ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಿಣಿಯರಲ್ಲಿ ಮೂಲವ್ಯಾಧಿ ಸಮಸ್ಯೆಗೆ ಪರಿಹಾರ

Last Updated 25 ನವೆಂಬರ್ 2020, 21:03 IST
ಅಕ್ಷರ ಗಾತ್ರ

ಗುದದ್ವಾರದಲ್ಲಿ ನೋವು, ರಕ್ತಸ್ರಾವಕ್ಕೆ ಕಾರಣವಾಗುವ ಮೂಲವ್ಯಾಧಿ (ಪೈಲ್ಸ್‌) ತೊಂದರೆಯಲ್ಲಿ ಗುದದ್ವಾರ ಅಥವಾ ಗುದನಾಳಗಳ ಸುತ್ತ ರಕ್ತನಾಳಗಳು ಊದಿಕೊಳ್ಳುವುದು ಕಂಡುಬರುತ್ತದೆ. ಮೂಲವ್ಯಾಧಿ ಕುರಿತಂತೆ ಕೆಲವರು ಸಂಕೋಚದಿಂದಾಗಿ ಆರಂಭದ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಇದರಿಂದ ಸಮಸ್ಯೆ ಮತ್ತಷ್ಟು ತೀವ್ರವಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಭಾರತದಲ್ಲಿ ಮೂಲವ್ಯಾಧಿಯಿಂದ ಬಳಲುವವರ ಸಂಖ್ಯೆಸುಮಾರು 41 ದಶಲಕ್ಷದಷ್ಟು. ಇವರಲ್ಲಿ ಶೇ 40ರಷ್ಟು ಗರ್ಭಿಣಿಯರು. ಇದಕ್ಕೆ ಕಾರಣಗಳು ಹಲವಾರು. ಗರ್ಭಾವಸ್ಥೆ ಸಂದರ್ಭ ಹಾರ್ಮೋನ್‌ಗಳಲ್ಲಿ ಬದಲಾವಣೆಗಳಿಂದಾಗಿ ರಕ್ತನಾಳಗಳು ಊದಿಕೊಳ್ಳುವುದಲ್ಲದೇ ಇದರಿಂದ ಮಲಬದ್ಧತೆಯ ಅಪಾಯ ಹೆಚ್ಚಾಗುತ್ತದೆ.

ಗರ್ಭಿಣಿಯರಿಗೆ ಮೂರನೇ ತ್ರೈಮಾಸಿಕದಲ್ಲಿ ಅಥವಾ ಹೆರಿಗೆಯ ನಂತರ ಮೂಲವ್ಯಾಧಿ ಕಾಣಿಸಿಕೊಳ್ಳಬಹುದು. ರಕ್ತಸ್ರಾವ, ಮಲವಿಸರ್ಜನೆ ಸಂದರ್ಭದಲ್ಲಿ ನೋವು, ಗುದದ್ವಾರ ಮತ್ತು ಗುದನಾಳದಲ್ಲಿ ತುರಿಕೆ, ಉರಿ, ಆ ಭಾಗದಲ್ಲಿ ಊದಿಕೊಳ್ಳುವುದು ಮುಂತಾದವುಗಳು ಗರ್ಭಾವಸ್ಥೆ ಸಮಯದಲ್ಲಿನ ಮೂಲವ್ಯಾಧಿಯ ಆರಂಭದ ಕೆಲವು ಲಕ್ಷಣಗಳು.

ಗರ್ಭಾವಸ್ಥೆಯಲ್ಲಿ ಉಂಟಾಗುವ ಮೂಲವ್ಯಾಧಿಯ ಶಮನಕ್ಕೆ ಸಲಹೆಗಳು

* ಸೂಕ್ತ ಆಹಾರ ಕ್ರಮ ಅನುಸರಿಸಿ: ಮೂಲವ್ಯಾಧಿ ತೊಂದರೆ ಹೊಂದಿರುವ ಗರ್ಭಿಣಿಯರಿಗೆ ಸೂಕ್ತ ಆಹಾರಕ್ರಮವನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಕರುಳಿನಲ್ಲಿ ಆಹಾರ ಸರಾಗವಾಗಿ ಮುಂದೆ ಸಾಗಲು ನಾರಿನಾಂಶದಿಂದ ಸಮೃದ್ಧವಾಗಿರುವ ಹಣ್ಣು ಮತ್ತು ತರಕಾರಿಗಳ ಸೇವನೆ ಅತ್ಯಂತ ಅವಶ್ಯಕ. ಒಂದು ಲೋಟ ಬಿಸಿ ಹಾಲಿಗೆ ಕತ್ತರಿಸಿದ ಬಾಳೆಹಣ್ಣನ್ನು ಹಾಕಿ ದಿನಕ್ಕೆ 3–4 ಬಾರಿ ಸೇವಿಸಿದರೆ ಕರುಳಿನಲ್ಲಿ ಆಹಾರದ ಚಲನೆ ಸುಲಭವಾಗುತ್ತದೆ. ಸ್ವಲ್ಪ ಉಪ್ಪು ಮತ್ತು ಓಂಕಾಳು (ಅಜ್ವಾನ್‌)ಗಳನ್ನು ಮಜ್ಜಿಗೆಗೆ ಸೇರಿಸಿ ಕುಡಿಯುವುದು ಮೂಲವ್ಯಾಧಿ ಚಿಕಿತ್ಸೆಗೆ ಸಹಾಯಕ. ಬಿಳಿ ಬ್ರೆಡ್, ಹಾಲು, ಚೀಸ್, ಮಾಂಸ, ಘನೀಕರೀಸಿದ ಫ್ರೋಜನ್ ಮೀಲ್ಸ್, ಫಾಸ್ಟ್ ಫುಡ್‌ಗಳು, ಐಸ್‌ಕ್ರೀಂ ಮುಂತಾದ ಕೆಲವು ಪದಾರ್ಥಗಳನ್ನು ಈ ಸಂದರ್ಭದಲ್ಲಿ ತಪ್ಪಿಸುವುದು ಅಗತ್ಯ.

* ಸಾಕಷ್ಟು ನೀರು ಸೇವಿಸಿ: ಗರ್ಭಾವಸ್ಥೆಯ ಸಂದರ್ಭದಲ್ಲಿ ಮೂಲವ್ಯಾಧಿಯಿಂದ ಬಳಲುತ್ತಿರುವ ಮಹಿಳೆಯರು ಬಹಳಷ್ಟು ನೀರು ಸೇವಿಸುವುದು ಅತ್ಯಂತ ಅಗತ್ಯ. ದಿನಕ್ಕೆ 3–4 ಲೀಟರ್‌ ನೀರನ್ನು ಕುಡಿಯುವುದು ಒಳಿತು.

* ನಿಗದಿತವಾಗಿ ವ್ಯಾಯಾಮ ಮಾಡಿ: ಸೊಂಟದ ಕೆಳಗಿನ ಪೆರಿನಿಯಲ್ ಫ್ಲೋರ್ ಭಾಗವನ್ನು ಹೆರಿಗೆಗೆ ಸಜ್ಜುಗೊಳಿಸಲು ಹಿತಮಿತವಾದ ವ್ಯಾಯಾಮವನ್ನು ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸೇರಿಸಿಕೊಳ್ಳಿ. ನಿಗದಿತ ವ್ಯಾಯಾಮವು ನಿಮ್ಮ ದೇಹದಲ್ಲಿನ ರಕ್ತ ಪರಿಚಲನೆಯನ್ನು ಸುಧಾರಿಸುವುದಲ್ಲದೆ, ಮೂಲವ್ಯಾಧಿಯನ್ನು ಕಡಿಮೆ ಮಾಡುತ್ತದೆ.

* ದೀರ್ಘಕಾಲದವರೆಗೆ ಒಂದೇ ಸ್ಥಳದಲ್ಲಿ ಕೂರುವುದನ್ನು ಅಥವಾ ನಿಂತಿರುವುದನ್ನು ತಪ್ಪಿಸಿ: ಗರ್ಭಾವಸ್ಥೆಯ ಸಂದರ್ಭದಲ್ಲಿ ನೀವು ದೀರ್ಘಕಾಲದವರೆಗೆ ಒಂದೇ ಸ್ಥಳದಲ್ಲಿ ಒಂದೇ ಭಂಗಿಯಲ್ಲಿ ನಿಂತರೆ ಅಥವಾ ಕುಳಿತರೆ ಸಮಸ್ಯೆ ಮತ್ತಷ್ಟು ಹದಗೆಡಬಹುದು. ಪ್ರತಿ ಗಂಟೆಗೊಮ್ಮೆ ಕೊಂಚ ದೂರ ನಡೆಯುವುದರಿಂದ ಈ ಸಮಸ್ಯೆಯನ್ನು ದೂರವಿಡಬಹುದು.

* ಬಿಸಿನೀರಿನಲ್ಲಿ ಸ್ನಾನ ಮಾಡಿರಿ: ಹದವಾದ ಬಿಸಿನೀರಿನಲ್ಲಿ ಸ್ನಾನ ಮಾಡುವುದರಿಂದ ದೇಹದಲ್ಲಿನ ಬಿಗಿತ ಮತ್ತು ನೋವು ಶಮನವಾಗುತ್ತದೆ. ಒತ್ತಡವನ್ನು ಕಡಿಮೆ ಮಾಡಲು ಕೂಡ ಇದು ಸಹಾಯ ಮಾಡುತ್ತದೆ. ಮೂಲವ್ಯಾಧಿಯಿಂದ ಉಂಟಾಗುವ ಕಿರಿಕಿರಿಯನ್ನು ಕಡಿಮೆ ಮಾಡಲು ನೀವು ಹಾಟ್ ಬ್ಯಾಗ್‌ಗಳನ್ನು ಕೂಡ ಬಳಸಬಹುದು.

(ಲೇಖಕಿ: ಉದರದರ್ಶಕ ಶಸ್ತ್ರಚಿಕಿತ್ಸಾ ತಜ್ಞರು, ಅಪೋಲೊ ಸ್ಪೆಕ್ಟ್ರಾ ಹಾಸ್ಪಿಟಲ್, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT