ಶನಿವಾರ, ಮೇ 28, 2022
27 °C

ಸಿಕೆಲ್‌ಸೆಲ್‌ ಅನೀಮಿಯಾ: ವಂಶವಾಹಿ ಸಮಸ್ಯೆಯಿದ್ದರೂ ವಂಶೋದ್ಧಾರ ಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

pv file photo

ಸಿಕಲ್‌ಸೆಲ್‌ ಅನೀಮಿಯಾ ಕೇಳಿದ್ದೀರಲ್ವಾ. ಸರಳವಾಗಿ ಹೇಳುವುದಾದರೆ ರಕ್ತ ಸಂಬಂಧಿ ಸಮಸ್ಯೆ ಅದು. ದುಂಡಗಿರಬೇಕಾದ ರಕ್ತಕಣಗಳು ಅಸಹಜವಾಗಿದ್ದು ಕುಡುಗೋಲಿನ ಆಕಾರ ಹೊಂದಿರುತ್ತವೆ. ಇಂಥ ಅಸಹಜತೆ ಇಡೀ ದೇಹದ ಮೇಲೆ ಪರಿಣಾಮ ಬೀರಿ ಯಾತನಾಮಯ ಪರಿಸ್ಥಿತಿ ತಂದೊಡ್ಡುತ್ತದೆ. ಇದು ಆನುವಂಶಿಕ ಕಾಯಿಲೆ. ಈ ಸಮಸ್ಯೆ ಇರುವ ವ್ಯಕ್ತಿಗಳು ಮಕ್ಕಳನ್ನು ಹೊಂದಿದರೆ ಮಕ್ಕಳಿಗೂ ಈ ಕಾಯಿಲೆ ವರ್ಗಾವಣೆ ಆಗುವ ಸಾಧ್ಯತೆ ಹೆಚ್ಚು.

ಹಾಗಿದ್ದರೆ ಈ ದಂಪತಿ ಮಗು ಹೊಂದುವ ಆಸೆಯನ್ನೇ ಬಿಡಬೇಕೇ? ಖಂಡಿತಾ ಇಲ್ಲ. ಇದಕ್ಕೆ ಪರಿಹಾರವಿದೆ. ಅಂದರೆ ರೋಗ ಸಾಧ್ಯತೆಯ ಮೂಲವನ್ನೇ ಕೆದಕಿ, ಆನುವಂಶಿಕ ರೋಗನಿರ್ಣಯದ ಮೂಲಕ ನವಜಾತ ಶಿಶುವು ರೋಗ ಮುಕ್ತವಾಗಬಹುದು ಎನ್ನುತ್ತಾರೆ ಬೆಂಗಳೂರಿನ ಗುಣಶೀಲ ಆಸ್ಪತ್ರೆಯ ವೈದ್ಯರು.

ಇಲ್ಲಿ ನಡೆಸಿದ ಪ್ರಯೋಗದ ಪ್ರಕಾರ, ಸಿಕೆಲ್ ಸೆಲ್ ಅನೀಮಿಯಾ ಸಮಸ್ಯೆಯಿಂದ ಬಳಲುತ್ತಿದ್ದ ದಂಪತಿಗಳಿಂದ ಫಲವತ್ತತೆಗೆ ಒಳಗಾದ 8 ಭ್ರೂಣಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಆ ಪೈಕಿ ನಾಲ್ಕು ಭ್ರೂಣಗಳನ್ನು ವಂಶವಾಹಿ ತಪಾಸಣೆಗೆ (ಪ್ರಿ ಇಂಪ್ಲಾಂಟೇಷನ್‌ ಜೆನೆಟಿಕ್‌ ಸ್ಕ್ರೀನಿಂಗ್‌ಗೆ) ಒಳಪಡಿಸಲಾಯಿತು. ಈ ನಾಲ್ಕು ಭ್ರೂಣಗಳ ಪೈಕಿ ಮೂರರಲ್ಲಿ ಸಿಕೆಲ್‌ಸೆಲ್‌ ಅನೀಮಿಯಾದ ಅಂಶಗಳು ಪತ್ತೆಯಾದವು. ಒಂದು ಭ್ರೂಣ ಯಾವುದೇ ವಂಶವಾಹಿ ಕಾಯಿಲೆಗಳ ಅಂಶಗಳಿಲ್ಲದೆ ಸಂಪೂರ್ಣ ಆರೋಗ್ಯಕರವಾಗಿತ್ತು. ಆ ಭ್ರೂಣವನ್ನು ಗರ್ಭದಲ್ಲಿ ಅಳವಡಿಸಲಾಯಿತು. ಇತ್ತೀಚೆಗೆ ಆ ಮಹಿಳೆ ಮುದ್ದಾದ, ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ.

ನೆನಪಿಡಿ, ಈ ಸಮಸ್ಯೆ ಉಳ್ಳವರು ಮಗು ಹೊಂದಲು ಸಾಧ್ಯ. ಗರಿಷ್ಠ ನಾಲ್ಕು ಬಾರಿ ಪ್ರಯತ್ನಿಸಬಹುದು. ಕಾಲಕಾಲಕ್ಕೆ ವಂಶವಾಹಿಯ ಪರೀಕ್ಷೆ ನಡೆಸಿಯೇ ಆರೋಗ್ಯವಂತ ಭ್ರೂಣವನ್ನು ಬೆಳೆಸಬಹುದು. ಈ ರೋಗದಿಂದ ಆಗುವ ಇತರ ಸಮಸ್ಯೆಗಳಿಗೆ ಸಾಮಾನ್ಯ ಚಿಕಿತ್ಸೆಯೂ ಸಾಧ್ಯ.

ರೋಗ ಮೂಲವೆಲ್ಲಿ?

ಸಿಕೆಲ್‌ಸೆಲ್‌ ಅನೀಮಿಯಾ ಆನುವಂಶಿಕವಾಗಿ ಬರುವ ಕಾಯಿಲೆ. ಭ್ರೂಣವು ದಂಪತಿಯಿಂದ ಅಸಹಜ ಸ್ಥಿತಿಯ ವಂಶವಾಹಿಗಳನ್ನು ಪಡೆದಾಗ ಈ ರೋಗ ಕಾಣಿಸಿಕೊಳ್ಳುತ್ತದೆ. 1910ರಲ್ಲಿ ಪಾಶ್ಚಾತ್ಯ ದೇಶಗಳಲ್ಲಿ ಈ ಕಾಯಿಲೆ ಪತ್ತೆಯಾಗಿತ್ತು. ಗುಣಶೀಲ ಆಸ್ಪತ್ರೆಯ ಸರ್ಜಿಕಲ್‌ ಗ್ಯಾಸ್ಟ್ರೋಎಂಟರಾಲಜಿಸ್ಟ್‌ ರಾಜಶೇಖರ ನಾಯಕ್ ಹೇಳುವಂತೆ, ‘ಸಿಕೆಲ್ ಸೆಲ್ ಅನೀಮಿಯಾ ಸಾಮಾನ್ಯವಾದ ಆನುವಂಶಿಕ ಕಾಯಿಲೆಗಳಲ್ಲಿ ಒಂದು. ಈಗ ಜಾಗತಿಕ ಮಹತ್ವ ಪಡೆದ ಕಾಯಿಲೆ. ಭಾರತ, ಆಫ್ರಿಕಾದ ಸಹರಾ ಪ್ರದೇಶ, ಮಧ್ಯಪ್ರಾಚ್ಯ, ಕೆರಿಬಿಯನ್, ದಕ್ಷಿಣ ಮತ್ತು ಮಧ್ಯ ಅಮೆರಿಕಾ ಮತ್ತು ಮೆಡಿಟರೇನಿಯನ್ ಸಮುದ್ರ ತೀರದ ಪ್ರದೇಶಗಳಲ್ಲಿ ಈ ಕಾಯಿಲೆ ಹೆಚ್ಚು ಕಾಣಿಸಿಕೊಂಡಿದೆ. ನಮ್ಮ ದೇಶದಲ್ಲಿ ಶೇ 40ರಷ್ಟು ಬುಡಕಟ್ಟು ಸಮುದಾಯದವರಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ. ಮಹಾರಾಷ್ಟ್ರ, ಕೇರಳದ ವಯನಾಡ್, ಗುಜರಾತ್, ತಮಿಳುನಾಡು, ಒರಿಸ್ಸಾ ಮತ್ತು ಕರ್ನಾಟಕದಂತಹ ಇತರ ರಾಜ್ಯಗಳಲ್ಲಿಯೂ ಈ ಸಮಸ್ಯೆ ಇದೆ.

ನೋವಿನ ತೀವ್ರತೆ

ವೈದ್ಯರು ಹೇಳುವಂತೆ ಈ ನೋವಿನ ತೀವ್ರತೆ ಅಪ್ಪಟ ನರಕಯಾತನೆ. ಹೆಚ್ಚಾಗಿ ನೋವು ಹೊಟ್ಟೆಯಲ್ಲಿ ಕಂಡುಬರುತ್ತದೆ. ಶ್ವಾಸಕೋಶಗಳು, ಕಿಬ್ಬೊಟ್ಟೆಯ ಅಂಗಗಳು, ಮೂತ್ರಪಿಂಡಗಳು, ಇತ್ಯಾದಿ ಸೇರಿದಂತೆ ದೇಹದ ಯಾವುದೇ ಅಂಂಗಗಳಲ್ಲಿ ಕಂಡುಬರಬಹುದು.

ಮಕ್ಕಳಲ್ಲಿ, ಸಾಮಾನ್ಯವಾಗಿ ಕೈ ಮತ್ತು ಪಾದಗಳಲ್ಲಿ ‘ಹ್ಯಾಂಡ್-ಫೂಟ್ ಸಿಂಡ್ರೋಮ್’ ಎಂದು ಕರೆಯಲ್ಪಡುತ್ತವೆ ಮತ್ತು ಕಡಿಮೆ ವಿರೂಪಗೊಂಡ ಮೂಳೆಗಳಿಗೆ ಕಾರಣವಾಗಬಹುದು. ಕೆಲವೊಮ್ಮೆ ತೀವ್ರವಾದ ಬಹು-ಅಂಗ ವೈಫಲ್ಯ, ಪ್ಲೇಟ್‌ಲೆಟ್ ಪ್ರಮಾಣದಲ್ಲಿ ಕುಸಿತದಂತಹಾ ಅನಾರೋಗ್ಯ, ಕೊನೆಗೆ ಪ್ರಾಣಕ್ಕೇ ಕುತ್ತು ತರುವ ಸಾಧ್ಯತೆಯೂ ಇದೆ. ಹಾಗಾಗಿ ಈ ಕಾಯಿಲೆಗೆ ಒಳಗಾವದರ ಸರಾಸರಿ ಆಯಸ್ಸು ಪುರುಷರಾದರೆ 42, ಮಹಿಳೆಯರಾದರೆ 48 ವರ್ಷ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು