ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಕ್ಯಾನ್ಸರ್ ಜೊತೆಗೊಂದು ಪಯಣ: ಸಾಥ್‌ ನೀಡಿದ ಸೋಷಿಯಲ್‌ ಮೀಡಿಯಾ

ಕೈ ಹಿಡಿದಳು ಗಾಯತ್ರಿ –9
Last Updated 28 ಫೆಬ್ರುವರಿ 2021, 10:32 IST
ಅಕ್ಷರ ಗಾತ್ರ

ಆರೋಗ್ಯ ಕೆಟ್ಟು ನಿಂತಾಗ ಕುಟುಂಬದ ಸದಸ್ಯರು, ಸ್ನೇಹಿತರು, ಕೆಲಸ ಮಾಡುವ ಕಚೇರಿಯ ಮಾಲೀಕರು, ಸಹೋದ್ಯೋಗಿಗಳು ನೀಡುವ ಒಂದೊಂದು ಧೈರ್ಯದ ಮಾತೂ ಒಂದೊಂದು ಕ್ಯಾಪ್ಸೂಲ್‌ ಇದ್ದಂತೆ. ವೈದ್ಯರು ನಮ್ಮ ದೇಹಕ್ಕೆ ಚಿಕಿತ್ಸೆ ನೀಡಬಹುದು. ಆದರೆ ಬಂಧು–ಬಳಗ, ಸ್ನೇಹಿತರು, ಸಹೋದ್ಯೋಗಿಗಳು ನೀಡುವ ಸಲಹೆಗಳು ನಮ್ಮಲ್ಲಿ ಆತ್ಮವಿಶ್ವಾಸ ತುಂಬುತ್ತವೆ. ಆ ಮಾತು ಎಷ್ಟೊಂದು ಮಹತ್ವ ಎಂಬುದನ್ನು ಹಿಂದಿನವಾರ ಓದಿದಿರಿ. ಕ್ಯಾನ್ಸರ್‌ ಜೊತೆ 2017ರ ಆರಂಭ ಹೇಗಿತ್ತು ಎಂಬುದನ್ನು ಓದಿ.

****

ನನ್ನ ಕ್ಯಾನ್ಸರ್‌ ಜರ್ನಿಯಲ್ಲಿ ಒಂದು ತಿಂಗಳು ಅದಾಗಲೇ ಕಳೆದು ಹೋಗಿತ್ತು. ಎಂಟು ಕಿಮೊ ಲಿಸ್ಟ್‌ನಲ್ಲಿ ಎರಡು ಮಾತ್ರ ಕಮ್ಮಿ ಆಗಿದ್ದವು. ಇನ್ನೂ ಆರು ಇಂಜೆಕ್ಷನ್‌ ಉಳಿದಿದ್ದವು. ಕ್ಯಾನ್ಸರ್‌ ಟ್ರೀಟ್‌ಮೆಂಟ್ ಫಟಾಫಟ್‌ ಅಂತ ಮುಗಿಯೋ ಜಾಯಮಾನದ್ದಲ್ಲ. ಅದೊಂದು ತಪಸ್ಸು. ಸಂಯಮ ಮತ್ತು ತಾಳ್ಮೆಯ ಸಮ್ಮಿಳಿತದ ತಪಸ್ಸು. ಕ್ಯಾನ್ಸರ್‌ ವಿರುದ್ಧದ ಹೋರಾಟದಲ್ಲಿ ಮನಸ್ಸಿನ ಸ್ಥಿರತೆಯನ್ನು ಕಾಪಿಟ್ಟುಕೊಳ್ಳಬೇಕು. ಕ್ಯಾನ್ಸರ್‌ ಎಂಬ ಯುದ್ಧಭೂಮಿಯಲ್ಲಿ ಮುಂದಿನ ಹೆಜ್ಜೆಯಿಡುವೆ. ಆ ಗೆಲುವು ಕೂಡ ನನ್ನದೇ ಎಂಬ ಆತ್ಮವಿಶ್ವಾಸವಿದ್ದಲ್ಲಿ ಖಂಡಿತಾ ಗೆಲುವು ನಮ್ಮದೇ ಆಗಲಿದೆ.

2017, ಜನವರಿ 1, ಹೊಸ ವರ್ಷ ಹರುಷದಾಯಕವಾಗಿರಲಿ ಅಂಥ ಮನ ಶುಭಹಾರೈಸಿತು. ಮನಸ್ಸು ಪ್ರಫುಲ್ಲಗೊಂಡಿತ್ತು. ನಾಲಿಗೆಗೆ ರುಚಿ ಬಂದು, ಫಿಶ್‌ ಫ್ರೈ ಬೇಡುತ್ತಿದೆ ಎಂದೆನಿಸಿತು. ಡಾಕ್ಟರ್‌ ನೋಡಿದ್ರೆ, ನಾನ್‌ವೆಜ್‌ ತಿನ್ನಕೂಡದು ಅಂತ ಆರಂಭದಲ್ಲೇ ನಿರ್ಬಂಧ ಹೇರಿದ್ದರು. ಆದ್ರೂ ಈ ಮನಸ್ಸು ಕೇಳಬೇಕಲ್ಲ. ಅಂಜಿಕೆ, ಹಿಂಜರಿಕೆಯಿಂದಲೇ ಒಂದೇ ಒಂದು ಫಿಶ್‌ ಫ್ರೈ ತಿಂದೆ. ತೊಂದರೆ ಏನಾದ್ರು ಆದ್ರೆ ಅದನ್ನ ಮುಟ್ಟದಿದ್ದರಾಯಿತು ಅಂತ ಮನಸ್ಸಿನಲ್ಲೇ ಅಂದೊಂಡ್ಕೆ. ಅಬ್ಬಾ ಏನೂ ತೊಂದರೆ ಆಗಲಿಲ್ಲ. ಜೈ... ಫಿಶ್‌ ತಿನ್ನೋಕೆ ನೋ ಪ್ರಾಬ್ಲಮ್‌ ಅಂತ ಮನಸ್ಸು ಒಮ್ಮೆ ಕುಣಿದುಕುಪ್ಪಳಿಸಿತು. ಜೊತೆಗೆ ಇರಲು ಬಂದಿದ್ದ ಅಜ್ಜಿ (ಅಬಾ) ಮನೆಗೆ (ಕಾನಸೂರಿಗೆ) ಹೋದರು. ಬಿಟ್ಟುಬಿಡದೇ ನನ್ನ ಕಾಡುತ್ತಿದ್ದ ತುರಿಕೆಗೂ ಬಹುಶಃ ಬೇಜಾರು ಬಂದಿತ್ತೇನೋ. ನಾನು ಮಧ್ಯರಾತ್ರಿಯಲ್ಲೂ ತುರಿಸಿಕೊಳ್ಳುವುದು ಅದಕ್ಕೂ ಬೇಸರ ತರಿಸಿರಬಹುದೇನೋ. ಅಂದು ಅದು ರಜೆ ಪಡೆದಿತ್ತು. ಮಾರನೇ ದಿನ ಇನ್ನೂ ಆರಾಮವೆನಿಸಿತು. ತುರಿಕೆ ಇಲ್ಲದಿದ್ದರಿಂದ ಮನಸ್ಸು ಪ್ರಶಾಂತವಾಗಿತ್ತು. ತಲೆಯಲ್ಲಿ ಅಲ್ಲೊಂದು ಇಲ್ಲೊಂದು ಉಳಿದುಕೊಂಡಿದ್ದ ಕೂದಲು ತಾನು ಉದುರಲ್ಲೊಲ್ಲೆ ಎಂದು ಪಟ್ಟು ಹಿಡಿದಂತಿತ್ತು.

ನನ್ನ ಬೋಳು ತಲೆ ನೋಡಿದ ಮಗ ದಿಗಂತನಿಗೆ ಏನು ಅನ್ನಿಸಿತೋ ಏನೋ...‘ಮಮ್ಮಿ ಇಂದುಲೇಖಾ ಭ್ರಂಗಾ ಆಯಿಲ್‌ ಹಾಕ್ಕೊ, ಕೂದಲು ಬರ್ತದೆ. ನೋಡು, ಎಷ್ಟು ಬೇಗ ಉದ್ದ ಕೂದಲು ಬರ್ತದೆ’ ಅಂತಾ ಒಂದೇ ಸವನೆ ವರಾತ ತೆಗೆದಿದ್ದ. ಪಾಪ, ಐದೂವರೆ ವರ್ಷದ ಅವನಿಗೆ ಈ ಕಿಮೊ, ಅದರ ಸೈಡ್‌ ಎಫೆಕ್ಟ್‌ ಎಲ್ಲ ಹೇಗೆ ಗೊತ್ತಾಗಬೇಕು ಹೇಳಿ. ‘ಆಯ್ತು ಮಾರಾಯಾ’ ಎಂದು ಅವನ ಒತ್ತಾಯಕ್ಕೆ, ಅವನ ಸಮಾಧಾನಕ್ಕೆ ಇಂದುಲೇಖಾ ಭ್ರಂಗಾ ಆಯಿಲ್‌ ತರಿಸಿಕೊಂಡೆ. ಒಂದೆರಡು ಹನಿ ಬಿಟ್ಟು ಬೋಳು ತಲೆಯನ್ನು ಸವರಿಕೊಂಡೆ. ಬಾಲ್ಡಿ ತಲೆಗೆ ಇನ್ನೆಷ್ಟು ಬೇಕು ಹೇಳಿ. ಬೋಳು ತಲೆಯವರ ಗೋಳು ಏನೆಂಬುದು ಅವತ್ತು ಮನವರಿಕೆ ಆಯ್ತು. ನನ್ನದಾದರೂ ತಾತ್ಕಾಲಿಕ. ಕಿಮೊ ಎಲ್ಲ ಮುಗಿದ ಮೇಲೆ ಮತ್ತೆ ಬರಲಿದೆ ಎಂಬ ಭರವಸೆ ಇದೆ. ಆದರೆ ತಲೆಯಲ್ಲಿ ಕೂದಲೇ ಇರದಿದ್ದವರ ಮನಃಸ್ಥಿತಿ ಹೇಗಿರಬೇಡ. ಬಾಲ್ಡಿ ತಲೆಯವರಿಗೆಲ್ಲ ಬೋಳತಲೆ ಅಂತ ಕೀಚಾಯಿಸ್ತಿದ್ದ ಮಗನಿಗೆ ಹೇಳಿದೆ, ‘ನೋಡು ಮಗಾ, ಬೇರೆಯವರಿಗೆ ನೀನು ಬೋಳತಲೆ ಅಂದಿದ್ದಕ್ಕೆ ನಿನ್ನ ಮಮ್ಮಿಗೂ ಆಯ್ತು. ಇನ್ಯಾವಾಗೂ ಬೇರೆಯವರಿಗೆ ಹೀಗೆಲ್ಲ ಹೇಳಬಾರದು’ ಎಂದು ಬುದ್ಧಿ ಹೇಳಿದೆ. ಆಯ್ತು ಮಮ್ಮಿ ಅಂದ.

ಅವತ್ತು ಜ.3; ಶ್ರೀಧರಜೀ (ಶ್ರೀಧರ ನಾಡಿಗೇರ) ಮನೆಗೆ ಬಂದಿದ್ರು. ನಾನು ಕ್ಯಾನ್ಸರ್‌ ಟ್ರೀಟ್‌ಮೆಂಟ್‌ ಜೊತೆಜೊತೆಗೆ ಗಾಯತ್ರಿ ಮುದ್ರೆ, ಧ್ಯಾನ ಮಾಡ್ತಿರೋದು, ಅದರಿಂದ ನಾನು ಕಂಡುಕೊಂಡ ಲಾಭವನ್ನು ಕೇಳಿ ಖುಷಿಪಟ್ಟರು. ಜ.5, ಅವತ್ತು ದಿಗಂತನ ಸ್ಕೂಲ್‌ನಲ್ಲಿ ಶಾಲಾ ವಾರ್ಷಿಕೋತ್ಸವ ಬೇರೆ ಇತ್ತು. ನಾನು ಹೋಗಿರಲಿಲ್ಲ. ಅವನ ಡಾನ್ಸ್‌ ಇತ್ತು. ‘ಮಮ್ಮೀ... ನೀನು ಬಾ’ ಎಂದು ಗೋಗರೆದ. ‘ಈ ವರ್ಷ ಮಮ್ಮಿ ಬರಕಾಗಲ್ಲಪ್ಪ. ಮುಂದಿನ ವರ್ಷದಿಂದ ನಾನೇ ಬರ್ತೀನಿ ಕಣೋ. ಈ ಬಾರಿ ಪಪ್ಪನ ಜೊತೆ ಹೋಗಿ ಬಾರೊ’ ಅಂದೆ. ಪಪ್ಪನ ಜೊತೆ ಹೋಗಿ ಬಂದವನೇ ಮತ್ತೆ ‘ಮಮ್ಮಿ ನೀನು ಡಾಕ್ಟರ್‌ ಹತ್ರ ಪರ್ಮಿಷನ್‌ ತಗೊಂಡು ಬರಬೇಕಿತ್ತು’ ಅಂದಾ. ಯಾಕೋ ಅಂತ ಕೇಳಿದ್ದಕ್ಕೆ, ‘ನನ್ನ ಫ್ರೆಂಡ್ಸ್‌ ಎಲ್ಲ ಅವರ ಅಪ್ಪ, ಅಮ್ಮನ ಜೊತಿ ಬಂದಿದ್ರು. ನೀನೇ ಬಂದಿಲ್ಲ’ ಅಂದ. ಕಿಮೊ ಕಾರಣಕ್ಕೆ ನಾನು ಹಾಗೆಲ್ಲ ಜನಸೇರೋ ಜಾಗಕ್ಕೆ ಹೋಗುವಂತಿರಲಿಲ್ಲ. ಇನ್‌ಫೆಕ್ಷನ್‌ ಭಯ. ಮಗನ ಮಾತು ನನ್ನ ಮನಸ್ಸಿಗೆ ನಾಟಿತು. ಆದರೆ ಹೇಳಬೇಕೆಂಬ ಉತ್ತರ ಗಂಟಲಲ್ಲೇ ಕರಗಿತು. ಮನತುಂಬಿ ಬಂದು ಭಾರವೆನಿಸಿತು. ಮನೆಯಲ್ಲೇ ಬಂಧಿಯಾದಂತೆನಿಸಿತು. ಹೇಳಿಕೊಳ್ಳಲಾಗದ ನೀರವತೆ ಮನವನ್ನೆಲ್ಲ ಆವರಿಸಿತು.

ವಾರ್ಷಿಕೋತ್ಸವ ಮುಗಿಸಿಕೊಂಡು ಬಂದ ದಿಗುಗೆ ಜ್ವರ, ನೆಗಡಿಯೂ ಇತ್ತು. ನೆಗಡಿ, ಜ್ವರ ಇದ್ದವರಿಂದ ದೂರವಿರಿ ಎಂದು ಡಾಕ್ಟರ್‌ ಆರಂಭದಲ್ಲೇ ಸೂಚನೆಯಲ್ಲಿ ತಿಳಿಸಿದ್ದರು. ಆದರೆ ಮಗನಿಗೆ ಜ್ವರ ಕಾಡಿದಾಗ ತಾಯಿ ಮನಸ್ಸು ಕೇಳಬೇಕಲ್ಲ. ದಿನಾ ಅಜ್ಜಿ ಜೊತೆ ಮಲಗೋನು ಇವತ್ತು ನನ್ನ ಮಗ್ಗುಲಲ್ಲೇ ಮಲಗಿದ. ನನ್ನ ಹತ್ತಿರ ಮಲಗಬೇಡ ದಿಗು... ಅಂತ ಹೇಳೋಕೆ ನನ್ನ ಮನಸ್ಸು ಒಪ್ಪಲಿಲ್ಲ. ನನ್ನ ಪಕ್ಕದಲ್ಲೇ ದಿಗು ನಿದ್ದೆಗೆ ಜಾರಿದ್ದ. ಮಕ್ಕಳು ಚಿಕ್ಕವರಿದ್ದಾಗ ಅಮ್ಮಂದಿರಿಗೆ ಯಾವ ಕಾಯಿಲೆಯು ಕಾಡಬಾರದಪ್ಪ ಎಂದೆನಿಸಿತು.

ದಿನಗಳು ಒಂದೊಂದಾಗಿ ಉರುಳುತ್ತಿದ್ದವು... ಆದರೆ ಏಕೋ ಭೂಮಿ ನಿಧಾನವಾಗಿ ತಿರುಗುತ್ತಿದೆಯೆನೋ ಅನ್ನಿಸಿತು. ಮನೆಯಲ್ಲೇ ಬಂಧಿಯಾಗಿದ್ದಕ್ಕೋ ಏನೋ ಸಮಯ ಜೋರಾಗಿ ಓಡುತ್ತಲೇ ಇರಲಿಲ್ಲ. ಯಾವುದಾದ್ರೂ ಪುಸ್ತಕ ಓದೋಣ ಅಂತ ಅಲ್ಮೆರಾ ಓಪನ್‌ ಮಾಡಿದೆ. ಕೆಲವು ಓದಿದ್ದು, ಇನ್ನೂ ಕೆಲವು ಓದಲು ಬಾಕಿ ಇದ್ದವು. ಅಲ್ಲಿ ಕಣ್ಣಿಗೆ ಬಿದ್ದಿದ್ದು ನನ್ನ ಹಳೇ ಫೋಟೊ ಆಲ್ಬಮ್‌ಗಳು. ಡಿಜಿಟಲ್‌ಗೂ ಮೊದಲು ನನ್ನಲ್ಲಿದ್ದ ರೀಲ್‌ ಕ್ಯಾಮೆರಾದಲ್ಲಿ ಹೊಡೆದು, ತೊಳೆಸಿ, ಪ್ರಿಂಟ್‌ ಹಾಕಿದ್ದ ಫೋಟೊಗಳು ಆಲ್ಬಮ್‌ಗಳಲ್ಲಿ ಸೇರಿಕೊಂಡಿದ್ದವು. ನನ್ನ ಬಾಲ್ಯ, ನಾನು ಹೋಗಿದ್ದ ಕಾನಸೂರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭದ ಫೋಟೊ, ಮುಂದೆ ಅಲ್ಲಿಯ ಕಾಳಿಕಾ ಭವಾನಿ ಸೆಕೆಂಡರಿ ಸ್ಕೂಲ್‌ನಲ್ಲಿ ಓದುವಾಗ ಬಿಜಾಪುರ (ಈಗ ವಿಜಯಪುರ), ಐಹೊಳೆ, ಪಟ್ಟದಕಲ್ಲು ಟೂರ್‌ಗೆ ಹೋಗಿದ್ದಾಗ ತೆಗೆದ ಫೋಟೊಗಳು, ಹೈಸ್ಕೂಲ್‌ನ ಸಾಂಸ್ಕೃತಿಕ ಕಾರ್ಯಕ್ರಮದ ಫೋಟೊಗಳು, ಅದರಲ್ಲೂ ನಮ್ಮ ಹೈಸ್ಕೂಲ್‌ ಮೇಸ್ಟ್ರು ಆರ್‌.ಜಿ. ಹೆಗಡೆ ಸರ್‌ (ಕವಿ ರಾಜೀವ ಅಜ್ಜೀಬಳ) ಬರೆದು, ಅದನ್ನು ನೃತ್ಯರೂಪಕವಾಗಿಸಿದ ‘ಬಂತಿದೋ ಮುಂಗಾರು ಮಳೆ..ತಂತು ಇಳೆಗೆ ಹೊಸಕಳೆ...’ ಹಾಡಿಗೆ ಹೆಜ್ಜೆ ಹಾಕಿದ ಫೋಟೊಗಳು, ಎಸ್‌ಎಸ್‌ಎಲ್‌ಸಿ ಬೀಳ್ಕೊಡುಗೆಯ ಫೋಟೊ, ಫ್ಯಾಮಿಲಿ ಫೋಟೊ... ಹೀಗೆ ಒಂದೊಂದು ಫೋಟೊವೂ ನನ್ನನ್ನು ಫ್ಲ್ಯಾಷ್‌ ಬ್ಯಾಕ್‌ಗೆ ಕರೆದೊಯ್ಯಿತು. ರಿಸೈಕ್ಲಿಂಗ್‌ ಬಿನ್‌ ಸೇರಿಕೊಂಡ ಡಾಕ್ಯುಮೆಂಟ್‌ನಿಂದ ಹೊರ ತೆಗೆದಂತೆ ಒಂದೊಂದು ಫೋಟೊ ಒಂದೊಂದೇ ನೆನಪಿನ ಸಂಚಿಯನ್ನು ಬಿಚ್ಚಿತು. ಜೊತೆಗಿದ್ದ ಮಗನಿಗೆ ಅದನ್ನೆಲ್ಲ ಹೇಳುತ್ತ ಹೋದೆ. ಮಗನಿಗೂ ಥ್ರಿಲ್‌, ನನ್ನ ಮನಸ್ಸಿಗೂ ಒಂಥರಾ ಮುದ ನೀಡಿತು. ಒಂದೊಂದೇ ಫೋಟೊವನ್ನು ನನ್ನ ಮೊಬೈಲ್‌ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿ, ಎಡಿಟ್‌ ಮಾಡಿ ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದೆ.

ಜ.8ರಂದು ಶಿರಸಿಯಿಂದ ನನ್ನ ಸಹೋದ್ಯೋಗಿ ಸ್ನೇಹಿತೆ ಸಂಧ್ಯಾ ಹೆಗಡೆ ಆಲ್ಮನೆ ನನ್ನ ನೋಡಿ, ಆರೋಗ್ಯ ವಿಚಾರಿಸಲು ಬಂದಿದ್ದಳು. ಅವಳ ಜೊತೆ ಒಂದಷ್ಟು ಹರಟಿದೆ. ಅವಳು ಶಿರಸಿಯಿಂದ ಬರುವಾಗ ಏನಂದು ಕೊಂಡು ಬಂದಿದ್ದಳೋ ಏನೋ. ನನ್ನ ಜೊತೆ ಮಾತಾಡ್ತಿದ್ದಂತೆ ಅವಳಿಗೆ ಒಳಗೊಳಗೇ ಅಚ್ಚರಿ ಮೂಡಿತೆಂದು ಅವಳೇ ಹೇಳಿದಳು. ‘ಇಂಥ ಪರಿಸ್ಥಿತಿಯಲ್ಲೂ ಎಷ್ಟು ಧೈರ್ಯ ಮಾಡ್ಕಂಡಿದ್ಯಲೆ. ನಾನಾಗಿದ್ರೆ ಸತ್ತೆ ಹೋಗ್ತಿದ್ನೆನೋ. ಥಂಡಿ–ಜ್ವರ ಬಂದ್ರೂ ನಮ್ಗೆ ತಡ್ಕೊಳ್ಳೊಕಾಗಲ್ಲ. ಅಂಥದ್ರಲ್ಲಿ ನೀನು ಅಡ್ಡಿಲ್ವೆ’ ಅಂತ ನನ್ನ ಗಟ್ಟಿತನವನ್ನು ಹೊಗಳಿದ್ದೇ ಹೊಗಳಿದ್ದು. ಕ್ಯಾನ್ಸರ್ ಬಗ್ಗೆ, ಔಷಧಿ ಬಗ್ಗೆ ಅವಳಿಗಿದ್ದ ತಿಳಿವಳಿಕೆಯನ್ನು ನನ್ನ ಜೊತೆ ಹಂಚಿಕಂಡಳು. ಅವಳ ಜೊತೆ ಮಾತನಾಡಿ, ಒಂದಷ್ಟು ನಕ್ಕು ನನಗೂ ಮನಸ್ಸಿಗಷ್ಟು ನಿರಾಳವೆನಿಸಿತು. ಅವಳು ಹೊರಟು ಹೋದ ಮೇಲೆ ಮತ್ತೆ ಸಮಯದ ಮುಳ್ಳು ವೇಗ ತಗ್ಗಿಸಿಕೊಂಡಂತೆನಿಸಿತು.

ಆದರೂ ಇತ್ತಲ್ಲ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌. ಅಲ್ಲಿವರೆಗೂ ನನ್ನ ಹೆಚ್ಚಿನ ಸ್ನೇಹಿತರು, ಸಹೋದ್ಯೋಗಿಗಳೆಲ್ಲರಿಗೂ ನನಗೆ ಕ್ಯಾನ್ಸರ್ ಆದ ಸಂಗತಿ ಗೊತ್ತಿರಲಿಲ್ಲ. ಕ್ಯಾನ್ಸರ್‌ ಎಂದು ತಿಳಿದಾಗ ಅದರಿಂದ ಧೈರ್ಯಗೆಡದೆ, ಆತ್ಮವಿಶ್ವಾಸದಿಂದ ನನಗೆ ನಾನೇ ಹೇಳಿಕೊಂಡ ಸಾಂತ್ವನದ ಸ್ವಗತವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದೆ. ಅಲ್ಲಿ ನಾನು ನೇರವಾಗಿ ಕ್ಯಾನ್ಸರ್‌ ಅನ್ನೋದನ್ನು ಬರೆಯದೆ, ಪರೋಕ್ಷವಾಗಿ ಬರೆದುಕೊಂಡಿದ್ದೆ. ಅದನ್ನು ಬೆಂಬಲಿಸಿ ನನ್ನ ಸ್ನೇಹಿತ ವಲಯ ಕಾಮೆಂಟಿಸಿತ್ತು. ಗೊತ್ತಾದವರು ಕೆಲವರು ವಾಟ್ಸ್‌ಆ್ಯಪ್‌ನಲ್ಲಿ ಮಾತನಾಡಿದರು. ಕೆಲವರು ಫೋನ್‌ ಮಾಡಿ ಆರೋಗ್ಯ ವಿಚಾರಿಸಿದರು. ಕೆಲವರು ಮನೆಗೇ ಬಂದು ಧೈರ್ಯದ ಮಾತುಗಳನ್ನು ಆಡಿಹೋದರು. ಹೀಗೆ ನನ್ನ ಕಚೇರಿಯ ಸಹೋದ್ಯೋಗಿಗಳು, ಸ್ನೇಹಿತರು, ಆಪ್ತವಲಯದವರು, ಸಂಬಂಧಿಕರು ಹೇಳಿದ ಒಂದೊಂದು ಮಾತೂ ಒಂದೊಂದು ಕ್ಯಾಪ್ಸೂಲ್‌ ಆಗಿ ನನ್ನ ಆತ್ಮವಿಶ್ವಾಸವನ್ನು ವೃದ್ಧಿಗೊಳಿಸಿದವು. ನಾನು ಕಿಮೊ ಇಂಜೆಕ್ಷನ್‌ನಿಂದ ನರಳಿ ನರಳಿ, ಡಿಪ್ರೆಷನ್‌ಗೆ ಹೋಗಿರುವ ಸ್ಥಿತಿಯಲ್ಲಿರಬಹುದೆಂದು ತಿಳಿದುಕೊಂಡವರೂ ಇದ್ದರು. ಆದರೆ ನನ್ನ ಜೊತೆ ಎದುರುಕೂತು ಮಾತನಾಡಿದವರು, ಫೋನ್‌ನಲ್ಲಿ ಮಾತಾಡಿದವರೆಲ್ಲ ಅಚ್ಚರಿ ವ್ಯಕ್ತಪಡಿಸುತ್ತಿದ್ದರು. ‘ನಿನ್ನ ಗಟ್ಟಿತನಕ್ಕೆ ಕ್ಯಾನ್ಸರೇ ಹೆದರಿ ಓಡಿ ಹೋಗುತ್ತೆ ನೋಡು..’ ಅಂತಾ ಹೇಳಿದಾಗ ಮನದೊಳಗೆ ಒಂಥರಾ ಹಮ್ಮು, ಬಿಗುಮಾನ.

ಮನದಲ್ಲಿ ಕ್ಯಾನ್ಸರ್‌ ಬಗ್ಗೆ ಯೋಚನೆ, ಚಿಂತೆಯನ್ನು ದೂರವಿಟ್ಟರೆ, ನನಗೆ ಕ್ಯಾನ್ಸರ್‌ ಇಲ್ಲ ಎಂಬ ಧೋರಣೆ ತಾಳಿದರೆ ಖಂಡಿತವಾಗಿ ಅರ್ಧವೇನು; ಮುಕ್ಕಾಲು ಭಾಗ ಕಾಯಿಲೆಯನ್ನು ಗೆದ್ದಂತೆ. ಅದಕ್ಕಾಗಿ ನಾನು ರೂಢಿಸಿಕೊಂಡ ಗಾಯತ್ರಿ ಮುದ್ರೆ, ಧ್ಯಾನ, ಪ್ರಾಣಾಯಾಮ ನನ್ನ ಸಹಾಯಕ್ಕೆ ಬಂದಿದ್ದವು. ನನ್ನ ಮನಸ್ಸನ್ನು ಗಟ್ಟಿಗೊಳಿಸಿದ್ದವು. ಕ್ಯಾನ್ಸರ್‌ನ್ನು ಪಾಸಿಟಿವ್ ಆಗಿ ಸ್ವೀಕರಿಸುವಂತೆ ಮಾಡಿದ್ದವು. ನನ್ನೊಳಗಿನ ಆತ್ಮವಿಶ್ವಾಸ ಹೆಚ್ಚಿಸಿ, ಎಲ್ಲರೂ ನನ್ನ ದಿಟ್ಟತನ ಮೆಚ್ಚುವಂತೆ ಮಾಡಿದ್ದವು. ಆದರೂ ಪೂರ್ತಿ ದಿನ ಅದನ್ನೇ ಎಷ್ಟು ಹೊತ್ತು ಅಂತ ಮಾಡೋದು? ಸಮಯ ಕಳೆಯಲು ಪುಸ್ತಕ ಓದು ಉತ್ತಮ ಮಾರ್ಗವೆನಿಸಿದರೂ ಹೆಚ್ಚು ಹೊತ್ತು ಓದುತ್ತಲೇ ನಿದ್ದೆಯ ಮಂಪರು ಆವರಿಸಿದಂಥ ಅನುಭವ. ಹಗಲು ನಿದ್ದೆ ಮಾಡಿದರೆ ರಾತ್ರಿ ನಿದ್ದೆ ಬರದಿರಬಹುದೆಂಬ ಆತಂಕ. ಇಂಥ ಪರಿಸ್ಥಿತಿಯಲ್ಲಿ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗಳು ನನ್ನ ನಿತ್ಯದ ಸಂಗಾತಿಗಳೆನಿಸಿದವು. ಎಷ್ಟೆಂದರೆ ನನ್ನೊಳಗಿನ ಕ್ಯಾನ್ಸರನ್ನೇ ಮರೆಸುವಷ್ಟು. ಕಿಮೊ ಇಂಜೆಕ್ಷನ್‌ ತಗೊಂಡು ಸುಧಾರಿಸಿಕೊಳ್ಳಲು ಒಂದು ವಾರವೇ ಬೇಕು. ಆ ಅವಧಿಯಲ್ಲಿ ನಮ್ಮ ಮೇಲೆ ನಾವು ನಿಯಂತ್ರಣ ಸಾಧಿಸದಿದ್ದಲ್ಲಿ ಅಕ್ಷರಶಃ ಖಿನ್ನತೆಗೆ ಜಾರುತ್ತೇವೆ. ಮನಸ್ಸಿನೊಳಗೆ ಬೇಡವಾದದ್ದೇ ಗಿರಕಿ ಹೊಡೆಯುತ್ತಿರುತ್ತವೆ. ಆಗ ನಮ್ಮ ಮನಸ್ಸಿನ ಹಾದಿ ತಪ್ಪಿಸಿ, ಬೇರೆಡೆಗೆ ಡೈವರ್ಟ್‌ ಮಾಡಬೇಕು. ಅಂಥ ಒಂದು ಸಾಧ್ಯತೆಯನ್ನು ನಾನು ವಾಟ್ಸ್‌ಆ್ಯಪ್‌ ಮತ್ತು ಫೇಸ್‌ಬುಕ್‌ ಬಳಕೆ ಮೂಲಕ ಕಂಡುಕೊಂಡಿದ್ದೆ.

ಜ.2; ನನ್ನ ತಲೆ ಮೇಲೆ 1% ಅಷ್ಟು ಕೂದಲು ಉಳಿದುಕೊಂಡಿದ್ದವು. ಅದನ್ನು ಹಾಗೇ ಬಿಟ್ಟಿದ್ದೆ. ಹರಡಿಕೊಂಡಿರುತ್ತಲ್ಲ ಅಂತ ರಬ್ಬರ್‌ ಬ್ಯಾಂಡ್‌ ಸುತ್ತಿಡುತ್ತಿದ್ದೆ. ಆದರೆ ನನ್ನ ಚೋಟುದ್ದ ಮಗ ಏನ್‌ಮಾಡ್ತಿದ್ದ ಗೊತ್ತಾ, ಜುಟ್ಟನ್ನು ಎಳೆದು ಭಟ್ಟನ ಜುಟ್ಟು ಅಂತ ಮಜಾ ತಗೋತ್ತಿದ್ದ. ರಬ್ಬರ್‌ಬ್ಯಾಂಡ್‌ ಕಿತ್ತಾಕುತ್ತಿದ್ದ. ಹೀಗೆ ಗೋಳು ಹೊಯ್ಕೊತಿದ್ದರೆ ನನಗೆ ಬೇಜಾರಾಗುತ್ತಿರಲಿಲ್ಲ. ಬದಲಿಗೆ ಖುಷಿ ಪಡ್ತಿದ್ದೆ. ಏಕೆಂದರೆ ಅವನು ಖುಷಿಯಾಗಿದ್ದರೆ ನನಗೆ ಅಷ್ಟೇ ಸಾಕು. ಅಂದ ಹಾಗೆ ಇವತ್ತು ನನ್ನ ಪಿಯುಸಿ ಫ್ರೆಂಡ್‌ ದೀಪಾ ರವಿಶಂಕರ್‌ ವಾಟ್ಸ್‌ಆ್ಯಪ್‌ನಲ್ಲಿ ಒಂದಷ್ಟು ಹೊತ್ತು ಚಾಟ್ ಮಾಡಿದಳು. ಪಿಯುಸಿ ದಿನಗಳ ಮೆಲುಕು ಹಾಕಿದೆವು. ನನ್ನ ಆರೋಗ್ಯದ ಬಗ್ಗೆ ಅವಳು ತೋರಿದ ಕಾಳಜಿ, ಸಲಹೆ ಮನಸ್ಸಿಗೆ ಖುಷಿ ಕೊಟ್ಟವು. ಒಟ್ನಲ್ಲಿ ನಾನು ಮಾನಸಿಕವಾಗಿ ಎಂಗೇಜ್‌ ಇರಲು ಸಾಮಾಜಿಕ ಜಾಲತಾಣಗಳೂ ಸಾಥ್ ಕೊಟ್ಟವು.

(ಮುಂದಿನ ವಾರ: ಕಿಮೊ ಹಾದಿಯಲ್ಲಿ ಮುಗಿದ ಅರ್ಧ ಪಯಣ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT