅನಿಶ್ಚಿತತೆ ಮುಂತಾದವುಗಳನ್ನು ಮರೆಯಲು ಜನರು ಗೇಮಿಂಗ್‌ನ ವ್ಯಸನಿಗಳಾಗಬಹುದಾಗಿದೆ.

ಇದೆಲ್ಲದರಿಂದ ಹೊರಬರಲು ಮಾಡಬಹುದಾದ್ದೇನು ?

*ಆಂತರಿಕ ಆತಂಕಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕು.

*ಸರಿಯಾದ ಸಮಯದಲ್ಲಿ ಅವಶ್ಯಕತೆಗೆ ತಕ್ಕಷ್ಟು, ಗುಣಮಟ್ಟದ ನಿದ್ರೆ ಆರೋಗ್ಯಕ್ಕೆ ಪೂರಕ.

*ಜಡತ್ವದಲ್ಲಿ ಕುಳಿತು ಗಂಟೆಗಟ್ಟಲೆ ಸಮಯವನ್ನು ಗೇಮಿಂಗ್‌ನಲ್ಲಿ ಕಳೆಯುವುದಕ್ಕಿಂತ ಹೊರಾಂಗಣ ಕ್ರೀಡೆಗಳು, ತೋಟಗಾರಿಕೆ, ಆಟಗಳು ಮಕ್ಕಳೊಂದಿಗೆ ಆಟವಾಡುವುದು, ಕುಟುಂಬ ಸದಸ್ಯರೊಂದಿಗೆ ಕಾಲಕಳೆಯುವುದರಿಂದ ಮನಸ್ಸು ‍ಹರ್ಷದಾಯಕವಾಗುತ್ತದೆ.

*ಸರಿಯಾದ ಸಮಯದಲ್ಲಿ ಸಮತೋಲನವಾದ ಆಹಾರ ಸೇವನೆ ಆರೋಗ್ಯಕರ ಜೀವನಶೈಲಿಗೆ ಪೂರಕ.

*ತಮ್ಮಲ್ಲಿರುವ ಕ್ರಿಯಾಶೀಲತೆಯನ್ನು ಬಿಡುವಿನ ಸಮಯದಲ್ಲಿ ಉಪಯೋಗಿಸಿಕೊಳ್ಳುವುದರಿಂದ ತಮ್ಮಲ್ಲಿರುವ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಸಹಾಯಕ.

*ಗೇಮಿಂಗ್‌ನಲ್ಲಿ ಕಾಲ ಕಳೆಯುವುದಕ್ಕಿಂತ ತಮ್ಮಲ್ಲಿರುವ ಶಕ್ತಿ ಸಾಮರ್ಥ್ಯ, ಕ್ರಿಯಾಶೀಲತೆಯನ್ನು ಹೊರಹಾಕಲು, ರಚನಾತ್ಮಕವಾದ ಕೆಲಸಗಳನ್ನು ಮಾಡಲು ಸದುಪಯೋಗ ಪಡಿಸಿಕೊಳ್ಳುವುದು ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT