ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಿವಯಸ್ಸಿನ ತಲ್ಲಣ ಇರಲಿ ವೈಜ್ಞಾನಿಕ ಅರಿವು

Last Updated 14 ಆಗಸ್ಟ್ 2020, 21:57 IST
ಅಕ್ಷರ ಗಾತ್ರ

* 26 ವರ್ಷದ ವಿದ್ಯಾರ್ಥಿ. ಹಸ್ತಮೈಥುನದ ಅಭ್ಯಾಸವಿದೆ. ಇದರಿಂದ ಶೀಘ್ರಸ್ಖಲನ ಉಂಟಾಗುತ್ತಿದೆ. ತೊಂದರೆಯಿಂದ ಹೊರಬರುವುದು ಹೇಗೆ?

* ಬಿಎಸ್ಸಿ (ಕೃಷಿ) ಓದುತ್ತಿದ್ದೇನೆ. ಪರೀಕ್ಷೆಯಲ್ಲಿ ಅಂಕಗಳು ಚೆನ್ನಾಗಿ ಬಂದರೂ ನನಗೆ ಜ್ಞಾನವಿಲ್ಲ ಎನ್ನಿಸುತ್ತಿದೆ. ಹಸ್ತಮೈಥುನದಿಂದ ದುರ್ಬಲನಾಗುತ್ತಿದ್ದೇನೆ. ಹಗಲುಗನಸುಗಳನ್ನು ಕಾಣುತ್ತಿರುತ್ತೇನೆ. ಜೀವನವನ್ನು ನಾಶಮಾಡಿಕೊಳ್ಳುತ್ತಿದ್ದೇನೆ ಎನ್ನಿಸಿ ಓದಿನಲ್ಲಿ ಏಕಾಗ್ರತೆ ಸಾಧ್ಯವಾಗುತ್ತಿಲ್ಲ. ಸಹಾಯಮಾಡಿ.

* ಎಂಟು ವರ್ಷಗಳಿಂದ ಹಸ್ತಮೈಥುನದ ಅಭ್ಯಾಸವಿದ್ದು ಬಿಡಲು ಆಗುತ್ತಿಲ್ಲ. ಕೂದಲು ಉದುರುತ್ತಿದ್ದು ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮವಾಗುತ್ತಿದೆ. ಪರಿಹಾರವೇನು?

* ಬಿಎಸ್ಸಿ ವಿದ್ಯಾರ್ಥಿ. 5-6 ವರ್ಷಗಳಿಂದ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದು ತುಂಬಾ ದುರ್ಬಲನಾಗಿದ್ದೇನೆ. ಆರೋಗ್ಯ ಕ್ಷೀಣಿಸಿದೆ. ಪರಿಹಾರವೇನು?

ಉತ್ತರ: ಈ ರೀತಿಯ ಪ್ರಶ್ನೆಗಳು ಹೆಚ್ಚಾಗಿರುವುದರಿಂದ ಒಟ್ಟಾಗಿ ಉತ್ತರಿಸುತ್ತಿದ್ದೇನೆ. ಹದಿವಯಸ್ಸಿನ ಸ್ನೇಹಿತರು ತಮ್ಮ ಲೈಂಗಿಕತೆಯ ಬಗ್ಗೆ ತಿಳಿದುಕೊಳ್ಳಲು ಇದನ್ನು ಓದಬಹುದು.

ಸುಮಾರು 12 ವರ್ಷಗಳಾದಾಗ ಹೆಣ್ಣು–ಗಂಡುಗಳಿಬ್ಬರಲ್ಲಿಯೂ ದೈಹಿಕ ಬದಲಾವಣೆಗಳು ಪ್ರಾರಂಭವಾಗುತ್ತವೆ. ಪ್ರಕೃತಿ ವಂಶಾಭಿವೃದ್ಧಿಗೆ ನಿಮ್ಮನ್ನು ಸಿದ್ಧಪಡಿಸುತ್ತಿರುವ ಸೂಚನೆ ಇದು. ಗಂಡುಹೆಣ್ಣುಗಳನ್ನು ಹತ್ತಿರ ತರುವುದಕ್ಕಾಗಿ ಮನಸ್ಸಿನಲ್ಲಿ ಪರಸ್ಪರ ಆಕರ್ಷಣೆಯೂ ಉಂಟಾಗುತ್ತದೆ. ನಿಮಗೆ ಇವೆಲ್ಲದರ ಕುರಿತು ಸೂಕ್ತ ಶಿಕ್ಷಣ ನೀಡುವ ವ್ಯವಸ್ಥೆಯಿಲ್ಲ. ಪ್ರಕೃತಿ ಹೆಣ್ಣುಗಂಡಿನ ಸಂಪರ್ಕಕ್ಕೆ ನಿಮ್ಮನ್ನು ಸಿದ್ಧಪಡಿಸುತ್ತಿದ್ದರೂ ನಮ್ಮ ಸಮಾಜ ಸಂಸ್ಕೃತಿಗಳು ಅದಕ್ಕೆ ಒಪ್ಪಿಗೆ ನೀಡಿರುವುದಿಲ್ಲ. ಹೀಗಾಗಿ ಆಕರ್ಷಣೆಯನ್ನು ನಿಭಾಯಿಸಲು ಕಷ್ಟಪಡುತ್ತೀರಿ. ಇದು ಭಯವಾಗಿ, ಹಿಂಜರಿಕೆಯಾಗಿ, ಪಾಪಪ್ರಜ್ಞೆಯಾಗಿ, ಗೊಂದಲವಾಗಿ ಮನಸ್ಸಿನಲ್ಲಿ ಬೇರೂರುತ್ತದೆ.

ಕಾಮದ ಆಕರ್ಷಣೆಯನ್ನು ಸರಿಯಾಗಿ ಪರಿಹರಿಸಿಕೊಂಡು ವಿದ್ಯಾಭ್ಯಾಸ, ಹವ್ಯಾಸಗಳು ಉದ್ಯೋಗಗಳತ್ತ ಗಮನ ಹರಿಸಲು ಹಸ್ತಮೈಥುನ ಉತ್ತಮವಾದ ಬಿಡುಗಡೆಯ ದಾರಿಯಾಗಿರುತ್ತದೆ. ಪ್ರಪಂಚದೆಲ್ಲೆಡೆ ನಡೆದ ನೂರಾರು ಸಂಶೋಧನೆ ಸಮೀಕ್ಷೆಗಳಿಂದ ಹೊರಬಂದಿರುವ ಫಲಿತಾಂಶಗಳ ಪ್ರಕಾರ ಹಸ್ತಮೈಥುನದಿಂದ ದೈಹಿಕವಾಗಿ ಯಾವುದೇ ತೊಂದರೆಯಾಗುವುದಿಲ್ಲ. ಹೆಣ್ಣುಮಕ್ಕಳಿಗೂ ಹಸ್ತಮೈಥುನ ಸಂಪೂರ್ಣ ಆರೋಗ್ಯಕರ. ವಿವಾಹಿತರು, ಇಳಿವಯಸ್ಸಿನವರು ಕೂಡ ಸಂಗಾತಿಯ ಜೊತೆ ಸಿಗದಿದ್ದಾಗ ಹಸ್ತಮೈಥುನಕ್ಕೆ ಮೊರೆಹೋಗುವುದು ಪ್ರಪಂಚದೆಲ್ಲೆಡೆ ಕಂಡುಬಂದಿದೆ. ಕೆಲವರು ತಮ್ಮ ವಸ್ತುಗಳನ್ನು (ಅವು ಔಷಧಗಳಲ್ಲ, ನೆನಪಿರಲಿ) ಮಾರಾಟಮಾಡಲು ನಿಮ್ಮ ಮನಸ್ಸಿನಲ್ಲಿ ಅನಗತ್ಯ ಭಯ ಹುಟ್ಟಿಸಿ ಸ್ವಾರ್ಥ ಸಾಧಿಸಿಕೊಳ್ಳುತ್ತಾರೆ.

ಹಸ್ತಮೈಥುನದ ಕುರಿತ ತಪ್ಪು ತಿಳಿವಳಿಕೆಗಳನ್ನು ನೋಡೋಣ.

* ವೀರ್ಯನಾಶದಿಂದ ದೇಹ ದುರ್ಬಲವಾಗುವುದಿಲ್ಲ. ಸಶಕ್ತವಾದ ದೇಹಕ್ಕೆ ಬೇಕಾಗಿರುವುದು ಉತ್ತಮ ಆಹಾರ, ವ್ಯಾಯಾಮ ಮತ್ತು ಮಾನಸಿಕ ಸಮಾಧಾನಗಳು ಮಾತ್ರ. ವೀರ್ಯ ಹೊರಹೋದಷ್ಟೂ ವಯಸ್ಸಿಗನುಗುಣವಾಗಿ ಎಂಜಲಿನಂತೆ, ಬೆವರಿನಂತೆ ಸಹಜವಾಗಿ ದೇಹದಲ್ಲಿ ಉತ್ಪತ್ತಿಯಾಗುತ್ತದೆ.

* ಲೈಂಗಿಕ ಅಂಗಾಂಗಗಳ ಅಳತೆ, ಅಕಾರಗಳು ಅನುವಂಶಿಕವಾದದ್ದು. ಹಸ್ತಮೈಥುನದಿಂದ ಇವು ಬದಲಾವಣೆಯಾಗುವುದಿಲ್ಲ. ಶೀಘ್ರಸ್ಖಲನಕ್ಕೆ ತಪ್ಪು ತಿಳಿವಳಿಕೆಗಳಿಂದ ಬರುವ ಆತಂಕ ಕಾರಣವೇ ಹೊರತು ಹಸ್ತಮೈಥುನವಲ್ಲ.

* ಹಸ್ತಮೈಥುನದಿಂದ ಕೌಟುಂಬಿಕ ಜೀವನಕ್ಕೆ ತೊಂದರೆಯಾಗುವುದಿಲ್ಲ. ಶೇಖರಿಸಲು ಜಾಗವಿಲ್ಲದಿದ್ದಾಗ ವೀರ್ಯ ಸಹಜವಾಗಿ ಹೊರಹೋಗಲೇಬೇಕು. 100 ವರ್ಷಗಳ ಹಿಂದೆ 18ನೇ ವಯಸ್ಸಿಗೆ ಮದುವೆಯಾಗುತ್ತಿದ್ದ ಗಂಡಸರು 70 ವರ್ಷದವರೆಗೂ ಹೆಂಡತಿಯ ಸಖ್ಯ ಇಟ್ಟುಕೊಳ್ಳುವುದು ಹೇಗೆ ಸಾಧ್ಯವಾಗುತ್ತಿತ್ತು ಯೋಚಿಸಿ.

* ಮಕ್ಕಳಾಗುವುದಕ್ಕೂ, ಹಸ್ತಮೈಥುನಕ್ಕೂ ಸಂಬಂಧವಿಲ್ಲ. ಮಗುವಿನ ಸೃಷ್ಟಿಗೆ ಅಗತ್ಯವಾದ ಸ್ತ್ರೀ ಅಂಡಾಣು ಮಾಸಿಕ ಋತುಚಕ್ರದ ಸಮಯದಲ್ಲಿ ನಿರ್ಜೀವವಾಗಿ ಹೊರಹೋಗುತ್ತದೆ. ಇದರಿಂದ ಸ್ತ್ರೀಯರ ಫಲವತ್ತತೆಗೆ ತೊಂದರೆಯಾಗುವುದಿಲ್ಲ. ಹಾಗಿದ್ದ ಮೇಲೆ ಸ್ಖಲನದಿಂದ ಪುರುಷರ ಫಲವತ್ತತೆ ಕಡಿಮೆಯಾಗುತ್ತದೆ ಎನ್ನುವುದು ಸುಳ್ಳಲ್ಲವೇ?

* ಭಾವನೆಗಳನ್ನು ಹಂಚಿಕೊಂಡು ಸುಖಿಸಲು ಸಂಗಾತಿ ಇರುವುದಿಲ್ಲ ಎನ್ನುವುದರ ಹೊರತಾಗಿ ಹಸ್ತಮೈಥುನಕ್ಕೂ ಮಿಲನಕ್ಕೂ ದೈಹಿಕವಾಗಿ ವ್ಯತ್ಯಾಸವಿರುವುದಿಲ್ಲ.

ಹಸ್ತಮೈಥುನದ ಬಗೆಗೆ ಕೆಲವು ಸಲಹೆಗಳು

* ನಿಮ್ಮ ಸುಖದ ಕ್ಷಣಗಳು ಇತರರಿಗೆ ಮುಜುಗರವಾದಂತೆ ಖಾಸಗಿತನವನ್ನು ಉಳಿಸಿಕೊಳ್ಳಿ.

* ಹಸ್ತಮೈಥುನಕ್ಕೆ ಮೊದಲು ಮತ್ತು ಅನಂತರ ಒಳಉಡುಪು ಮತ್ತು ಲೈಂಗಿಕ ಅಂಗಾಗಗಳ ಶುಚಿತ್ವವನ್ನು ಕಾಪಾಡಿಕೊಳ್ಳಿ.

* ನಿಮ್ಮ ವಿದ್ಯಾಭ್ಯಾಸ, ಸ್ನೇಹ ಸಂಬಂಧಗಳು, ಹವ್ಯಾಸಗಳಿಗೆ ಅಡ್ಡಬರದಂತೆ ಹಸ್ತಮೈಥುನದಿಂದ ತೃಪ್ತಿ ಪಡೆಯುವ ದಾರಿಗಳನ್ನು ಹುಡುಕಿಕೊಳ್ಳಿ.

* ಲೈಂಗಿಕ ಅಂಗಾಂಗಗಳಿಗೆ ಹಾನಿಯಾಗದಂತೆ ಎಚ್ಚರವಹಿಸಿ.

ಹದಿವಯಸ್ಸಿನ ಲೈಂಗಿಕ ಆಕರ್ಷಣೆ ಪ್ರಕೃತಿ ಸಹಜ. ಅದನ್ನು ತಡೆಹಿಡಿದಷ್ಟೂ ಹೆಚ್ಚಾಗಿ ಕಾಡುತ್ತದೆ. ಭಾವನೆಗಳನ್ನು, ಆಕರ್ಷಣೆಗಳನ್ನು ಆನಂದಿಸಿ. ಲೈಂಗಿಕತೆಯ ಬಗ್ಗೆ ವೈಜ್ಞಾನಿಕ ತಿಳುವಳಿಕೆಗಳನ್ನು ಪಡೆದುಕೊಳ್ಳಿ. ಅಗತ್ಯವಿದ್ದರೆ ತಜ್ಞ ಮನೋಚಿಕಿತ್ಸಕರನ್ನು ಭೇಟಿಯಾಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT