ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನಾಯುಸೆಳೆತಕ್ಕೆ ಪರಿಹಾರಸೂತ್ರಗಳು

Published 15 ಏಪ್ರಿಲ್ 2024, 21:47 IST
Last Updated 15 ಏಪ್ರಿಲ್ 2024, 21:47 IST
ಅಕ್ಷರ ಗಾತ್ರ

ಕಾರು ಚಲಾಯಿಸುತ್ತಿದ್ದ ಗೆಳತಿ ದಿಢೀರ್ ಎಂದು ನಿಲ್ಲಿಸಿ, ಜೋರಾಗಿ ‘ಅಯ್ಯೋ! ಕಾಲುss’ ಎಂದು ಕೂಗಿಕೊಂಡಾಗ ಪಕ್ಕದ ಸೀಟಿನಲ್ಲಿ ಕುಳಿತಿದ್ದ ನಾನು ಗಾಬರಿಯಾಗಿದ್ದೆ. ‘ಏನಾಯಿತು’ ಎಂದು ಆತಂಕದಿಂದ ಕೇಳಿದಾಗ ‘ತನ್ನ ಬಲಪಾದವನ್ನು ತೋರುತ್ತಾ ಕಾಲು ಹಿಡಿದುಕೊಂಡಂತಾಗಿದೆ, ಈ ಕಡೆಯಿಂದ ಬಂದು ಆ ಭಾಗವನ್ನು ಸ್ವಲ್ಪ ನಿಧಾನವಾಗಿ ತಿಕ್ಕುತ್ತೀಯ’ ಎಂದಳು. ನಾನು ಹಾಗೆಯೇ ಮಾಡಿದ್ದೆ. ಕೆಲವೇ ಕ್ಷಣಗಳಲ್ಲಿ ಆಕೆಯ ಕಾಲುನೋವು ಮಾಯವಾಗಿತ್ತು.

ಇಂತಹ ಅನುಭವ ನಿಮಲ್ಲಿಯೂ ಕೆಲವರಿಗೆ ಆಗಿರಬಹುದು. ಹೌದು, ವೈದ್ಯಕೀಯ ಪರಿಭಾಷೆಯಲ್ಲಿ ‘ಮಸಲ್ ಕ್ರ್ಯಾಂಪ್ಸ್’ ಎಂದು ಕರೆಯಿಸಿಕೊಳ್ಳುವ ಸ್ನಾಯುಗಳಲ್ಲಿನ ಈ ಬಗೆಯ ದಿಢೀರ್ ಸೆಳೆತ ಅಥವಾ ನೋವಿಗೆ ಕಾರಣಗಳು ಹಲವು. ಸ್ನಾಯುಗಳ ಸಂಕೋಚನ (ಕುಗ್ಗುವಿಕೆ) ಮತ್ತು ಹಿಗ್ಗುವಿಕೆಗೆ ಹಲವು ಅಂಶಗಳು ಅತ್ಯವಶ್ಯಕ. ಕ್ಯಾಲ್ಸಿಯಂ, ಮೆಗ್ನೀಶಿಯಂ, ಸೋಡಿಯಂ, ಪೋಟ್ಯಾಶಿಯಂ ಅವುಗಳಲ್ಲಿ ಮುಖ್ಯವಾದುವು. ಯಾವುದೇ ಕಾರಣದಿಂದ ಶರೀರದಲ್ಲಿ ಈ ಅಂಶಗಳು ಕಡಿಮೆಯಾದಾಗ ಸಂಕುಚಿಸಿದ ಸ್ನಾಯುಗಳು ಪುನಃ ಮೊದಲಿನ ಸ್ಥಿತಿಗೆ ತಲುಪಲು ವಿಫಲವಾಗುತ್ತವೆ. ಇದರಿಂದಾಗಿ ಆ ಭಾಗದಲ್ಲಿ ವಿಪರೀತ ಸೆಳೆತ ಕಾಣಿಸಿಕೊಳ್ಳುತ್ತದೆ. ಇದು ತೀವ್ರವಾಗಿರುವುದಷ್ಟೇ ಅಲ್ಲದೆ ಆ ಸಮಯದಲ್ಲಿ ಸ್ನಾಯುಚಲನೆಯೂ ಅಸಾಧ್ಯವೆನಿಸುತ್ತದೆ. ಇದು ಕೆಲವು ಕ್ಷಣಗಳು ಮಾತ್ರ ಕಾಣಿಸಿಕೊಂಡರೂ ವಾಹನವನ್ನು ಚಲಾಯಿಸುವಾಗ, ವಾಹನಗಳ ದಟ್ಟಣೆ ಇರುವ ರಸ್ತೆಗಳನ್ನು ದಾಟುವಾಗ, ಈಜಾಡುವಾಗ ಇನ್ನೂ ಮೊದಲಾದ ಸಂದರ್ಭಗಳಲ್ಲಿ ಕಂಡುಬಂದರೆ ಅಪಾಯವೂ ಹೌದು.

ಕಾರಣಗಳೇನು?

ನಿರ್ಜಲೀಕರಣ: ಬೇಸಿಗೆಯ ಈ ದಿನಗಳಲ್ಲಿ ತಮ್ಮ ಬಿಡುವಿಲ್ಲದ ಕೆಲಸಗಳಲ್ಲಿ ಮಗ್ನರಾಗಿ ಸಾಕಷ್ಟು ನೀರನ್ನು ಕುಡಿಯುವುದನ್ನು ಕೆಲವರು ಮರೆತೇ ಬಿಡುತ್ತಾರೆ. ಅತಿಸಾರ, ವಾಂತಿ ಮೊದಲಾದ ಸಮಸ್ಯೆಯಲ್ಲಿ ಕೂಡಲೇ ಸೂಕ್ತ ಚಿಕಿತ್ಸೆ ಮಾಡದಿದ್ದಾಗಲೂ ಶರೀರದ ನೀರಿನಾಂಶ ಕಡಿಮೆಯಾಗಬಹುದು.
ಋತುಸ್ರಾವದ ಸಮಯದಲ್ಲಿ: ಅಂಡಾಶಯದಿಂದ ಬಿಡುಗಡೆಗೊಳ್ಳುವ ರಸದೂತಗಳು ಗರ್ಭಾಶಯದ ಸ್ನಾಯುಗಳ ಸಂಕೋಚನ ಮತ್ತು ಹಿಗ್ಗುವಿಕೆಯನ್ನು ತೀವ್ರಗೊಳಿಸುತ್ತವೆ. ಈ ಸಂದರ್ಭದಲ್ಲಿ ಉತ್ಪತ್ತಿಯಾಗುವ ‘ಪ್ರೋಸ್ಟಾಗ್ಲ್ಯಾಂಡಿನ್’ ಎಂಬ ರಸದೂತದಂತಹ ಅಂಶವೂ ಈ ಪ್ರಕ್ರಿಯೆಗೆ ಪೂರಕವಾಗುತ್ತದೆ. ಈ ಅವಧಿಯಲ್ಲಿ ಕೆಲವು ಮಹಿಳೆಯರು ಕಾಲುಗಳ ಸ್ನಾಯುಗಳಲ್ಲಿಯೂ ಸೆಳೆತವನ್ನು ಅನುಭವಿಸುತ್ತಾರೆ.

ಲವಣಾಂಶಗಳ ಕೊರತೆ: ಅತಿಯಾಗಿ ಬೆವರುವಾಗ, ಬೆವರಿನೊಂದಿಗೆ ಲವಣಾಂಶಗಳೂ ಶರೀರದಿಂದ ಹೊರಕ್ಕೆ ವಿಸರ್ಜಿಸಲ್ಪಡುವುದಿದೆ. ಅಂತಹ ಸಂದರ್ಭಗಳಲ್ಲಿ ಸೂಕ್ತ ಪೂರಕ ಲವಣಾಂಶಗಳನ್ನು ಆಹಾರದಲ್ಲಿ ಪೂರೈಸದಿದ್ದಾಗ ವ್ಯಕ್ತಿ ಸ್ನಾಯುಸೆಳೆತಕ್ಕೆ ಒಳಗಾಗಬಹುದು.
ತೀವ್ರವಾದ ವ್ಯಾಯಾಮ: ಬೇಸಿಗೆಯ ದಿನಗಳಲ್ಲಿನ ಯಾವುದೇ ಬಗೆಯ ದೈಹಿಕ ಚಟುವಟಿಕೆ ಹೆಚ್ಚಿನ ನೀರು ಮತ್ತು ಲವಣಾಂಶವನ್ನು ಬೇಡುತ್ತದೆ. ತೀವ್ರ ವ್ಯಾಯಾಮದ ಬಳಿಕ ಸ್ನಾಯುಸೆಳೆತ ಸಾಮಾನ್ಯ. ಓಡುವವರಲ್ಲಿ ಮುಖ್ಯವಾಗಿ ಕಾಲುಗಳ ಸ್ನಾಯುಗಳು ಸೆಳೆತಕ್ಕೊಳಗಾಗುತ್ತವೆ.

ತಕ್ಷಣದ ಪರಿಹಾರವೇನು?

• ಸೆಳೆತ ಬಂದ ಸ್ನಾಯುವಿನ ಮೇಲೆ ನಿಧಾನವಾಗಿ ತಿಕ್ಕುವುದು.
• ಸೆಳೆತಕ್ಕೆ ಒಳಗಾದ ಸ್ನಾಯುಗಳನ್ನು ಹಿಗ್ಗಿಸುವುದು (ಸ್ಟ್ರೆಚಿಂಗ್).
• ವ್ಯಾಯಾಮದ ಮೊದಲು ಮತ್ತು ನಂತರ ಕಡ್ಡಾಯವಾಗಿ ಸ್ನಾಯು ಹಿಗ್ಗಿಸುವ (ಸ್ಟ್ರೆಚಿಂಗ್) ಚಲನೆಗಳನ್ನು ಮಾಡುವುದು.
• ವ್ಯಾಯಾಮದ ಮೊದಲು ಮತ್ತು ನಂತರ ಸಮರ್ಪಕವಾಗಿ ನೀರನ್ನು ಕುಡಿಯುವುದು.
• ಮಂಜುಗಡ್ಡೆಯ ತುಂಡುಗಳನ್ನು ನೋವಾದ ಸ್ನಾಯುವಿನ ಮೇಲೆ ಸ್ವಲ್ಪ ಸಮಯ ಇರಿಸುವುದು.

ಸರಿಯಾದ ಆಹಾರವೇ ಪರಿಹಾರ:

• ಬೇಸಿಗೆಯಲ್ಲಿ ದಿನವೂ ಕಡ್ಡಾಯವಾಗಿ ಮೂರರಿಂದ ನಾಲ್ಕು ಲೀಟರ್ ನೀರಿನ ಸೇವನೆ.
• ಪೊಟ್ಯಾಸಿಯಂ, ಮೆಗ್ನೀಶಿಯಂ ಮತ್ತು ಕ್ಯಾಲ್ಸಿಯಂ ಹೇರಳವಾಗಿರುವ ಬಾಳೆಹಣ್ಣು ನಿಮ್ಮ ದಿನನಿತ್ಯದ ಆಹಾರದಲ್ಲಿರಲಿ. (ಮೂತ್ರಪಿಂಡದ ವೈಫಲ್ಯದಿಂದ ಬಳಲುವವರು ಮತ್ತು ಮಧುಮೇಹಿಗಳು ಬಾಳೆಹಣ್ಣನ್ನು ತಿನ್ನುವ ಮೊದಲು ವೈದ್ಯರ ಸಲಹೆ ಅತ್ಯವಶ್ಯ.)
• ಆಹಾರದಲ್ಲಿ ಸಿಹಿಗೆಣಸು, ಕುಂಬಳಕಾಯಿ ಮತ್ತು ಆಲೂಗಡ್ಡೆಯ ಬಳಕೆ ಸಹ ಸಹಕಾರಿ.
• ಬೆಣ್ಣೆಹಣ್ಣು ಅಥವಾ ಅವಕಾಡೊ ಹಣ್ಣಿನ ಸೇವನೆ ಕೂಡ ಸಾಕಷ್ಟು ಪೊಟ್ಯಾಸಿಯಂ ಒದಗಿಸುತ್ತದೆ.
• ಆಹಾರದಲ್ಲಿ ಕಡ್ಡಾಯವಾಗಿ ಬೇಳೆಕಾಳುಗಳ ಬಳಕೆ ಇರಲಿ.
• ಪೊಟ್ಯಾಶಿಯಂ ಮತ್ತು ಸೋಡಿಯಂ ಹೆಚ್ಚಾಗಿರುವ ಕರ್ಬೂಜ ಅಥವಾ ಬನಾಸ್ಪತ್ರೆ ಹಣ್ಣುಗಳ ಸೇವನೆಯೂ ಸ್ನಾಯುಸೆಳೆತಕ್ಕೆ ರಾಮಬಾಣ.
• ನೀರಿನಾಂಶ ಮತ್ತು ಸಾಕಷ್ಟು ಪೊಟ್ಯಾಶಿಯಂ ಇರುವ ಎಳನೀರು ಮತ್ತು ಕಲ್ಲಂಗಡಿ ಹಣ್ಣಿನ ಸೇವನೆ ಬೇಸಿಗೆಯ ದಿನಗಳಲ್ಲಿ ಬಹಳ ಉತ್ತಮ.
• ನಿತ್ಯವೂ ಒಂದು ಲೋಟ ಹಾಲಿನ ಸೇವನೆ ಶರೀರಕ್ಕೆ ಕ್ಯಾಲ್ಸಿಯಂ, ಸೋಡಿಯಂ ಜೊತೆಯಲ್ಲಿ ಸಾಕಷ್ಟು ಪ್ರೊಟೀನ್ ಕೂಡ ಒದಗಿಸುತ್ತದೆ. ಪ್ರೊಟೀನ್‌ನ ಅಂಶವು ಸ್ನಾಯುಗಳ ದುರಸ್ಥಿಯಲ್ಲಿಯೂ ಸಹಕರಿಸುತ್ತದೆ.
• ಪ್ರೊಬಯೋಟಿಕ್ ಆಹಾರ ಎಂದು ಗುರುತಿಸಲ್ಪಟ್ಟಿರುವ ಉಪ್ಪಿನಕಾಯಿ ಸಹ ಹೇರಳವಾದ ಸೋಡಿಯಂ ಅನ್ನು ಹೊಂದಿರುತ್ತದೆ. ಸ್ನಾಯುಗಳ ಸಮರ್ಪಕ ಕಾರ್ಯನಿರ್ವಹಣೆಗೆ ಇದೂ ಅತ್ಯವಶ್ಯಕ.
• ಮೆಗ್ನೀಶಿಯಂ ಮತ್ತು ಕ್ಯಾಲ್ಸಿಯಂ ಅಧಿಕವಾಗಿರುವ ಪಾಲಕ್ ಸೊಪ್ಪು ಮತ್ತು ಎಲೆಕೋಸು ಆಹಾರದಲ್ಲಿರಲಿ.
• ಕಿತ್ತಳೆಹಣ್ಣು, ಟ್ಯೊಮ್ಯಾಟೊರಸದಲ್ಲಿಯೂ ಲವಣಾಂಶಗಳು ಅಧಿಕವಾಗಿದ್ದು ಲಭ್ಯವಿದ್ದಲ್ಲಿ ಸೇವಿಸಬೇಕು.
• ಬಾದಾಮಿ, ಸೂರ್ಯಕಾಂತಿ ಬೀಜಗಳಲ್ಲಿಯೂ ಮೆಗ್ನೀಶೀಯಂ ಲವಣವಿದ್ದು, ನಿಯಮಿತ ಸೇವನೆ ಆರೋಗ್ಯವನ್ನು ವೃದ್ಧಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT