ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರ ಔಷಧ ಅವರಿಗಷ್ಟೆ! ಚಯಾಪಚಯ ಕ್ರಿಯೆಗಳಿಗೆ ತಕ್ಕಂತೆ ಔಷಧ

Last Updated 15 ನವೆಂಬರ್ 2022, 23:45 IST
ಅಕ್ಷರ ಗಾತ್ರ

ಪ್ರತಿಯೊಬ್ಬರೂ ಒಬ್ಬ ವಿಶಿಷ್ಟ ವ್ಯಕ್ತಿ. ಅವರ ದೇಹದಲ್ಲಿನ ಚಯಾಪಚಯ ಕ್ರಿಯೆಗಳಿಗೆ ತಕ್ಕಂತೆ ಇರುವಂತಹ ಔಷಧವನ್ನು ತಯಾರಿಸಿ ನೀಡಿದರೆ ಕಾಯಿಲೆಗಳು ಗುಣವಾಗುವುದು ಸುಲಭ.

***

ವೈದ್ಯರ ಬಳಿಗೆ ಯಾವುದೋ ಕಾಯಿಲೆಯ ಚಿಕಿತ್ಸೆಗೆಂದು ಹೋದಾಗ ಆತಂಕ ಇದ್ದೇ ಇರುತ್ತದೆ. ಯಾವ ಔಷಧ ಕೊಡುತ್ತಾರೋ? ಅದು ಕಾಯಿಲೆಯನ್ನು ಗುಣಪಡಿಸುತ್ತದೆಯೋ ಅಥವಾ ಔಷಧದ ಉಪಟಳವೇ ಕಾಯಿಲೆಗಿಂತ ಜಾಸ್ತಿ ಆಗಬಹುದೋ? ಇನ್ನು. ಈ ಆತಂಕ ಬೇಡವಂತೆ! ನಿಮ್ಮದೇ ದೇಹದಿಂದ ತೆಗೆದ ಔಷಧ, ಇಲ್ಲವೇ ನಿಮ್ಮ ದೇಹಕ್ಕಷ್ಟೆ ಒಗ್ಗುವ ಚಿಕಿತ್ಸೆಯನ್ನು ವೈದ್ಯರು ನೀಡಬಲ್ಲರಂತೆ. ಅಂತಹುದೊಂದು ‘ಪರ್ಸನಲೈಸ್ಡ್‌’ ಅಥವಾ ‘ವೈಯಕ್ತಿಕ ಚಿಕಿತ್ಸೆ’ಯ ಪರೀಕ್ಷೆಯೊಂದು ಫಲಕಾರಿಯಾಗಿದೆ ಎಂದು ಮೊನ್ನೆ ‘ನೇಚರ್‌’ ಪತ್ರಿಕೆ ವರದಿ ಮಾಡಿದೆ. ಕ್ಯಾನ್ಸರ್‌ ರೋಗಿಗಳಿಗೆ ಅವರವರ ದೇಹದಿಂದಲೇ ಹೆಕ್ಕಿದ ಜೀವಕೋಶಗಳನ್ನು ತಿದ್ದಿ, ಹೊಸದಾಗಿಸಿ ಮರಳಿ ದೇಹಕ್ಕೆ ಚುಚ್ಚಿ ಚಿಕಿತ್ಸೆಯನ್ನು ಅಮೆರಿಕೆಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರದ ವಿಜ್ಞಾನಿಗಳು ಮಾಡಿದ್ದಾರೆ. ಸೂಸನ್‌ ಫಾಯ್‌ ಮತ್ತು ಸಂಗಡಿಗರು ನಡೆಸಿರುವ ಈ ಪರೀಕ್ಷೆ ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚು ಫಲ ನೀಡಿದೆಯಂತೆ.

‘ವೈಯಕ್ತಿಕ ಚಿಕಿತ್ಸೆ’ ಎಂದರೆ ಇನ್ನೇನಲ್ಲ; ಪ್ರತಿಯೊಬ್ಬರೂ ಒಬ್ಬ ವಿಶಿಷ್ಟ ವ್ಯಕ್ತಿಯಷ್ಟೆ. ಹೀಗಾಗಿ ಅವರ ದೇಹದಲ್ಲಿನ ಚಯಾಪಚಯ ಕ್ರಿಯೆಗಳಿಗೆ ತಕ್ಕಂತೆ ಇರುವಂತಹ ಔಷಧವನ್ನು ತಯಾರಿಸಿ ನೀಡಿದರೆ ಕಾಯಿಲೆಗಳು ಗುಣವಾಗುವುದು ಸುಲಭ. ಅಲ್ಲದೆ ಕೆಲವರಿಗೆ ಔಷಧದಿಂದಲೇ ಆಗುವ ತೊಂದರೆಯನ್ನು ಕಡಿಮೆ ಮಾಡಬಹುದು ಎನ್ನುವುದು ತರ್ಕ. ಈ ತರ್ಕವನ್ನು ಎಲ್ಲರೂ ಒಪ್ಪುತ್ತಾರಾದರೂ, ಅವರವರಿಗೇ ಒಗ್ಗುವಂತಹ ಔಷಧವನ್ನು ತಯಾರಿಸುವುದು ಬಲು ದುಬಾರಿ ಎನ್ನಿಸಿತ್ತು. ಇದೀಗ ತಳಿತಂತ್ರಜ್ಞರು ಜೀವಕೋಶಗಳ ತಳಿಗುಣಗಳನ್ನು ತಿದ್ದಲು ಬಳಸುವ ಕ್ರಿಸ್ಪರ್‌ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು, ಎಲ್ಲ ಕಾಯಿಲೆಗಳಿಗೆ ಅಲ್ಲದಿದ್ದರೂ, ರೋಗ ಪ್ರತಿರೋಧಕ ವ್ಯವಸ್ಥೆಯನ್ನು ಬಾಧಿಸುವ ಕ್ಯಾನ್ಸರಿನಂತಹ ಸಮಸ್ಯೆಗಳಿಗೆ ಪರಿಹಾರ ಒದಗಿಸಬಹುದೆನ್ನುವ ಆಸೆಯನ್ನು ಈ ಪರೀಕ್ಷೆ ಹುಟ್ಟಿಸಿದೆ.

ರೋಗಪ್ರತಿರೋಧಕ ವ್ಯವಸ್ಥೆ ಎನ್ನುವುದು ದೇಹರಕ್ಷಣೆಗೆ ಇರುವ ವ್ಯವಸ್ಥೆ. ಸಾಮಾನ್ಯವಾಗಿ ರಕ್ತ ಅಥವಾ ದೇಹವನ್ನು ಹೊಕ್ಕ ರೋಗಾಣುಗಳನ್ನು ಕಟ್ಟಿ ಹಾಕಿ ಹೊರಗೆಸೆಯುವ ಬಿಳಿ ರಕ್ತಕೋಶಗಳು ಹಾಗೂ ನಮ್ಮ ದೇಹದ್ದಲ್ಲದ ಯಾವುದೇ ಜೀವಕೋಶಗಳನ್ನೂ ಗುರುತಿಸಿ ಕೊಲ್ಲುವ ಕೆಲಸವನ್ನು ಇದು ಮಾಡುತ್ತದೆ. ಅನ್ಯ ಜೀವಕೋಶಗಳನ್ನು ಗುರುತಿಸುವುದಕ್ಕಾಗಿಯೇ ಟಿ-ಜೀವಕೋಶಗಳೆಂಬ ಕೋಶಪಡೆ ಇದೆ. ಇವು ರೋಗಾಣುಗಳು ಬಚ್ಚಿಟ್ಟುಕೊಂಡಿರುವ ಜೀವಕೋಶಗಳನ್ನು ಹಾಗೂ ಅನ್ಯ ಜೀವಕೋಶಗಳನ್ನು ಗುರುತಿಸಿ, ಅವನ್ನು ಕೊಲ್ಲುತ್ತವೆ. ಇಂತಹ ಕೋಶಗಳನ್ನು ಕ್ಯಾನ್ಸರ್‌ ಜೀವಕೋಶಗಳನ್ನು ಹುಡುಕಿ ಕೊಲ್ಲುವಂತೆ ಹುರಿದುಂಬಿಸುವ ಕೆಲಸವನ್ನು ಸೂಸನ್‌ ಫಾಯ್‌ ತಂಡ ಮಾಡಿದೆ.

ಕ್ಯಾನ್ಸರ್‌ ರೋಗವಾದರೂ ಅದನ್ನು ನಮ್ಮದೇ ದೇಹದ ದೋಷ ಎನ್ನಬಹುದು. ದೇಹದ ಜೀವಕೋಶಗಳೇ ನಿಯಂತ್ರಣ ಮೀರಿ ಬೆಳೆಯಲು ತೊಡಗಿದಾಗ ಕ್ಯಾನ್ಸರ್‌ ಉಂಟಾಯಿತು ಎನ್ನುತ್ತಾರೆ. ಟಿ-ಜೀವಕೋಶಗಳು ಇವನ್ನು ಅನ್ಯವೆಂದು ಗ್ರಹಿಸವು. ಹೀಗಾಗಿ ದೇಹ ಇವನ್ನು ಸಹಿಸಿಕೊಳ್ಳುತ್ತದೆ. ಈ ಟಿ-ಕೋಶಗಳು ಕ್ಯಾನ್ಸರ್‌ ಕೋಶಗಳನ್ನು ಅನ್ಯವೆಂದು ಗ್ರಹಿಸುವಂತೆ ಮಾಡಿದರೆ ಆಗ ಅವು ಕ್ಯಾನ್ಸರ್‌ ಕೋಶಗಳ ಮೇಲೆ ದಾಳಿ ಮಾಡಬಹುದಲ್ಲವೇ? ಈ ಯೋಚನೆಯಿಂದ ಹದಿನಾರು ರೋಗಿಗಳ ದೇಹದಿಂದ ಹೆಕ್ಕಿದ ಟಿ-ಜೀವಕೋಶಗಳನ್ನು ಸೂಸನ್‌ ಫಾಯ್‌ ತಂಡ ತಿದ್ದಿದೆ. ಇದಕ್ಕಾಗಿ ಇತ್ತೀಚೆಗೆ ಸದಾ ಸುದ್ದಿಯಲ್ಲಿರುವ ಕ್ರಿಸ್ಪರ್‌ ಎನ್ನುವ ತಂತ್ರಜ್ಞಾನವನ್ನು ಬಳಸಿದೆ. ಸಾಮಾನ್ಯವಾಗಿ ಟಿ-ಜೀವಕೋಶಗಳ ಹೊರಮೈಯಲ್ಲಿ ಇರುವ ಕೆಲವು ಪ್ರೊಟೀನುಗಳು ಅವು ಅನ್ಯ ಜೀವಕೋಶಗಳನ್ನು ಗುರುತಿಸಲು ನೆರವಾಗುತ್ತವೆ. ಪ್ರತಿಜನಕ ಅಥವಾ ಆಂಟಿಜನ್ನುಗಳೆನ್ನುವ ಇಂತಹ ಪ್ರೊಟೀನುಗಳನ್ನು ತಯಾರಿಕೆಯನ್ನು ನಿರ್ದೇಶಿಸುವ ಜೀನ್‌ಗಳನ್ನು ಕ್ರಿಸ್ಪರ್‌ ತಂತ್ರಜ್ಞಾನದಿಂದ ಬದಲಿಸಿ, ಹೊಸ ಪ್ರೊಟೀನುಗಳನ್ನು ತಯಾರಿಸುವ ಜೀನ್‌ಗಳನ್ನು ಫಾಯ್‌ ತಂಡ ಟಿ-ಜೀವಕೋಶಗಳಲ್ಲಿ ಹುದುಗಿಸಿದೆ. ಅನಂತರ ಮರಳಿ ಈ ತಿದ್ದಿದ ಜೀವಕೋಶಗಳನ್ನು ರೋಗಿಗಳಿಗೆ ಚಿಕಿತ್ಸೆಯಾಗಿ ನೀಡಿದೆ. ಟಿ-ಕೋಶಗಳ ಚಟುವಟಿಕೆಯನ್ನು ಗಮನಿಸಿದೆ.

ಒಟ್ಟು ಹದಿನಾರು ರೋಗಿಗಳಲ್ಲಿ ಈ ಚಿಕಿತ್ಸೆ ನಡೆಸಲಾಗಿದೆ. ಇವರಲ್ಲಿ ಬಹುತೇಕರು ಕ್ಯಾನ್ಸರ್‌ ಚಿಕಿತ್ಸೆ ಪಡೆಯುತ್ತಿದ್ದರೂ ರೋಗ ಉಲ್ಬಣವಾಗುತ್ತಲೇ ಇದ್ದವರು. ಒಬ್ಬರು ಸೈಟೊಕೈನ್‌ ಸುರಿಮಳೆ ಎನ್ನುವ ಕಾಯಿಲೆಗೆ ಗುರಿಯಾದವರು. ಇಂತಹವರಲ್ಲಿ ರೋಗಪ್ರತಿರೋಧ ವ್ಯವಸ್ಥೆ ಅತ್ಯುತ್ಸಾಹದಿಂದ ದಾಳಿ ಮಾಡುತ್ತದೆ. ಆದರೆ ಅನ್ಯ ಜೀವಕೋಶಗಳನ್ನು ಗುರುತಿಸಲಾಗದೆ ದೇಹದ್ದೇ ಜೀವಕೋಶಗಳಿಗೆ ಬಾಧೆ ತರುತ್ತದೆ. ಕೋವಿಡ್‌ ಸೋಂಕಿನ ಸಂದರ್ಭದಲ್ಲಿ ಶ್ವಾಸಕೋಶಗಳಿಗೆ ಬಾಧೆ ಉಂಟಾಗಲು ಸೈಟೊಕೈನ್‌ ಸುರಿಮಳೆಯೇ ಕಾರಣ. ಇನ್ನೂ ಒಬ್ಬ ರೋಗಿಗೆ ಮೆದುಳು ಜ್ವರದ ಅತ್ಯುಲ್ಬಣಾವಸ್ಥೆಯಲ್ಲಿ ಇದ್ದಂಥವರು. ರೋಗಿಗಳ ರಕ್ತದಲ್ಲಿ ಕ್ಯಾನ್ಸರ್‌ ಕಾಯಿಲೆಯಿಂದಾಗಿಯೇ ಕಂಡು ಬಂದಂತಹ ಆಂಟಿಜನ್ನುಗಳನ್ನು ಗುರುತಿಸಿದ್ದಾರೆ. ಇವು ಪ್ರತಿ ರೋಗಿಯಲ್ಲಿಯೂ ಭಿನ್ನವಾಗಿರಬಹುದು. ಅನಂತರ ಟಿ-ಜೀವಕೋಶಗಳನ್ನು ಹೆಕ್ಕಿ, ಅವುಗಳನ್ನು ಪ್ರನಾಳಗಳಲ್ಲಿ ಬೆಳೆಸಿದ್ದಾರೆ. ಈ ಜೀವಕೋಶಗಳಲ್ಲಿ ಸಾಮಾನ್ಯವಾಗಿರುವ ಟಿಆರ್‌ಸಿ-ಆಲ್ಫ ಹಾಗೂ ಟಿಆರ್‌ಸಿ-ಬೀಟ ಎನ್ನುವ ಆಂಟಿಜೆನ್ನುಗಳ ಜೀನುಗಳನ್ನು ತೆರವು ಮಾಡಿ, ಬದಲಿಗೆ ರೋಗಿಗಳ ದೇಹದಲ್ಲಿ ಹೊಸದಾಗಿ ಗುರುತಿಸಿದ ಆಂಟಿಜೆನ್ನುಗಳ ಜೀನುಗಳನ್ನು ಕೂರಿಸಿದ್ದಾರೆ. ಹೀಗೆ ತಿದ್ದಿದ ಜೀವಕೋಶಗಳನ್ನು ಬೆಳೆಸಿ ವಿವಿಧ ಪ್ರಮಾಣದಲ್ಲಿ ರೋಗಿಗಳಿಗೆ ಮರಳಿ ಚುಚ್ಚಿದ್ದಾರೆ. ಕೆಲವು ದಿನಗಳ ನಂತರ ಕ್ಯಾನ್ಸರ್‌ ಗೆಡ್ಡೆಗಳನ್ನು ಪರಿಶೀಲಿಸಿದ್ದಾರೆ. ಅಲ್ಲಿ ಈ ಹೊಸ ಜೀನ್‌ ಕೂರಿಸಿದ ಜೀವಕೋಶಗಳ ಸಂತತಿ ಸಾಮಾನ್ಯಕ್ಕಿಂತಲೂ ಹೆಚ್ಚು ಇದ್ದಿತೆಂದೂ, ಕ್ಯಾನ್ಸರ್‌ ಕೋಶಗಳಲ್ಲಿ ಸತ್ತವುಗಳ ಸಂಖ್ಯೆಯೂ ಗಣನೀಯವಾಗಿ ಅಧಿಕವಾಗಿತ್ತೆಂದೂ ಇವರು ವರದಿ ಮಾಡಿದ್ದಾರೆ.

ಜೀವಕೋಶಗಳನ್ನು ತಿದ್ದಿ ದೇಹಕ್ಕೆ ಮರಳಿಸುವ ಪ್ರಯತ್ನಗಳು ಈ ಹಿಂದೆಯೂ ನಡೆದಿದ್ದುವು. ಆದರೆ ಹಾಗೆ ತಿದ್ದುವುದಕ್ಕಾಗಿ ವೈರಸ್ಸುಗಳನ್ನು ಬಳಸಲಾಗುತ್ತಿತ್ತು. ಇದರಿಂದಾಗಿ ಇಂತಹ ಚಿಕಿತ್ಸೆಗಳ ಬಗ್ಗೆ ಆತಂಕವೂ ಇತ್ತು. ವೈರಸ್ಸೇ ಹೊಸ ಕಾಯಿಲೆಯನ್ನು ಉಂಟು ಮಾಡಿದರೆ? ಇದೀಗ ಆ ಆತಂಕವಿಲ್ಲದ ಚಿಕಿತ್ಸೆ ದೊರೆತಿದೆ. ಆಯಾ ರೋಗಿಯ ದೇಹದಿಂದಲೇ ಹೆಕ್ಕಿದ ಆಂಟಿಜನ್ನುಗಳನ್ನು ಬಳಸಿದ್ದೂ ಪ್ರಥಮ. ಜೊತೆಗೆ ಒಮ್ಮೆಲೆ ಹಲವು ಜೀನುಗಳನ್ನು ಕಿತ್ತೊಗೆದು ತಿದ್ದಿದ್ದೂ ಇದೇ ಮೊದಲು. ಇಷ್ಟೆಲ್ಲ ಆಗಿಯೂ, ಈ ತಿದ್ದಿದ ಜೀವಕೋಶಗಳು ದೇಹದ ಇತರೆಡೆಗಿಂತಲೂ ಕ್ಯಾನ್ಸರ್‌ ಗೆಡ್ಡೆಗಳಲ್ಲಿಯೇ ಹೆಚ್ಚು ಇದ್ದವೆನ್ನುವುದು ಚಿಕಿತ್ಸೆಯ ಗುರಿ ಸರಿಯಾಗಿದೆ ಎಂದು ಸೂಚಿಸುತ್ತದೆ ಎನ್ನುತ್ತಾರೆ, ಫಾಯ್‌.

ಕ್ಯಾನ್ಸರ್‌ ಗುಣವಾಯಿತೇ – ಎನ್ನಬೇಡಿ. ಅದಕ್ಕಿನ್ನೂ ಉತ್ತರ ಸಿಕ್ಕಿಲ್ಲ. ಆದರೆ ಅವರವರಿಗೆ ತಕ್ಕಂತೆ ಚಿಕಿತ್ಸೆ ಮಾಡಲು ಬೇಕಾದ ತಂತ್ರಗಳು ಈಗ ನಮ್ಮ ಕೈಗೆಟುಕುವಂತಿವೆ ಎಂದು ಈ ಪ್ರಯೋಗ ತಿಳಿಸಿದೆ.

ಈ ಪ್ರಯೋಗಗಳ ವಿವರಗಳನ್ನು ಕಳೆದ ವಾರದ ನೇಚರ್‌ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT