ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ರೋಗಿಗಳಲ್ಲಿ ಸಂಭಾವ್ಯ ಅಪಾಯ ತಿಳಿಯಲು ರ‍್ಯಾಪಿಡ್‌ ರಕ್ತ ಪರೀಕ್ಷೆ

Last Updated 16 ಜನವರಿ 2021, 5:53 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಕೋವಿಡ್‌–19ನಿಂದಾಗಿ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಯಾವುದಾದರೂ ತೀವ್ರತರ ಸಮಸ್ಯೆಗಳು ಕಾಡಲಿವೆಯೇ? ಅವರ ಪ್ರಾಣಕ್ಕೆ ಅಪಾಯ ಇದೆಯೇ ಎಂಬುದನ್ನು ಪತ್ತೆ ಹಚ್ಚಲು ವಿಜ್ಞಾನಿಗಳು ರ‍್ಯಾಪಿಡ್‌ ರಕ್ತ ಪರೀಕ್ಷೆಯನ್ನು ಅಭಿವೃದ್ಧಿಪಡಿಸಿದ್ದಾರೆ.

ಈ ಪರೀಕ್ಷೆಯ ಮೂಲಕ, ರೋಗಿ ಆಸ್ಪತ್ರೆಗೆ ದಾಖಲಾದ ಒಂದು ದಿನದೊಳಗೆ ಸಂಭಾವ್ಯ ಅಪಾಯದ ಬಗ್ಗೆ ತಿಳಿಯಬಹುದಾಗಿದೆ.

ಸೇಂಟ್‌ ಲೂಯಿಸ್‌ನಲ್ಲಿರುವ ವಾಷಿಂಗ್ಟನ್‌ ಯೂನಿವರ್ಸಿಟಿ ಆಫ್‌ ಮೆಡಿಸಿನ್‌ನ ಸಂಶೋಧಕರು ಈ ಪರೀಕ್ಷೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಸಂಶೋಧನಾ ವರದಿ ‘ಜೆಸಿಐ ಇನ್‌ಸೈಟ್‌’ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

‘ಈ ರ‍್ಯಾಪಿಡ್‌ ರಕ್ತ ಪರೀಕ್ಷೆ ನಡೆಸಿ, ಸಂಭಾವ್ಯ ಅಪಾಯವನ್ನು ತಿಳಿದುಕೊಂಡರೆ ರೋಗಿಗಳಿಗೆ ಪರಿಣಾಮಕಾರಿಯಾದ ಚಿಕಿತ್ಸೆಯ್ನು ಬೇಗನೆ ನೀಡಲು ಸಾಧ್ಯವಾಗುವುದು’ ಎಂದು ಸಂಶೋಧನೆಯ ಭಾಗವಾಗಿದ್ದ ಆಂಡ್ರ್ಯೂ ಇ.ಜೆಲ್‌ಮನ್‌ ಹೇಳಿದ್ದಾರೆ.

‘ಜೀವಕೋಶಗಳ ಮೇಲೆ ದಾಳಿ ನಡೆಸುವ ಕೊರೊನಾ ವೈರಸ್‌, ಜೀವಕೋಶದಲ್ಲಿರುವ ಮೈಟೋಕಾಂಡ್ರಿಯಾಕ್ಕೆ ಹಾನಿ ಮಾಡುತ್ತದೆ. ಮೈಟೋಕಾಂಡ್ರಿಯಾದಲ್ಲಿರುವ ಡಿಎನ್‌ಎ ಹೊರಬರುತ್ತದೆ. ಇದು ರೋಗಿಯಸಾವಿಗೆ ಕಾರಣವಾಗುತ್ತದೆ’ ಎಂದು ಅವರು ವಿವರಿಸಿದರು.

‘ಕೋವಿಡ್‌ ರೋಗಿಗಳ ಶ್ವಾಸಕೋಶ, ಹೃದಯ ಮತ್ತು ಮೂತ್ರಪಿಂಡಗಳಲ್ಲಿ ಈ ರೀತಿಯ ಜೀವಕೋಶ ಮತ್ತು ಅಂಗಾಂಶಗಳು ಹಾನಿಗೊಳಗಾಗಿರುವ ಪುರಾವೆಗಳಿವೆ’ ಎಂದು ಅವರು ತಿಳಿಸಿದರು.

‘ವ್ಯಕ್ತಿಯಲ್ಲಿ ಕೋವಿಡ್‌–19 ದೃಢಪಟ್ಟ 24 ಗಂಟೆಗಳ ಒಳಗಾಗಿ ರೋಗಿಗೆ ಡಯಾಲಿಸಿಸ್ ನೀಡಬೇಕೇ, ಕೇವಲ ಔಷಧಿಗಳ ಮೂಲಕ ರಕ್ತದೊತ್ತಡ ನಿಯಂತ್ರಿಸಬೇಕೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಇದಕ್ಕಾಗಿ ಸಾಕಷ್ಟು ಸಂಶೋಧನೆಯೂ ಅಗತ್ಯ ಇದೆ’ ಎಂದು ಮತ್ತೊಬ್ಬ ಸಂಶೋಧಕ ಹೃಷಿಕೇಶ್‌ ಎಸ್‌.ಕುಲಕರ್ಣಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT