ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ ಕುಶಲ: ಹೃದಯರೋಗಕ್ಕೆ ಮದ್ಧಾಗುವ ‘ಫಲ‘ಗಳು

Published 21 ಆಗಸ್ಟ್ 2023, 23:47 IST
Last Updated 21 ಆಗಸ್ಟ್ 2023, 23:47 IST
ಅಕ್ಷರ ಗಾತ್ರ

–ಡಾ. ಸತ್ಯನಾರಾಯಣ ಭಟ್ ಪಿ. 

ಆಯರ್ವೇದದ ಪ್ರಕಾರ ಹೃದಯದ ವ್ಯಾಖ್ಯೆ ಕೊಂಚ ವಿಭಿನ್ನ. ಭೌತಿಕ ಹೃದಯವು ನಿಮ್ಮ ಎಡಮುಷ್ಟಿ ಗಾತ್ರದ್ದು, ಸುಮಾರು ಆರುನೂರು ಗ್ರಾಮ್ ತೂಕದ್ದು ಎಂಬ ಆಧುನಿಕ ಅಭಿಪ್ರಾಯಕ್ಕಿಂತ ಕೊಂಚ ವಿಭಿನ್ನ. ‘ತ್ರಿಮರ್ಮ’ ಎಂದರೆ ಹೃದಯ ನಾಭಿ ಮತ್ತು ಬಸ್ತಿ. ಇವು ಮೂರೂ ಪರಸ್ಪರ ಗಹನ ಸಂಬಂಧದವು. ಇಲ್ಲಿ ನಮ್ಮ ಸಮಸ್ತ ಪ್ರಾಣ ಮತ್ತು ತ್ರಾಣ ನೆಲಸಿದೆ ಎನ್ನುತ್ತದೆ ಆಯುರ್ವೇದ. ದಶಧಮನಿಗಳ ಮೂಲಕ ಹರಿಯುವುದು ಕೇವಲ ಭೌತಿಕ ರಕ್ತವಲ್ಲ. ಉಂಡ ಅನ್ನದ ಸಾರರೂಪೀ ರಸ. ಅಮ್ಲಜನಕ ರೂಪದ ಪ್ರಾಣರೂಪೀ ತ್ರಾಣ ಸಹ. ದೇಹ ಗೇಹ ಎಂಬ ಪದ ಗೊತ್ತಲ್ಲ; ದೇಹವೆಂದರೆ ಮನೆ. ಮನೆಯ ಸೂರು ಹೇಗೆ ಮೇಲೆ ಇರುವ ಜಂತಿ, ತೊಲೆಗಳ ಆಧಾರದಿಂದ ಗಟ್ಟಿ ಮುಟ್ಟಾಗಿ ಬಾಳುವುದೋ ಅಂತೆಯೇ ನಮ್ಮ ದೇಹವೂ. ಆಧುನಿಕ ವೈದ್ಯರ ಹೊಸ ವ್ಯಾಖ್ಯಾನ ಕೇಳಿದ್ದೀರಿ. ‘ಮಲ್ಟಿಪಲ್ ಆರ್ಗನ್ ಫೆಲ್ಯೂರ್’ ಎಂಬ ಸಾವಿನ ಕಾರಣ ಬರೆದು ಸಾವನ್ನು ಇಂದು ನಿರ್ಧರಿಸುವ ಹೊಸ ಕ್ರಮವಿದೆ. ಹೃದಯದ ಮುಷ್ಕರ, ಸ್ತಬ್ಧತೆ ಮಾತ್ರ ಸಾವಿನ ಕಾರಣ ಅಲ್ಲ ಎಂಬುದು ವಿಜ್ಞಾನ ಒಪ್ಪಿದೆ. ಹೃದಯ ಆರೋಗ್ಯ ಕಾಪಾಡುವ ಆಯುರ್ವೇದದ ಸಂಗತಿಯನ್ನು ಅರಿಯೋಣ.

‘ಆಹರತಿ ದಯತಿ ಇತಿ ಹೃದಯಂ’ ಎಂಬ ಪದದ ವ್ಯುತ್ಪತ್ತಿಯ ಅರ್ಥ ಹೀಗೆ. ಯಾವುದು ಒಳಮುಖವಾಗಿ ಹರಿಯಿಸಿಕೊಳ್ಳುತ್ತದೋ ಹಾಗೂ ಹೊರಕ್ಕೆ ರವಾನಿಸುತ್ತದೆಯೋ ಅದು ಹೃದಯ. ‘ಉರೋ ಹೃದಯ’ ಎಂದರೆ ನಾವು ತಿಳಿದ ನಾಲ್ಕು ಕೋಣೆಯ ಭೌತಿಕ ಹೃದಯ. ರಸ, ರಕ್ತ ಮುಂತಾದ ಧಾತುಗಳನ್ನು ತನ್ನೊಳಗೆ ಹರಿಯಬಿಟ್ಟುಕೊಳುವುದು. ಹಾಗೆಯೇ ದೇಹದ ಮೂಲೆಮೂಲೆಗೆ ಪ್ರಸರಿಸುತ್ತದೆ. ಅದೇ ರೀತಿ ಕೆಲಸ ಮಾಡುವ ಮತ್ತೊಂದು ಅವಯವಕ್ಕೂ ‘ಹೃದಯ’ ಎಂಬ ಪದ ಬಳಕೆ ಇದೆ. ಅದು ಶಿರೋ ಹೃದಯ ಅಥವಾ ಮೆದುಳು. ಕಾಲಿನ ತುದಿ ಹೆಬ್ಬೆಟ್ಟಿನ ಮೂಲೆಯಿಂದ ನೆತ್ತಿ ಕೂದಲ ತುದಿ ತನಕದ ಸಂಪರ್ಕ ಪಡೆಯುವ ಮತ್ತು ರವಾನಿಸುವ ಅದ್ಭುತ ಯಂತ್ರವೇ ಈ ಹೃದಯ. ಅದು ಮಾನವ ‘ಮೆದುಳು’. ಮಾತೃಗರ್ಭದ ನಾಲ್ಕನೆಯ ತಿಂಗಳಿನಿಂದ ಕೊನೆಯುಸಿರಿನ ತನಕ ಈ ಹೃದಯವ್ಯಾಪಾರ ಅವ್ಯಾಹತ. ಆಗ ನಮ್ಮ ಹಿತ ಸುಖದ ಆಯುಷ್ಯ. ಅಡೆ–ತಡೆಯಾದರೆ ರೋಗ.

ಬಸುರಿಗೆ ಮಾಡುವ ಬಯಕೆ ಗೊತ್ತಲ್ಲ. ಆಕೆಯ ಇಷ್ಟದ ತಿನಿಸು ಉಣಿಸು ಬಡಿಸುವೆವು. ಇಷ್ಟದ ಬಂಧುಮಿತ್ರರ ಆಗಮನವೇ ಆಕೆಯ ಮನಸ್ಸಂತೋಷದ ಪರಿ. ಇಂತಹ ಇಷ್ಟ–ಅನಿಷ್ಟಗಳ ಭಾವ ಪ್ರಕಟವಾಗುವುದು ಕೇವಲ ತಾಯಿಗಷ್ಟೆ ಅಲ್ಲ, ಗರ್ಭಸ್ಥ ಮಗುವಿನ ಹೃದಯ ಕೇಳುವುದಂತೆ. ಅದು ಆಕೆಯ ಮೂಲಕ ಪ್ರಕಟ. ಹಾಗಾಗಿ ಮಾತೆಯನ್ನು ಆಗ ಎರಡು ಹೃದಯದ ಒಡತಿ (ದೌಹೃದಿನೀ) ಎನ್ನುವರು. ಮಧುರರಸದಿಂದ ಹೃದಯಕ್ಕೆ ತೃಪ್ತಿ ಮತ್ತು ಬಲ. ಸಪ್ತ ಧಾತು ಮತ್ತು ಓಜಸ್ (ಧಾತು ಸಾರ) ಹೆಚ್ಚಬೇಕೆ? ಮಧುರರಸವನ್ನು ಸೇವಿಸಿರಿ ಎನ್ನುತ್ತದೆ, ಆಯುರ್ವೇದ. ಆಯುಷ್ಯವೃಧ್ಧಿಗೆ ಇದು ಅನಿವಾರ್ಯ.

ಷಡ್ರಸಗಳ ಪೈಕಿ ಸಿಹಿಯ ಅನಂತರದ ರಸ ಹುಳಿ. ಹುಳಿರಸದ ಹಿತಮಿತ ಸೇವನೆಗೆ ಆಯುರ್ವೇದ ಮಣೆ ಹಾಕುತ್ತದೆ. ಅಂತಹ ಹತ್ತು ಫಲ/ವಸ್ತುಗಳನ್ನು ನಿತ್ಯ ಬಳಸಿರಿ; ಹೃದಯದ ಆಯುಷ್ಯ, ಆರೋಗ್ಯ ಹೆಚ್ಚುತ್ತದೆ ಎನ್ನುತ್ತದೆ, ಆಯುರ್ವೇದ. ಅವುಗಳಿಗೆ ಹೃದ್ಯದ್ರವ್ಯ ಎನ್ನುವ ಪರಿಭಾಷೆ! ಆ ಪಟ್ಟಿಯಲ್ಲಿ ಮಾವು ಮೊದಲನೆಯದು. ಅದು ಸಿಗುವ ಕಾಲದಲ್ಲಿ ಖಂಡಿತ ಧಾರಾಳವಾಗಿ ಬಳಸಿರಿ. ಹುಳಿ ಮತ್ತು ಸಿಹಿಯ ಫಲಗಳ ಸಾಲಿನ ಎರಡನೆ ಫಲ ಅಮಟೆಕಾಯಿ. ಮಳೆಗಾಲದುದ್ದಕ್ಕೆ ಸಿಗುವ ಅಮಟೆಯನ್ನು ಆಯುರ್ವೇದವು ‘ಹೃದಯಾರೋಗ್ಯದಾಯೀ’ ಎನ್ನುತ್ತದೆ. ಕಡ್ಡಿ ನೆಟ್ಟರೆ ಚಿಗುರುವ ಅಮಟೆಯನ್ನು ಮೂದಲಿಕೆ ವಾಚ್ಯಾರ್ಥದ ಮೂಲಕ ಅಪಮಾನಿಸುವ ನಮಗೆ ಅದರ ಮಹತ್ವ ತಿಳಿದೇ ಇಲ್ಲವಲ್ಲ. ಮೂರನೆಯದು ‘ಲಕುಚ’ ಎಂಬ ಕಾಡಿನ ಹಣ್ಣು. ವಾಟೆ ಹುಳಿ, ಎಸಳು ಹುಳಿ ಎಂಬಿತ್ಯಾದಿ ಭಾಷಿಕ ನಾಮಗಳ ಭಾರಿ ಮರ. ಮುಷ್ಟಿಗಾತ್ರದ ಕಾಯಿಯನ್ನು ಒಣಗಿಸಿ ಹುಣಿಸೆ ಬದಲಿಗೆ ಬಲ್ಲವರು ಬಳಸುವ ಕಾಡಿನ ಫಲ. ಹೃದಯದ ಬಲ ಮಾತ್ರ ಹೆಚ್ಚಳವಲ್ಲ; ದೇಹದ ತೂಕವನ್ನು ಇಳಿಸುವ, ಕೊಬ್ಬು ಕರಗಿಸಿ ಹೃದಯವನ್ನು ಕಾಪಾಡುವ ಅದ್ಭುತ ಹಣ್ಣುಮರವನ್ನು ಮರೆತೆವೇಕೆ?

ಕಾಡಿನ ಹಣ್ಣು ಕೌಳಿಕಾಯಿ ಎಂದರೆ ಉಪ್ಪಿನ ಕಾಯಿ ಮಾತ್ರ ನೆನಪಾಗುತ್ತದೆ. ಚರಕರ ಪ್ರಕಾರ ಕೌಳಿಹಣ್ಣನ್ನು ಬಳಸಿದರೆ ಹೃದಯದ ಆರೋಗ್ಯ ಹೆಚ್ಚಳ. ಈ ಕಾಡಿನ ಹಣ್ಣಿಗೆ ಉತ್ತೇಜನ ನೀಡುವುದು ನಮ್ಮ ಉದ್ದಿಮೆಗಳಿಗೆ ಕಷ್ಟದ ಕೆಲಸವೇನಲ್ಲ. ಟನ್‍ಗಟ್ಟಲೆ ಕೌಳಿ ಹಣ್ಣನ್ನು ಉತ್ಪಾದಿಸೋಣ. ಶ್ರೀಸಾಮಾನ್ಯರ ಬಳಕೆಗೆ ಲೇಹ, ಜಾಂ, ಜ್ಯೂಸ್ ರೂಪದಲ್ಲಿ ತರುವ ಕೆಲಸ ನಮ್ಮದಾಗಲಿ. ಮುರುಗಲ ಮತ್ತು ಮಂತುಹುಳಿ ಎಂಬ ಎರಡು ಬಗೆಯ ಹುಳಿಹಣ್ಣು ಕೂಡ ಕಾಡಿನ ಮೂಲದವೇ. ಕಾಡು ಕಡಿಮೆಯಾಗಿ, ಸರಬರಾಜು ಇಳಿದಿದೆ. ನೆಟ್ಟು ಬೆಳೆಸಲು ವಿಪುಲ ಅವಕಾಶ. ಕೋಕಂ ಎಂದರೆ ಮುರುಗಲ ಅಥವಾ ಪುನರಪುಳಿ. ಅದರೆ ಬಳಕೆಗೆ ಒತ್ತು ನೀಡೋಣ. ಮಂತುಹುಳಿಯ ಸತ್ವ ತೆಗೆದು ಕೊಲೆಸ್ಟೆರಾಲ್, ಕೊಬ್ಬು ಕರಗಿಸುವ ಮದ್ದು–ಗುಳಿಗೆ ಮಾರುಕಟ್ಟೆಯ ಸರಕಾಗಿತ್ತು. ಇವು ಖಂಡಿತ ಇಂದಿನ ನಮ್ಮ ಅಗತ್ಯ.

ಬದರಿಕಾಶ್ರಮದ ಹೆಸರಿನ ಹಿಂದಿರುವುದು ಎಲಚಿಯ ಹಣ್ಣು. ಅಂತಹ ಮರಗಳ ಹಣ್ಣು ಇಂದು ಸಂಕ್ರಾಂತಿ ಎಳ್ಳಿನ ಜೊತೆಯ ‘ಶೋ ಪೀಸ್’ ಆಗಿಬಿಟ್ಟಿದೆ. ಬೇಡತಿ ಶಬರಿ ಮಾತೆಯು ರಾಮನಿಗಿತ್ತ ಈ ಬೋರ ಹಣ್ಣಿನ ಎರಡು ಪ್ರಭೇದಗಳೂ ಹೃದಯಾರೋಗ್ಯದಾಯೀ. ಚಳಿಗಾಲದ ಹೃದಯಾಘಾತದ ತಡೆಗೆ ಸಂಕ್ರಾಂತಿಯ ದಿನ ಮಾತ್ರ ನೆನಪಿಸಿಕೊಳ್ಳಬೇಕೇ? ಮರೆತು ಹೃದಯದ ಕಾಯಿಲೆಗೆ ತುತ್ತಾಗಿ ಜೀವನದುದ್ದ ಮುಷ್ಟಿ ಮುಷ್ಟಿ ಮಾತ್ರೆ ನುಂಗಬೇಕೆ? ಆಯ್ಕೆ ನಮ್ಮದೇ. ಎದೆ ಉರಿ, ಅ್ಯಸಿಡಿಟಿ ಎಂದರೆ ನೆನಪಾಗುವುದು ಮಾದೀಫಲ. ಲಿಂಬೆ ಜಾತಿಯ ಮಾದಳದ ಹೆಸರು ವಿಶ್ವಗುರು ಬಸವಣ್ಣನವರ ಹೆತ್ತವರದ್ದು. ಅವರೇ ಪುಣ್ಯಜೀವಿಗಳಾದ ಮಾದರಸ, ಮಾದಳಾಂಬಿಕೆಯರು! ಅಂಬಿಕೆಯ ಹವನದ ಪೂರ್ಣಾಹುತಿಗೆ ಒದಗುವ ಮಾದಳಹಣ್ಣು ನಿತ್ಯ ಬಳಸಿದರೆ ಕೇವಲ ಎದೆ ಉರಿಯಷ್ಟೆ ಪರಿಹಾರವಲ್ಲ, ಹೃದಯದ ಕಾಯಿಲೆಗಳೂ ಬಾರವು. ಈ ಪಟ್ಟಿಯಲ್ಲಿ ಕೊನೆಯದ ದಾಳಿಂಬೆ. ಹೀಗೆ ಹತ್ತು ಹಣ್ಣು ನಿಮಗಾಗುವಷ್ಟು ನಿತ್ಯ ಬಳಸಿರಿ. ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಿರಿ.

‘ವಿಷಾದೋ ರೋಗ ವರ್ಧನಾನಾಂ’ ಎನ್ನುತ್ತದೆ, ಆಯುರ್ವೇದ. ಚಿಂತೆಯಿಂದ ರೋಗಸಂಕುಲ. ಹಿತಮಿತದ ಆಹಾರ, ಒಡನಾಟವೇ ಹಿತಾಯುಷ್ಯದ ಸೋಪಾನ. ಒಳಿತು ಕೆಡುಕು ವಿಶ್ಲೇಷಿಸುವಾ. ಜೀವ ಶೈಲಿಗೆ ಅಳವಡಿಸುವಾ. ವಿಷಯಸುಖಗಳ ದಾಸ್ಯ ಖಂಡಿತ ಬೇಡ. ದಾನಶೀಲವನ್ನು ಗುಣ ಬೆಳೆಸುವಾ. ಸತ್ಯಪರತೆ, ಕ್ಷಮಾಗುಣ ನಮ್ಮದಾಗಲಿ. ಗುರುಹಿರಿಯರ ಸೇವೆ ನಮ್ಮಗೆ ಸಂತಸ ಮಾತ್ರ ಅಲ್ಲ, ಸುಖಾಯುಷ್ಯವನ್ನೂ ತರುತ್ತದೆ ಎನ್ನುತ್ತದೆ, ಚರಕಸಂಹಿತೆ. ಈ ದಾರಿ ನಮಗಿರಲಿ. ಹೃದಯವಂತಿಕೆಯ ಬದುಕು ನಮ್ಮದಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT