ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕತೆಯ ಗೀಳುರೋಗ

Last Updated 23 ಅಕ್ಟೋಬರ್ 2019, 6:27 IST
ಅಕ್ಷರ ಗಾತ್ರ

ಲೈಂಗಿಕತೆ ಮತ್ತು ಕಾಮುಕತೆಗೆ ಇರುವ ವ್ಯತ್ಯಾಸವೆಂದರೆ ಮೊದಲನೆಯದು ಜೈವಿಕವಾದದ್ದು ಹಾಗೂ ಸಹಜವಾದದ್ದು, ಎರಡನೆಯದು ಮಾನಸಿಕವಾದದ್ದು ಮತ್ತು ಗೀಳಿಗೆ ಸಂಬಂಧಪಟ್ಟದ್ದು. ಮನೋರೋಗಗಳಲ್ಲಿ ಬಹಳ ಸಾಮಾನ್ಯವಾದ ಗೀಳಿನ ರೋಗದ ಒಂದು ಭಾಗವಾಗಿಯೇ ಗುರುತಿಸಬಹುದಾದ ಈ ಅನಿಯಂತ್ರಿತ ಕಾಮುಕತೆಯು ವ್ಯಕ್ತಿಯ ವ್ಯಸನದ ಪರಿಣಾಮವಾಗಿರುತ್ತದೆ. ಕೋಪವನ್ನು, ಕದಿಯುವುದನ್ನು, ಸುಳ್ಳು ಹೇಳುವುದನ್ನು ನಿಯಂತ್ರಿಸಲಾಗದೇ ವ್ಯಕ್ತಿಯು ಪ್ರಜ್ಞೆಯನ್ನು ಮತ್ತು ವರ್ತನೆಯ ಔಚಿತ್ಯವನ್ನು ಮೀರಿ ತನ್ನ ಗೀಳಿನ ಪ್ರದರ್ಶನ ಮಾಡುವನೋ ಕಾಮುಕತೆಯೂ ಕೂಡಾ ಅದೇ ಮಾದರಿಯದಾಗಿದೆ.

‘ಮೆಟ್ರೊ’ದಲ್ಲಿ ಇತ್ತೀಚೆಗೆ ವರದಿಯಾದ ವೃದ್ಧರೊಬ್ಬರ ಪ್ರಕರಣವೊಂದರಲ್ಲಿ ಗಮನಿಸಬೇಕಾಗಿರುವುದೂ ಕೂಡಾ ಕಾಮುಕತೆಯೇ ಹೊರತು ಲೈಂಗಿಕತೆಯ ವಿಚಾರವಲ್ಲ. ಅಂತೆಯೇ ಈ ಕಾಮುಕತೆಯು ಮನಸ್ಸಿಗೆ ಸಂಬಂಧಿಸಿರುವುದೇ ಹೊರತು ಲೈಂಗಿಕತೆಯ ಕಾರಣವಾದ ಜನನೇಂದ್ರಿಯವಲ್ಲ. ವೃದ್ಧರ ಮಕ್ಕಳು ಮತ್ತು ಮನೆಯವರು ಆ ವೃದ್ಧನ ಕಾಮುಕತೆಯ ನಿಯಂತ್ರಣಕ್ಕೆ ಆತನ ಲಿಂಗಕ್ಕೆ ನಟ್ಟು ಬೋಲ್ಟನ್ನು ಹಾಕಿದ್ದು ಅವರಿಗೆ ಈ ಕಾಮುಕವಾದ ಲೈಂಗಿಕತೆಯ ಗೀಳಿನ ಅರಿವಿಲ್ಲದ್ದು ಸ್ಪಷ್ಟ.

ಇಂತಹ ಗೀಳಿನ ವ್ಯಕ್ತಿಗಳು ಪ್ರಜ್ಞಾಪೂರ್ವಕವಾಗಿ ಹಾಗೆ ವರ್ತಿಸುವುದಿಲ್ಲ. ಅದು ಅನಿಯಂತ್ರಿತವಾಗಿ ನಡೆದುಹೋಗುತ್ತದೆ. ಅವರು ಕಾಮುಕತೆಯ ಪ್ರದರ್ಶನವನ್ನು ಮಾಡುವಾಗಲೂ ಸಾಮಾಜಿಕವಾದ ಮತ್ತು ಸಾಂಸ್ಕೃತಿಕವಾದ ಯಾವುದೇ ನೈತಿಕತೆಯ ಬಗ್ಗೆ ಎಚ್ಚರಿಕೆಯೇ ಇರುವುದಿಲ್ಲ. ಅದು ಅಸಭ್ಯವೇ ಆದರೂ, ನೋಡುಗರಿಗೆ ಮತ್ತು ಸಹವರ್ತಿಗಳಿಗೆ ರೇಜಿಗೆ ಹುಟ್ಟಿಸುವುದೇ ಆದರೂ ಅವರಿಗೆ ಮನಶಾಸ್ತ್ರಜ್ಞರ ಬಳಿ ಸೂಕ್ತವಾದ ಸಮಾಲೋಚನೆ ಮತ್ತು ಚಿಕಿತ್ಸೆ ಕೊಡಿಸಬೇಕು. ಒಂದು ಹಂತಕ್ಕೆ ಇದು ಗುಣವಾಗುವ ರೋಗವೇ ಆಗಿರುತ್ತದೆ. ಆದರೆ, ಖಂಡಿತವಾಗಿಯೂ ರೋಗಿಯ ಪ್ರಾಮಾಣಿಕ ಸಹಕಾರ ಬೇಕು. ಮೊದಲು ಆತನಿಗೆ ಇದೊಂದು ಸಮಸ್ಯೆ ಎಂದೂ ಮತ್ತು ತಾನು ಇದರಿಂದ ಗುಣಮುಖನಾಗಬೇಕೆಂದೂ ಅನ್ನಿಸಿದ ಪಕ್ಷದಲ್ಲಿ ಸಮಾಲೋಚಕರಿಗೆ ಮುಂದಿನ ದಾರಿ ಸುಲಭ.

ಈ ರೋಗವು ಕೆಲವೊಮ್ಮೆ ನರಗಳ ಮತ್ತು ಮೆದುಳಿನ ಸಮಸ್ಯೆಯಿಂದಾದರೆ, ಮತ್ತೆ ಕೆಲವು ಬಾರಿ ಬಾಲ್ಯ ಅಥವಾ ಕಿಶೋರ ಅಥವಾ ಇನ್ನಾವುದೇ ವಯಸ್ಸಿನ ಹಂತದಲ್ಲಿ ಕುಟುಂಬದ, ವೈಯಕ್ತಿಕ ಆಸಕ್ತಿಯ, ಇನ್ನಾವುದಾದರೂ ಪ್ರಭಾವದಿಂದಲೂ ಪ್ರಾರಂಭವಾಗುತ್ತದೆ. ಅದನ್ನು ಪ್ರಾರಂಭದ ಹಂತದಲ್ಲಿಯೇ ಗುರುತಿಸಿ, ಸಮಾಲೋಚನೆ ಮತ್ತು ಚಿಕಿತ್ಸೆಗಳನ್ನು ಕೊಡಿಸಿದರೆ ಮುಂದಿನ ಅನಾಹುತಗಳನ್ನು ತಪ್ಪಿಸಬಹುದು. ಆದರೆ ದುರದೃಷ್ಟವಶಾತ್ ನಮ್ಮ ದೇಶದಲ್ಲಿ ಲೈಂಗಿಕತೆಯ ಬಗ್ಗೆ ಇರುವ ಪೂರ್ವಾಗ್ರಹಗಳಿಂದಾಗಿ ಇವುಗಳ ಬಗ್ಗೆ ಮುಕ್ತ ಚರ್ಚೆ ಮಾಡುವುದರಲಿ, ತಮಗೆ ಇರುವ ಸಮಸ್ಯೆಯನ್ನು ಹೇಳಿಕೊಳ್ಳಲೂ ಕೂಡಾ ಮುಂದಾಗುವುದಿಲ್ಲ.

ಮಗುವೊಂದು ಬೆತ್ತಲಾಗಿ ಬಂದರೇನೇ ‘ಶೇಮ್ ಶೇಮ್’ ಎಂದು ಅವರ ಜನನೇಂದ್ರಿಯದ ಬಗ್ಗೆ ಗುಪ್ತತೆಯ ಭಾವವನ್ನು ಉಂಟುಮಾಡುವಂತಹ ಸಾಮಾನ್ಯ ಕೌಟುಂಬಿಕವಿದೆಯಲ್ಲ! ಇನ್ನು ಅವನು ತನ್ನ ಜನನೇಂದ್ರಿಯದ ಬಗ್ಗೆಯಾಗಲಿ, ಲೈಂಗಿಕತೆಯ ಬಗ್ಗೆಯಾಗಲಿ ಯಾರೊಂದಿಗೆ ಹೇಳಿಕೊಂಡಾನು? ವಿದ್ಯಾವಂತರು ಮತ್ತು ಒಂದಷ್ಟು ತಿಳಿವಳಿಕೆ ಇರುವವರು ಸಮಾಲೋಚನೆಗೆ ಮನಸ್ಸು ಮಾಡಬಹುದು. ಕೆಲವು ಬಾರಿ ಗೂಗಲ್ ನಲ್ಲಿಯಾದರೂ ಒಂದಿಷ್ಟು ಮಾಹಿತಿಗಳನ್ನು ಪಡೆಯಲು ಯತ್ನಿಸುತ್ತಾರೆ. ಆದರೆ ಶಾಲೆಯಲ್ಲಿಯೂ ಲೈಂಗಿಕ ಶಿಕ್ಷಣದ ಬಗ್ಗೆ ಪೂರ್ವಾಗ್ರಹ ಹೊಂದಿರುವಾಗ ಸಾಮಾನ್ಯ ಜನರ ಪಾಡೇನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT