ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Hearing Day 2024: ಶ್ರವಣ ‘ಸಾಧನೆ’ಯ ಸುತ್ತ

Published 2 ಮಾರ್ಚ್ 2024, 4:17 IST
Last Updated 2 ಮಾರ್ಚ್ 2024, 4:17 IST
ಅಕ್ಷರ ಗಾತ್ರ

ನನಗೆ ಚೆನ್ನಾಗಿ ನೆನಪಿದೆ. ಹರ್ಷನಿಗೆ ಆಗಿನ್ನೂ ಮೂರೂವರೆ ವರ್ಷ. ಅವನಿಗೆ ಸ್ವಲ್ಪ ಬುದ್ಧಿ ಮೂಡುವಾಗಲೇ ಹೇಳಿದ್ದೆ. ‘ನೋಡು ನಿನಗೆ ಕಿವಿ ಕೇಳಿಸೋಲ್ಲ ಅನ್ನೋದು ಯಾರಿಗೂ ಗೊತ್ತಾಗಬಾರದು. ಹೊರಗಡೆ ಹೋಗುವಾಗ ಆಕಸ್ಮಾತ್ ನಾನು ಮರೆತರೂ ನೀನು ಕಿವಿಗೆ ಟೋಪಿ ಹಾಕ್ಕೋಳೋದನ್ನ ಮರಿಬಾರದು, ಗೊತ್ತಾಯ್ತಾ? ಯಾರ ಜೊತೆನೂ ಹೆಚ್ಚು ಮಾತನಾಡೋಕೆ ಹೋಗಬೇಡ,’ ಎಂದು ಎಲ್ಲವನ್ನು ಬಿಡಿಸಿ ಬಿಡಿಸಿ ಅವನಿಗೆ ಅರ್ಥವಾಗುವಂತೆ ಮನದಟ್ಟು ಮಾಡಿದ್ದೆ. ನನ್ನ ಮಗ ಒಬ್ಬ ‘ಕಿವುಡ’ ಎಂದು ತೋರಿಸಿಕೊಳ್ಳುವಲ್ಲಿ ನನಗೆ ಅತಿಯಾದ ಹಿಂಜರಿಕೆಯಿತ್ತು. ಸಮಾಜ ಆಡಿ ಕೊಳ್ಳುವುದೆಂಬ ಭಯವಿತ್ತು.

ಹರ್ಷ ಹುಟ್ಟಿದ ಒಂದೂವರೆ ವರ್ಷ ಎಲ್ಲಾ ಚೆನ್ನಾಗಿಯೇ ಇತ್ತು. ಒಮ್ಮೆ ಅವನನ್ನು ಕಾಡಿದ ಅತಿಯಾದ ಜ್ವರದ ನಂತರ ಬೆಳವಣಿಗೆಯಲ್ಲಿ ವ್ಯತ್ಯಾಸವಾಯಿತು. ಜ್ವರಕ್ಕೆ ಚಿಕಿತ್ಸೆ ಪಡೆದು ಬಂದ ಪ್ರಾರಂಭದಲ್ಲಿ ಯಾವುದೇ ವ್ಯತ್ಯಾಸ ಗೊತ್ತಾಗಲಿಲ್ಲ. ಆದರೆ, ಮೊದಲಿಗಿಂತ ಅವನ ಚಟುವಟಿಕೆ ಕಡಿಮೆಯಾಗಿತ್ತು. ತನ್ನಷ್ಟಕ್ಕೆ ತಾನೇ ಆಟವಾಡಿಕೊಳ್ಳುತ್ತಿದ್ದ. ಹತ್ತಿರ ಹೋಗಿ ಮಾತನಾಡಿ ದರಷ್ಟೇ ಸ್ವಲ್ಪ ಪ್ರತಿಕ್ರಿಯೆ ನೀಡುತ್ತಿದ್ದ. ಜ್ವರದ ಪರಿಣಾಮವಿರಬಹುದೆಂದು ಸುಮ್ಮನಾಗಿದ್ದೆವು. ಆದರೆ, ವಾರಗಳ ನಂತರ, ಒಮ್ಮೆ ನನ್ನ ಅಮ್ಮ, ಹರ್ಷನ ಕೇಳಿಸಿಕೊಳ್ಳುವ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಳು. ಮನೆಯಲ್ಲಿ ಯಾವುದೇ ಸದ್ದಿಗಾಗಲೀ, ಪಾತ್ರೆ-ಪಗಡಗಳ ಗದ್ದಲಕ್ಕಾಗಲೀ ಹರ್ಷ ಬೆಚ್ಚುತ್ತಿರಲಿಲ್ಲ. ಒಂದೂವರೆ ವರ್ಷದ ಮಗುವಿಗೆ ಸದ್ದು-ಗಲಾಟೆಗಳಿಗೆ ಗಾಬರಿಯಾಗಬೇಕಲ್ಲವೇ?

ಅನುಮಾನ ನಿಜವಾಗದಿರಲಿ ಎಂಬ ಪ್ರಾರ್ಥನೆಯೊಂದಿಗೆ ಹರ್ಷನ ಕಿವಿ ಪರೀಕ್ಷೆಗೆ ನಿಂತೆವು. ಆಟಿಕೆಗಳೊಂದಿಗೆ ಅವನು ಆಟವಾಡುವಾಗ ಸ್ವಲ್ಪ ದೂರದಲ್ಲಿ ಪಾತ್ರೆಯೊಂದನ್ನು ಜೋರಾಗಿ ಬೀಳಿಸಿದೆ. ಹರ್ಷನಿಂದ ಯಾವುದೇ ಪ್ರತಿಕ್ರಿಯೆಯೇ ಬರಲಿಲ್ಲ. ಮತ್ತೊಂದೆರಡು ಇಂತಹುದೇ ಪರೀಕ್ಷೆಗಳನ್ನು ಮಾಡಿದೆವು. ಮತ್ತದೇ ಫಲಿತಾಂಶ. ಅಲ್ಲಿಗೆ ಅವನಿಗೆ ಕಿವಿಯ ಸಮಸ್ಯೆ ಇದೆ ಎಂಬುದು ದೃಢವಾಯಿತು,. ನನ್ನ ಅಮ್ಮನನ್ನು ಹಿಡಿದುಕೊಂಡು ಜೋರಾಗಿ ಅತ್ತುಬಿಟ್ಟೆ. ಜ್ವರದಿಂದಾಗಿ ಅವನಿಗೆ ಸಹಜವಾಗಿ ಕೇಳಿಸಿಕೊಳ್ಳುವ ಶಕ್ತಿ ಹೊರಟುಹೋಗಿತ್ತು. ನಾನು ಧೃತಿಗೆಟ್ಟೆ. ಆದರೆ, ಪತಿ ಭರತ್, ಹರ್ಷನನ್ನು ವಾಕ್-ಶ್ರವಣ ಸಂಸ್ಥೆಗೆ ಕರೆದುಕೊಂಡು ಹೋಗಿ ತೋರಿಸೋಣವೆಂದರು. ನಮಗೆ ತಿಳಿದದ್ದು ಹರ್ಷನಿಗೆ ಶ್ರವಣ ಹಾಗೂ ಮಾತಿನ ತರಬೇತಿ ಕೊಡಿಸಬೇಕು, ಅದಕ್ಕಿಂತ ಮುಖ್ಯವಾಗಿ ಅವನಿಗೆ ಕಿವಿ ಕೇಳಿಸುವಂತಾಗಲು ಇದ್ದ ಒಂದೇ ಒಂದು ಆಯ್ಕೆ ‘ಶ್ರವಣ ಸಾಧನ’ ಧರಿಸುವುದು.

ಅಂದರೆ, ನನ್ನ ಮಗನಿಗೆ ಕಿವಿ ಕೇಳಿಸುವುದಿಲ್ಲವೆಂದು ಎಲ್ಲರಿಗೂ ತಿಳಿದು ಹೋಗತ್ತೆ. ನೆರೆಯವರು, ನನ್ನ ಸ್ನೇಹಿತರು, ನೆಂಟರಿಷ್ಟರು ‘ಹೋ, ಪ್ರಿಯಾಳ ಮಗನಿಗೆ ಕಿವಿ ಕೇಳಿಸುವುದಿಲ್ಲವಂತೆ, ಛೆ, ಪಾಪ ಅಲ್ವಾ’ ಎಂದು ಆಡಿಕೊಳ್ಳುತ್ತಾರೆ. ಎಷ್ಟು ಅವಮಾನ, ನೋವು, ಛೇ, ನನಗೆ ಹೀಗಾಗಬೇಕೇ, ನನ್ನ ಮಗನಿಗೇ ಯಾಕೀ ಶಿಕ್ಷೆ’ ಎಂದು ಸಾವಿರಾರು ಬಾರಿ ಕೇಳಿಕೊಂಡಿದ್ದೆ.

ಆದರೆ, ಎದುರಾಗಿದ್ದ ಪರಿಸ್ಥಿತಿಯನ್ನು ಸ್ವೀಕರಿಸಲೇಬೇಕಿತ್ತು. ಹರ್ಷನಿಗೆ ಚಿಕಿತ್ಸೆ ಕೊಡಿಸಿ, ಶ್ರವಣ ಸಾಧನವನ್ನು ಹಾಕಿಸಿದೆವು. ಪರಿಸ್ಥಿತಿ ಮೊದಲಿಗಿಂತ ಉತ್ತಮವಾಯಿತು. ಹರ್ಷ ನಿಧಾನವಾಗಿ ಅದಕ್ಕೆ
ಹೊಂದಿಕೊಳ್ಳುತ್ತಲಿದ್ದ. ಆದರೆ, ಸುತ್ತಮುತ್ತಲಿನವರು ಆಡಿ ಕೊಳ್ಳುತ್ತಾರೆಂದು ಅವನನ್ನು ಹೊರಗೆ ಇತರ ಮಕ್ಕಳ ಜೊತೆ ಆಟವಾಡಲು ಬಿಡುತ್ತಿರಲಿಲ್ಲ. ಹೊರಗಡೆ ಹೋಗಬೇಕಾದಾಗಲೆಲ್ಲ ಅವನ ಶ್ರವಣ ಸಾಧನ ಇತರರಿಗೆ ಕಾಣಬಾರದೆಂದು ಕಿವಿಗೆ ಟೋಪಿ ಹಾಕಲಾಗುತ್ತಿತ್ತು. ಸಮಾರಂಭಗಳು, ಕಾರ್ಯಕ್ರಮಗಳಿಗೆ ಹೋಗುವುದನ್ನು ನಿಲ್ಲಿಸಿದೆವು. ‘ಮಗನಿಗೆ ಕಿವಿ ಕೇಳಿಸುವುದಿಲ್ಲವಂತೆ, ಮಾತಾದ್ರೂ ಆಡ್ತಾನಾ?’ ಈ ಪ್ರಶ್ನೆಗಳು ಎದುರಾಗುವ ಭಯದಿಂದಲೇ ಸಮಾಜದಿಂದ ಒಂದಷ್ಟು ವರ್ಷಗಳು ದೂರ ಉಳಿದದ್ದಾಗಿತ್ತು. ಶ್ರವಣದೋಷದ ಸಮಸ್ಯೆ ಇದ್ದುದರಿಂದ ವಿಶೇಷ ಮಕ್ಕಳ ಶಾಲೆಯೊಂದೇ ನಮಗಿದ್ದ ಆಯ್ಕೆ. 

ಆದರೆ ಒಮ್ಮೆ: ಆಗ ಹರ್ಷನಿಗೆ ಐದು ವರ್ಷ. ಅದೊಂದು ಸಂಜೆ ಮನೆಗೆ ತುಂಬಾ ಹತ್ತಿರದಲ್ಲೇ ಇದ್ದ ಅಂಗಡಿಯೊಂದಕ್ಕೆ ಸಾಮಾನು ತರಲು ಹೋಗಿದ್ದೆ. ಅದು ಕೇವಲ ಎರಡು ನಿಮಿಷದ ಕೆಲಸವಾದ್ದರಿಂದ ‘ಬೇಗ ಬಂದುಬಿಡುತ್ತೇನೆ’ ಎಂದು ಹೇಳಿ ಅವನನ್ನು ಮನೆಯಲ್ಲೇ ಬಿಟ್ಟು ಹೋಗಿದ್ದೆ. ಆದರೆ, ಜನ ಹೆಚ್ಚಾಗಿದ್ದುದರಿಂದ ಅಂಗಡಿಯಲ್ಲಿ ಸ್ವಲ್ಪ ತಡವಾಗಿತ್ತು. ಅಂಗಡಿ ಸಾಮಾನು ತೆಗೆದುಕೊಂಡು ತಿರುಗಿದಾಗ ಹರ್ಷ ಮಧ್ಯ ರಸ್ತೆಯಲ್ಲಿ ಹೋಗುತ್ತಿದ್ದ, ಅವನ ಹಿಂದೆ ವೇಗವಾಗಿ ಲಾರಿಯೊಂದು ಹೋಗುತ್ತಿತ್ತು. ಕತ್ತಲಲ್ಲಿ ಪುಟ್ಟ ಹರ್ಷ ಡ್ರೈವರ್‌ಗೆ ಕಾಣುತ್ತಿರಲ್ಲಿಲ್ಲವೇನೋ. ನಾನು ಕೂಗಿ ಕೊಳ್ಳಲು ಶುರು ಮಾಡಿದೆ. ಹರ್ಷನಿಗೆ ನನ್ನ ಧ್ವನಿ ಕೇಳಲಿಲ್ಲ, ಆದರೆ, ಆ ಲಾರಿ ಡ್ರೈವರ್ ನನ್ನ ಕೂಗು ಕೇಳಿ ತಕ್ಷಣ ಎಚ್ಚೆತ್ತು ಬ್ರೇಕ್ ಹಾಕಿದ. ನಾನು ಓಡಿ ಬಂದು ಹರ್ಷನನ್ನು ಭದ್ರವಾಗಿ ಹಿಡಿದು ಪಕ್ಕಕ್ಕೆ ಎಳೆದು ತಂದೆ. ಹರ್ಷ ಪೆಚ್ಚಾಗಿ, ಗಾಬರಿಯಿಂದ ಅಳಲು ಶುರು ಮಾಡಿದ.

ನಾನು ಅವನನ್ನು ಸಮಾಧಾನಪಡಿಸಿ, ಮುದ್ದಿಸಿ, ಮನೆಗೆ ಕರೆದುಕೊಂಡು ಹೋದೆ. ಮನೆಗೆ ಹೋದ ಮೇಲೆ ಹರ್ಷನ ಕಿವಿಗಳನ್ನು ಗಮನಿಸಿದೆ. ಅವನು ಹಿಯರಿಂಗ್ ಏಡ್ ಹಾಕಿರಲಿಲ್ಲ. ನನಗೆ ಕೋಪ ಬಂತು. ತಕ್ಷಣ ಅಲ್ಲೇ ಇದ್ದ ಮಿಷನನ್ನು ಅವನ ಕಿವಿಗೆ ಹಾಕಿ, ‘ಕಿವಿ ಮಿಷನ್ ಯಾಕೆ ಹಾಕಿಕೊಂಡಿರಲಿಲ್ಲ, ನೋಡು ಹೇಗಾಯ್ತು’ ಎಂದು ಜೋರಾಗಿ ರೇಗಿದೆ. ಹರ್ಷ ಅಳುಮುಖ ಮಾಡಿಕೊಂಡು ಹೇಳಿದ. ‘ನಾನು ಕಿವಿ ಮಿಷನ್ ಹಾಕೊಂಡ್ರೆ ಎಲ್ಲರಿಗೂ ಕಾಣುತ್ತಲ್ಲಮ್ಮ. ನಾನು ಕಿವುಡ ಅಂತ ಗೊತ್ತಾಗತ್ತಲ್ಲ. ನಿನಗೆ ಅದು ಇಷ್ಟ ಆಗೋಲ್ವಲ್ಲ. ಅಲ್ದೆ, ನನಗೆ ಇಲ್ಲೆಲ್ಲೂ ಟೋಪಿ ಕಾಣಿಸ್ಲಿಲ್ಲ, ಅದರ ಮೇಲೆ ಹಾಕೊಳ್ಳೊಕೇ, ಅದಕ್ಕೆ ಹಾಗೇ ಬಂದ್ಬಿಟ್ಟೆ, ಸಾರಿ ಅಮ್ಮ’ ಎಂದು ಗದ್ಗದಿತನಾದ.

ಹರ್ಷನ ಮಾತು ಕೇಳಿ ನನಗೆ ತೀರಾ ನೋವುಂಟಾಯಿತು. ಈ ಸಣ್ಣ ಮಗುವಿನಲ್ಲಿ ನಾನೆಂತಾ ಕೀಳರಿಮೆ ಬೆಳೆಸುತ್ತಿದ್ದೇನೆ? ಹೌದು, ನನ್ನನ್ನು ಹಾಗೂ ನನ್ನ ಮಗನನ್ನು ಸಮಾಜ ಆಡಿಕೊಳ್ಳುವುದೆಂಬ ಭಯದಿಂದ ಆ ಪುಟ್ಟ ಹೃದಯದಲ್ಲಿ ಕೀಳರಿಮೆ ಮೂಡಿಸಿ ಅವನ ಜೀವಕ್ಕೆ ಕುತ್ತು ತಂದು ಬಿಡುತ್ತಿದ್ದೆ ನಲ್ಲ ಎಂದು ಒಂದು ಕ್ಷಣ ಮನಸ್ಸು ತಲ್ಲಣಿಸಿತು. ಜೀವ ಮಾತ್ರವಲ್ಲ, ಈ ಕೀಳರಿಮೆಯಿಂದಾಗಿ ನಿಧಾನವಾಗಿ ಅವನ ಜೀವನವನ್ನು ಕತ್ತಲಿನ ಕೂಪಕ್ಕೆ ದೂಡುತ್ತಿದ್ದೆ. ಹೌದು, ಶಾಲೆಯನ್ನು ಹೊರತುಪಡಿಸಿ ಹರ್ಷ ಸ್ವತಂತ್ರವಾಗಿ ಯೋಚಿಸಿ, ಮಾತನಾಡಲು ನಾನು ಎಲ್ಲಿಯೂ ಅವಕಾಶವನ್ನೇ ಕೊಡುತ್ತಿರಲಿಲ್ಲ. ಇದರಿಂದಾಗಿ, ಇತರರೊಂದಿಗೆ ಬೆರೆಯಲು ಸಾಧ್ಯವಾಗದೇ ಮಾತು-ಭಾಷೆಯ ಕಲಿಕೆಯಲ್ಲಿ ಹರ್ಷ ಹಿಂದುಳಿಯತೊಡಗಿದ್ದ. ಆದರೆ, ಈ ಘಟನೆಯ ನಂತರ ನಾನು ಮಾಡುತ್ತಿದ್ದ ತಪ್ಪು ನನಗೆ ಸ್ಪಷ್ಟವಾಗಿ ಗೋಚರಿಸತೊಡಗಿತ್ತು.

ಮನಸ್ಸು ಜಾಗೃತವಾಯಿತು. ಅಲ್ಲಿಂದಾಚೆಗೇ ಹರ್ಷ ಸ್ವತಂತ್ರವಾಗಿ ಯೋಚಿಸಲು, ಅನಿಸಿದ್ದನ್ನು ಇತರರೊಂದಿಗೆ ತನಗೆ ತಿಳಿದ ರೀತಿಯಲ್ಲೇ ಮಾತನಾಡಲು ಅವಕಾಶ ಮಾಡಿಕೊಟ್ಟೆ. ಹೊರಗಡೆ ಹೋದಾಗ ಅಂಗಡಿಗಳಲ್ಲಿ ಅವನು ತನಗೆ ಬೇಕಾದ್ದನ್ನು ಕೇಳಿ ಪಡೆಯುವಂತೆ ಮಾಡಿದೆ. ಅಕ್ಕ-ಪಕ್ಕದ ಮಕ್ಕಳೊಡನೆ ಬೆರೆಯಲು ತಿಳಿಸಿದೆ. ಹರ್ಷ ಮಾತನಾಡಿದ್ದು ಅವರಿಗೆ ಅರ್ಥ ಆಗದಿದ್ದಾಗ, ನಾನೇ ತಿಳಿಸಿ ಹೇಳಿದೆ. ಅವನು ತೊಡುವ ಶ್ರವಣ ಸಾಧನದ ಕುರಿತು ಅವರಿಗೆ ಅರ್ಥ ಮಾಡಿಸಿದೆ ಹಾಗೂ ಅದನ್ನು ಹಾಕಿಕೊಳ್ಳು ವುದರಿಂದಲೇ ಹರ್ಷನಿಗೆ ಶಬ್ದಗಳನ್ನು ಮಾತುಗಳನ್ನು ಕೇಳಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಅಷ್ಟು ವರ್ಷ ಸಭೆ-ಸಮಾರಂಭಗಳಿಗೆ ಹೋಗುವುದನ್ನು ತಡೆ ಹಿಡಿದಿದ್ದ ನಾನು, ನಿಧಾನವಾಗಿ ಮಗನೊಂದಿಗೆ ಎಲ್ಲಾ ಕಾರ್ಯಕ್ರಮಗಳಿಗೆ ಹಾಜರಾಗುವುದನ್ನು ರೂಢಿಸಿಕೊಂಡೆ. ಎಲ್ಲರೊಂದಿಗೆ ಹೆಚ್ಚೆಚ್ಚು ಸಂಭಾಷಣೆ ನಡೆಸಲು ಹರ್ಷನನ್ನು ಪ್ರೋತ್ಸಾಹಿಸತೊಡಗಿದೆ.

ಇವೆಲ್ಲಕ್ಕಿಂತ ಮುಖ್ಯವಾಗಿ ನನ್ನಲ್ಲಿ ಬದಲಾವಣೆ ಮೂಡಿಸಿದ್ದು ಹರ್ಷನನ್ನು ಸೇರಿಸಿದ್ದ ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆಯ ‘ವಿಶೇಷ ಶಾಲೆ’. ಅಲ್ಲಿ ಎಲ್ಲ ಮಕ್ಕಳನ್ನು ಗಮನಿಸತೊಡಗಿದೆ. ಅಲ್ಲಿನ ಶಿಕ್ಷಕರ ಸಹಾಯ ಪಡೆದು ಹರ್ಷನಿಗೆ ಸಹಾಯವಾಗುವಂತಹ ಕೆಲವು ಬದಲಾವಣೆಗಳನ್ನು ಅಳವಡಿಸಿಕೊಂಡೆ. ಶಾಲೆಯಲ್ಲಿ ಹೇಳಿಕೊಡುವ ಮಾತು-ಭಾಷೆಯ ತರಬೇತಿಯನ್ನು ಮನೆಯಲ್ಲೂ ಮುಂದುವರಿಸಿದೆ. ವರ್ಷಗಳ ನಂತರ ಹರ್ಷನಲ್ಲಿ ಬಹಳ ಸುಧಾರಣೆ ಕಂಡು ಬಂತು. ಪಾಠಗಳಲ್ಲಿ ಮಾತ್ರವಲ್ಲದೆ, ಪಠ್ಯೇತರ ಚಟುವಟಿಕೆ, ಸಾಮಾಜಿಕ ಜೀವನದಲ್ಲೂ ಉತ್ತಮ ಬದಲಾವಣೆ ಉಂಟಾಯಿತು.

ಈಗ ಹರ್ಷ ಮುಖ್ಯವಾಹಿನಿಯ ಶಾಲೆಗೆ ಪ್ರವೇಶ ಪಡೆಯಲು ಸಜ್ಜಾಗಿದ್ದಾನೆ. ಸ್ನೇಹಿತರೊಡನೆ, ಅಕ್ಕ-ಪಕ್ಕದ ಮಕ್ಕಳೊಡನೆ ಹಿಂಜರಿಕೆಯಿಲ್ಲದೆ ಸಹಜವಾಗಿ ಮಾತನಾಡುತ್ತಾನೆ. ಹೊರಗಡೆ ಹೋದಾಗ ತನಗೆ ಬೇಕಾದ್ದನ್ನು ತಾನೇ ಕೇಳಿ ಪಡೆಯುತ್ತಾನೆ. ಸಮಾಜದ ಇತರರೊಂದಿಗೆ ಬೆರೆಯುತ್ತಾನೆ. ಎಲ್ಲರಂತೆ ತಾನು ಏನನ್ನಾದರೂ ಸಾಧಿಸಬಲ್ಲೆ ಎಂಬ ಆತ್ಮವಿಶ್ವಾಸ ಅವನಲ್ಲಿ ಮೂಡಿದೆ. ಶ್ರವಣ ಸಾಧನವನ್ನು ಧರಿಸುವುದು ಅವಮಾನವಲ್ಲ ಎಂಬುದು ನನಗೀಗ ಅರಿವಾಗಿದೆ. ಹರ್ಷನಿಗೆ ಸಹ ಅದರ ಬಗ್ಗೆ ಯಾವುದೇ ಹಿಂಜರಿಕೆಯಿಲ್ಲ. ನನ್ನ ಹರ್ಷನಿಗೆ ಶ್ರವಣ ಸಾಧನದ ಬಗ್ಗೆ ಜಿಗುಪ್ಸೆ ಮೂಡುವಂತೆ ಮಾಡಿದ್ದರ ಬಗ್ಗೆ ನನಗೆ ವಿಷಾದವಿದೆ. ‘ಶ್ರವಣ ಸಾಧನ’ವೇ ನನ್ನ ಹರ್ಷನ ‘ಸಾಧನೆ’ಯ ಬುನಾದಿ ಎಂದು ಹೇಳಲು ಈಗ ನನಗೆ ಹೆಮ್ಮೆಯಿದೆ, ಖುಷಿಯಿದೆ.

ನಿರೂಪಣೆ: ನಿತ್ಯಶ್ರೀ ಆರ್., ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆಯ ಕಿರಿಯ ತಾಂತ್ರಿಕ ಬರವಣಿಗೆ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT