ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋರಿಯಾಸಿಸ್‌: ಭಯ ಬಿಡಿ

Last Updated 19 ಜುಲೈ 2019, 19:30 IST
ಅಕ್ಷರ ಗಾತ್ರ

ಸೋರಿಯಾಸಿಸ್ ಒಂದು ದೀರ್ಘಕಾಲೀನ ಚರ್ಮದ ಸಮಸ್ಯೆಯಾಗಿದ್ದು, ಇದು ಚರ್ಮ, ಉಗುರುಗಳು ಮತ್ತು ಕೀಲುಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಯಾವುದೇ ವಯೋಮಾನದಲ್ಲೂ ಬರಬಹುದು. ಆದಾಗ್ಯೂ 30ರಿಂದ 40ರ ವಯೋಮಾನದ ವಯಸ್ಕರಲ್ಲಿ ಸಾಮಾನ್ಯ. ಅದರಲ್ಲೂ ಪುರುಷರನ್ನು ಹೆಚ್ಚು ಬಾಧಿಸುತ್ತದೆ.ಆರಂಭಿಕ ಹಂತದಲ್ಲಿ ಚಿಕಿತ್ಸೆ ಆರಂಭಿಸಿದರೆ ನಿರ್ವಹಣೆ ಸುಲಭ.

ಗುರುತಿಸುವುದು ಹೇಗೆ?

ಸೋರಿಯಾಸಿಸ್‌ ಗುಣಲಕ್ಷಣಗಳು ಸಾಮಾನ್ಯವಾಗಿ ಮೇಲ್ನೋಟಕ್ಕೇ ಕಂಡುಬರುತ್ತವೆ. ಆರಂಭದಲ್ಲಿ ಕಣ್ಣಿಗೆ ಕಾಣುವ ಪ್ರಕಾರವೆಂದರೆ ದೀರ್ಘಕಾಲದ ಪ್ಲೇಕ್ (ಹೊಟ್ಟು) ಪ್ರಕಾರದ ಸೋರಿಯಾಸಿಸ್. ದೇಹದ ವಿವಿಧ ಭಾಗದ ಚರ್ಮದ ಮೇಲೆ ಸಣ್ಣ ಸಣ್ಣ ಬಿಲ್ಲೆಗಳಂತಹ ಗಾಯಗಳು ಕಂಡು ಬರುತ್ತವೆ. ಈ ಬಿಲ್ಲೆಗಳು ಬಿಳಿಬಣ್ಣದ ಒಣ ಚರ್ಮದಿಂದ ಮುಚ್ಚಲ್ಪಟ್ಟಿರುತ್ತವೆ. ಆ ಒಣ ಚರ್ಮವನ್ನು ಉಜ್ಜಿದರೆ ಸಣ್ಣ ಸಣ್ಣ ರಕ್ತ ಸ್ರಾವದ ಬಿಂದುಗಳು ಕಾಣುತ್ತವೆ. ಕೈ, ಕಾಲು, ಮೊಣಕೈ, ಮೊಣಕಾಲು, ನೆತ್ತಿಯ ಚರ್ಮ – ಹೀಗೆ ದೇಹದ ಯಾವುದೇ ಭಾಗದಲ್ಲಿಯೂ ಇವು ಕಂಡು ಬರಬಹುದು. ಈ ಗಾಯಗಳಲ್ಲಿ ತುರಿಕೆ ಇರಬಹುದು ಅಥವಾ ಇಲ್ಲದೆಯೂ ಇರಬಹುದು.ಕೀಲುಗಳ ಮೇಲೆಯೂ ಇದು ಪ್ರಭಾವ ಬೀರಬಹುದು. ಇದನ್ನು ಗಂಭೀರ ಸ್ವರೂಪದ ಸೋರಿಯಾಸಿಸ್‌ ಎಂದು ಪರಿಗಣಿಸಲಾಗುತ್ತದೆ.ಈ ಕಾಯಿಲೆಯನ್ನು ದೃಢಪಡಿಸಿಕೊಳ್ಳಲು ಗಾಯದ ಅಂಗಾಂಶದ ತುಣುಕನ್ನು ಬಯಾಪ್ಸಿ ಪರೀಕ್ಷೆಗೆ ಒಡ್ಡಲಾಗುತ್ತದೆ.

ನಿಖರ ಕಾರಣ ನಿಗೂಢ

ಈ ಕಾಯಿಲೆಗೆ ನಿಖರವಾದ ಕಾರಣವಿನ್ನೂ ತಿಳಿದಿಲ್ಲ. ಆದರೆ ಮುಖ್ಯವಾಗಿ ವ್ಯಕ್ತಿಯ ರೋಗನಿರೋಧಕ ವ್ಯವಸ್ಥೆಯ ದೋಷದಿಂದ ಉಂಟಾಗುವ ಸಮಸ್ಯೆಯಿದು. ಆದ್ದರಿಂದ ಕೆಲವು ಜನರಲ್ಲಿ ಆನುವಂಶೀಯತೆಯ ಪಾತ್ರವೂ ಇರುತ್ತದೆ. ಹೊರಗಿನ ಪರಿಸರ ಅಂಶಗಳಿಂದಲೂ ಬರಬಹುದು. ಪ್ರತಿರೋಧಕ ಕೋಶಗಳ ಅತಿಯಾದ ಚಟುವಟಿಕೆಗಳಿಂದಲೂ ಸೋರಿಯಾಸಿಸ್ ಬರಬಹುದು.

ಸೋರಿಯಾಸಿಸ್‌ಗೆ ಕಾರಣವಾಗುವ ಕೆಲವು ಅಂಶಗಳು

ಸ್ಥಳೀಯ ಅಂಶಗಳು: ಗಾಯದ ಸ್ಥಳಗಳಲ್ಲಿ ಸೋರಿಯಾಟಿಕ್ ಗಾಯಗಳು ಬೆಳೆಯುತ್ತವೆ. ಅವು ಯಾವುದೇ ರೀತಿಯ-ದೈಹಿಕ, ರಾಸಾಯನಿಕ, ಯಾಂತ್ರಿಕ, ಅಲರ್ಜಿ ಸ್ವಭಾವದ್ದಾಗಿರಬಹುದು.

ಕಾಲೋಚಿತ ವ್ಯತ್ಯಾಸಗಳು: ಹೆಚ್ಚಿನ ರೋಗಿಗಳಲ್ಲಿ ಚಳಿಗಾಲದಲ್ಲಿ ಈ ಸಮಸ್ಯೆ ಗಂಭೀರ ಸ್ವರೂಪ ತಾಳುವುದನ್ನು ಕಾಣಬಹುದು. ಹೆಚ್ಚಿನ ತೇವಾಂಶವಿರುವ ವಾತಾವರಣ ಈ ರೋಗಿಗಳಿಗೆಹೆಚ್ಚು ಪ್ರಯೋಜನಕಾರಿ.

ಮಾನಸಿಕ ಒತ್ತಡ: ಸೋರಿಯಾಸಿಸ್ ಇತರ ಚರ್ಮರೋಗಗಳಿಗಿಂತ ಹೆಚ್ಚು ಸಂವೇದನಾಶೀಲವಾಗಿದ್ದು, ಇದು ಭಾವನೆಗಳ ತೀವ್ರ ಏರಿಳಿತ ಮತ್ತು ಮಾನಸಿಕ ಒತ್ತಡದೊಂದಿಗೆ ನೇರ ಸಂಬಂಧ ಹೊಂದಿದೆ. ಮಾನಸಿಕ ಒತ್ತಡ, ಚಿಂತೆ ಹೆಚ್ಚಿನ ರೋಗಿಗಳಲ್ಲಿ ಸೋರಿಯಾಸಿಸ್‌ ಬೆಳೆಯಲು ಮತ್ತು ಉಲ್ಬಣಗೊಳ್ಳಲು ಕಾರಣವಾಗುತ್ತದೆ. ಅಲ್ಲದೇ ಒತ್ತಡವಿದ್ದಾಗ ರೋಗ ಗುಣವಾಗುವುದೂ ನಿಧಾನವಾಗುತ್ತದೆ.

ಸೋಂಕುಗಳು ಮತ್ತು ಔಷಧಗಳು: ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದ ಸೋಂಕುಗಳು ಮತ್ತು ಗಲಗ್ರಂಥಿಯ ಉರಿಯೂತ ಇದ್ದಾಗ ಸೋರಿಯಾಸಿಸ್‌ ಬಹಳ ಬೇಗ ಬೆಳೆಯುತ್ತದೆ. ಎಚ್‌ಐವಿ ಸೋಂಕಿತ ರೋಗಿಗಳಲ್ಲಿ ಬೇಗ ರೋಗ ಉಲ್ಬಣಗೊಳ್ಳುತ್ತದೆ.

ಧೂಮಪಾನ ಮತ್ತು ಮದ್ಯಪಾನ: ಧೂಮಪಾನ ಮತ್ತು ಮದ್ಯಪಾನದಿಂದ ಸೋರಿಯಾಸಿಸ್‌ನ ಅಪಾಯ ಹೆಚ್ಚುತ್ತದೆ. ಇದು ಸೋರಿಯಾಸಿಸ್‌ನ ಆಕ್ರಮಣ ಮತ್ತು ಅದರ ವೈದ್ಯಕೀಯ ಮೇಲ್ನೋಟದ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ಅತಿಯಾದ ಮದ್ಯಪಾನವು ಮೊದಲೇ ಅಸ್ತಿತ್ವದಲ್ಲಿರುವ ಸೋರಿಯಾಸಿಸ್ ಅನ್ನು ಇನ್ನಷ್ಟು ಹದಗೆಡಿಸುತ್ತದೆ. ಸ್ಥೂಲಕಾಯದ ರೋಗಿಗಳಲ್ಲಿ ಸೋರಿಯಾಸಿಸ್‌ ಬಹಳ ಬೇಗ ತೀವ್ರ ಸ್ವರೂಪಕ್ಕೆ ತಿರುಗುವ ಸಾಧ್ಯತೆಯಿರುತ್ತದೆ.

ಚಿಕಿತ್ಸೆ–ಪರಿಹಾರ

ಒಮ್ಮೆ ಪತ್ತೆಯಾದರೆ ಇದನ್ನು ಸಂಪೂರ್ಣವಾಗಿ ಗುಣಪಡಿಸುವುದು ಕಷ್ಟ. ಆದರೆ ವೈದ್ಯಕೀಯ ನೆರವು, ಜೀವನಶೈಲಿಯಲ್ಲಿ ಬದಲಾವಣೆ, ಉತ್ತಮ ಆಹಾರಾಭ್ಯಾಸದಿಂದ ಇದನ್ನು ನಿಯಂತ್ರಣದಲ್ಲಿ ಇಡಬಹುದು. ಚಿಕಿತ್ಸೆಯಿಂದ ಸೋರಿಯಾಸಿಸ್ ಸಂಪೂರ್ಣವಾಗಿ ಕಡಿಮೆಯಾಗಬಹುದು ಅಥವಾ ಸ್ಥಿತಿ ಉತ್ತಮವಾಗಬಹುದು.

ಚಿಕಿತ್ಸೆಯು ರೋಗದ ಪ್ರಮಾಣ, ರೋಗ ನಿರೋಧಕ ಶಕ್ತಿ ಮತ್ತು ರೋಗದ ಹಂತವನ್ನು ಅವಲಂಬಿಸಿರುತ್ತದೆ.ರೋಗಿಗೆ ಆಪ್ತಸಲಹೆ ನೀಡುವುದು ಮತ್ತು ರೋಗದ ಸ್ವರೂಪ, ಗುಣ, ಹರಡುವಿಕೆ, ಅದು ಮರುಕಳಿಸುವ ಸಾಧ್ಯತೆಗಳು ಮತ್ತು ಅದರ ಉಲ್ಬಣಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ವಿವರಿಸುವುದು ಬಹಳ ಮುಖ್ಯ. ಸಪೋರ್ಟ್‌ಗ್ರೂಪ್‌ ಥೆರಪಿ ಸಹ ಪ್ರಯೋಜನಕಾರಿಯಾಗಬಹುದು.

ತಡೆಗಟ್ಟಲು ಮತ್ತು ನಿರ್ವಹಿಸಲು ಸಲಹೆಗಳು

ಆಹಾರ: ಸಾಕಷ್ಟು ಹಣ್ಣುಗಳು, ತರಕಾರಿಗಳು, ಧಾನ್ಯಗಳನ್ನು ಸೇವಿಸಿ. ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬುಗಳು, ಸಂಸ್ಕರಿಸಿದ ಕಾರ್ಬೊಹೈಡ್ರೇಟ್ ಮತ್ತು ಸಂಸ್ಕರಿಸಿದ ಆಹಾರದಿಂದ ದೂರವಿರಿ. ಮೆಕೆರೆಲ್, ಸ್ಯಾಮನ್‌, ಸಾರ್ಡಿನ್ ಅಥವಾ ಹೆರಿಂಗ್‌ನಂತಹ ಎಣ್ಣೆಯುಕ್ತ ಮೀನುಗಳ ಸೇವನೆ ಉತ್ತಮ.

ಸ್ನಾನಪದ್ಧತಿಗಳು: ಸೂರ್ಯಸ್ನಾನ, ಸಮುದ್ರ ಸ್ನಾನ ಮತ್ತು ನೇರಳಾತೀತ ವಿಕಿರಣಗಳಿಗೆ ಒಡ್ಡಿಕೊಳ್ಳುವುದು ಉತ್ತಮ ಫಲಿತಾಂಶ ನೀಡುತ್ತವೆ.

ಶಮನಕಾರಕಗಳು: ಸೋರಿಯಾಸಿಸ್ ಚಿಕಿತ್ಸೆಯಲ್ಲಿ ಜಲಸಂಚಯನ ಮುಖ್ಯವಾಗಿದೆ. ಇವು ಬಾಹ್ಯ ಒತ್ತಡಗಳು ಮತ್ತು ಕಿರಿಕಿರಿಯನ್ನು ತಡೆಯುತ್ತವೆ. ಸ್ನಾನದ ನಂತರ ಪೆಟ್ರೋಲಿಯಂ ಜೆಲ್ಲಿ ಅಥವಾ ಕ್ರೀಮ್‌ಗಳಂತಹ ಮುಲಾಮುಗಳನ್ನು ಬಳಸಬೇಕು. ಇದು ತುರಿಕೆ, ನೋವು, ಅಸಹನೆಯನ್ನು ಕಡಿಮೆ ಮಾಡುತ್ತದೆ. ಉರಿಯುತ್ತಿರುವ ಮತ್ತು ಗಾಯಗಳ ವಿಸ್ತರಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕೌಟುಂಬಿಕ–ವೈದ್ಯಕೀಯ ಅಂಶಗಳು, ಶರೀರಕ್ಕೆ ಆದ ಆಘಾತ, ಕೆಲವು ಬಗೆಯ ಸೋಂಕುಗಳು, ಕೆಲವು ಔಷಧಗಳು, ಒತ್ತಡದ ಜೀವನಶೈಲಿ, ಮದ್ಯಪಾನ, ಧೂಮಪಾನ, ಮುಂತಾದ ಕಾರಣಗಳನ್ನು ಗುರುತಿಸಲಾಗಿದೆ.

ಯೋಗ ಮಾಡಿ

ವ್ಯಾಯಾಮ, ಯೋಗ, ವಿಶ್ರಾಂತಿ ಮತ್ತು ಧ್ಯಾನದಂತಹ ಆರೋಗ್ಯಕರ ಜೀವನಶೈಲಿಯ ಅಭ್ಯಾಸವನ್ನು ಅಳವಡಿಸಿಕೊಳ್ಳಬೇಕು. ಈ ಅಭ್ಯಾಸಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಮತ್ತು ಸ್ಥಿತಿಯ ತೀವ್ರತೆಯನ್ನು ನಿರ್ವಹಿಸಲು ಅನುಕೂಲಕರ.

(ಲೇಖಕಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚರ್ಮರೋಗ ವೈದ್ಯೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT