ಸೋಮವಾರ, ಮಾರ್ಚ್ 1, 2021
26 °C
ಕ್ಯಾನ್ಸರ್‌ ಜೊತೆಯಲ್ಲೊಂದು ಪಾಸಿಟಿವ್‌ ಪಯಣ: ಕೈ ಹಿಡಿದಳು ಗಾಯತ್ರಿ–11

PV Web Exclusive: ನರಗಳ ಹಾದಿಯಲ್ಲಿ ಸುಡುವ ಕಿಮೊ

ಕೃಷ್ಣಿ ಶಿರೂರ Updated:

ಅಕ್ಷರ ಗಾತ್ರ : | |

Prajavani

ನಾಲ್ಕು ಕಿಮೊ ಮುಗಿಸುವ ಹೊತ್ತಿಗಾಗಲೇ ಎಲುವುಗಳು ತೀರಾ ಮಿದುಗೊಂಡಿದ್ದವು. ತುಸು ಕೆಮ್ಮಿದರೂ, ಸೀನಿದರೂ ಎದೆಗೂಡಿನ ಎಲುವುಗಳು ನೋಯಿಸುತ್ತಿದ್ದವು. ಪಕ್ಕೆಲವುಗಳು ಹಿಡಿದುಬಿಡುತ್ತಿದ್ದವು. ಕೈ, ಕಾಲಿನ ಉಗುರುಗಳ ಬುಡ ಕಪ್ಪಾಗಿ ಬಂದವು. ಉಗುರುಗಳು ಬೆಳೆದಂತೆ ಪೂರ್ತಿ ಉಗುರೇ ಕಪ್ಪಿಟ್ಟವು. ಕಿಮೊ ದೇಹವನ್ನು ವ್ಯಾಪಿಸುವಾಗ ಅದರ ವಿರುದ್ಧ ನಾವು ಸೆಟೆದು ನಿಲ್ಲಲೇಬೇಕು. ಇಲ್ಲದಿದ್ದರೆ ಅದು ನಮ್ಮನ್ನೇ ಆಪೋಷಣ ಪಡೆಯಬಹುದು ಎಂಬ ಸತ್ಯವನ್ನು ಹಿಂದಿನ ವಾರ ಇಲ್ಲಿ ಪ್ರಸ್ತಾಪಿಸಿದ್ದೆ. ಮುಂದಿನ ಕಿಮೊ ದಾರಿಯ ಪಯಣ ಹೇಗಿತ್ತು ಅನ್ನೋದನ್ನ ಮುಂದೆ ಓದಿ.

***

ಫೆ.25ಕ್ಕೆ ನನ್ನ ಐದನೇ ಕಿಮೊ ನಿಗದಿಯಾಗಿತ್ತು. ಅಂದು ಶಿವರಾತ್ರಿ ಬೇರೆ. ನಾನು ಶಿವರಾತ್ರಿಯನ್ನೂ ಲೆಕ್ಕಿಸದೇ ಇಂಜೆಕ್ಷನ್‌ಗಾಗಿ ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿ ನೋಡಿದರೆ ಎಲ್ಲೆಲ್ಲೂ ಖಾಲಿ ಖಾಲಿ. ಬೆರಳೆಣಿಕೆಯಷ್ಟು ಮಂದಿ ಅಲ್ಲೊಬ್ಬರು ಇಲ್ಲೊಬ್ಬರು ಇದ್ದರು. ಡಾಕ್ಟರ್‌ ಕ್ಯಾಬಿನ್‌ಗೆ ಹೋದರೆ ಕ್ಲೀನಿಂಗ್‌ ಮಾಡುವವರು ಮಾತ್ರ ನೆಲ ಒರೆಸುತ್ತಿದ್ದರು. ನಾನು ಆ ಆಸ್ಪತ್ರೆಗೆ ಹೋಗಲು ಶುರುವಿಟ್ಟ ಮೇಲೆ ಅಷ್ಟು ಪ್ರಶಾಂತತೆ ಕಂಡಿದ್ದು ಈ ದಿನ. ರಿಸೆಪ್ಶನ್‌ ಕೌಂಟರ್‌ನಲ್ಲಿ ವಿಚಾರಿಸಿದರೆ  ಶಿವರಾತ್ರಿ  ಪ್ರಯುಕ್ತ ಆಸ್ಪತ್ರೆಗೆ ಬಿಡುವು ಇದೆ ಎಂದರು. ಮಾರನೇ ದಿನ ಭಾನುವಾರ. ಅವತ್ತು ಆಸ್ಪತ್ರೆಗೆ ರಜೆ. ಫೆ.27ಕ್ಕೆ ಕಿಮೊ ಮುಂದೂಡಲ್ಪಟ್ಟಿತು.

27ಕ್ಕೆ ಆಸ್ಪತ್ರೆಗೆ ಬಂದರೆ ಮತ್ತದೇ ರೋಗಿಗಳು, ಅವರ ಜೊತೆ ಬಂದವರ ಜಾತ್ರೆಯೇ ಸೇರಿದಂತಿತ್ತು. ಅವರೆಲ್ಲರ ಸಣ್ಣಸಣ್ಣ ಮಾತೆಂದರೂ ಅಲ್ಲಿನ ವಾತಾವರಣಕ್ಕೆ ಗದ್ದಲವೆಂಬಂತಿತ್ತು. ‘ಆವಾಜ್‌ ಮಾಡ್ಬೇಡ್ರಿ ಆವಾಜ್‌ ಮಾಡ್ಬೇಡ್ರಿ’ ಎಂದು ಕೂಗಿ ಕೂಗಿ ಸೆಕ್ಯುರಿಟಿ ಸುಸ್ತು. ಬ್ಲಡ್‌ ಟೆಸ್ಟ್‌ ರಿಪೋರ್ಟ್‌ ನೋಡಿದವರು ಏನೂ ತೊಂದರೆ ಇಲ್ಲ ಎಂದರು ಡಾ. ಪ್ರಸಾದ್‌. ಐದನೇ ಕಿಮೊದಿಂದ ನನ್ನ ಇಂಜೆಕ್ಷನ್‌ ಔಷಧ ಬದಲಾವಣೆ ಮಾಡಿದ್ದರು. ಇದರ ಸೈಡ್‌ ಇಫೆಕ್ಟ್‌ನಲ್ಲಿ ಒಂದಷ್ಟು ಬದಲಾವಣೆ ಇರಲಿದೆ ಎಂದು ಡಾಕ್ಟರ್‌ ಹೇಳಿದರು. ವಾಂತಿ, ಸುಸ್ತು, ಹೊಟ್ಟೆಯಲ್ಲಿ ಉರಿ, ಬಾಯಲ್ಲಿ ಹುಣ್ಣು, ಗಂಟಲು ನೋವು ಇವೆಲ್ಲ ಸಾಮಾನ್ಯವೆನಿಸುವ ಸೈಡ್‌ ಎಫೆಕ್ಟ್‌. ಮೊದಲ ನಾಲ್ಕು ಕಿಮೊ ವೇಳೆ ಅಷ್ಟು ಸಮಸ್ಯೆ ಆಗಿಲ್ಲ ಅಂದರೆ ಮುಂದಿನ ನಾಲ್ಕು ಕಿಮೋದಲ್ಲಿ ಅಂಥ ಕಷ್ಟ ಆಗಲ್ಲ ಬಿಡಿ ಎಂಬುದು ಡಾಕ್ಟರ್‌ ಸಮಜಾಯಿಷಿ ಆಗಿತ್ತು.

’ಹೋಗಿ ಕ್ಯಾನುಲಾ ಹಾಕಿಸಿಕೊಳ್ಳಿ‘ ಎಂದರು ಡಾಕ್ಟರ್‌. ಅಬ್ಬಾ! ಕ್ಯಾನುಲಾ ಅಂದ್ರೆನೆ ಮೈ ಜುಂ ಎಂದಿತು. ನಾಲ್ಕು ಬಾರಿ ಚುಚ್ಚಿದ ಮೇಲೆ ಕ್ಯಾನೂಲಾಗೊಂದು ನೆಲೆ ಸಿಕ್ಕಿತ್ತು. ಸಿಸ್ಟರ್‌ ನನ್ನ ಫೈಲ್‌ನೊಂದಿಗೆ ಬಂದವರೇ ಡೇಕೇರ್‌ಗೆ ಕರೆದೊಯ್ದರು. ಸ್ವಲ್ಪ ಹೊತ್ತಿಗೆ ಫಾರ್ಮಸಿಯಿಂದ ನನ್ನ ಇಂಜೆಕ್ಷನ್‌ ಟ್ರೇ ಬಂದು ನನ್ನ ಪಕ್ಕದಲ್ಲಿ ಆಸೀನವಾಯಿತು. ಬಣ್ಣ ಬದಲಿಸಿಕೊಂಡ ಇಂಜೆಕ್ಷನ್‌ಗಳು ಇಲ್ಲಿದ್ದವು. ಸಿಸ್ಟರ್‌ ಬಂದು ಮೊದಲು ಒಂದು ಬಾಟಲ್‌ ಗ್ಲುಕೋಸ್‌ ಡ್ರಿಪ್‌ ಆರಂಭಿಸಿದರು. ಅದು ಮುಗಿಯುತ್ತಲೇ ಕಿಮೊ ಇಂಜೆಕ್ಷನ್‌ ಬಾಟಲಿಯನ್ನು ಡ್ರಿಪ್‌ ಸ್ಟ್ಯಾಂಡ್‌ಗೆ ಏರಿಸಿದರು. ಬಾಟಲಿಯಿಂದ ಇಳಿದ ಇಂಜೆಕ್ಷನ್‌ ಹನಿಹನಿಯಾಗಿ ಕ್ಯಾನುಲಾ ದಾಟಿ ನರದ ದಾರಿಗೆ ಬರುತ್ತಲೇ ಸುಡಲು ಶುರುವಿಟ್ಟಿತು. ಒಂದೊಂದು ಹನಿಯೂ ಹಾದು ಹೋಗುವಾಗ ನನ್ನ ನರಗಳನ್ನೇ ಸುಟ್ಟು ಬಿಟ್ಟವು. ಪ್ಲಾಸ್ಟಿಕ್‌ ಕೊಳವೆಯೊಳಗೆ ಕಬ್ಬಿಣದ ಕುದಿದ್ರವ ಮುನ್ನುಗ್ಗಿ ಸಾಗಿದಂತೆ ಕಿಮೊ ಹಾದು ಹೋಗುವಾಗ ನರಗಳನ್ನೇ ಸುಡುತ್ತ ಸಾಗಿದವು. ನರಗಳು ಅಲ್ಲಲ್ಲೇ ಗಂಟು ಗಂಟಾದವು.ಅಬ್ಬಾ... ಆ ಯಾತನೆ ಹೇಗಿತ್ತೆಂದರೆ ನರಕವೆಂದರೆ ಇದೇ ಇರಬಹುದು ಅನಿಸಿತು. ಆ ನೋವಿಗೆ  ಕೂಗಿಕೊಳ್ಳಬೇಕೆನಿಸುವಷ್ಟು. ಆದರೆ ಮನಸ್ಸನ್ನು ಗಟ್ಟಿಮಾಡಿಕೊಂಡು ನೋವನ್ನು ತಡೆದುಕೊಂಡೆ. ಆದರೂ ಎರಡೂ ಕಣ್ಣುಗಳ ತುದಿಯಿಂದ ಹನಿಗಳು ಜಾರಿದವು. ಪೂರ್ತಿ ಕಿಮೊ ಇಂಜೆಕ್ಷನ್‌ ದೇಹದೊಳಗೆ ಸೇರುವಾಗಲೂ ಉರಿಯೋ ಉರಿ. ಅಯ್ಯೋ ಎಂದಿತು ಮನಸ್ಸು. ಸಣ್ಣಗಿದ್ದಾಗ ಜ್ವರ ಬಂದು ಡಾಕ್ಟರ್‌ ಹತ್ತೆ ಹೋದಾಗ ಅಲ್‌ ನೋಡು ಇಲ್‌ ನೋಡು ಅಂತಾ ನಮ್ಮ ಗಮನ ಸರಿಸಿ ಇಂಜೆಕ್ಷನ್‌ ಕೊಟ್ಟು ಕಳುಹಿಸಿದ ಹಾಗಲ್ಲ ಈ ಇಂಜೆಕ್ಷನ್‌. ಐದಾರು ತಾಸು ಇದೇ ನೋವು, ಉರಿಯನ್ನು ತಡೆಯಬೇಕಲ್ಲ; ಹೇಗೋ ತಡೆದುಕೊಂಡೆ. ಅದು ನನಗೆ ಅನಿವಾರ್ಯ. ಅಂತೂ ಇಂತೂ ಇಂಜೆಕ್ಷನ್‌ ಪೂರ್ತಿಯಾಗಿ ದೇಹ ಸೇರಿದ್ದಾಯಿತು. ಕ್ಯಾನುಲಾ ರಿಮೂವ್‌ ಮಾಡಿದ ಮೇಲೂ ಅಲ್ಲಿ ನೋವಿತ್ತು. ಕಿಮೊ ಹಾದು ಹೋದ ನರಗಳೆಲ್ಲ ಸೋತು ಸುಣ್ಣವಾಗಿದ್ದವು.

ಸದ್ಯ ಇನ್ನು ಮೂರು ಕಿಮೊ ಉಳಿತಲ್ಲ ಎಂಬ ಸಮಾಧಾನದೊಂದಿಗೆ ಮನೆಗೆ ಬರುವಾಗ ಸಂಜೆ 5.30; ಬಂದವಳೇ ನೀರು ಕುಡಿದೆ. ವಾಂತಿ ಒತ್ತರಿಸಿ ಬಂತು. ಈ ಮೊದಲು ನಾಲ್ಕು ಕಿಮೊ ಆದ್ರೂ ವಾಂತಿ ಆಗಿರಲಿಲ್ಲ. ಅಂತೂ ರಾತ್ರಿ ಹೇಗೋ ಊಟ ಮಾಡಿದೆ. ಕ್ಯಾನುಲಾ ಚುಚ್ಚಿ ತೆಗೆದ ಜಾಗದಲ್ಲಿ ಬಾವು ಬಂದಿತ್ತು. ಐಸ್‌ ಕ್ಯೂಬ್‌ ಇಟ್ಟರೂ ನೋವು ಕಮ್ಮಿ ಆಗಲಿಲ್ಲ. ರಾತ್ರಿ 2ರ ಹೊತ್ತಿಗೆ ಗಂಟಲು ಒಣಗಿದ ಅನುಭವ. ಎದ್ದು ನೀರು ಕುಡಿದೆ. ಮತ್ತೆ ವಾಂತಿ. 5 ನಿಮಿಷ ಬಿಟ್ಟು ಮತ್ತೆ ವಾಂತಿ. ಇದೊಳ್ಳೆ ರಾಮಾಯಣ ಆಯ್ತಲ್ಲ ಅಂದ್ಕೊಂಡೆ. ಹಾಗೆ ಮಲಗಿದೆ. ಎಷ್ಟೋ ಹೊತ್ತು ಹೊರಳಾಡಿದ ಮೇಲೆ ನಿದ್ದೆ ಆವರಿಸಿತು. ಬೆಳಗೂ ಆಯಿತು. ಅಮ್ಮ ತಿಂಡಿ ತಂದಿಟ್ಟರೆ ಮನಸ್ಸೆಕೋ ಒಲ್ಲೆ ಅಂತಿತ್ತು. ದೋಸೆ ತಿನ್ನುತ್ತಲೇ ವಾಕರಿಕೆ ಶುರು. ಬಳ್‌.... ಅಂತ ಬಂದೇ ಬಿಡ್ತು. ಹೀಗಾದ್ರೆ ತಿನ್ನೋದು ಹೇಗೆ ಎಂಬುದೇ ಯೋಚನೆಯಾಯಿತು. ಮೈಮನವನ್ನೆಲ್ಲ ಸುಸ್ತು ಒಮ್ಮೆಲೆ ಆವರಿಸಿಕೊಂಡುಬಿಟ್ಟಿತು. ಮಧ್ಯಾಹ್ನದ ನಂತರ ಹೊಟ್ಟೆಯಲ್ಲಿ ಉರಿ ಕಾಣಿಸಿಕೊಂಡಿತು. ಊಟಕ್ಕೆ ಕುಂತಾಗ ವಾಕರಿಕೆಯಷ್ಟೆ ಬಂತು. ಮತ್ತೆ ವಾಂತಿ ಆಗಲಿಲ್ಲ. ನಾಲಿಗೆ ರುಚಿಸದಾಯಿತು. ಆದರೆ ಹೊಟ್ಟೆಗೆ ಏನಾದ್ರು ತಿನ್ನದಿದ್ದರೆ ದೇಹದಲ್ಲಿ ಶಕ್ತಿ ಬೇಕಲ್ಲ; ಅಮ್ಮ ಟೈಮ್‌ ಟು ಟೈಮ್‌ ಬೆಳಗಿನ ತಿಂಡಿ, ಬೇಯಿಸಿದ ಮೊಟ್ಟೆ, ರಾಗಿ ಗಂಜಿ, ಊಟ ಹೀಗೆ ಒಂದೊಂದೆ ತಂದು ತಿನ್ನಲು ಒತ್ತಾಯಿಸುತ್ತಿದ್ದರು. ದೇಹದಲ್ಲಿ ಉಷ್ಣ ಹೆಚ್ಚಿದ ಅನುಭವ. ಸುಸ್ತು. ಅಯ್ಯೋ ದೇವ್ರೆ; ಹೀಗಾದ್ರೆ ಹೇಗೆ ಅನ್ನೋ ಯೋಚನೆಗೆ ಬಿತ್ತು ಈ ಗಟ್ಟಿ ಮನಸ್ಸು.

ಮಾರ್ಚ್‌ 1; ಇಂಜೆಕ್ಷನ್‌ ಹರಿದು ಹೋದ ಮುಖ್ಯ ನರ ಒಂದೇ ಸಮನೆ ನೋಯುತ್ತಿತ್ತು. ಆ ನರಗಳೆಲ್ಲ ಕಪ್ಪಾಗಿದ್ದು ಚರ್ಮದೊಳಗಿಂದಲೇ ಗೋಚರಿಸಿದವು. ಮೊದಲ ನಾಲ್ಕು ಇಂಜೆಕ್ಷನ್‌ನಲ್ಲಿ ಇಂಥ ಅನುಭವ ಆಗಿರಲಿಲ್ಲ. ಇಂಜೆಕ್ಷನ್‌ಗಾಗಿ ಕ್ಯಾನುಲಾ ಚುಚ್ಚಿದ ಜಾಗದಲ್ಲಿ ಸಹಿಸಲಾರದಷ್ಟು ನೋವು. ‘ಕಿಮೊ ರಾಶಿನೇ ತ್ರಾಸ್‌ ಆಗ್ತದಂತೆ’ ಎಂದು ಅವರಿವರು ಹೇಳಿದ ಮಾತು ಆಗ ನೆನಪಿಗೆ ಬಂತು. ಇಂದು ನನಗೆ ಕಿಮೊದ ರೌದ್ರಾವತಾರದ ದರ್ಶನವಾಗಿತ್ತು. ಇಂಜೆಕ್ಷನ್‌ ಚುಚ್ಚಿದ ಜಾಗದಲ್ಲಿ ಬಾವು ಬಂದಿತು. ಬಳಲಿಕೆ, ವೇದನೆ ಎಲ್ಲವೂ ಒತ್ತರಿಸಿ ಬಂದವು. ಈ ಸಮಯದಲ್ಲಿ ನನ್ನಮ್ಮ ನನಗೆ ಮಾಡಿದ ಚಾಕರಿ ಮಾತ್ರ ಅಷ್ಟಿಷ್ಟಲ್ಲ. ನನ್ನಮ್ಮನಂಥ ಅಮ್ಮನನ್ನು ಪಡೆಯೋಕೆ ನಾನು ಹೋದ ಜನ್ಮದಲ್ಲಿ ಪುಣ್ಯ ಮಾಡಿದ್ದೆ ಅನ್ನಿಸಿತು. ಅವರ ಈ ವಯಸ್ಸಿನಲ್ಲಿ ನಾವು ನೋಡಿಕೊಳ್ಳಬೇಕಿತ್ತು. ಆದರೆ ನನ್ನನ್ನು ಅಮ್ಮನೇ ಕಾಳಜಿ ತೋರಿ, ಚಾಕರಿ ಮಾಡುವಂತಾಯಿತಲ್ಲ ಎಂಬ ನೋವು ಮನದೊಳಗೆ ಕಾಡಿತು. ದಿಗಂತ ಹುಟ್ಟಿದಾಗ ಬಾಣಂತನ ಮಾಡಿದ್ದ ಋಣವೇ ನನ್ನ ಮೇಲಿದ್ದಾಗ ಅದಕ್ಕಿಂತ ದೊಡ್ಡ ಋಣದ ಮೂಟೆ ನನ್ನ ಹೆಗಲೇರಿತು ಎಂದೆನಿಸಿತು.

ಮಲಗಿದರೆ ನಿದ್ದೆಯೂ ಹತ್ತಿರ ಸುಳಿಯದಾಯಿತು. ಬೆಳಿಗ್ಗೆ, ಮಧ್ಯಾಹ್ನ, ರಾತ್ರಿಯಲ್ಲೂ ನಿದ್ದೆ ರಹಿತ ದಿನ ನನ್ನದಾಯಿತು. ನಿದ್ರಾಹೀನ ರಾತ್ರಿಗಳು ಎಂದರೆ ಅದನ್ನು ಅನುಭವಿಸಿದವರಿಗೇ ಗೊತ್ತು. ಬೇಡವೆಂದರೂ ನೆಗೆಟಿವ್‌ ಯೋಚನೆಗಳೇ ದಾಂಗುಡಿ ಇಡುತ್ತಿದ್ದವು.

ಅಂತೂ ಮಾರ್ಚ್‌ 4ರಂದು ಸ್ವಲ್ಪ ಓಕೆ ಅನಿಸಿತು. ಸುಸ್ತು ತಗ್ಗಿತ್ತು. ಮಾರ್ಚ್‌ 5ರಂದು ಇನ್ನು ಸ್ವಲ್ಪ ಬೆಟರ್ ಅನ್ನಿಸ್ತು. ಅಂದ್ರೆ ಇಂಜೆಕ್ಷನ್‌ ನಂತರದ ಒಂದು ವಾರ ಮಾತ್ರ ನರಕಯಾತನೆ ಅನುಭವಿಸಲೇಬೇಕು. ಇಂಥ ಯಾತನೆಯನ್ನು ಇನ್ನೂ ಮೂರು ಬಾರಿ ಅನುಭವಿಸಬೇಕಲ್ಲ ಅಂತ ಮನಸ್ಸು ಕಳವಳಗೊಂಡಿತು. ಆದರೆ ಮನಸ್ಸು ಗಟ್ಟಿ ಮಾಡಿಕೊಂಡು ಸಿದ್ಧವಾಗಲೇ ಬೇಕಿತ್ತು. ದೇಹಕ್ಕೆ ಪುಷ್ಟಿಯೂ ಬೇಕಿತ್ತು. ಬೆಳಿಗ್ಗೆ ನಿಂಬೆ ರಸ ಸೇರಿಸಿದ ನೀರು, ಒಂದು ದೋಸೆ, ಕಷಾಯ, ಹಣ್ಣು, ಡ್ರೈಫ್ರುಟ್ಸ್‌, ರಾಗಿ ಗಂಜಿ, ನೀರು, ಊಟ, ಹಣ್ಣು, ಕಷಾಯ, ಚಹ ಮತ್ತು ತಿಂಡಿ, ರಾತ್ರಿ ಊಟ, ಜೊತೆಗೆ ಮತ್ತೆ ರಾಗಿ ಗಂಜಿ, ಮೊಟ್ಟೆ ಇಷ್ಟೆಲ್ಲವನ್ನೂ ಅಮ್ಮ ಒತ್ತಾಯ ಮಾಡಿ ಉಣಿಸುತ್ತಿದ್ದರು. 10 ದಿನಗಳ ನಂತರ ಊಟ ರುಚಿಸಿತು.

ಮಾರ್ಚ್‌ 8ರಂದು ಡಿ10 ಬ್ಲಡ್‌ ಕೌಂಟ್ಸ್‌ ಟೆಸ್ಟ್‌ಗೆ ಹೋಗಿದ್ದೆ. ಎಲ್ಲ ಓಕೆ. ನೋ ಪ್ರಾಬ್ಲಂ ಅಂದ್ರು ಡಾಕ್ಟರ್‌. ಮಾರ್ಚ್‌ 9ರಿಂದ ಕಾಲು ಕೂಡ ಊದಿಕೊಂಡಿತು. ಎಷ್ಟೆಂದರೆ ಕಾಲಿಗೆ ಬಲೂನು ಕಟ್ಟಿಕೊಂಡು ನಡೆದ ಅನುಭವ. ಇಂಜೆಕ್ಷನ್‌ ಕೊಟ್ಟ ಜಾಗ, ಕೈಯ ನರ ನೋವು ಮಾತ್ರ ಕಮ್ಮಿ ಆಗಿರಲಿಲ್ಲ. ಆದರೂ ನೋವಿನಲ್ಲೂ ನಗೆ ಬರಿಸಿದ್ದು ಮಾತ್ರ ಕಾಮಿಡಿ ಕಿಲಾಡಿ ಷೋ. ಷೋ ನೋಡಿ ನಕ್ಕು, ನೋವ ಮರೆತೆ. ಈ ಸಂದರ್ಭದಲ್ಲಿ ನನಗೆ ಮನಸ್ಸನ್ನು ಬೇರೆಡೆಗೆ ಕೇಂದ್ರೀಕರಿಸುವ ಅಗತ್ಯವಿತ್ತು. ಅದನ್ನು ಸುಲಭಗೊಳಿಸಿದ್ದು ಕಾಮಿಡಿ ಕಿಲಾಡಿ ಷೋ.

ಕೈ,ಕಾಲಿನ ಉಗುರುಗಳೆಲ್ಲವೂ ಸಂಪೂರ್ಣ ಕಪ್ಪಿಟ್ಟವು. ಎಷ್ಟೆಂದರೆ ಕೈ ಮತ್ತು ಕಾಲಿನ ಉಗುರುಗಳಿಗೆ ತುಸು ಕಪ್ಪು ಬಣ್ಣದ ನೇಲ್‌ ಪಾಸಿಷ್‌ ಹಚ್ಚಿದಂತೆ ಕಂಡವು. ಇಡೀ ನಾಲಿಗೆಯೂ ಕಪ್ಪಾಯ್ತು. ಕ್ಯಾನುಲಾ ಚುಚ್ಚಿದ ಜಾಗದಲ್ಲಿ ಕೈ ನೋವು ಹಾಗೇ ಉಳಿಯಿತು. ಕಣ್ಣಿನ ಹುಬ್ಬು, ರೆಪ್ಪೆ ಎಲ್ಲವೂ ಕ್ಲೀನ್‌ ಆದವು. ಚಿಕ್ಕವಳಿಂದಲೂ ನನಗೆ ತಲೆಯಲ್ಲಿ ಕಣ್ಣಿನ ಹುಬ್ಬು, ರೆಪ್ಪೆಯಲ್ಲಿ ಕೂದಲು ಜಾಸ್ತಿ. ನನ್ನ ಕಣ್ಣಿಗೆ ದಪ್ಪನೆಯ ಹುಬ್ಬು, ಉದ್ದವಾದ ರೆಪ್ಪೆ ಕೂದಲೇ ಆಕರ್ಷಣೆ ಅಂತಾ ನನ್ನ ಸ್ನೇಹಿತೆಯರೆಲ್ಲ ಹೇಳುತ್ತಿದ್ದರು. ಆದರೆ ಅವ್ಯಾವುವೂ ಇರಲಿಲ್ಲ. ಅವೆಲ್ಲ ಅಕ್ಷರಶಃ ಇತಿಹಾಸದ ಪುಟ ಸೇರಿಯಾಗಿತ್ತು. ಎಲ್ಲವೂ ಉದುರಿ ಹೋಗಿ, ಚಳಿಗಾಲ ಮುಗಿಯುವ ಹೊತ್ತಿಗೆ ತರಗೆಲೆಗಳನ್ನೆಲ್ಲ ಕಳೆದುಕೊಂಡ ಬೋಳು ಮರದಂತೆ ನನ್ನ ಸ್ಥಿತಿಯಾಗಿತ್ತು. ತಲೆಯಲ್ಲಿ ಕೂದಲು, ಕಣ್ಣಿನ ಹುಬ್ಬು, ರೆಪ್ಪೆ ಇಲ್ಲದಿದ್ದರೆ ನಮ್ಮ ಮೊಗವೇ ನಮಗೆ ಅಪರಿಚಿತ. ಇನ್ನು ನಮ್ಮ ಗುರುತು ಬೇರೆಯವರಿಗೆ ಹೇಗೆ ಸಿಗಬಹುದು?

64 ದಿನಗಳ ಮೇಲೆ ತಿಂಗಳ ಅತಿಥಿ ಆಗಮನವಾಯಿತು (ಮಾರ್ಚ್‌ 15). ಒಂಥರಾ ನಿರಾಳಭಾವ. ಕಾಲಿನ ಊತ, ತಲೆನೋವು ಮುಟ್ಟಿನ ಮುನ್ಸೂಚನೆ ನೀಡಿದ್ದವು. ಮುಟ್ಟು ನಿಂತೇ ಹೋಯಿತೆಂಬ ಆತಂಕ ದೂರವಾದಂತಾಯಿತು.

ಕೆಲವು ಸಂಗತಿಗಳ ಗೊತ್ತಾಗದಿರುವುದೇ ಒಳ್ಳೆಯದು. ಅದರಲ್ಲೂ ಅನಾರೋಗ್ಯದ ಸಂಗತಿ. ಅನಾರೋಗ್ಯ ನಮ್ಮ ಮನಸ್ಸನ್ನು ಅಸ್ಥಿರಗೊಳಿಸುತ್ತದೆ. ಮನಸ್ಸು ಭಯಕ್ಕೆ ನೂಕಲ್ಪಡುತ್ತದೆ. ವಿಚಲಿತಗೊಳ್ಳುತ್ತದೆ. ಅದರಿಂದ ಮನಸ್ಸಿನ ಜೊತೆಗೆ ದೇಹವೂ ದುರ್ಬಲಗೊಳ್ಳುತ್ತದೆ. ಆಗ ಬೇಡವೆಂದರೂ ನಕಾರಾತ್ಮಕ ವಿಚಾರಗಳೇ ನಮ್ಮ ಮನಸ್ಸಿನ ಮೇಲೆ ದಾಳಿ ಇಡುತ್ತವೆ. ಆದ್ದರಿಂದ ಕಹಿ ಸತ್ಯಗಳು ತಿಳಿಯದಿರುವುದೇ ಲೇಸು ಎಂಬ ವಾಸ್ತವದ ಪಾಠವನ್ನು ಕ್ಯಾನ್ಸರ್‌ ಜೊತೆಗಿನ ದಿನಗಳು ನನಗೆ ಕಲಿಸಿದವು.

ಮಾರ್ಚ್‌ 19ರಂದು ಮತ್ತೆ ಮನಸ್ಸು ವಿಚಲಿತಗೊಂಡಿತು. ಐದನೇ ಕಿಮೊ ದಾಳಿಗೆ ಸೋತು ಸುಣ್ಣವಾದ ಕೈಯ ಬಾವು, ನೋವು ಇನ್ನೂ ಇಳಿದಿರಲಿಲ್ಲ. ಮತ್ತೀಗ ಅದೇ ಕೈಗೆ ಕ್ಯಾನುಲಾ ಚುಚ್ಚಿಸಿಕೊಳ್ಳಬೇಕೆಂಬುದು ನನ್ನ ಪಾಲಿನ ದೊಡ್ಡ ಚಿಂತೆಯಾಗಿತ್ತು. ಕ್ಯಾನುಲಾ ಪ್ರತಿಷ್ಠಾಪಿಸಲು ನರ ಹುಡುಕಲು ಎಷ್ಟು ಕಡೆ ಚುಚ್ಚಿಸಿಕೊಳ್ಳಬೇಕೋ ಅನ್ನೋ ಯೋಚನೆಗೆ ಮೈ ಜುಂ ಎಂದಿತು.

ಮಾರ್ಚ್‌ 20: ಆರನೇ ಕಿಮೊ ದಿನ ದೇಹ ಸೇರುವ ದಿನ. ಬೆಳಿಗ್ಗೆ ಹೊಟ್ಟೆಗೆ ಸ್ವಲ್ಪ ಹಾಕ್ಕೊಂಡು ಕಿಮೊಗೆ ರೆಡಿಯಾದೆ. ’ಟ್ಯೂಮರ್‌ ಸೈಜ್‌ ಮತ್ತಷ್ಟು ಕುಗ್ಗಿದೆ. ಕಿಮೊಗೆ ಒಳ್ಳೆ ರಿಸಲ್ಟ್‌ ಸಿಕ್ಕಿದೆ‘ ಎಂದು ತಪಾಸಣೆ ನಡೆಸಿದ ಡಾಕ್ಟರ್‌ ಹೇಳಿದರು. ಸಮಾಧಾನವೆನಿಸಿತು. ಅದೇ ಸಮಾಧಾನದೊಂದಿಗೆ ಕ್ಯಾನುಲಾ ಹಾಕಿಸಿಕೊಂಡೆ. ನೋವಿಗೆ ನೋವೇ ಜೊತೆಯಾಯಿತು. ಸಿಸ್ಟರ್‌ ನರ ಹುಡುಕಿ ಚುಚ್ಚುವುದರಲ್ಲಿ ಮನಸ್ಸು ಒದ್ದಾಡಿತು. ಡೇ ಕೇರ್‌ ರೂಮ್‌ನಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿ ರೂಮು ತುಂಬಿ ಹೋಗಿತ್ತು. ಬೆಡ್‌ ಇರಲಿಲ್ಲ. ಸಿಟ್ಟಿಂಗ್‌ನಲ್ಲಿ ಒಂದು ಸೋಫಾ ಖಾಲಿಯಿತ್ತು. ಅದರಲ್ಲೇ ಕೂತೆ. ಮೆಡಿಸಿನ್‌ ಟ್ರೇ ಬರೋದ್ರೊಳಗೆ ಒಂದು ಬೆಡ್‌ ಖಾಲಿಯಾಯಿತು. ಇವತ್ತು ಒಂದು ಇಂಜೆಕ್ಷನ್‌ ಮುಗಿದರೆ ಉಳಿದದ್ದು ಎರಡೇ ಎಂದು ಮನಸ್ಸು ಖುಷಿಪಟ್ಟಿತು. ಇಪ್ಪತ್ತೊಂದು, ಪ್ಲಸ್‌ ಇಪ್ಪತ್ತೊಂದು ಪ್ಲಸ್‌ ಇಪ್ಪತ್ತೊಂದು ....ಅರವತ್ಮೂರು... ಅಂದ್ರೆ ಎರಡು ತಿಂಗಳು... ನಂತರ ಸರ್ಜರಿ, ನಂತರ ರೆಡಿಯೇಷನ್‌... ಒಟ್ನಲ್ಲಿ ಜುಲೈ ವೇಳೆಗೆ ನನ್ನ ಒಂದು ಹಂತದ ಟ್ರೀಟ್‌ಮೆಂಟ್‌ ಮುಗಿದಿರುತ್ತೆ... ಮನಸ್ಸು ಒಳಗೊಳಗೇ ಲೆಕ್ಕ ಹಾಕುತ್ತಲೇ ಇತ್ತು.

ಕಿಮೊ ಇಂಜೆಕ್ಷನ್‌ ಬಾಟಲಿ ಸ್ಟ್ಯಾಂಡ್‌ ಮೇಲೇರಿತು. ಐದನೇ ಕಿಮೋ ನಡೆದಾಗ ಅನುಭವಿಸಿದ್ದ ನೋವು, ಉರಿ ಮನದಲ್ಲಿ ಅಚ್ಚಳಿಯದೇ ಉಳಿದಿದ್ದವು. ಕಿಮೊ ಪವರ್‌ಗೆ ಸುಟ್ಟು ಮುದ್ದೆಯಾದ ನರದಲ್ಲೇ ಮತ್ತೆ ಸುಡುಸುಡು ಕಿಮೊ ಹರಿಯಬೇಕಲ್ಲ... ಆ ನೋವನ್ನು ತಾಳಿಕೊಳ್ಳಬೇಕಲ್ಲ ಎಂಬ ಕಾರಣಕ್ಕೆ ಮನಸ್ಸು ಒಂದಷ್ಟು ಹೆದರಿ ಮುದುರಿತು. ಆದರೂ ಮಾನಸಿಕವಾಗಿ ಸಜ್ಜಾದೆ. ಹಿಂದಿನ ಇಂಜೆಕ್ಷನ್‌ಗಿಂತಲೂ ಹೆಚ್ಚು ನೋವುಂಟಾಯಿತು. ಇಂಜೆಕ್ಷನ್‌ ಸಾಗುವಾಗ ಒಳೊಳಗೆ ನರಗಳು ಸುಟ್ಟು ಅಲ್ಲೇ ಗಂಟಾಗಿ, ಮುದ್ದೆಯಾದ ಅನುಭವ. ನರಗಳು ಪೂರ್ತಿ ಸುಟ್ಟೇ ಹೋದ ಅನುಭವ. ಉಸಿರು ಬಿಗಿ ಹಿಡಿದು ನೋವು ತಡೆದುಕೊಂಡೆ. ಏಳು ತಾಸುಗಳ ನಿರಂತರ ಯಾತನೆ ನೀಡಿದ ಇಂಜೆಕ್ಷನ್‌ ಸಂಜೆ 6.10ಕ್ಕೆ ಮುಗಿಯಿತು. ಅಂತೂ ಆರು ಕಿಮೊ ಮುಗಿತಲ್ಲ; ಇನ್ನು ಎರಡೇ ಎರಡು ಬಾಕಿ ಎಂಬ ಖುಷಿಯೊಂದಿಗೆ ಮನೆಗೆ ಬಂದೆ. ಸದ್ಯ ವಾಂತಿ ಆಗಲಿಲ್ಲ. ಇಂಜೆಕ್ಷನ್‌ ಚುಚ್ಚಿದ ಜಾಗ ಕೆಂಪಾಗಿ ಬಾತುಕೊಂಡಿತ್ತು. ಐಸ್‌ಕ್ಯೂಬ್‌ ಇಟ್ಟೆ. ಸ್ವಲ್ಪ ತಂಪಾಯಿತು. ರಾತ್ರಿ ನಿದ್ದೆಯೂ ಬೇಗ ಹತ್ತಿತು.

ಮಾರನೇ ದಿನವೂ ವಾಂತಿಯಾಗಲಿಲ್ಲ ಅನ್ನೋದು ಒಂದು ಸಮಾಧಾನ. ಆದರೆ ಆಹಾರ ಮಾತ್ರ ಸೇರಲಿಲ್ಲ. ಸುಸ್ತು ಕೂಡ ಜೊತೆಯಾಯಿತು. ದೇಹದಲ್ಲಿ ಉಷ್ಣದ ಬಾಧೆ ಆವರಿಸಿತು. ಅದರ ಜೊತೆಗೆ ಮಾರ್ಚ್‌ ತಿಂಗಳ ಬಿಸಿಲು ಜೊತೆಯಾಗಿ ನನ್ನ ದೇಹವನ್ನು ಹೈರಾಣಾಗಿಸಿತು. ಅಬ್ಬಾ ಅದೆಂಥ ಸಂಕಟ. ತೊಳಲಾಟ. ಜೀವವೇ ಬೇಡ ಅನ್ನುವಷ್ಟಾಯಿತು. ಒಂದು ವಾರದವರೆಗೂ ಇದೇ ಯಾತನಾ ಸ್ಥಿತಿ.

PV Web Exclusive| ಕೈ ಹಿಡಿದಳು ಗಾಯತ್ರಿ 1| ಮಡುಗಟ್ಟಿದ ದುಗುಡಭಾವ

PV Web Exclusive| ಕೈ ಹಿಡಿದಳು ಗಾಯತ್ರಿ 2| ಮೆಮೊಗ್ರಾಂ, ಸ್ಕ್ಯಾನಿಂಗ್‌ ಪುರಾಣ ಏನ್‌ ಕೇಳ್ತಿರಿ...

PV Web Exclusive |ಕೈ ಹಿಡಿದಳು ಗಾಯತ್ರಿ 3| ಯಾರ‍್ರೀ ‍ಪೇಷಂಟ್‌; ಎಲದಾರ್‍ರೀ...

PV Web Exclusive| ಕೈ ಹಿಡಿದಳು ಗಾಯತ್ರಿ 4|  ಕೈ ಹಿಡಿದಳು ಗಾಯತ್ರಿ

PV Web Exclusive| ಕೈ ಹಿಡಿದಳು ಗಾಯತ್ರಿ 5| ಪೆಟ್ (PET) ಸ್ಕ್ಯಾನ್‌ನ ವಿಭಿನ್ನ ಅನುಭವ

PV Web Exclusive| ಕೈ ಹಿಡಿದಳು ಗಾಯತ್ರಿ 7| ಕೈ ಹಿಡಿದಳು ಗಾಯತ್ರಿ: ದೇಹ ಸೇರಿತು ಚೊಚ್ಚಲ ಕಿಮೊ ಹನಿ

PV Web Exclusive| ಕೈ ಹಿಡಿದಳು ಗಾಯತ್ರಿ 8| ಕೇಶ ರಾಶಿಯ ನಾಮಾವಶೇಷ

PV Web Exclusiveಕೈ ಹಿಡಿದಳು ಗಾಯತ್ರಿ 9 | ಕ್ಯಾನ್ಸರ್ ಜೊತೆಗೊಂದು ಪಯಣ 9: ಸಾಥ್‌ ನೀಡಿದ ಸೋಷಿಯಲ್‌ ಮೀಡಿಯಾ

PV Web Exclusive| ಕೈ ಹಿಡಿದಳು ಗಾಯತ್ರಿ 10| ಕಿಮೊ ಹಾದಿಯಲ್ಲಿ ಮುಗಿದ ಅರ್ಧ ಪಯಣ 

PV Web Exclusive| ಕೈ ಹಿಡಿದಳು ಗಾಯತ್ರಿ 11| ನರಗಳ ಹಾದಿಯಲ್ಲಿ ಸುಡುವ ಕಿಮೊ

PV Web Exclusive|ಕೈ ಹಿಡಿದಳು ಗಾಯತ್ರಿ 12| ಕಿಮೊ ಕಾಂಡದ ಅಂತಿಮ ಅಧ್ಯಾಯ

PV Web Exclusive|ಕೈ ಹಿಡಿದಳು ಗಾಯತ್ರಿ 13| ಐಸಿಯುನಲ್ಲಿ ಕಳೆದ ಘೋರ ರಾತ್ರಿ

PV Web Exclusive|ಕೈ ಹಿಡಿದಳು ಗಾಯತ್ರಿ 14| ಕತ್ತರಿಸಿದ್ದ ಜಾಗ ಮುಚ್ಚಿದ್ದವು 80 ಪಿನ್‌ಗಳು!

PV Web Exclusive|ಕೈ ಹಿಡಿದಳು ಗಾಯತ್ರಿ 15| ಕ್ಯಾನ್ಸರ್‌ ಜೊತೆಗೆ ಆತ್ಮವಿಶ್ವಾಸದ ನಡೆ

(ಮುಂದಿನ ವಾರ: ’ಕಿಮೊ ಕಾಂಡ‘ದ ಅಂತಿಮ ಅಧ್ಯಾಯ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು