ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಧಿಪೂರ್ವ ಋತುಬಂಧವೂ, ಆಸ್ಟಿಯೊಪೊರೊಸಿಸ್ ಸಮಸ್ಯೆಯೂ

ಇಂದು (ಅ. 20) ವಿಶ್ವ ಆಸ್ಟಿಯೊಪೊರೊಸಿಸ್ ದಿನ
Last Updated 19 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಮಹಿಳೆಯರಲ್ಲಿ ಋತುಬಂಧದ ಸರಾಸರಿ ವಯಸ್ಸು 40ಕ್ಕೆ ಇಳಿದಿದ್ದು, ಇದು ಕೂಡ ಆಸ್ಟಿಯೊಪೊರೊಸಿಸ್‌ ಸಮಸ್ಯೆ ಹೆಚ್ಚಾಗಲು ಕಾರಣ. ಈ ಕಾಯಿಲೆ (ಅ. 20 ವಿಶ್ವ ಆಸ್ಟಿಯೊಪೊರೊಸಿಸ್ ಜಾಗೃತಿ ದಿನ) ತಡೆಗಟ್ಟಲು ಏನೇನು ಕ್ರಮ ಕೈಗೊಳ್ಳಬಹುದು ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ.

35 ರ ಹರೆಯದ ಸುಷ್ಮಾ ಇತ್ತೀಚೆಗೆ ಸಣ್ಣಸಣ್ಣ ವಿಚಾರಗಳಿಗೂ ಸಿಡಿಮಿಡಿಗೊಳ್ಳುತ್ತಾರೆ. ಸದಾ ಮೈಕೈ ನೋವು, ಸುಸ್ತಿನ ಜತೆಗೆ ಖಿನ್ನತೆಯೂ ಅವರಿಗೆ ಕಾಡುತ್ತಿದೆ. ಕೋವಿಡ್ ಭೀತಿಯ ನಡುವೆಯೇ ವೈದ್ಯರ ಬಳಿಗೆ ಹೋದಾಗ ತಿಳಿದದ್ದು ಸುಷ್ಮಾಗೆ ಇರುವುದು ಆಸ್ಟಿಯೊಪೊರೊಸಿಸ್ ಮತ್ತು ಅವಧಿಪೂರ್ವ ಋತುಬಂಧದ ( ಅರ್ಲಿ ಮೆನೊಪಾಸ್) ಲಕ್ಷಣಗಳು.

28 ವರ್ಷದೊಳಗೆ ಎರಡು ಮಕ್ಕಳ ತಾಯಿಯಾಗಿದ್ದ ಅವರು ಹಿಸ್ಟೆರೆಕ್ಟಮಿ ಮಾಡಿಸಿಕೊಂಡಿದ್ದರು. ಚಿಕ್ಕ ವಯಸ್ಸಿನಲ್ಲೇ ಗರ್ಭಾಶಯ ತೆಗೆಸಿಕೊಂಡಿದ್ದರಿಂದ ಅವರಲ್ಲಿ ಈಸ್ಟ್ರೊಜೆನ್ ಹಾರ್ಮೋನ್ ಕೊರತೆಯಾಗಿತ್ತು. ಹಾಗಾಗಿ,ಸುಷ್ಮಾ ಅವಧಿಪೂರ್ವ ಋತುಬಂಧ ಹಾಗೂ ಆಸ್ಟಿಯೊಪೊರೊಸಿಸ್‌ನಿಂದ ಬಳಲುವಂತಾಯಿತು.

ಲಾಕ್‌ಡೌನ್‌ನಲ್ಲಿ ಅನೇಕ ಮಹಿಳೆಯರಲ್ಲಿ ಜಂಕ್ ಆಹಾರ ಸೇವಿಸುವುದು ಹೆಚ್ಚಾಗಿದೆ. ದೈಹಿಕ ಚಟುವಟಿಕೆ ಮತ್ತು ವ್ಯಾಯಾಮದ ಕೊರತೆಯಿಂದ ದೇಹತೂಕವೂ ಹೆಚ್ಚಾಗಿದೆ. ಆರ್ಥಿಕ ಸಂಕಷ್ಟ, ಉದ್ಯೋಗದಲ್ಲಿನ ಅಭದ್ರತೆಯೂ ಮಹಿಳೆಯರನ್ನು ಒತ್ತಡಕ್ಕೆ ದೂಡುತ್ತಿದೆ. ಇವು ಕೂಡಾ ಆಸ್ಟಿಯೊಪೊರೊಸಿಸ್‌ಗೆ ಪರೋಕ್ಷ ಕಾರಣವಾಗಬಲ್ಲವು ಎನ್ನುತ್ತಾರೆ ತಜ್ಞವೈದ್ಯರು.

ಆಸ್ಟಿಯೊಪೊರೊಸಿಸ್‌ನಿಂದಾಗಿ ವಿಶ್ವದಲ್ಲಿ ಪ್ರತಿವರ್ಷ 8.9 ದಶಲಕ್ಷಕ್ಕೂ ಹೆಚ್ಚಿನ ಜನ ಮೂಳೆ ಮುರಿತದ ಸಮಸ್ಯೆ ಎದುರಿಸುತ್ತಾರೆ. 50 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿ ಮೂವರು ಮಹಿಳೆಯರಲ್ಲಿ ಒಬ್ಬರು ಮೂಳೆಗಳ ಮುರಿತಕ್ಕೊಳಗಾಗುತ್ತಾರೆ. ಈ ಸಮಸ್ಯೆ ಪುರುಷರಿಗಿಂತ ಮಹಿಳೆಯರಲ್ಲಿ ಮೂರು ಪಟ್ಟು ಹೆಚ್ಚು ಎನ್ನುವುದು ಆತಂಕಕಾರಿ ಸಂಗತಿ.

ಅವಧಿಪೂರ್ವ ಋತುಬಂಧ: ‘ಚಿಕ್ಕ ವಯಸ್ಸಿನಲ್ಲಿಯೇ ಗರ್ಭಕೋಶ ತೆಗೆಸಿಕೊಳ್ಳುವುದರಿಂದ (ಹಿಸ್ಟೆರೆಕ್ಟಮಿ) ಅನೇಕ ಮಹಿಳೆಯರು ಅವಧಿಪೂರ್ವ ಋತುಬಂಧ ಹಾಗೂ ಆಸ್ಟಿಯೊಪೊರೊಸಿಸ್ ಸಮಸ್ಯೆಗೆ ಬೇಗ ತುತ್ತಾಗುತ್ತಾರೆ. ಈಸ್ಟ್ರೊಜೆನ್ ಹಾರ್ಮೋನ್ ಮತ್ತು ಕ್ಯಾಲ್ಸಿಯಂ ಕೊರತೆ ಮೂಳೆಗಳ ಸಾಂದ್ರತೆಯನ್ನು ಕಮ್ಮಿ ಮಾಡುತ್ತದೆ. ಮೂಳೆಗಳು ಟೊಳ್ಳಾಗಿ‌ ಬಹುಬೇಗ ಮುರಿತಕ್ಕೊಳಗಾಗುತ್ತವೆ. ಕೆಲವರಿಗೆ ಈ ಸಮಸ್ಯೆ ಇರುವುದೇ ತಿಳಿಯುವುದಿಲ್ಲ. ಮೂಳೆ ಸಾಂದ್ರತೆಯ ಪರೀಕ್ಷೆ ಮಾಡಿಸಿದಾಗ ಮಾತ್ರ ಇದು ಬೆಳಕಿಗೆ ಬರುತ್ತದೆ. ಹಾಗಾಗಿ, ಇದು ಸದ್ದಿಲ್ಲದೆ ಕಾಡುವ ಕಾಯಿಲೆ’ ಎನ್ನುತ್ತಾರೆ ಬೆಂಗಳೂರಿನ ರಾಧಾಕೃಷ್ಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ, ಲ್ಯಾಪ್ರೊಸ್ಕೋಪಿಕ್ ಸರ್ಜನ್ ಡಾ.ವಿದ್ಯಾ ವಿ.ಭಟ್.

‘ಭಾರತದಲ್ಲಿ ಸೀಸೆರಿಯನ್ ಹೆರಿಗೆಗಳು ಮೊದಲ ಸ್ಥಾನದಲ್ಲಿದ್ದರೆ ನಂತರದ ಸ್ಥಾನ ಹಿಸ್ಟೆರೆಕ್ಟಮಿಯದು. ಭಾರತದಲ್ಲಿ 30ರಿಂದ 49 ವರ್ಷದೊಳಗಿನ ಮಹಿಳೆಯರ ಪೈಕಿ ಶೇ 6ರಷ್ಟು ಮಂದಿ ಹಿಸ್ಟೆರೆಕ್ಟಮಿಗೆ ಒಳಗಾಗುತ್ತಿದ್ದಾರೆ. ಕೆಲ ಮಹಿಳೆಯರಿಗೆ ಅಧಿಕ ಮಾಸಿಕ ಸ್ರಾವ, ಫೈಬ್ರಾಯ್ಡ್ ಸಮಸ್ಯೆ ಇರುತ್ತದೆ. ಅಂಥವರಿಗೆ ಹಿಸ್ಟೆರೆಕ್ಟಮಿ ಮಾತ್ರವೇ ಪರಿಹಾರವಲ್ಲ. ಇತರ ಹಾರ್ಮೋನ್ ಥೆರಪಿ, ಫ್ರೈಬ್ರಾಯ್ಡ್ ಅನ್ನು ತೆಗೆಯುವುದು ಸೇರಿದಂತೆ ಅನೇಕ ಚಿಕಿತ್ಸಾ ವಿಧಾನಗಳಿವೆ. ಅವಶ್ಯವಿಲ್ಲದಿದ್ದರೂ ಗರ್ಭಾಶಯವನ್ನು ತೆಗೆದುಹಾಕಿರುವ ಕೆಲ ಪ್ರಕರಣಗಳಿವೆ. ಈ ಬಗ್ಗೆ ಮಹಿಳೆಯರಿಗೆ ತಿಳಿವಳಿಕೆಯ ಅಗತ್ಯವಿದೆ’ ಎನ್ನುತ್ತಾರೆ ಅವರು.

‘ಈ ಹಿಂದೆ ಋತುಬಂಧದ ಸರಾಸರಿ ವಯಸ್ಸು 51 ಇತ್ತು. ಆದರೆ, ಈಗ 40 ವರ್ಷಕ್ಕೆ ಶುರುವಾಗುತ್ತಿದೆ. ಕೆಲವರಲ್ಲಿ ಇದು 26 ವರ್ಷಕ್ಕೇ ಆಗಿದ್ದುಂಟು (ಹಿಸ್ಟೆರೆಕ್ಟಮಿ ಆಗಿದ್ದರೆ). ಕೆಲ ಮಹಿಳೆಯರು ಒತ್ತಡ ನಿವಾರಣೆಗಾಗಿ ಧೂಮಪಾನ, ಮದ್ಯಪಾನದ ಮೊರೆ ಹೋಗುತ್ತಾರೆ. ಆದರೆ ಇದರಿಂದ ಗರ್ಭಾಶಯದ ಮೇಲೂ ಪರಿಣಾಮವಾಗುತ್ತದೆ. ಈಸ್ಟ್ರೊಜೆನ್ ಹಾರ್ಮೋನ್ ಕೊರತೆಯಿಂದ ಮೂತ್ರಕೋಶದ ಸೋಂಕು, ಹೃದಯ ಸಂಬಂಧಿ ಕಾಯಿಲೆ, ಅಕಾಲಿಕ ವೃದ್ಧಾಪ್ಯ, ಆಸ್ಟಿಯೊಪೊರೊಸಿಸ್‌ನ ಸಾಧ್ಯತೆಗಳನ್ನು ತಳ್ಳಿಹಾಕಲಾಗದು. ಇದು ಖಿನ್ನತೆಗೆ ರಹದಾರಿಯಾಗುತ್ತದೆ’ ಎಂದು ಎಚ್ಚರಿಸುತ್ತಾರೆ ಡಾ.ವಿದ್ಯಾ.‌

ಆರೋಗ್ಯಕರ ಜೀವನಶೈಲಿ, ಪೌಷ್ಟಿಕ ಆಹಾರ ಸೇವನೆ, ನಿಯಮಿತ ವ್ಯಾಯಾಮದಿಂದ ನೈಸರ್ಗಿಕವಾಗಿ ಎದುರಾಗುವ ಋತುಬಂಧವನ್ನು ಎದುರಿಸಬೇಕು ಎಂದು ಸಲಹೆ ನೀಡುತ್ತಾರೆ ಅವರು.

ಆಸ್ಟಿಯೊಪೊರೊಸಿಸ್ ತಡೆಗಟ್ಟಲು ಹೀಗೆ ಮಾಡಿ

*ಮೂಳೆಗಳ ಸಾಂದ್ರತೆ ಹೆಚ್ಚಿಸಲು ಕ್ಯಾಲ್ಸಿಯಂ ಸೇವನೆ

*ವಿಟಮಿನ್ ಡಿ ಕೊರತೆಯಾಗದಂತೆ ಮೀನು, ಮೊಟ್ಟೆ, ಹಾಲು ಮತ್ತು ಮಲ್ಟಿವಿಟಮಿನ್‌ಗಳ ಸೇವನೆ

*ಮದ್ಯಪಾನ, ಧೂಮಪಾನ ವರ್ಜಿಸುವುದು

*ಆಹಾರದಲ್ಲಿ ಯಥೇಚ್ಚವಾಗಿ ಸೊಪ್ಪು–ತರಕಾರಿ, ಮೊಸರು, ಮಜ್ಜಿಗೆ, ಹಾಲಿನ ಬಳಕೆ ಮಾಡುವುದು

*ಟೀ–ಕಾಫಿ ಸೇವನೆ ಮಿತಗೊಳಿಸುವುದು

*ಕುಳಿತು ಕೆಲಸ ಮಾಡುವಂಥವರು ಮಧ್ಯೆ ಮಧ್ಯೆ ಎದ್ದು ಓಡಾಡುವುದು ಅಗತ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT