ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಂದನ | ಗರ್ಭಿಣಿಯರಲ್ಲಿ ಕಸಕೆಳಗಿರುವುದು ಎಂದರೇನು ?

Last Updated 14 ಅಕ್ಟೋಬರ್ 2022, 21:00 IST
ಅಕ್ಷರ ಗಾತ್ರ

1. ನಾನು ಮೊದಲ ಬಾರಿಗೆ ಗರ್ಭಿಣಿಯಾಗಿದ್ದು 4 ತಿಂಗಳು ನಡೆಯುತ್ತಿದೆ. ನನಗೆ ಒಮ್ಮೆ ಸ್ವಲ್ಪ ರಕ್ತಸ್ರಾವವಾ ದಾಗ ಡಾಕ್ಟರ್ ಸ್ಕ್ಯಾನಿಂಗ್‌ ಮಾಡಿ ಕಸಕೆಳಗಿದೆ ಆಮೇಲೆ ಮೇಲೆ ಹೋಗುತ್ತೆ, ಜಾಗರೂಕತೆಯಿಂದಿರಿ, ವಿಶ್ರಾಂತಿಯಲ್ಲಿರಿ ಎಂದಷ್ಟೇ ಹೇಳಿದ್ದರು. ಏಕೆ ಎಂದು ವಿವರವಾಗಿ ಅರ್ಥವಾಗಿಲ್ಲ? ಈ ಬಗ್ಗೆ ತಿಳಿಸುವಿರಾ?

ಪೂಜಾ, ಬೆಂಗಳೂರು.

ಉತ್ತರ: ಪೂಜಾರವರೇ ನೀವು ನಿಮಗಿರುವ ಸಮಸ್ಯೆಯ ಬಗ್ಗೆ ಹೆಚ್ಚು ತಿಳಿಯಬೇಕೆಂದಿರುವುದು ಸ್ವಾಗಾತರ್ಹ. ಕಸ ಅಥವಾ ಮಾಸು(ಪ್ಲಾಸೆಂಟಾ). ಗರ್ಭಸ್ಥ ಶಿಶುವಿನ ಪೋಷಣೆ ಹಾಗೂ ಬೆಳವಣಿಗೆಗೆ ಪೂರಕವಾಗಿ ತಾಯಿ ಹಾಗೂ ಮಗುವನ್ನು ಜೋಡಿಸುವ ಅಂಗವೇ ಪ್ಲಾಸೆಂಟಾ (ಕಸ/ಮಾಸು) ಮತ್ತು ಕರುಳಬಳ್ಳಿ. ಸಂತಾನೋತ್ಪತ್ತಿ ಸೃಷ್ಟಿಕ್ರಿಯೆಯ ಅತ್ಯದ್ಭುತ ಪ್ರಕ್ರಿಯೆ ಹೆಣ್ಣಿನ ಅಂಡಾಣು ಹಾಗೂ ಗಂಡಸಿನ ವೀರ‍್ಯಾಣು ಗರ್ಭನಾಳದಲ್ಲಿ ಮಿಲನವಾಗಿ ಫಲಿತಗೊಂಡ ಜೀವಾಣು ಗುಣಿತಗೊಳ್ಳುತ್ತ ಗರ್ಭಾಶಯದೆಡೆಗೆ ಚಲಿಸಿ ಅಲ್ಲಿ ತನಗಾಗಿ ಸಿದ್ದವಾಗಿರುವ ಮೃದುವಾದ ಒಳಪದರದಲ್ಲಿ ನಾಟಿಕೊಳ್ಳುತ್ತದೆ. ಪ್ಲಾಸೆಂಟಾವು ಸ್ವಲ್ಪಭಾಗ ತಾಯಿಯಿಂದ ಸ್ವಲ್ಪಭಾಗ ಶಿಶುವಿನಿಂದ ಬೆಳೆಯುತ್ತದೆ. ಭ್ರೂಣವು 11ನೆಯದಿನ ತಾಯಿಗರ್ಭಕ್ಕೆ ಅಂಟಿಕೊಳ್ಳುವುದು ಮುಗಿದಿರುತ್ತದೆ. ಆದರೆ ತಾಯಿಯ ರಕ್ತಕ್ಕೂ ಮಗುವಿನ ರಕ್ತನಾಳದಲ್ಲಿ ಹರಿಯುವ ರಕ್ತಕ್ಕೂ ನಿಕಟವಾದ ಸಂಪರ್ಕವಿದ್ದರೂ ನೇರವಾದ ಸಂಪರ್ಕವಿರುವುದಿಲ್ಲ. ಶಿಶುವಿನಿಂದ ಬಂದ ಹೊರಭಾಗದಲ್ಲಿರುವ ಕೋಶಗಳು ಹಾಗೂ ತಾಯಿಯ ಗರ್ಭದಲ್ಲಿ ಬೆಳೆದಿರುವ ಗರ್ಭಾಶಯದ ಒಳಾವರಣ ಇವೆರಡೂ ಸೇರಿ ಮಾಸು ಉಂಟಾಗುತ್ತದೆ. ಸುಮಾರು ಮೂರು ವಾರಗಳಲ್ಲಿ ರಕ್ತನಾಳಗಳು ಬೆಳೆದು ತಾಯಿ ಹಾಗೂ ಶಿಶುವಿನ ಸಂಬಂಧ ಏರ್ಪಡುತ್ತದೆ ಮತ್ತು ಹನ್ನೆರಡುವಾರದೊಳಗೆ (ಮೂರುತಿಂಗಳೊಳಗೆ) ಮಾಸು/ಪ್ಲಾಸೆಂಟಾದ ಕೆಲಸ ಆರಂಭವಾಗುತ್ತದೆ. ಗರ್ಭಸ್ಥ ಶಿಶುವಿಗೆ ಆಹಾರ ಸರಬರಾಜು, ಪ್ರಾಣವಾಯು ಸರಬರಾಜು ಅಷ್ಟೇ ಅಲ್ಲ ತ್ಯಾಜ್ಯವಸ್ತುಗಳಾದ ಇಂಗಾಲಆಮ್ಲ, ಯೂರಿಯಾ ಇತ್ಯಾದಿಗಳನ್ನು ಹೊರಸಾಗಿಸುವ ಕ್ರಿಯೆ ಇವೆಲ್ಲಾ ಮಾಸುವಿನಿಂದಲೇ ನಡೆಯುವಂತದ್ದು. ಬೆಳೆಯುತ್ತಿರುವ ಪಿಂಡಕ್ಕೆ ಹಾನಿಕಾರಕವಾದ ಔಷಧಿಗಳು, ರಾಸಾಯನಿ ಕಗಳು, ಸೂಕ್ಷ್ಮಾಣುಜೀವಿಗಳಿಂದ ಮಾಸು ರಕ್ಷಣೆ ನೀಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಮಾಸು ಹಲವು ಹಾರ್ಮೋನುಗಳನ್ನ ಉತ್ಪಾದಿಸುವ ಅಂಗವಾಗಿಯೂ ಕೆಲಸಮಾಡುತ್ತದೆ. (ಇನ್ಸುಲಿನ್, ಕೊರಿಯೊನಿಕ್ ಗೊನೊಡೊ ಟ್ರೋಫಿನ ಲೆಕ್ಟೋಜನ್ ಎ.ಸಿ.ಟಿ.ಎಚ್ ಇತ್ಯಾದಿ ಹಾರ್ಮೋನುಗಳು) ಒಟ್ಟಾರೆ ಮಾಸು ಅಥವಾ ಪ್ಲಾಸೆಂಟಾ ನವಮಾಸವನ್ನು ತಲುಪಿ ಶಿಶುಜನನವಾದ ಮೇಲೆ ತಾನು ಹೊರಬರುವವರೆಗೂ ಗರ್ಭಸ್ಥಶಿಶುವನ್ನು ಉಳಿಸಿ, ಬೆಳೆಸಿ, ಪೋಷಿಸುತ್ತದೆ.

ನೀವು ಕಸ ಕೆಳಗಿದೆ ಎಂದಿದ್ದೀರಾ? ಸಾಮಾನ್ಯವಾಗಿ ಮಾಸು ಗರ್ಭಕೋಶದ ಮೇಲುಭಾಗದಲ್ಲಿ ಅಂಟಿಕೊಂಡಿ ರುತ್ತದೆ. ಇದು ಸಹಜ ಆದರೆ ಕೆಲವೊಮ್ಮೆ ಮಾಸು ಗರ್ಭದ ಬಾಯಿಯ ಹತ್ತಿರ, ಕೆಳಭಾಗದಲ್ಲಿ ಬೆಳೆಯುತ್ತಿದ್ದರೆ ಇದರಿಂದ ಹೆರಿಗೆಗೂ ಮುನ್ನವೇ ರಕ್ತಸ್ರಾವವಾಗುವ ಸಂಭವವಿರುತ್ತದೆ. ಹೆಚ್ಚಿನ ಗರ್ಭಿಣಿಯರಲ್ಲಿ ಆರಂಭದ ದಿನಗಳಲ್ಲಿ ಮಾಸು ಕೆಳಗಿದ್ದು ನಂತರ ಶಿಶು ಬೆಳೆದ ಹಾಗೆ ಗರ್ಭಕೋಶದ ಮೇಲ್ಭಾಗಕ್ಕೆ ಚಲಿಸುತ್ತದೆ. ಮಾಸು ಕೆಳಗಡೆಯೇ ಇದ್ದು ಗರ್ಭಕೋಶದ ಬಾಯಿಯ ಹತ್ತಿರವಿದ್ದರೆ ಅದನ್ನ ಪ್ಲಾಸೆಂಟಾ ಪ್ರೀವೀಯಾ ಎನ್ನುತ್ತಾರೆ. ಹೀಗೆ ಇದ್ದಾಗ ನೋವುಬರದೇ ಇದ್ದಕ್ಕಿಂದಂತೆ ರಕ್ತಸ್ರಾವ ಉಂಟಾದರೆ ಗರ್ಭಿಣಿಯರಿಗೆ ಅಪಾಯವಾಗುತ್ತದೆ ಶಿಶುವಿಗೂ ಅಪಾಯ. ಕೆಲವೊಮ್ಮೆ ರಕ್ತಸ್ರಾವ ನಿಲ್ಲಿಸಲು ಅವಧಿ ತುಂಬುವ ಮೊದಲೇ ಸಿಸೆರಿಯನ್ ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬರಬಹುದು. ಹೆಚ್ಚಿನ ಸಂದರ್ಭದಲ್ಲಿ ಮುಂಜಾಗ್ರತೆಯಿಂದ ಇದ್ದರೆ ಏನುತೊಂದರೆ ಯಾಗುವುದಿಲ್ಲ ವೈದ್ಯರ ಸಲಹೆಯ ಮೇರೆಗೆ ನೀವುಕೂಡ ಅನಗತ್ಯ ಪ್ರಯಾಣಮಾಡದೇ ಸಾಕಷ್ಟು ಜಾಗರೂಕತೆಯಿಂದಿರಿ. ನಿಯಮಿತ ತಪಾಸಣೆ ಚಿಕಿತ್ಸೆ ಪಡೆದುಕೊಳ್ಳಿ. ಕಸ/ಮಾಸು ಮೇಲಕ್ಕೆ ಚಲಿಸಬಹುದು. ಕಸ ಮೇಲಕ್ಕೆ ಹೋಗುವಂತ ಚಿಕಿತ್ಸೆ, ಔಷಧಿ ಏನೂ ಇಲ್ಲ. ಅದು ಸಹಜವಾಗಿ ಆಗುವ ಪ್ರಕ್ರಿಯೆ. ಯಾವುದಕ್ಕೂ ಜಾಗರೂಕರಾಗಿರಿ.

2. ನನಗೆ ಎರಡು ಮಕ್ಕಳಿದ್ದಾರೆ. ಎರಡು ಕೂಡಾ ಸಿಸೇರಿಯನ್ ಹೆರಿಗೆಯೇ. ಹೆರಿಗೆಯ ಸಮಯದಲ್ಲಿ ಮಗು ಉಸಿರುಕಟ್ಟಿದ್ದರಿಂದ ವೈದ್ಯರು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಿಲ್ಲ. ಈಗ ಮಗುವಿಗೆ ಒಂದು ವರ್ಷ. ನಾನೀಗ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದೇ ?

ಸಂಗೀತಾ, ಕೋಲಾರ

ಉತ್ತರ: ಸಂಗೀತಾರವರೇ ನಿಮಗೆ ಎರಡೇ ಮಕ್ಕಳು ಸಾಕೆಂದರೆ ಶಾಶ್ವತ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಾಗಿ ಟ್ಯೂಬೆಕ್ಟಮಿ (ಲ್ಯಾಪ್ರೋಸ್ಕೋಪಿಕ್ ಅಥವಾ ತೆರೆದ ಶಸ್ತ್ರಚಿಕಿತ್ಸೆ) ಮಾಡಿಸಿಕೊಳ್ಳಬಹುದು. ಬದಲಾಗಿ ನಿಮ್ಮ ಪತಿ ಕೂಡಾ ವಾಸೆಕ್ಟಮಿ ಮಾಡಿಸಿಕೊಳ್ಳಬಹುದು. ಅದು ಅತ್ಯಂತ ಸುಲಭ ಹಾಗೂ ಸರಳವಾದ ಶಸ್ತ್ರಚಿಕಿತ್ಸೆ ಮತ್ತು ನಿಮ್ಮ ಪತಿಗೆ ಯಾವುದೇ ರೀತಿಯ ದುಷ್ಪರಿಣಾಮಗಳು ಆಗುವುದಿಲ್ಲ. ನಿಮಗೆ ಶಸ್ತ್ರಚಿಕಿತ್ಸೆ ಬೇಡವಾದಲ್ಲಿ ನೀವು ಕಾಪರ್ಟಿ ಕೂಡಾ ಅಳವಡಿಸಿಕೊಳ್ಳಬಹುದು. ಕಾಂಡೋಮ್ ಬಳಕೆಯನ್ನು ಮಾಡಬಹುದು. ಯಾವುದು ನಿಮಗೆ ಸುರಕ್ಷಿತ ಹಾಗೂ ಸುಲಲಿತ ಅನಿಸುತ್ತದೆಯೋ ಹಾಗೆ ಮಾಡಿ. ಆದರೆ ಎರಡು ಮಕ್ಕಳು ಸಾಕು.

ಸ್ಪಂದನ...
ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ ಡಾ.ವೀಣಾ ಎಸ್‌. ಭಟ್ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.inಗೆ ಕಳುಹಿಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT