ಬುಧವಾರ, ಡಿಸೆಂಬರ್ 2, 2020
25 °C

PV Web Exclusive| ಮಕ್ಕಳ ಆರೋಗ್ಯ ಮನೆ ಅಡುಗೆಯಲ್ಲಿ

ಸುಧಾ ಹೆಗಡೆ Updated:

ಅಕ್ಷರ ಗಾತ್ರ : | |

ಚಿಂತನ್‌ಗೆ ಕೇವಲ 12 ವರ್ಷ. ಆದರೆ ಬರೋಬರಿ 62 ಕೆಜಿ ತೂಗುತ್ತಿದ್ದಾನೆ. ಹೊಟ್ಟೆ ಮುಂದೆ ಬಂದಿದ್ದು, 10 ನಿಮಿಷ ನಡೆದರೂ ಸುಸ್ತು ಎನ್ನುತ್ತಾನೆ. ಅವನ ವಯಸ್ಸಿಗೆ ಈ ತೂಕ ವಿಪರೀತ. ಹೇಗಾದರೂ ಇಳಿಸಿ ಎಂದು ಶಾಲೆಯಿಂದ ಆಗಾಗ ಎಚ್ಚರಿಕೆ ಬೇರೆ. ಮಗ ಕೇಳಿದಾಗಲೆಲ್ಲ ಚಾಕೊಲೇಟ್‌, ಚಿಪ್ಸ್‌, ಪಿಜ್ಜಾ, ಕೋಲ್ಡ್‌ ಡ್ರಿಂಕ್ಸ್‌.. ಎಂದೆಲ್ಲ ಜಂಕ್‌ಫುಡ್‌ ಕೊಡಿಸುತ್ತಿದ್ದ ಅವನ ಅಮ್ಮನಿಗೆ ಈಗ ಚಿಂತೆ ಹತ್ತಿಕೊಂಡುಬಿಟ್ಟಿದೆ, ಹೇಗಪ್ಪಾ ಅವನ ತೂಕ ಇಳಿಸುವುದು ಎಂದು.

ಇದು ಚಿಂತನ್‌ ಅಮ್ಮನ ಚಿಂತೆ ಮಾತ್ರವಲ್ಲ, ನಗರಗಳಲ್ಲಿ, ಸಣ್ಣ ಪಟ್ಟಣಗಳಲ್ಲಿ ಕೂಡ ಚಿಕ್ಕ ವಯಸ್ಸಿನಲ್ಲೆ ಬೊಜ್ಜು ಬರಿಸಿಕೊಂಡು, ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳಿಂದ ನರಳುವ ಮಕ್ಕಳ ಸಂಖ್ಯೆ ಒಂದೇ ಸಮನೆ ಏರುತ್ತಿದೆ. ಈ 15– 20 ವರ್ಷಗಳಲ್ಲಿ ಜೀವನಶೈಲಿಯಲ್ಲಿ ಅಗಾಧ ಬದಲಾವಣೆಗಳಾಗಿವೆ. ಪೋಷಕರ ಆದಾಯ ಹೆಚ್ಚಿರುವುದರಿಂದ ಮಕ್ಕಳಿಗೆ ತಿನ್ನಿಸುವ ಸಾಮರ್ಥ್ಯ ಕೂಡ ಜಾಸ್ತಿಯಾಗಿದೆ. ಹಾಗಂತ ಟ್ರಾನ್ಸ್‌ಫ್ಯಾಟ್‌ ಇರುವ ಕರಿದ ತಿನಿಸುಗಳು, ಹೆಚ್ಚು ಸಕ್ಕರೆ ಇರುವ ಖಾದ್ಯ, ಪೇಯ, ಏರಿಯೇಟೆಡ್‌ ಡ್ರಿಂಕ್ಸ್‌ ಮೊದಲಾದವುಗಳನ್ನು ನೀಡುವುದು ಸರಿಯಲ್ಲ ಎಂಬುದು ತಜ್ಞರ ಅಭಿಮತ.

ಹಾಗಂತ ಇದಕ್ಕೇನೂ ನೀವು ಮತ್ತೆ ಮಾರುಕಟ್ಟೆಗೆ, ಸೂಪರ್‌ ಬಜಾರ್‌ಗೆ ತೆರಳಿ ಆಕರ್ಷಕ ಪ್ಯಾಕೆಟ್‌ಗಳಲ್ಲಿರುವ ಆಹಾರ ಸಾಮಗ್ರಿಗಳನ್ನು ಕೊಂಡು ತರಬೇಕಾದ ಅವಶ್ಯಕತೆಯಿಲ್ಲ. ನಿಮಗೆ ನಿಮ್ಮ ಪೋಷಕರು ಮನೆಯಲ್ಲಿ ಮಾಡಿಕೊಡುತ್ತಿದ್ದ ಊಟ, ತಿನಿಸುಗಳನ್ನು ನೆನಪಿಸಿಕೊಳ್ಳಿ. ಖಂಡಿತ ಒಂದಿಷ್ಟು ಟಿಪ್ಸ್‌ಗಳು ನಿಮಗೆ ದೊರೆಯುವುದರಲ್ಲಿ ಸಂಶಯವಿಲ್ಲ. ಅಂತಹ ಪದಾರ್ಥಗಳು ನಿಮ್ಮ ಅಡುಗೆಮನೆಯಲ್ಲೇ ಲಭ್ಯ ಇರಬಹುದು.

‘ಹಿಂದೆ ಪೋಷಕರು ಬೆಲ್ಲ, ಕೆಂಪು ಅಕ್ಕಿ, ಗೋಧಿಯನ್ನು ಗಿರಣಿಗೆ ಕೊಟ್ಟು ಮಾಡಿಸಿದ ಹಿಟ್ಟು, ಕಡಲೆಕಾಯಿ ಅಥವಾ ಕೊಬ್ಬರಿ ಎಣ್ಣೆ ಬಳಸುತ್ತಿದ್ದರು. ಈಗಲೂ ಇಂಥವೆಲ್ಲ ಲಭ್ಯ. ನಾವು ಮೊದಲು ಅದನ್ನು ಬಳಕೆ ಮಾಡಿ, ಮಕ್ಕಳಿಗೂ ರೂಢಿ ಮಾಡಿಸಬೇಕು’ ಎನ್ನುತ್ತಾರೆ ಆಯುರ್ವೇದ ತಜ್ಞೆ ಡಾ. ಸರಸ್ವತಿ ಭಟ್‌.

ಇತ್ತೀಚೆಗೆ ಮಾಧ್ಯಮಗಳ ಮೂಲಕ ಬಹುತೇಕ ಪೋಷಕರು ಈ ಅನಾರೋಗ್ಯಕರ ಆಹಾರ ಪದ್ಧತಿಯ ಬಗ್ಗೆ ತಿಳಿದುಕೊಂಡು ಮಕ್ಕಳಿಗೆ ಆರೋಗ್ಯಕರ ಆಹಾರ ನೀಡಲು ಯತ್ನಿಸುತ್ತಿರುವುದು ಆಶಾದಾಯಕ ಬೆಳವಣಿಗೆ. ಅಡುಗೆಯಲ್ಲಿ ಎಣ್ಣೆ, ಉಪ್ಪು, ಸಕ್ಕರೆ ಸೇರಿದಂತೆ ಇತರ ಪದಾರ್ಥಗಳನ್ನು ಬಳಸುವಾಗ ಎಚ್ಚರಿಕೆ ವಹಿಸುವ ಪರಿಪಾಟ ಆರಂಭವಾಗಿದೆ. ಸಂಪೂರ್ಣ ಹಾಗೂ ಸಮತೋಲಿತ ಆಹಾರದ ಬಗ್ಗೆ ಗಮನಹರಿಸುತ್ತಿದ್ದಾರೆ.

ಬಿಳಿ ಅಕ್ಕಿ ಬದಲು ಕೆಂಪು ಅಕ್ಕಿ

ಬಹುತೇಕರು ಊಟಕ್ಕೆ ನಿತ್ಯ ಬಳಸುವುದು ಅನ್ನವನ್ನು. ಆದರೆ ಮುಂಚೆ ಬಳಸುತ್ತಿದ್ದ ಕೆಂಪು ಅಕ್ಕಿಯ ಬದಲು ಪಾಲಿಶ್‌ ಮಾಡಿಸಿದ ಬಿಳಿ ಅಕ್ಕಿ ಎಲ್ಲರ ಅಡುಗೆಮನೆಯನ್ನು ಅಲಂಕರಿಸಿತ್ತು. ಈಗೀಗ ಅದರ ಬಗ್ಗೆ ತಿಳಿವಳಿಕೆ ಮೂಡುತ್ತಿದ್ದು, ಮತ್ತೆ ಪಾಲಿಶ್‌ ಕಡಿಮೆ ಇರುವ ಕೆಂಪು ಅಥವಾ ಕಂದು ಅಕ್ಕಿ ಬಳಕೆ ಆರಂಭವಾಗಿದ್ದು ಒಳ್ಳೆಯ ಬೆಳವಣಿಗೆ. ಹಾಗೆಯೇ ನವಣೆ, ಸಾಮೆ, ಊದಲು, ಬರಗು, ರಾಗಿ ಮೊದಲಾದ ಸಿರಿಧಾನ್ಯಗಳನ್ನು ಬಳಸಬಹುದು. ಹೆಚ್ಚು ಪೌಷ್ಟಿಕಾಂಶವುಳ್ಳ ಈ ಧಾನ್ಯದಲ್ಲಿ ನಾರನಾಂಶವೂ ಅಧಿಕವಾಗಿದ್ದು, ಕೊಬ್ಬಿನಾಂಶ ತೀರಾ ಕಡಿಮೆ. ಹಾಗೆಯೇ ಎರಡು ಕಪ್‌ ಅಕ್ಕಿಯಿಂದ ಮಾಡಿದ ಅನ್ನದ ಬದಲು ಒಂದು ಕಪ್‌ ಸಿರಿಧಾನ್ಯದ ಅನ್ನ ಸೇವಿಸಿದರೆ ಹೊಟ್ಟೆ ತುಂಬುತ್ತದೆ. ಇದೇ ಬೊಜ್ಜು ಕಡಿಮೆ ಮಾಡುವ ರಹಸ್ಯಗಳಲ್ಲೊಂದು.

ಕೇವಲ ಅನ್ನ ಮಾತ್ರವಲ್ಲ, ದೋಸೆ, ಇಡ್ಲಿ, ಉಪ್ಪಿಟ್ಟು ಮೊದಲಾದವುಗಳಿಗೂ ಇದನ್ನು ಬಳಸಬಹುದು. ಕೆಲವರು ಸಪ್ಪೆ ಎಂದು ಮೂಗು ಮುರಿಯುವವರು ಇರಬಹುದು. ಆದರೆ ತರಕಾರಿಗಳನ್ನು, ಈರುಳ್ಳಿ ಮೊದಲಾದವುಗಳನ್ನು ಜಾಸ್ತಿ ಬಳಸಿದರೆ ಇದರ ರುಚಿ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.

ಈಗೊಂದು 10– 15 ವರ್ಷಗಳ ಹಿಂದಿನ ಮಾತು. ಗೋಧಿ ಖರೀದಿಸಿ ಸ್ವಚ್ಛ ಮಾಡಿ ಅದನ್ನು ಗಿರಣಿಗೆ ಕೊಟ್ಟು ಹಿಟ್ಟು ಮಾಡಿಸಿ ಬಳಸುವ ರೂಢಿ ಇತ್ತು. ಅದರ ಮೇಲಿನ ಹೊಟ್ಟು ಹೆಚ್ಚು ಪೌಷ್ಟಿಕ. ನಾರಿನಾಂಶವೂ ಅದರಲ್ಲೇ ಉಳಿಯುತ್ತದೆ. ಹೆಚ್ಚು ಪ್ರೊಟೀನ್‌, ಕ್ಯಾಲ್ಸಿಯಂ ಇದರಲ್ಲಿದ್ದು, ಇಂತಹ ಹಿಟ್ಟಿನಿಂದ ಮಾಡಿದ ಚಪಾತಿ ಹೆಚ್ಚು ರುಚಿಕರ ಕೂಡ.

ಉಪ್ಪಿನ ಬಳಕೆ ಮಾಡುವಾಗ ಸಮುದ್ರದ ಉಪ್ಪು, ಸೈಂಧವ ಲವಣ ಮೊದಲಾದವುಗಳನ್ನು ಬಳಸಬಹುದು. ಇದರಿಂದ ದೇಹದಲ್ಲಿ ಸೋಡಿಯಂ ಅಂಶವನ್ನೂ ಕಾಪಾಡಿಕೊಳ್ಳಬಹುದು. ಸಂಸ್ಕರಿಸಿದ ಉಪ್ಪು ಬಳಸುವಾಗ ಎಚ್ಚರಿಕೆ ಇರಲಿ.

ಅಡುಗೆಯಲ್ಲಿ ಅರಿಸಿನ, ಜೀರಿಗೆ, ಕೊತ್ತಂಬರಿ, ದಾಲ್ಚಿನ್ನಿ, ಸೋಂಪು ಮೊದಲಾದವುಗಳನ್ನು ನಿತ್ಯ ಬಳಸಿ. ಇದರಲ್ಲಿ ಉರಿಯೂತ ತಡೆಯುವ ಆ್ಯಂಟಿ ಆಕ್ಸಿಡೆಂಟ್‌ಗಳು ಇರುತ್ತವಲ್ಲದೇ, ಸಾಮಾನ್ಯ ಆರೋಗ್ಯ ಕಾಪಾಡಿಕೊಳ್ಳುವ, ಬೊಜ್ಜು ಕಡಿಮೆ ಮಾಡುವ ಅಂಶಗಳೂ ಇವೆ. ಆದರೆ ದಾಲ್ಚಿನ್ನಿ, ಲವಂಗ, ಅರಿಸಿನದಂತಹ ಸಂಬಾರು ಪದಾರ್ಥ ಬಳಸುವಾಗ ಪ್ರಮಾಣದ ಕಡೆ ಲಕ್ಷ್ಯವಿರಲಿ.

ಇನ್ನು ಸಕ್ಕರೆ ಬದಲು ಬೆಲ್ಲದ ಬಳಕೆ ಶುರು ಮಾಡಬಹುದು. ರಿಫೈನ್ಡ್‌ ಸಕ್ಕರೆ ಬಳಕೆಯಿಂದ ಏನೇನು ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆ ಎಂಬುದನ್ನು ಮತ್ತೆ ವಿವರಿಸಬೇಕಾಗಿಲ್ಲ. ಹೀಗಾಗಿ ಕ್ಯಾಲ್ಸಿಯಂ, ಕಬ್ಬಿಣದ ಅಂಶಗಳಿರುವ ಬೆಲ್ಲ ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿದ್ದು, ಆರೋಗ್ಯಕರ ಕೂಡ. ಆದರೂ ಬಳಕೆ ಮಿತವಾಗಿರಲಿ.

ಖಾದ್ಯ ತೈಲ

ಖಾದ್ಯ ತೈಲದ ವಿಷಯಕ್ಕೆ ಬಂದರೆ ಡಾಲ್ಡಾ (ಹೈಡ್ರೊಜನೇಟೆಡ್‌ ವೆಜಿಟೇಬಲ್‌ ಎಣ್ಣೆ) ವನ್ನು ಯಾವುದೇ ಕಾರಣಕ್ಕೂ ಬಳಸಲೇಬೇಡಿ. ಪ್ಯಾಕೆಟ್‌ಗಳಲ್ಲಿ ದೊರೆಯುವ ಚಿಪ್ಸ್‌ ಮೊದಲಾದ ಕರಿದ ತಿನಿಸುಗಳಲ್ಲಿ ಈ ಎಣ್ಣೆಯನ್ನು ಬಳಸುವುದರಿಂದ ಹೆಚ್ಚು ರುಚಿಕರ ಎನಿಸುತ್ತದೆ. ಆದರೆ ಬೊಜ್ಜಿಗೆ ಕಾರಣವಾಗುವ ಟ್ರಾನ್ಸ್‌ ಫ್ಯಾಟ್‌ ಅಂಶ ಹೇರಳವಾಗಿರುತ್ತದೆ. ಹೀಗಾಗಿ ಕಡಲೆಕಾಯಿ, ಸೂರ್ಯಕಾಂತಿ, ಕೊಬ್ಬರಿ, ಎಳ್ಳು, ಅಗಸೆ ಮೊದಲಾದ ಎಣ್ಣೆ, ಅದರಲ್ಲೂ ವರ್ಜಿನ್‌ ಎಣ್ಣೆ ಬಳಸಿದರೆ ಒಳ್ಳೆಯದು. ರಿಫೈನ್ಡ್‌ ಎಣ್ಣೆ ಬಳಸುವಾಗ ಕೂಡ ಕೊಂಚ ಎಚ್ಚರಿಕೆ ಇರಲಿ.

ಕೆನೆ ತೆಗೆದ ಹಾಲಿನಿಂದ ಮಾಡಿದ ಮೊಸರನ್ನು ಧಾರಾಳವಾಗಿ ಬಳಸಬಹುದು. ಇದು ನಮ್ಮ ದೇಹಕ್ಕೆ ಅಗತ್ಯವಿರುವ ಒಳ್ಳೆಯ ಬ್ಯಾಕ್ಟೀರಿಯ ಹೆಚ್ಚಿಸಲು ಅಗತ್ಯ. ಮನೆಯಲ್ಲೇ ರಾಗಿ, ಇತರ ಸಿರಿಧಾನ್ಯ ಸೇರಿಸಿದ ಹುರಿ ಹಿಟ್ಟು ಮಾಡಿಕೊಂಡು ತಂಬಿಟ್ಟು (ಹಾಲು, ಬೆಲ್ಲ ಸೇರಿಸಿ), ಅಂಬಲಿ ಮಾಡಿಕೊಡಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು