ಶನಿವಾರ, ಮಾರ್ಚ್ 25, 2023
30 °C
ನಗರದ ಹೃದ್ರೋಗ ತಜ್ಞರು ಕಳವಳ

ಅನ್ಯ ಕಾಯಿಲೆಗಳಿಂದ ಹೃದಯದ ಮೇಲೆ ಪರಿಣಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಅಧಿಕ ರಕ್ತದೊತ್ತಡ, ಮಧುಮೇಹದಂತಹ ಅನ್ಯ ಕಾಯಿಲೆಗಳೂ ಹೃದಯದ ಆರೋಗ್ಯದ ಮೇಲೆ ಹಾಗೂ ಹೃದಯ ಚಿಕಿತ್ಸೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ’ ಎಂದು ನಗರದ ಹೃದ್ರೋಗ ತಜ್ಞರು ಕಳವಳ ವ್ಯಕ್ತಪಡಿಸಿದರು. 

ವಿಶ್ವ ಹೃದಯ ದಿನದ ಅಂಗವಾಗಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಮಣಿಪಾಲ್‌ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಸರ್ಜಾಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಡಾ. ಮೋಹನ್ ಕುಮಾರ್ ಎಚ್‌.ಎನ್, ವಿಕ್ರಮ್ ಆಸ್ಪತ್ರೆಯ ಡಾ. ರಂಗನಾಥ್ ನಾಯಕ್ ಪಿ., ಹಳೆ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಯ ಡಾ. ರಂಜನ್ ಶೆಟ್ಟಿ ಹಾಗೂ ಡಾ. ದವಿಂದರ್ ಸಿಂಗ್ ಅವರು ‘ಹಲವು ಕಾಯಿಲೆಗಳನ್ನು ಹೊಂದಿರುವವರಲ್ಲಿ ಹೃದ್ರೋಗದ ಅಪಾಯ’ ಎಂಬ ಕುರಿತು ವೈದ್ಯರು ಮಾತನಾಡಿದರು.

‘ಹೃದಯ ಸಂಬಂಧಿ ಅನಾರೋಗ್ಯ ಸಮಸ್ಯೆಗೆ ಒಳಪಡುವವರ ಸಂಖ್ಯೆ ಏರುಗತಿ ಪಡೆದಿದೆ. ಅನಾರೋಗ್ಯಕರ ಆಹಾರ ಪದ್ಧತಿ, ಜೀವನಶೈಲಿಯ ಬದಲಾವಣೆ, ಮದ್ಯಪಾನ, ಜಡತ್ವ, ಧೂಮಪಾನದಂತಹ ವ್ಯಸನಗಳು ಹಾಗೂ ಅನ್ಯ ಕಾಯಿಲೆಯಿಂದ ಇತ್ತೀಚಿನ ವರ್ಷಗಳಲ್ಲಿ 20ರಿಂದ 40 ವರ್ಷದವರೂ ಹೆಚ್ಚಾಗಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ’ ಎಂದು ಹೃದ್ರೋಗ ತಜ್ಞರು ತಿಳಿಸಿದರು. 

ಕಡೆಗಣಿಸಿದರೆ ಅಪಾಯ: ಸರ್ಜಾಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಡಾ. ಮೋಹನ್ ಕುಮಾರ್ ಎಚ್‌.ಎನ್., ‘ದೇಹದಲ್ಲಿ ಕೊಬ್ಬಿನಾಂಶ ಅಧಿಕವಾದರೆ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಕೊಬ್ಬಿನಾಂಶದ ಮಟ್ಟವನ್ನು ಸಕಾಲದಲ್ಲಿ ನಿರ್ವಹಿಸದಿದ್ದರೆ ಅಪಧಮನಿಗಳಲ್ಲಿ ಅಡಚಣೆ ಉಂಟಾಗಿ, ಹೃದಯಾಘಾತವಾಗಬಹುದು. ಅನಿಯಂತ್ರಿತ ಅಧಿಕ ರಕ್ತದೊತ್ತಡವೂ ಹೃದಯದ ಸ್ನಾಯುಗಳಿಗೆ ಹಾನಿ ಮಾಡುತ್ತವೆ. ಹೃದಯದ ಆರೋಗ್ಯ ಕಾಪಾಡಲು ರಕ್ತದೊತ್ತಡ ನಿಯಂತ್ರಿಸಬೇಕು’ ಎಂದು ಹೇಳಿದರು.

ಹಳೆ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಯ ಡಾ. ರಂಜನ್ ಶೆಟ್ಟಿ, ‘ಬದಲಾದ ಜೀವನಶೈಲಿ ಸೇರಿದಂತೆ ವಿವಿಧ ಕಾರಣಗಳಿಂದ ವಿದೇಶಿಗರಿಗೆ ಹೋಲಿಸಿದರೆ ಭಾರತೀಯರಿಗೆ ಬೇಗ ಹೃದಯಾಘಾತವಾಗುತ್ತಿದೆ. ಒಂದರಿಂದ ಎರಡು ದಶಕಗಳ ಮೊದಲು ಹೃದಯಾಘಾತವಾಗುತ್ತಿರುವುದು ಕಳವಳಕಾರಿ. ವಿದೇಶದಲ್ಲಿ ಅಲ್ಲಿನ ಜನರಿಗೆ 50ರಿಂದ 55 ವರ್ಷಗಳಾದ ಹೃದಯಾಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಆದರೆ, ನಮ್ಮಲ್ಲಿ ಅನ್ಯರೋಗಗಳು ಹಲವರನ್ನು ಕಾಡುತ್ತಿರುವುದರಿಂದ 35ರಿಂದ 40 ವರ್ಷದ ವೇಳೆಯೇ ಹೃದಯಾಘಾತವಾಗುತ್ತಿದೆ’ ಎಂದು ತಿಳಿಸಿದರು.

ಫಾರೆಸ್ಟ್ ಕ್ರಿಯೇಟಿವ್ ಕಮ್ಯುನಿಕೇಷನ್ಸ್ ನಿರ್ದೇಶಕ ರಂಜಿತ್ ಪದ್ಮಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು