ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನ ಲೈಂಗಿಕ ಆಸಕ್ತಿ ಕಾಯಿಲೆಯಲ್ಲ

Last Updated 11 ಜೂನ್ 2022, 4:38 IST
ಅಕ್ಷರ ಗಾತ್ರ

– ಯುವಕ. ನನ್ನಲ್ಲಿ ಕೆಲವು ಗೊಂದಲಗಳಿವೆ. ನನಗೆ ಅನಿಸುವಂತೆ ಸ್ತ್ರೀಯರು ಪುರುಷರಿಗಿಂತ ದೈಹಿಕವಾಗಿ ಹೆಚ್ಚು ಪ್ರಬಲವಾಗಿರುತ್ತಾರೆ. ಏಕೆಂದರೆ ಅವರ ಲೈಂಗಿಕ ಅಂಗಾಂಗಗಳು ದೇಹದ ಒಳಗಡೆಯಿದ್ದು ಹೆಚ್ಚು ಸುರಕ್ಷಿತವಾಗಿರುತ್ತವೆ. ಆದರೆ ಪುರುಷರ ಲೈಂಗಿಕ ಅಂಗಾಂಗಳು ದೇಹದ ಹೊರಗಡೆಯಿರುವುದರಿಂದ ಹೆಚ್ಚಿನ ಅಪಾಯವಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ನಾನು ಹೆಣ್ಣಾಗಿ ಹುಟ್ಟಬೇಕಾಗಿತ್ತು ಎಂದು ಅನ್ನಿಸುತ್ತದೆ. ನಿಮ್ಮ ಸಲಹೆ ಏನು?

ಹೆಸರು, ಊರು ತಿಳಿಸಿಲ್ಲ

ಲೈಂಗಿಕ ಅಂಗಾಂಗಗಳು ಮತ್ತು ಆಸಕ್ತಿಯ ಕುರಿತಾಗಿ ನಿಮ್ಮಲ್ಲಿ ಸಾಕಷ್ಟು ಗೊಂದಲಗಳು ಇರುವಂತಿದೆ. ದೇಹ ಮತ್ತು ಲೈಂಗಿಕ ಅಂಗಾಂಗಗಳ ರಚನೆಯನ್ನು ಪ್ರಕೃತಿ ಒಂದು ಸ್ಪಷ್ಟ ಉದ್ದೇಶಕ್ಕಾಗಿ ಮಾತ್ರ ರೂಪಿಸಿದೆ. ಗರ್ಭದ ಸುರಕ್ಷತೆಯ ದೃಷ್ಟಿಯಿಂದ ಅದು ದೇಹದ ಒಳಭಾಗದಲ್ಲಿರಬೇಕಾಗುತ್ತದೆ. ಹಾಗಾಗಿ ಮಹಿಳೆಯರ ಲೈಂಗಿಕ ಅಂಗಾಂಗಗಳು ದೇಹದ ಒಳಗಡೆ ಇರುತ್ತವೆ. ವೀರ್ಯಾಣುವನ್ನು ಹೆಣ್ಣಿನ ಗರ್ಭದೊಳಗೆ ತಲುಪಿಸಬೇಕಾಗಿರುವುದರಿಂದ ಪುರುಷರ ಲೈಂಗಿಕ ಅಂಗಾಂಗಗಳು ದೇಹದ ಹೊರಗಡೆಯಿರುತ್ತವೆ. ದೇಹದ ಶಾಖಕ್ಕಿಂತ ಕಡಿಮೆ ಶಾಖದಲ್ಲಿ ವೀರ್ಯಾಣುಗಳನ್ನು ರಕ್ಷಿಬೇಕಾಗಿರುವುದಿಂದ ವೃಷಣಗಳು ದೇಹದ ಹೊರಗಡೆಯಿರುತ್ತವೆ. ಹೊರಗೆ ಕಾಣುವುದಕ್ಕೆ ಪೂರಕವಾಗಿ ಪುರುಷನ ದೇಹದ ಒಳಗಡೆಯೂ ಸಾಕಷ್ಟು ಲೈಂಗಿಕ ಅಂಗಾಂಗಗಳಿರುತ್ತವೆ.

ಸಂತಾನವನ್ನು ಪಡೆಯುವ ಮತ್ತು ರಕ್ಷಿಸುವ ದೃಷ್ಟಿಯಿಂದ ಯಾರು ಬಲಶಾಲಿಗಳು ಎನ್ನುವ ಅಂಶ ಪ್ರಸ್ತುತವಲ್ಲ. ಇಬ್ಬರೂ ಪೂರಕವಾದ ಪಾತ್ರಗಳನ್ನು ನಿಭಾಯಿಸಬೇಕೆನ್ನುವುದು ಪ್ರಕೃತಿಯ ಆಶಯ.

ಹುಡುಗಿಯಾಗಿ ಹುಟ್ಟಬೇಕಾಗಿತ್ತು ಎನ್ನುವ ಅನಿಸಿಕೆಯ ಹಿಂದೆ ನಿಮಗೆ ಪುರುಷರ ಕುರಿತಾಗಿ ಲೈಂಗಿಕ ಆಕರ್ಷಣೆ ಇದೆಯೇ ಎಂದು ಪರೀಕ್ಷಿಸಿಕೊಳ್ಳಿ ಅಥವಾ ನಿಮ್ಮ ದೇಹವನ್ನೇ ಹೆಣ್ಣಾಗಿ ಬದಲಾಯಿಸಿಕೊಳ್ಳಬೇಕು ಎನ್ನುವ ಒತ್ತಡಗಳಿವೆಯೇ? ಹೀಗೆ ಭಿನ್ನ ಲೈಂಗಿಕ ಆಸಕ್ತಿ ಅಥವಾ ಒತ್ತಡಗಳಿರುವುದು ಕಾಯಿಲೆಯಲ್ಲ. ನಿಮ್ಮ ಎಲ್ಲಾ ಗೊಂದಲಗಳನ್ನು ಪರಿಹರಿಸಿಕೊಳ್ಳಲು ತಜ್ಞ ಲೈಂಗಿಕ ಮನೋಚಿಕಿತ್ಸಕರನ್ನು ಭೇಟಿಯಾಗಿ.

––––––––

– ಚಿಕ್ಕ ವಯಸ್ಸಿನಲ್ಲಿಯೇ ತಂದೆ ದೂರಹೋದರು. ನಾವು ಮೂವರು ಸಹೋದರರು. ನಮ್ಮನ್ನು ಬೆಳೆಸಲು ಅಮ್ಮ ತುಂಬಾ ಕಷ್ಟಪಟ್ಟಿದ್ದಾರೆ. ಅವರ ಭಾರವನ್ನು ಕಡಿಮೆ ಮಾಡಲು ನಾನು ಪೋಲೀಸ್‌ ಹುದ್ದೆಗಾಗಿ ಪ್ರಯತ್ನಿಸುತ್ತಿದ್ದೇನೆ. ಆದರೆ ಮೊಬೈಲ್‌ನಿಂದಾಗಿ ನನಗೆ ಓದಲಾಗುತ್ತಿಲ್ಲ. ಪರಿಹಾರವೇನು?

ಹೆಸರು, ಊರು ತಿಳಿಸಿಲ್ಲ

ಪ್ರಶ್ನೆ ಸಂಕ್ಷಿಪ್ತವಾಗಿದ್ದರೂ ಅದರಲ್ಲಿ ಹಲವಾರು ಸಂದೇಶಗಳಿವೆ. ತಾಯಿಯ ಶ್ರಮಕ್ಕಾಗಿ ಕೃತಜ್ಞತೆಯಿದೆ. ಅವರ ಕಷ್ಟಗಳ ಕುರಿತಾಗಿ ಎಚ್ಚರವಿದೆ. ಅದನ್ನು ಕಡಿಮೆ ಮಾಡಬೇಕೆಂಬ ಪ್ರಾಮಾಣಿಕ ಆಸಕ್ತಿಯಿದೆ. ಆದರೆ ನನ್ನ ಪ್ರಯತ್ನಗಳಲ್ಲಿ ಸಫಲನಾಗಬಹುದೇ ಎನ್ನುವ ಆತಂಕ ಕಾಡುತ್ತಿರಬೇಕಲ್ಲವೇ? ಇಂತಹ ಆತಂಕವನ್ನು ಮರೆಯಲು ತಕ್ಷಣಕ್ಕೆ ಕೈಗೆಟುಕುವುದು ಮೊಬೈಲ್‌ ಮಾತ್ರ. ಅದು ಕೈಯಲ್ಲಿ ಇರುವವರೆಗೆ ಆತಂಕ ಮರೆಯಾಗಿರುತ್ತದೆ. ನಂತರ ಆತಂಕದ ಜೊತೆಗೆ ಪಾಪಪ್ರಜ್ಞೆಯೂ ಸೇರಿಕೊಳ್ಳುತ್ತದೆ. ಇಷ್ಟೇ ಅಲ್ಲದೆ ನನಗೆ ಉದ್ಯೋಗ ದೊರೆಯಬಹುದೇ ಇಲ್ಲವೇ, ಅಮ್ಮನಿಗೆ ಸಹಾಯ ಮಾಡಲು ಸಾಧ್ಯವಾಗಬಹುದೇ ಇಲ್ಲವೇ ಎನ್ನುವ ಅನಿಶ್ಚಿತತೆ ಹಿಂಜರಿಕೆಗಳೂ ಸೇರಿಕೊಂಡಿರಬಹುದಲ್ಲವೇ?

ಓದಲು ಕುಳಿತ ತಕ್ಷಣ ಹೀಗೆ ಮಾಡಿ. ಮೊಬೈಲ್‌ನ್ನು ಕಣ್ಣೆದುರಿಗೆ ಹಿಡಿದುಕೊಂಡು ದಿಟ್ಟಿಸುತ್ತಾ ಅದರ ಜೊತೆ ಮಾತನಾಡಿ. ‘ನನಗೆ ಓದೋಕೆ ಆಗದೆ ಹೋದ್ರೂ ಪರವಾಗಿಲ್ಲ, ಉದ್ಯೋಗ ಸಿಗದೆ ಹೋದ್ರೂ ತೊಂದರೆಯಿಲ್ಲ, ಅಮ್ಮನ ಕಷ್ಟಗಳು ಕಡಿಮೆಯಾಗದೆ ಹೋದ್ರೂ ನಾನು ಲೆಕ್ಕಕ್ಕೆ ತೊಗೋಳಲ್ಲ. ಆದರೆ ನಿನ್ನ ಮಾತ್ರ ಕೈಬಿಡಲ್ಲ’ ಹೀಗೆ ಹೇಳಿ ಮೊಬೈಲ್‌ನ್ನು ದಿಟ್ಟಿಸುತ್ತಾ ನಿಮ್ಮ ದೇಹ ಬಿಗಿಯಾಗುವುದನ್ನು ಗಮನಿಸಿ. ನಿಧಾನವಾಗಿ ಉಸಿರಾಡುತ್ತಾ ದೇಹವನ್ನು ಸಡಿಲಬಿಡಿ. ಜೊತೆಗೆ ನಿಮ್ಮ ಉದ್ವೇಗ ಹೆಚ್ಚಾಗಿ ದುಃಖವಾದರೆ ಕಣ್ಣೀರನ್ನು ತಡೆಯಬೇಡಿ. ಹೀಗೆ ಎಲ್ಲಾ ಭಾವನೆಗಳನ್ನು ಅನುಭವಿಸುತ್ತಾ 5 ರಿಂದ 10 ನಿಮಿಷ ಕಳೆಯಿರಿ. ಅಷ್ಟರಲ್ಲಿ ಮನಸ್ಸು ನಿರಾಳವಾಗಿರುತ್ತದೆ. ಆಗ ಓದನ್ನು ಮುಂದುವರೆಸಿ. ಈ ಪ್ರಯೋಗವನ್ನು ಸಾಕಷ್ಟು ಸಾರಿ ಮಾಡಿದರೆ ಮೊಬೈಲ್‌ ಕೈಗೆ ಬಂದ ತಕ್ಷಣ ನಿಮ್ಮೊಳಗೆ ಒಂದು ಎಚ್ಚರಿಕೆ ಮೂಡಿ ಆಕರ್ಷಣೆಯನ್ನು ತಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT