ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Health Tips: ಬಿಸಿಲ ಬೇಗೆಯಲ್ಲಿ ಕಾಯಿಲೆಗಳ ತಡೆಗೆ ವಿಧಾನಗಳು

Published 12 ಮಾರ್ಚ್ 2024, 0:30 IST
Last Updated 12 ಮಾರ್ಚ್ 2024, 0:30 IST
ಅಕ್ಷರ ಗಾತ್ರ
ಶಿವರಾತ್ರಿ ಎಂದರೆ ‘ಶಿವ ಶಿವಾ’ ಎಂದು ಚಳಿ ಓಡಿ ಹೋಗುವ ವಿದ್ಯಮಾನ ಹಿಂದಿನದಾಗಿತ್ತು. ಈ ವಾಡಿಕೆ ಮಾತು ಇಂದು ಅನ್ವಯವಾಗದು...

ಯುಗಾದಿಯ ಮೊದಲ ದಿನದಿಂದ ವಸಂತ ಋತು. ಅನಂತರ ಗ್ರೀಷ್ಮ ಅಥವಾ ಅತಿ ಬಿಸಿಲಿನ ದಿನಗಳ ಎರಡು ತಿಂಗಳು. ಮುಂದಿನದು ಮಳೆಗಾಲದ ಎರಡು ತಿಂಗಳು. ಅದುವೆ ವರ್ಷಋತು. ಅನಂತರದ್ದು ಶರದೃತು, ಹೇಮಂತ ಋತುಗಳು. ಈ ಬಾರಿಯ ಋತುವೈಪರೀತ್ಯದಿಂದ ನಮ್ಮ ದೇಹಬಲ ವಾಸ್ತವವಾಗಿ ವರ್ಷ, ಶರದ್ ಮತ್ತು ಹೇಮಂತದ ದಿನಗಳಲ್ಲಿ ಸರಿಯಾಗಿ ಕುದುರಿಕೊಳ್ಳಲಿಲ್ಲ ಎಂಬ ಸಂಗತಿ ನೆನಪಿಡಿರಿ. ಹಾಗಾಗಿ ನಾವು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ವಹಿಸಿ ದೇಹಬಲವನ್ನು ಕಾಪಾಡಿಕೊಳ್ಳಬೇಕು.

ಶಿವರಾತ್ರಿ ಎಂದರೆ ‘ಶಿವ ಶಿವಾ’ ಎಂದು ಚಳಿ ಓಡಿ ಹೋಗುವ ವಿದ್ಯಮಾನ ಹಿಂದಿನದಾಗಿತ್ತು. ಈ ವಾಡಿಕೆ ಮಾತು ಇಂದು ಅನ್ವಯವಾಗದು. ಸೂರ್ಯತಾಪಮಾನ ಈ ಬಾರಿ ರಥಸಪ್ತಮಿಗೆ ಮೊದಲೇ ಏರುಮುಖ. ಆಗಲೇ ನಮ್ಮ ದೇಹಬಲ ಕುಗ್ಗಲಾರಂಭ. ದೇಹ ಮತ್ತು ದೇಶದ ಸಂಗತಿಗಳು ಒಂದೇ ತೆರ ಎನ್ನುತ್ತವೆ, ಆಯುರ್ವೇದ ಸಂಹಿತೆಗಳು. ಭೂಮಿಯ ಅಂತರ್ಜಲ ಕುಸಿಯುವ ಸುದ್ದಿ ದಿನ ದಿನದ ವಿದ್ಯಮಾನ. ಅಂತೆಯೇ ರಸ, ರಕ್ತಾದಿ ಧಾತುಗಳು ನಮ್ಮ ದೇಹದೊಳಗೂ ಒಣಗುವುವು. ಆಗ ದೇಹಬಲ ಕ್ಷೀಣಿಸುತ್ತದೆ. ಈ ಕಾಲದಲ್ಲಿ ಸೂರ್ಯನು ತನ್ನ ಪ್ರಖರ ಕಿರಣಗಳಿಂದ ಪ್ರಪಂಚದ ‘ಸ್ನೇಹಭಾ’ಗವನ್ನು ಒಣಗಿಸುತ್ತಾನೆ.

ಇಂತಹ ಪ್ರಖರತೆಯ ಪ್ರತಿಕೂಲ ಸನ್ಬಿವೇಶದ ಅಪಾಯ ಎದುರಿಸುವ ನಮ್ಮ ಸಿದ್ಧತೆ ಹೀಗಿರಲಿ. ಅತ್ಯಂತ ಖಾರ, ಕಹಿರಸಗಳು ವಾತದೋಷದ ವೃದ್ಧಿಗೆ ಕಾರಣ. ಅಂಥವನ್ನು ಖಂಡಿತ ದೂರವಿಡೋಣ. ಯುಗಾದಿ ಬೇವು ಕಹಿ ನಿಜ. ಆದರೆ ಬೆಲ್ಲದ ಸಂಗಡ ಮೆಲ್ಲುವಾ. ಅದರ ತೀಕ್ಷ್ಣತೆಗೆ ಕಡಿವಾಣ. ಶಿಶಿರ ಮುಗಿದು ವಸಂತಾಗಮನದ ಸಂದರ್ಭದಲ್ಲಿ ಈ ರೀತಿಯ ಪ್ರವೃತ್ತಿಯಿಂದ ಆರೋಗ್ಯ. ಏಕೆಂದರೆ ವಸಂತಕಾಲದಲ್ಲಿ ಖಂಡಿತ ಕಫ ಸಂಚಯಕ್ಕಿದೆ ವಿಪುಲ ಅವಕಾಶ. ಅದರ ಕಡಿವಾಣವೇ ಶಿವರಾತ್ರಿಯ ಜಾಗರಣೆಯ ಮೂಲ ಉದ್ದೇಶ. ಜೊತೆಗಿದೆ ಕಥಾಕಾಲಕ್ಷೇಪಗಳಿಂದ ಮಾನಸಿಕ ನೆಮ್ಮದಿ. ಪ್ರಖರ ಸೂರ್ಯರಶ್ಮಿಯ ದೆಸೆಯಿಂದ ದೇಹದ ಕಫ ಧಾತು ಕರಗಿ ಕಾಯಾಗ್ನಿ (ಹಸಿವೆ) ಬಾಧಿಸುತ್ತದೆ. ವಮನ (ವಾಂತಿ) ಮಾಡಿಸುವ ಆಯುರ್ವೇದ ಚಿಕಿತ್ಸೆಗೆ ಆಯರ್ವೇದಶಾಸ್ತ್ರವು ಒತ್ತು ಕೊಡುತ್ತದೆ. ಜೀರ್ಣವಾಗದ, ಅಥವಾ ನಿಧಾನ ಅರಗುವ ಆಹಾರ ಈಗ ಸಲ್ಲದು. ಹುಳಿರಸದ ಅತಿಯಾದ ಸೇವನೆಗಿರಲಿ ಕಡಿವಾಣ. ದೇಹದ ಕಾವು ಇಳಿಸುವ ಚಂದನ, ಅಗರು ಲೇಪನದಿಂದ ಲಾಭವಿದೆ. ಗೋಪಿಚಂದನದ ಲೇಪನದಿಂದ ಅಗ್ಗದ ಚಿಕಿತ್ಸೆಯ ಹಾದಿ ಸಾಧ್ಯ. ಮುಲ್ತಾನೀ ಮಿಟ್ಟೀ ಹೆಸರಿನ ಪುಡಿ ಅಥವಾ ಗೋಪಿಚಂದನದ ಹೆಂಟೆ ನೀರಲ್ಲರೆದು ಸ್ನಾನಾನಂತರವೂ ಹಚ್ಚಿಕೊಳಲಾದೀತು. ಮುಖದ ‘ಫೇಸ್ ಪ್ಯಾಕ್’ ಎಲ್ಲರೂ ಬಲ್ಲ ಪರಿಭಾಷೆ. ಇದರಿಂದ ಮುಖದ ಒಣಗುವಿಕೆಗೆ ಕಡಿವಾಣವಾಗುತ್ತದೆ.

ಹಿತಮಿತದ ವ್ಯಾಯಾಮ ಸಾಕು. ಹದ ಬಿಸಿಯ ಎಳ್ಳೆಣ್ಣೆಯನ್ನು ಪೂಸಿಕೊಳ್ಳಿರಿ. ಸೀಗೆಬಾಗೆಯ ಪುಡಿ, ಕಡಲೆಹಿಟ್ಟಿನ ಸಂಗಡ ಮೈಗೆ ಉಜ್ಜಿದರೆ ಚರ್ಮಾರೋಗ್ಯ ವರ್ಧನೆ. ಮಲಗುವ ಕೋಣೆಗೆ ಏಲಕ್ಕಿಸಿಪ್ಪೆ, ಲಕ್ಕಿಎಲೆ, ಶ್ರೀಗಂಧದ ಪುಡಿಯ ಹೊಗೆ ಕೊಟ್ಟರೆ ಹಿತ. ಧಗೆಯಿಂದ ಪಾರಾಗಲು ಯದ್ವಾ ತದ್ವಾ ಎಸಿ, ಫ್ಯಾನ್, ಕೂಲರ್ ಬಳಕೆಗೆ ಆಯುರ್ವೇದ ಒತ್ತನ್ನು ನೀಡದು. ಬೇಗ ಅರಗುವ ಆಹಾರವಸ್ತು ಸೇವನೆ ಉತ್ತಮ. ಜವೆ ಗೋಧಿ, ಗೋಧಿಗಿರಲಿ ಪ್ರಾಶಸ್ತ್ಯ. ಹಗಲುನಿದ್ದೆಗೆ ಆಯುರ್ವೇದ ಶಾಸ್ತ್ರವು ನಿಷೇಧ ಹೇರುತ್ತದೆ. ಬಾಲರು ಮತ್ತು ವೃದ್ಧರಿಗೆ ವಿನಾಯಿತಿ ಇದೆ. ಆದರೆ ಕುಳಿತ ಭಂಗಿಯ ನಿದ್ದೆ ಲೇಸು. ಹಾಸಿಗೆಯ ಮೇಲೆ ಉರುಳಿದ ಸ್ಥಿತಿಯ ನಿದ್ದೆ ಕೂಡದು. ತೆಂಗಿನೆಣ್ಣೆ, ತುಪ್ಪ ಸಹಿತ ಆಹಾರಸೇವನೆ ಹಿತಮಿತವಾಗಿರಲಿ. ಸಿಹಿರಸದಿಂದ ಲಾಭವಿದೆ. ಉಪ್ಪು, ಖಾರ, ಅತಿ ಮದ್ಯಪಾನ ಖಂಡಿತ ಬೇಡ. ಶೀತಲ ಹವೆಯ, ಚಂದ್ರನ ಬೆಳದಿಂಗಳ ಅಂಗಳದ ವಿಹಾರದ ಸಂಗೀತ, ಗೀತ ನೃತ್ಯಾದಿಗಳ ಕಲಾಪಗಳ ವಿಸ್ತೃತ ಬಣ್ಣನೆ ವಾಗ್ಭಟನ ಸಂಹಿತೆಯ ಹೂರಣ.

ಕೊಳ, ಸರೋವರ, ಪಕ್ಷಿಗಳ ಕಲರವದ ಪರಿಸರದ ಚಿತ್ತಾಕರ್ಷಕ ಸನ್ನಿವೇಶದ ಸೃಷ್ಟಿ ಅಂದಿನ ಕಾಲದ ಸಹಜ ವಾತಾವರಣ. ಇಂತಹ ವಿಹಾರದಿಂದ ದೇಹ ಮತ್ತು ಮನದ ದುಗುಡ ದುಮ್ಮಾನ ಕಳೆಯುವ ವಿಧಾನ ಇಂದಿಗೂ ಪ್ರಸ್ತುತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT