ಮಂಗಳವಾರ, ಡಿಸೆಂಬರ್ 6, 2022
20 °C

ವೃದ್ಧಾಪ್ಯ | ಹಿರಿಯರ ಮಾತಿನ ಹಸಿವು!

ಡಾ. ಕೆ. ಎಸ್‌. ಪವಿತ್ರ Updated:

ಅಕ್ಷರ ಗಾತ್ರ : | |

Prajavani

ಹಿರಿಯರಲ್ಲಿ ವಯಸ್ಸಿನೊಂದಿಗೆ ಮನಸ್ಸು ಮಾಗುವುದು; ಹಾಗೆಯೇ ಮನಸ್ಸು ತುಂಬಾ ಸೂಕ್ಷ್ಮವಾಗುವುದೂ ಹೌದು...

**

ಅರವತ್ತು ವರ್ಷ ದಾಟಿದ ಹಿರಿಯರು ನಿಮ್ಮ ಮನೆಯಲ್ಲಿ ಇದ್ದಾರೆಯೇ? ಹಾಗಿದ್ದರೆ ನೀವು ಈ ಲೇಖನ ಓದಲೇಬೇಕು. ಹಾಗೆಯೇ ನೀವೇ ಅರವತ್ತು ವರ್ಷ ವಯಸ್ಸಿನ ಆಸುಪಾಸಿನಲ್ಲಿದ್ದರೂ ಇಲ್ಲಿನ ವಿಷಯ ನಿಮಗೆ ಅನ್ವಯಿಸುತ್ತದೆ.

ಒಮ್ಮೆ ಒಬ್ಬರು ತಮ್ಮ ತಾಯಿಯನ್ನು ಚಿಕಿತ್ಸೆಗೆಂದು ಕರೆತಂದಿದ್ದರು. 65 ವರ್ಷದ ಆ ಮಹಿಳೆಗಿದ್ದ ಸಮಸ್ಯೆಯೇನು? ಅವರ ಮಗಳ ಪ್ರಕಾರ ‘ನಮ್ಮಮ್ಮ ಯಾವಾಗಲೂ ಮಾತಾಡ್ತಾನೇ ಇರ್ತಾರೆ ಡಾಕ್ಟ್ರೇ, ನನ್ನ ಮಕ್ಕಳಿಗೋ ಅವರವರ ಓದು -ಆಟ-ಟಿ.ವಿ. ನಮ್ಮಮ್ಮನಿಗೆ ಆ ಮೊಮ್ಮಕ್ಕಳು ತುಂಬ ಚಿಕ್ಕವರು ಎಂಬ ಭಾವನೆ. ಹಾಗಾಗಿ ಅವರಿಗಾಗಿ ಚಿಕ್ಕ ಚಿಕ್ಕ ಆಟದ ಸಾಮಾನು, ಯಾವುದಾದರೊಂದು ತಿಂಡಿ ತರದೆ ಸಮಾಧಾನವಿಲ್ಲ. ಆದರೆ ನನ್ನ ಮಕ್ಕಳು ಹೊರಗಿನ ದೃಷ್ಟಿಯಿಂದ ದೊಡ್ಡವರೇ. ಅವರಿಗೆ ಇವೆಲ್ಲ ಮಕ್ಕಳಾಟಿಕೆ - ‘ಚೈಲ್ಡಿಷ್’ ಎನಿಸಿಬಿಡುತ್ತದೆ. ಆ ತಕ್ಷಣಕ್ಕೆ ಕೊಂಚ ಉತ್ಸಾಹ ತೋರಿಸಿದಂತೆ ಮಾಡಿ, ಆಮೇಲೆ ಅದನ್ನು ಉಪಯೋಗಿಸದೇ ಹಾಗೆ ಮೂಲೆ ಸೇರಿಸುತ್ತಾರೆ. ನಾನು ಆ ಕಡೆ ಅಮ್ಮನಿಗೂ ಏನೂ ಹೇಳುವ ಹಾಗಿಲ್ಲ, ಈ ಕಡೆ ಈಗಿನ ಕಾಲದ ಮಕ್ಕಳಿಗೂ ಏನೂ ಮಾತನಾಡುವಂತಿಲ್ಲ. ನಮ್ಮಮ್ಮ ಹೇಳಿದ್ದನ್ನೇ ಮತ್ತೆ ಮತ್ತೆ ನೆನಪಿಸಿಕೊಂಡು ನನಗೆ ಹೇಳುವುದು, ಮಾತನಾಡುವುದನ್ನೇ ಮುಗಿಸದಿರುವುದು ಇವು ‘ಡಿಮೆನ್ಷಿಯಾ’ ಇರಬಹುದೇ ಅಂತ ಅನುಮಾನ ಬರ್ತಿದೆ ಡಾಕ್ಟ್ರೇ ಏನು ಮಾಡಬೇಕು?’

ಆ ಹಿರಿಯ, ಆರೋಗ್ಯವಂತ ಮಹಿಳೆಗೆ ಇದ್ದದ್ದು ಯಾವ ಕಾಯಿಲೆಯೂ ಅಲ್ಲ. ಅದು ವೃದ್ಧಾಪ್ಯದಲ್ಲಿ ಮನುಷ್ಯ ಸಹಜವಾಗಿ ಪ್ರತಿಯೊಬ್ಬರೂ ಅನುಭವಿಸುವ ‘ಬೇಸರ’ದಿಂದ ಉಂಟಾಗುವ ಮಾತು-ಗಮನ-ಪ್ರೀತಿಗಳ ಹಸಿವು.

ದೇಹಕ್ಕೆ ವಯಸ್ಸಾದಂತೆ ಮನಸ್ಸಿಗೂ ವಯಸ್ಸಾಗುತ್ತದೆ. ಆದರೆ ಅದು ಚರ್ಮ, ತಲೆಕೂದಲು, ಹಲ್ಲು ಮೊದಲಾದವುಗಳಲ್ಲಿ ದೈಹಿಕವಾಗಿ ಸ್ಪಷ್ಟವಾಗಿ ಕಂಡಂತೆ ಹೊರಗೆ ತೋರುವುದಿಲ್ಲ. ದೇಹದ ಶಕ್ತಿ ಕುಂದಿದಂತೆ, ಮನಸ್ಸಿಗೂ ಧೈರ್ಯ-ಛಲ-ಉತ್ಸಾಹಗಳು ಕುಗ್ಗುತ್ತವೆ. ಅಲ್ಲಿಯವರೆಗೆ ಹೇಗೆ ಬೇಕಾದರೂ, ಏನು ಬೇಕಾದರೂ ಮಾಡಿಯೇನು ಎಂಬಂತಿರುವ ಮನೋಭಾವ ಸ್ವಲ್ಪ ತಗ್ಗಿ, ‘ಈಗಲೂ ಈ ಕೆಲಸಗಳನ್ನು ಮಾಡಬೇಕು; ಆದರೆ ಜೊತೆಗೊಬ್ಬರು ಇರಬೇಕು’ ಎನ್ನುವ ನಿರೀಕ್ಷೆಯಾಗಿ ಬದಲಾಗುತ್ತದೆ. ದೇಹದಲ್ಲಿ ಕಿವಿ-ಕಣ್ಣುಗಳ ಸಾಮರ್ಥ್ಯದ ಕುಂದುವಿಕೆ, ಆಗಾಗ ಮರೆವು ಇವುಗಳೂ ಈ ಛಲ ತಗ್ಗಲು, ನಿರೀಕ್ಷೆಯಾಗಿ ಬದಲಾಗಲು ಪ್ರಮುಖ ಕಾರಣಗಳೇ.

ವಯಸ್ಸಾದಂತೆ ಕಡಿಮೆಯಾಗದಿರುವ ಸಾಮರ್ಥ್ಯವೆಂದರೆ ಮಾತನಾಡುವ ಸಾಮರ್ಥ್ಯ. ಅವರ ಅನುಭವ, ದೀರ್ಘ ತಿಳಿವಳಿಕೆಗಳಿಂದ ಇತರರು ಗಮನಿಸದ ಸಂಗತಿಗಳನ್ನು ಹಿರಿಯರು ಗಮನಿಸಿ ಹೇಳಬಹುದು. ಅದರ ಪರಿಣಾಮವಾಗಿ ಮಕ್ಕಳ-ಮೊಮ್ಮಕ್ಕಳ ಕೋಪಕ್ಕೂ ಅವರು ತುತ್ತಾಗಬಹುದು. ನಿವೃತ್ತಿಯಾಗಿ ಮನೆಯಲ್ಲಿರುವ ಹಿರಿಯರಾಗಲಿ, ಮಕ್ಕಳ ಜವಾಬ್ದಾರಿಗಳನ್ನು ಮುಗಿಸಿರುವ ಹಿರಿಯರಿಗಾಗಲಿ ಕೈ ಖಾಲಿಯಾದಂತೆನಿಸಬಹುದು. ಆಗ ಉಂಟಾಗುವ ಬೇಸರ, ಉಳಿದಿರುವ ಅಪಾರ ಸಮಯಗಳಿಂದ ಹಿರಿಯರು ಯಾರೊಡನೆಯಾದರೂ ಮಾತನಾಡಬೇಕೆಂದು ಹಾತೊರೆಯುತ್ತಾರೆ. ಕಿರಿಯರು ಸಿಕ್ಕಾಗ ಅವರೊಡನೆ ಎಡೆಬಿಡದೆ ಮಾತನಾಡಿ, ನಂತರ ಅವಹೇಳನಕ್ಕೆ ಒಳಗಾಗುವ ಸಂದರ್ಭಗಳೂ ಸಾಮಾನ್ಯವೇ.

ಹಿರಿಯರಲ್ಲಿ ವಯಸ್ಸಿನೊಂದಿಗೆ ಮನಸ್ಸು ಮಾಗುವುದು ಗೊತ್ತಷ್ಟೆ. ಹಾಗೆಯೇ ಮನಸ್ಸು ತುಂಬಾ ಸೂಕ್ಷ್ಮವಾಗುವುದೂ ಹೌದು. ದಣಿವಾಗಿ ಬಂದ ಮಗ /ಸೊಸೆ/ಮಗಳು/ಇತರರು ಆ ಕ್ಷಣಕ್ಕೆ ಪ್ರತಿಕ್ರಿಯೆ ತೋರದಿದ್ದರೆ, ಸಿಡುಕಿದರೆ ಪುರುಷವಾಗಲಿ, ಮಹಿಳೆಯಾಗಲಿ ಹಿರಿಯರಲ್ಲಿ ಕಣ್ಣಲ್ಲಿ ನೀರು ಒಸರುತ್ತದೆ, ಮುಖ ಸಪ್ಪಗಾಗುತ್ತದೆ. ಅದೇ ಕಿಂಚಿತ್ ಗಮನ ಕೊಟ್ಟು ಕೇಳುವ ಯಾರು ಸಿಕ್ಕರೂ ಮಾತನಾಡುವ ಉತ್ಸಾಹ ಏರುತ್ತದೆ. ಇದು ಸಹಜ ಪ್ರಕ್ರಿಯೆ.

ಹಿರಿಯರು ಹೆಚ್ಚು ಮಾತನಾಡುವುದಕ್ಕೆ, ಹೇಳಿದ್ದೇ ವಿಷಯವನ್ನು ಮತ್ತೆ ಮತ್ತೆ ಹೇಳುವುದಕ್ಕೆ ಅಧ್ಯಯನಗಳು ನೀಡುವ ಕಾರಣ ಏನು? ನಾವು ಅವರು ಹೇಳಿದ್ದನ್ನು ಕೇಳುವ, ಗಮನ ನೀಡದಿದ್ದಾಗ, ಅದನ್ನು ‘ಇವರು ಗಮನ ನೀಡುತ್ತಿಲ್ಲ’ ಎಂದು ಹಿರಿಯರ ಮನಸ್ಸು ಗ್ರಹಿಸುತ್ತದೆ. ಮತ್ತೆ ಮತ್ತೆ ಮಾತನಾಡಲು ಹೇಳಿದ್ದನ್ನೇ ಹೇಳಲು ಪ್ರೇರಣೆ ನೀಡುತ್ತದೆ. ಅದೇ ‘ಇವರು ಇನ್ನೂ ಎಷ್ಟು ಹೊತ್ತು ಮಾತಾಡ್ತಾರೋ’ ಎಂದು ಹೆದರದೆ ಕಿಂಚಿತ್ ಗಮನವಿಟ್ಟು, ಸಹನೆಯಿಂದ ಕೇಳುವ ಧೋರಣೆ ನಮ್ಮದಾದರೆ, ಈ ಸಮಸ್ಯೆ ಮನೆಯಲ್ಲಿ ಮಾಯವಾಗುತ್ತದೆ. ಹಾಗೆ ಮಾಡದೇ ಹೋದಾಗ ಹಿರಿಯರಲ್ಲಿ ಮಾತು ಹೆಚ್ಚಾಗುತ್ತದೆ; ಪ್ರತಿಕ್ರಿಯೆ ಸಿಗದಾಗ ಒಂಟಿತನ, ಖಿನ್ನತೆಗಳು ಮೊದಲಾಗುತ್ತವೆ!

ಹಣ್ಣೆಲೆಯನ್ನು ನೋಡಿ ಚಿಗುರೆಲೆ ನಕ್ಕಿತಂತೆ! ಮೊಮ್ಮಕ್ಕಳು ಅಜ್ಜ-ಅಜ್ಜಿಯರನ್ನು ಗೇಲಿ ಮಾಡುವುದು, ಅವರ ಅನುಭವದ ಮಾತಗಳನ್ನು ನಿರ್ಲಕ್ಷಿಸುವುದು, ಅವರು ‘ಚಿಕ್ಕವರು’ ಎಂದು ಭಾವಿಸಿ ಅಜ್ಜ-ಅಜ್ಜಿ ಪ್ರೀತಿಯ ಕುರುಹಾಗಿ ಕೊಟ್ಟಿರುವ ವಸ್ತುಗಳನ್ನು ಮೂಲೆಗೆ ತಳ್ಳುವುದು – ಇವೆಲ್ಲವೂ ಆ ಮಕ್ಕಳ ಅಪ್ಪ-ಅಮ್ಮ ಸರಿಪಡಿಸಲೇಬೇಕಾದಂತಹವು. ನಮ್ಮ ತಂದೆ-ತಾಯಂದಿರ ಹತ್ತಿರ ನಾವು ಸಮಯ ಕಳೆಯುವ ರೂಢಿಯಿಂದ ಮಾತ್ರ ಮನೆಯ ಮಕ್ಕಳಿಗೆ ಸರಿ ಮಾದರಿ ಸಾಧ್ಯ. ಸಂವಹನ ಮಾತಿನ ಮೂಲಕ ಸಾಧ್ಯವಾದಾಗ ಕ್ರಮೇಣ ಹಿರಿಯರಿಗೆ ಬೇಸರವಾಗದಂತೆ, ಕಣ್ಣಲ್ಲಿ ನೀರು/ ಮುಖ ಚಿಕ್ಕದಾಗದಿರುವಂತೆ  ‘ಇಂತಹ ವಸ್ತುಗಳು ತರಬೇಕಿಲ್ಲ, ಮಕ್ಕಳು ನಾವು ನಿಮ್ಮೊಡನೆ ಮಾತನಾಡಿ, ಆಟವಾಡಿದರೆ ನಮಗೂ ನಿಮಗೂ ಸಂತಸ’ ಎನ್ನುವ ಮಾತು ಮನಸ್ಸನ್ನು ಮುಟ್ಟಲು ಸಾಧ್ಯ.

ಅಂದರೆ ಹಿರಿಯರನ್ನು ಕಾಡುವುದು ಮಾತಿನ ಹಸಿವಲ್ಲ! ಭಾವನೆಗಳ ಮಹಾಪೂರ, ಕಿರಿಯರ ಗಮನದ ಕೊರತೆ! ಸ್ವಲ್ಪ ಗಮನ ಮತ್ತು ಸಮಯಗಳನ್ನು ನೀಡಿದರೆ ಹಿರಿಯರ ಮಾತಿನ ಹೆಚ್ಚಳದ ಸಮಸ್ಯೆ ಮಾಯ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು