ಸಾಮಾನ್ಯವಾಗಿ ರೋಗಿಗಳು ವೈದ್ಯರ ಬಳಿ ಹೋಗುವುದು ಏನಾದರೂ ತೊಂದರೆಯಾದಾಗಲೇ ಅಲ್ಲವೆ? ಸಾಮಾನ್ಯವಾಗಿ ದೈಹಿಕ ಕಾಯಿಲೆಗಳು ಅಥವಾ ಸಮಸ್ಯೆಗಳಲ್ಲಿ ಮುಖ್ಯವಾದ ತೊಂದರೆಯೆಂದರೆ ನೋವು. ಈ ನೋವಿನ ಪರಿಹಾರಕ್ಕಾಗಿಯೇ ರೋಗಗಳು ವೈದ್ಯರ ಬಳಿಗೆ ಹೋಗುತ್ತಾರೆ. ಹಾಗೆಯೇ ಚರ್ಮದ ವಿಷಯಕ್ಕೆ ಬಂದರೆ, ಚರ್ಮರೋಗಗಳು ಮತ್ತು ಸಮಸ್ಯೆಗಳಲ್ಲಿ ಮುಖ್ಯವಾದ ತೊಂದರೆ ಅಥವಾ ಲಕ್ಷಣವೆಂದರೆ ನವೆ ಅಥವಾ ತುರಿಕೆ. ನಾವು ಕೆರೆದುಕೊಳ್ಳುವಂತೆ ಪ್ರೇರೇಪಿಸುವ ಸಂವೇದನೆಯೇ ತುರಿಕೆ. ಈ ತುರಿಕೆ ಒಂದು ಸರಳವಾದ ಸಮಸ್ಯೆಯೆನಿಸಿದರೂ ಇದರ ದುಷ್ಪರಿಣಾಮಗಳು ಬಹಳ. ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯುವುದಕ್ಕೆ ಕಷ್ಟವಾಗುವುದು, ನಿದ್ರೆಗೆ ತೊಂದರೆಯಾಗುವುದು, ಏಕಾಗ್ರತೆಗೆ ಭಂಗವಾಗುವುದು, ಕೆರೆಯುವುದರಿಂದ ಗಾಯಗಳಾಗಿ ಸೋಂಕು, ವ್ರಣಗಳಾಗುವುದು, ಕೊನೆಗೆ ದೀರ್ಘಾವಧಿ ತುರಿಕೆಯಾದರೆ ದುಃಖ, ಖಿನ್ನತೆಗಳೂ ಆಗಬಹುದು. ಹೀಗಾಗಿ ಈ ತುರಿಕೆಯನ್ನು ಬೇಗನೆ ಪರಿಹರಿಸಿಕೊಳ್ಳುವುದು ಅತ್ಯಗತ್ಯ. ಈಗ ಚರ್ಮದ ತುರಿಕೆಗೆ ಕೆಲವು ಸಾಮಾನ್ಯ ಕಾರಣಗಳು ಮತ್ತು ಪರಿಹಾರಗಳನ್ನು ನೋಡೋಣ.

ಕೀಟಗಳ ಕಚ್ಚುವಿಕೆ:

ತುರಿಕೆಗೆ ಬಹಳ ಸಾಮಾನ್ಯವಾದ ಕಾರಣ ಸೊಳ್ಳೆ ಮೊದಲಾದ ಕೀಟಗಳ ಕಚ್ಚುವಿಕೆಯೇ ಎನ್ನಬಹುದು. ಆದರೆ ಎಷ್ಟೋ ಬಾರಿ ಜನರು ಇದನ್ನು ಸುಲಭವಾಗಿ ಒಪ್ಪುವುದಿಲ್ಲ. ಕೆರೆತ ಹಾಗೂ ಕೆರೆತದಿಂದಾಗಿರುವ ಗಾಯಗಳು ಅಥವಾ ಗುಳ್ಳೆಗಳು ಬಟ್ಟೆ ಮುಚ್ಚಿರದ ತೆರೆದ ಪ್ರದೇಶಗಳು, ಅಂದರೆ ಕೈಗಳು, ಮುಖ, ಕುತ್ತಿಗೆ, ಕಾಲುಗಳು – ಇಂಥ ಕಡೆಗಳಲ್ಲಾಗಿದ್ದರೆ ಹಾಗೂ ದೂರ ದೂರ ಆಗಿದ್ದರೆ ಅದು ಕೀಟಗಳ ಕಚ್ಚುವಿಕೆ ಎಂದು ದೃಢಪಡಿಸಬಹುದು. ಸಮಸ್ಯೆ ಆರಂಭವಾದ ಸ್ವಲ್ಪ ಪೂರ್ವದಲ್ಲಿ ಉದ್ಯಾನವನ, ಅರಣ್ಯ ಪ್ರದೇಶ, ಮೊದಲಾದ ಕೀಟಗಳು ಹೆಚ್ಚಾಗಿರುವ ಪ್ರದೇಶಗಳಿಗೆ ಭೇಟಿಯಿತ್ತಿರುವವರಿಗೆ ಇದರ ಸಾಧ್ಯತೆ ಹೆಚ್ಚು. ಒಣಚರ್ಮ ಮತ್ತು ಸೂಕ್ಷ್ಮತೆಯಿರುವವರಿಗೆ ತುರಿಕೆ ಹೆಚ್ಚಾಗಿ ಹೆಚ್ಚು ದಿನಗಳೂ ಮುಂದುವರೆಯುತ್ತದೆ. ಒಂದು ಪ್ರದೇಶದಲ್ಲಿ ಸೊಳ್ಳೆಗಳ ಪ್ರಭೇದಗಳಿಗೆ ಒಗ್ಗಿರುವವರು ಬೇರೆ ಪ್ರದೇಶ ಅಥವಾ ಊರಿಗೆ ಹೋದರೆ, ಅಲ್ಲಿನ ಸೊಳ್ಳೆಗಳ ಪ್ರಭೇದಗಳ ಕಚ್ಚುವಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತಾರೆ; ಆಗಲೂ ಈ ಸಮಸ್ಯೆ ಉಂಟಾಗುತ್ತದೆ.

ಕಜ್ಜಿ:

ಕಜ್ಜಿ ಅಥವಾ ಸ್ಕೇಬೀಸ್ ಬಹಳ ಸಾಮಾನ್ಯವಾದ ಒಂದು ಚರ್ಮರೋಗ. ಹೆಚ್ಚಾಗಿ ಮಕ್ಕಳಲ್ಲಿ ಮತ್ತು ಅತಿ ಸನಿಹವಿರುವ ಗುಂಪುವಾಸ ಮಾಡುವವರಲ್ಲಿ ಕಂಡುಬರುವ, ಅಂಟುರೋಗವಾದ ಇದು ‘ಸಾರ್ಕೋಪ್ಟೆಸ್ ಸ್ಕೇಬೀ’ ಎಂಬ ಪರಾವಲಂಬಿ ಕೀಟದಿಂದ ಬರುತ್ತದೆ. ಬೆರಳುಸಂದುಗಳು, ಮೊಣಕೈ, ಕಂಕುಳು, ಹೊಕ್ಕಳು, ತೊಡೆಗಳು, ಗುಪ್ತಾಂಗಗಳಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳಾಗಿ ವಿಪರೀತವಾಗಿ ಅದರಲ್ಲೂ ರಾತ್ರಿ ಹೆಚ್ಚು ತುರಿಸುತ್ತದೆ.

ಫಂಗಸ್ ರೋಗಗಳು: ಫಂಗಸ್ ರೋಗಗಳು ಅತ್ಯಂತ ಸಾಮಾನ್ಯವಾಗಿ ಉಂಟಾಗುವ, ಒಬ್ಬರಿಂದೊಬ್ಬರಿಗೆ ಹರಡುವ ರೋಗಗಳು. ಗಜಕರ್ಣ, ಹುಳುಕಡ್ಡಿ ಎಂದೆಲ್ಲಾ ಕರೆಯಲಾಗುವ ಇವನ್ನು ಆಂಗ್ಲಭಾಷೆಯಲ್ಲಿ ‘ಟೀನಿಯ’ಗಳೆಂದು ಕರೆಯುತ್ತಾರೆ. ತೊಡೆಸಂದಿಯಲ್ಲಾದರೆ ಟೀನಿಯ ಕ್ರೂರಿಸ್ (Tinea cruris), ದೇಹದ ಮೇಲಾದರೆ ಟೀನಿಯ ಕಾರ್ಪೋರಿಸ್ (Tinea corporis) – ಹೀಗೆ ದೇಹದ ವಿವಿಧ ಭಾಗಗಳಿಗೆ ತಕ್ಕಂತೆ ಕರೆಯಲಾಗುತ್ತದೆ. ‘ಫಂಗಸ್’ ಅಥವಾ ಶಿಲೀಂಧ್ರಗಳೆಂಬ ಸೂಕ್ಷ್ಮ ಜೀವಿಗಳಿಂದ ಉಂಟಾಗುವ ಇವುಗಳಲ್ಲಿ ಕೆಂಪಾದ, ಅಂಚಿನಲ್ಲಿ ಪದರಗಳಿರುವ ಮಚ್ಚೆಗಳಾಗಿ ಬಹಳ ತುರಿಸುತ್ತವೆ. ಒದ್ದೆ ವಾತಾವರಣ, ಅಶುಚಿತ್ವ – ಈ ಸಮಸ್ಯೆಗಳಿಗೆ ಮೂಲ ಕಾರಣ ಎನ್ನಬಹುದು. ನಮ್ಮ ದೇಹದಲ್ಲೇ ಇರುವ ‘ಕ್ಯಾಂಡಿಡಾ’ ಎಂಬ ಫಂಗಸ್ನಿಂದ ಗುಪ್ತಾಂಗಗಳಲ್ಲಿ ಕೆಂಪು ಮಚ್ಚೆಗಳು ಮತ್ತು ತುರಿಕೆಗಳಾಗುವ ‘ಕ್ಯಾಂಡಿಡಿಯಾಸಿಸ್’ ರೋಗವಾಗಬಹುದು. ಅಶುಚಿತ್ವ ಮತ್ತು ಒದ್ದೆ ವಾತಾವರಣಗಳಿಂದ ಈ ಫಂಗಸ್ ಹೆಚ್ಚಿ ಹೀಗಾಗುತ್ತದೆ.

ಅರ್ಟಿಕೇರಿಯ:

ತುರಿಸುವ, ಅಲ್ಪ ಕಾಲಾವಧಿಯವರೆಗೂ ಇದ್ದು ಮತ್ತೆ ಮತ್ತೆ ಬರುವ ಕೆಂಪು ಗಂಧೆಗಳಿಗೆ ‘ಅರ್ಟಿಕೇರಿಯ’ ಎನ್ನುತ್ತಾರೆ. ಇದು ಅಲರ್ಜಿ ಅಥವಾ ಒಗ್ಗದಿರುವಿಕೆಯಿಂದ ಆಗುತ್ತದೆ. ಅಂದರೆ, ಕೆಲವು ಪದಾರ್ಥಗಳಿಗೆ ದೇಹವು ಒಗ್ಗದೇ, ‘IgE’ ಎಂಬ ಆ್ಯಂಟಿಬಾಡಿಗಳು ಅಥವಾ ರೋಗನಿರೋಧಕ ಅಂಶಗಳು ಹೆಚ್ಚಾಗಿ ಉತ್ಪತ್ತಿಯಾಗಿ ಅವುಗಳ ಪ್ರಚೋದನೆಯಿಂದ ‘ಮಾಸ್ಟ್ ಸೆಲ್’ ಮತ್ತು ‘ಬೇಸೋಫಿಲ್’ಗಳೆಂಬ ಕೋಶಗಳಿಂದ ‘ಹಿಸ್ಟಮಿನ್’ ಎಂಬ ರಾಸಾಯನಿಕ ಬಿಡುಗಡೆಯಾಗಿ, ದೇಹದಲ್ಲಿ ರಕ್ತಸಂಚಾರ ಹೆಚ್ಚುವುದು. ಆಗ ನರಗಳ ಪ್ರಚೋದನೆಯಾಗಿ ಕೆಂಪು ಗಂಧೆಗಳು ಮತ್ತು ತುರಿಕೆಯಾಗುತ್ತದೆ. ಆಹಾರ ಪದಾರ್ಥಗಳು, ಔಷಧಗಳು, ಹೂವುಗಳ ಪರಾಗ, ಕರುಳಿನಲ್ಲಿರುವ ಜಂತುಹುಳುಗಳು, ದೈಹಿಕ ಸೋಂಕುಗಳಿಗೆ ಕಾರಣವಾಗುವ ರೋಗಾಣುಗಳು, ಕೀಟಗಳ ಕಚ್ಚುವಿಕೆ, ಕೂದಲಿಗೆ ಬಳಸುವ ಹೇರ್ ಡೈ ಮೊದಲಾದ ಸ್ಪರ್ಶದ ವಸ್ತುಗಳು, ಮುಂತಾದವುಗಳಿಗೆ ಅಲರ್ಜಿಯಾಗಬಹುದು. ಅಂತೆಯೇ ಬಿಸಿಲು, ಚಳಿಯಂಥ ಭೌತಿಕ ಅಂಶಗಳಿಂದಲೂ ಅರ್ಟಿಕೇರಿಯ ಆಗಬಹುದು.

ಔಷಧಗಳ ಅಲರ್ಜಿ:

ಕೆಲವು ಔಷಧಗಳ ಸೇವನೆಯಿಂದ ಕೆಲವರಿಗೆ ಅಲರ್ಜಿಯಾಗಿ ಕೆಂಪಾದ ಸಣ್ಣ ಗುಳ್ಳೆಗಳು ಮತ್ತು ನವೆಯುಂಟಾಗುತ್ತವೆ. ಇದು ಅರ್ಟಿಕೇರಿಯ ಅಲ್ಲದೇ ಬೇರೆ ರೀತಿ ಕಾಣಿಸಿಕೊಳ್ಳುವ ‘ಔಷಧ ಅಲರ್ಜಿ’.

ಎಟೋಪಿಕ್ ಡರ್ಮಟೈಟಿಸ್:

ಇದೊಂದು ಸಾಮಾನ್ಯ ತೊಂದರೆ. ಚರ್ಮದ ಸೂಕ್ಷ್ಮತೆಯಿಂದ ಇದು ಉಂಟಾಗುತ್ತದೆ. ಎರಡು ವರ್ಷದೊಳಗಿನ ಮಕ್ಕಳಲ್ಲಿ ಮುಖ ಮತ್ತು ಕೈಕಾಲುಗಳಲ್ಲಿ ಕೆಂಪು ಮಚ್ಚೆಗಳಾದರೆ ಅನಂತರದ ವಯೋಮಾನದ ಮಕ್ಕಳಿಗೆ ಹಾಗೂ ಯುವಕರಲ್ಲಿ ತೋಳಿನ ಮತ್ತು ಕಾಲಿನ ಹಳ್ಳಗಳಲ್ಲಿ ಗಟ್ಟಿಯಾದ ತುರಿಸುವ ಮಚ್ಚೆಗಳಾಗುತ್ತವೆ. ವಯಸ್ಕರಾದಂತೆ ಇದು ನಿಧಾನವಾಗಿ ಕಡಿಮೆಯಾಗುತ್ತದೆ. ಕೆಲವೊಮ್ಮೆ ಯಾವುದೇ ಮಚ್ಚೆಗಳಿರದೇ ಬರಿದೇ ತುರಿಕೆಯಾಗುತ್ತದೆ. ಚಳಿ, ದೂಳು, ಒಣಚರ್ಮ, ಪುಷ್ಪಗಳ ಪರಾಗ ಮತ್ತು ಕೆಲವು ಆಹಾರ ಪದಾರ್ಥಗಳು ಇದನ್ನು ಉದ್ರೇಕಿಸುತ್ತದೆ.

(ಮುಂದುವರಿಯಲಿದೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.