ಶನಿವಾರ, ಸೆಪ್ಟೆಂಬರ್ 25, 2021
21 °C

ಆಹಾರ, ಪ್ಯಾಕೇಜ್‌ಗಳಿಂದ ಕೊರೊನಾ ವೈರಸ್‌ ಹರಡದು: ವಿಶ್ವಸಂಸ್ಥೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಜಿನೀವಾ: ‘ಆಹಾರ ಅಥವಾ ಪ್ಯಾಕೇಜಿಂಗ್ ಮೂಲಕ ಕೊರೊನಾ ವೈರಸ್‌ ಹರಡುತ್ತಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ. ವೈರಾಣುವು ಆಹಾರ ಸರಪಳಿ ಪ್ರವೇಶಿಸುವ ಬಗ್ಗೆ ಜನರು ಆತಂಕಪಡಬೇಕಿಲ್ಲ,’ ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ಧೈರ್ಯ ನೀಡಿದೆ.

ಬ್ರೆಜಿಲ್‌ನಿಂದ ಆಮದು ಮಾಡಿಕೊಳ್ಳಲಾದ ಸಂಸ್ಕರಿತ ಕೋಳಿ ಮಾಂಸ ಮತ್ತು ಈಕ್ವೆಡಾರ್‌ನಿಂದ ಆಮದು ಮಾಡಿಕೊಳ್ಳಲಾದ ಸಂಸ್ಕರಿತ ಸೀಗಡಿ ಪ್ಯಾಕೇಜ್‌ಗಳಲ್ಲಿ ಕೊರೊನಾ ವೈರಸ್‌ ಇರುವುದಾಗಿ ಇತ್ತೀಚೆಗೆ ಚೀನಾ ಆರೋಪಿಸಿತ್ತು. ಹೀಗಾಗಿ ವೈರಾಣು ಆಹಾರದ ಮೂಲಕವೂ ಹರಡಬಹುದಾದ ಭೀತಿ ಜಗತ್ತಿನಾದ್ಯಂತ ಜನರಲ್ಲಿ ಮನೆ ಮಾಡಿತ್ತು. ಇದೇ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟನೆ ನೀಡಿ, ಜನರ ಅನುಮಾನ ನಿವಾರಿಸುವ ಪ್ರಯತ್ನ ಮಾಡಿದೆ.

‘ಆಹಾರ, ಆಹಾರದ ಪ್ಯಾಕೇಜಿಂಗ್‌, ಸಂಸ್ಕರಣೆ ಅಥವಾ ಆಹಾರ ವಿತರಣೆಯಲ್ಲಿ ಕೊರೊನಾ ವೈರಸ್‌ ಹರಡುತ್ತದೆ ಎಂದು ಭಯಪಡಬೇಕಿಲ್ಲ. ಆಹಾರ ಅಥವಾ ಆಹಾರ ಸರಪಳಿಯ ಮೂಲಕ ಸಾಂಕ್ರಾಮಿಕ ರೋಗ ಹರಡುತ್ತಿದೆ ಎಂಬುದಕ್ಕೆ ಪುರಾವೆಗಳಿಲ್ಲ. ಜನರು ಹಾಯಾಗಿರಬಹುದು ಮತ್ತು ಸುರಕ್ಷಿತವಾಗಿರಬೇಕು,’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಕಾರ್ಯಕ್ರಮಗಳ ಮುಖ್ಯಸ್ಥ ಮೈಕ್ ರಯಾನ್ ಜಿನೀವಾದಲ್ಲಿ ಮಾಧ್ಯಮಗಳಿಗೆ ತಿಳಿಸಿದರು.

‘ಚೀನಾ ನೂರಾರು ಸಾವಿರ ಆಹಾರ ಪ್ಯಾಕೇಜ್‌ಗಳನ್ನು ಪರೀಕ್ಷಿಸಿದೆ. ಅದರಲ್ಲಿ ವಿರಳಾತಿ ವಿರಳ ಎನ್ನಬಹುದಾದ 10 ಕ್ಕಿಂತ ಕಡಿಮೆ ಪ್ಯಾಕೆಜ್‌ಗಳಲ್ಲಿ ಕೊರೊನಾ ವೈರಸ್‌ ಕಂಡುಬಂದಿದೆ,’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞರಾದ ಮರಿಯಾ ವ್ಯಾನ್ ಕೆರ್ಖೋವ್ ತಿಳಿಸಿದ್ದಾರೆ.

ಇನ್ನು ಚೀನಾದ ಆರೋಪಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳು ಪ್ರತಿಕ್ರಿಯಿಸಿವೆ. ‘ಚೀನಾ ಗಮನಸಿದ ಅಂಶಗಳ ಬಗ್ಗೆ ನಾವು ಆ ದೇಶದಿಂದ ಸ್ಪಷ್ಟೀಕರಣ ಕೇಳಿದ್ದೇವೆ,’ ಎಂದು ಬ್ರೆಜಿಲ್‌ನ ಕೃಷಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

‘ದೇಶವು ಕಠಿಣ ಕೋವಿಡ್‌ ನಿಯಮಾವಳಿಗಳನ್ನು ಪಾಲಿಸುತ್ತಿದೆ. ಸರಕುಗಳು ದೇಶದಿಂದ ಹೊರ ಹೋದ ನಂತರ ಅವುಗಳಿಗೆ ಏನಾಗುತ್ತದೆ ಎಂಬುದಕ್ಕೆ ನಾವು ಜವಾಬ್ದಾರರಲ್ಲ,’ ಎಂದು ಈಕ್ವೆಡಾರ್‌ನ ಉತ್ಪಾದನಾ ಮಂತ್ರಿ ಇವಾನ್ ಒಂಟನೆಡಾ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು