ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ– ಅಗಲ | ವಿಶ್ವ ಶ್ರವಣ ದಿನ: ಎಲ್ಲರೂ ಇಲ್ಲಿ ಕೇಳಿ ಕೇಳಿಸಿಕೊಳ್ಳಲು ನೆರವಾಗಿ

Published 1 ಮಾರ್ಚ್ 2024, 23:30 IST
Last Updated 1 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಇದೇ ಭಾನುವಾರದ ಮಾರ್ಚ್‌ 3ರಂದು ವಿಶ್ವ ಶ್ರವಣ ದಿನವನ್ನು ಆಚರಿಸಲಾಗುತ್ತದೆ. ಶ್ರವಣ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ದೊರೆತು, ಅವರೂ ಎಲ್ಲರಂತೆ ಕೇಳಿಸಿಕೊಳ್ಳುವಂತಾಗಬೇಕು ಎಂಬುದು ವಿಶ್ವ ಶ್ರವಣ ದಿನದ ಪ್ರಧಾನ ಉದ್ದೇಶ. 2024ನೇ ಸಾಲಿನ ವಿಶ್ವ ಶ್ರವಣ ದಿನಕ್ಕೆ, ‘ಮನಃಸ್ಥಿತಿಯ
ಬದಲಾವಣೆ’ಯನ್ನು ವಿಷಯವನ್ನಾಗಿ ಆಯ್ಕೆಮಾಡಿಕೊಳ್ಳಲಾಗಿದೆ. ಶ್ರವಣ ಸಮಸ್ಯೆಗೆ ಸಂಬಂಧಿಸಿ ದಂತೆ ಆ ಸಮಸ್ಯೆಯಿಂದ ಬಳಲುತ್ತಿರುವವರು, ಅವರ ಜತೆಗೆ ಇರುವವರು ಮತ್ತು ಸಮಾಜದಲ್ಲಿನ ಎಲ್ಲರ ಮನಸ್ಥಿತಿಯನ್ನು ಬದಲಿಸಬೇಕು ಎಂಬುದು ಈ ಬಾರಿಯ ಗುರಿ.

ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ವಿಶ್ವದಾದ್ಯಂತ ಶ್ರವಣ ಸಮಸ್ಯೆಯಿಂದ ಬಳಲುತ್ತಿರು ವವರಲ್ಲಿ 43 ಕೋಟಿಯಷ್ಟು ಜನರಿಗೆ ಈಗ ಚಿಕಿತ್ಸೆ ನೀಡಬೇಕಿದೆ. ಚಿಕಿತ್ಸೆ ನೀಡುವ ಮೂಲಕ ಅವರೂ ಎಲ್ಲರಂತೆ ಕೇಳಿಸಿಕೊಳ್ಳುವಂತೆ ಮಾಡಲು ಅವಕಾಶವಿದೆ. ಆದರೆ ಈ ಸಮಸ್ಯೆಯ ಬಗ್ಗೆ ಇರುವ ತಪ್ಪು ತಿಳಿವಳಿಕೆಗಳು ಮತ್ತು ಚಿಕಿತ್ಸೆಯ ಬಗ್ಗೆ ಅರಿವು ಇಲ್ಲದೇ ಇರುವ ಕಾರಣ ಅಷ್ಟು ಮಂದಿಗೆ ಚಿಕಿತ್ಸೆ ಕೊಡಿಸುವುದಕ್ಕೆ ತೊಡಕಾಗುತ್ತಿದೆ. ಇದು ಹೀಗೇ ಮುಂದುವರಿದರೆ 2050ರ ವೇಳೆಗೆ, ಹೀಗೆ ಚಿಕಿತ್ಸೆ ಅನಿವಾರ್ಯವಿರುವವರ ಸಂಖ್ಯೆ 70 ಕೋಟಿಗೆ ಏರಿಕೆಯಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ.

ವಿಶ್ವದಾದ್ಯಂತ ಶ್ರವಣ ಸಮಸ್ಯೆ ಎದುರಿಸುತ್ತಿರುವವರಲ್ಲಿ ಈಗಲೂ ಶೇ 80ರಷ್ಟು ಮಂದಿ ಯಾವುದೇ ರೀತಿಯ ಚಿಕಿತ್ಸೆ ತೆಗೆದುಕೊಳ್ಳುತ್ತಿಲ್ಲ. ಇದರಿಂದ ಶಿಕ್ಷಣ, ಕೆಲಸದ ಸ್ಥಳಗಳಲ್ಲಿ ಅವರ ಉತ್ಪಾದಕತೆಯನ್ನು ಕುಂಠಿತಗೊಂಡಿದೆ. ಅಂದಾಜುಗಳ ಪ್ರಕಾರ ಇದರಿಂದ ವಿಶ್ವದಾದ್ಯಂತ ವಾರ್ಷಿಕ ₹85 ಲಕ್ಷ ಕೋಟಿಯಷ್ಟು ನಷ್ಟ ಉಂಟಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಶ್ರವಣ ಸಮಸ್ಯೆಯು ಒಂದು ಆರೋಗ್ಯದ ಸಮಸ್ಯೆ ಅಷ್ಟೆ. ಅದು ಗೋಚರವಾಗದ ಅಂಗವೈಕಲ್ಯ. ಆದರೆ ಇದನ್ನು ಒಂದು ಮಾನಸಿಕ ಸಮಸ್ಯೆ ಎಂದು ನೋಡುವವರ ಪ್ರಮಾಣವೇ ಹೆಚ್ಚು. ಅಲ್ಲದೆ, ತಮಗೆ ಈ ಸಮಸ್ಯೆ ಇದೆ ಎಂದು ಹಲವರು ಹೇಳಿಕೊಳ್ಳಲೇ ಹಿಂಜರಿಯುತ್ತಾರೆ. ಇದರಿಂದ ಅವರು ಮನೆಯಲ್ಲಿ, ಕೆಲಸದ ಸ್ಥಳಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತವಾಗಿ ಬೆರೆಯಲು ಸಾಧ್ಯವಾಗುವುದಿಲ್ಲ. ಅಲ್ಲದೆ ಇಂತಹ ಸಮಸ್ಯೆ ಎದುರಿಸುತ್ತಿರುವವರಿಗೆ ಕೆಲಸದ ಅವಕಾಶವೂ ಕಡಿಮೆ. ಈ ಎಲ್ಲಾ ಕಾರಣಗಳಿಂದ ಅಂತಹ ವ್ಯಕ್ತಿಗಳು ಆರ್ಥಿಕ ಸಮಸ್ಯೆ ಎದುರಿಸುತ್ತಾರೆ ಮತ್ತು ದೇಶದ ಆರ್ಥಿಕತೆಗೂ ನಷ್ಟವಾಗುತ್ತದೆ. ಅವರಿಗೆ ಚಿಕಿತ್ಸೆ ಕೊಡಿಸಿ ಅಥವಾ ಚಿಕಿತ್ಸೆಮಾಡಿಸಿಕೊಳ್ಳುವಂತೆ ಮನವೊಲಿಸಬೇಕಿದೆ. ಆ ಮೂಲಕ ಅವರೂ ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗುವಂತೆ ಮಾಡಬಹುದಾಗಿದೆ. ಈ ಸಾಲಿನ ವಿಶ್ವ ಶ್ರವಣ ದಿನದ ಗುರಿಯೂ ಇದೇ ಆಗಿದೆ.

ಆಧಾರ: ವಿಶ್ವ ಆರೋಗ್ಯ ಸಂಸ್ಥೆ

‘ತಪ್ಪು ಕಲ್ಪನೆಗಳು ಬದಲಾಗಬೇಕಿದೆ’

ಕಿವಿ ಕೇಳಿಸದೇ ಇರುವುದು ಇಂದು ಭಾರತ ಮಾತ್ರವಲ್ಲ, ವಿಶ್ವದಾದ್ಯಂತ ಸಾಮಾಜಿಕ ಆರೋಗ್ಯ ಸಮಸ್ಯೆಯಾಗಿದೆ. ಭಾರತದಲ್ಲಿ ಈಗ ಅಂದಾಜು 6.3 ಕೋಟಿಯಷ್ಟು ಜನರು ಶ್ರವಣದೋಷದಿಂದ ಬಳಲುತ್ತಿದ್ದಾರೆ. ಅವರಲ್ಲಿ ಬಹುತೇಕರಿಗೆ ಚಿಕಿತ್ಸೆಯ ನಂತರ ಆ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ. ಆದರೆ ಆ ಬಗ್ಗೆ ಅರಿವಿನ ಕೊರತೆ ಇರುವ ಕಾರಣದಿಂದ, ಚಿಕಿತ್ಸೆಯಿಂದ ದೂರ ಉಳಿಯುತ್ತಿದ್ದಾರೆ.  

ಕೆಲವೇ ಕೆಲವು ಮಂದಿಗಷ್ಟೇ ಹುಟ್ಟಿದಂದಿನಿಂದಲೇ ಇಂತಹ ಸಮಸ್ಯೆ ಇರುತ್ತದೆ. ಹೆಚ್ಚಿನ ಮಂದಿಗೆ ನಂತರದ ದಿನಗಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಾ ಹೋಗುತ್ತದೆ. ಜೀವಿತಾವಧಿಯಲ್ಲಿ ಕಿವಿ–ತಲೆಗೆ ಪೆಟ್ಟು ಬೀಳುವುದರಿಂದ, ಕಿವಿಸೋಂಕು, ಶಬ್ದಮಾಲಿನ್ಯ, ಇಲ್ಲವೇ ಆನುವಂಶಿಕ ಕಾರಣಗಳಿಂದ ಶ್ರವಣ ಸಮಸ್ಯೆ ತಲೆದೋರಬಹುದು. ಈ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದರೆ, ಅವುಗಳನ್ನು ನಿವಾರಿಸಬಹುದಾಗಿದೆ. ಆದರೆ ಈ ಸಮಸ್ಯೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳೇ, ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಚಿಕಿತ್ಸೆಯಿಂದ ದೂರ ಇರಿಸಿವೆ.

ರಕ್ತಸಂಬಂಧದಲ್ಲಿ ವಿವಾಹವಾಗುವುದನ್ನು ಹೊರತುಪಡಿಸಿ ವಂಶಪಾರಂಪರ್ಯವಾಗಿ ಬರುವ ಶ್ರವಣ ಸಮಸ್ಯೆಯು ಅತ್ಯಂತ ವಿರಳ. ಕಿವಿ ಕೇಳದವರಿಗೆ ಮಾತೂ ಬರುವುದಿಲ್ಲ ಎನ್ನಲಾಗುತ್ತದೆ. ಆದರೆ, ಚಿಕ್ಕ ವಯಸ್ಸಿನಲ್ಲೇ ಕೇಳುವ ಅವಕಾಶದಿಂದ ವಂಚಿತರಾಗುವ ಕಾರಣದಿಂದ ಅಂತಹವರು ಮಾತು ಕಲಿತಿರುವುದಿಲ್ಲ ಅಷ್ಟೆ. ಅವರ ಧ್ವನಿಪೆಟ್ಟಿಗೆ, ಮಿದುಳಿನ ಬೆಳವಣಿಗೆಯಲ್ಲಿ ಯಾವ ಕೊರತೆಯೂ ಇರುವುದಿಲ್ಲ. ಹೀಗಾಗಿ ಅಂತಹವರು ಮೂಕರೂ ಅಲ್ಲ, ಮೂರ್ಖರೂ ಅಲ್ಲ.

ಕಿವಿ ಕೇಳದ ವ್ಯಕ್ತಿ ಕೆಲವೊಮ್ಮೆ ಅಸಂಬದ್ಧ ಜವಾಬು ನೀಡಿರುತ್ತಾರೆ. ಅದನ್ನೇ ಮುಂದುಮಾಡಿಕೊಂಡು, ಅಂತಹವರ ಬೌದ್ಧಿಕ ಸಾಮರ್ಥ್ಯವನ್ನು ಪ್ರಶ್ನಿಸುವಂತಹ ವರ್ತನೆಗಳು ಸಮಾಜದಲ್ಲಿ, ಸಿನಿಮಾಗಳಲ್ಲಿ, ಕಡೆಗೆ
ಮಾಧ್ಯಮಗಳಲ್ಲೂ ವ್ಯಕ್ತವಾಗುತ್ತಿವೆ. ಇದರ ಪರಿಣಾಮವಾಗಿ, ಕಿವಿ ಕೇಳದವರಿಗೆ ತಲೆಯೂ ಸರಿಯಾಗಿ ಕೆಲಸ ಮಾಡುವುದಿಲ್ಲ ಎಂಬ ತಪ್ಪು ಅಭಿಪ್ರಾಯ ಸಮಾಜದಲ್ಲಿ ಗಟ್ಟಿಯಾಗಿ ನೆಲೆನಿಂತಿದೆ. ಜತೆಗೆ, ಕಿವುಡ ಎಂದು ಮೂದಲಿಸುವುದಕ್ಕೂ ಜನರು
ಹಿಂಜರಿಯುವುದಿಲ್ಲ. ಈ ಮುಂದುವರಿದ ಕಾಲದಲ್ಲೂ ಕಿವಿ ಕೇಳಿಸದವರ ಬಗ್ಗೆ ಜನರು ಇಂತಹ ಅಭಿಪ್ರಾಯ ವನ್ನು ಉಳಿಸಿಕೊಂಡಿರುವುದು ವಿಪರ್ಯಾಸ.

ಈ ಎಲ್ಲಾ ಕಾರಣಗಳಿಂದ ಶ್ರವಣ ಸಮಸ್ಯೆಯು ತೀವ್ರ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ಈ ತಪ್ಪು
ಅಭಿಪ್ರಾಯಗಳನ್ನು ಹೋಗಲಾಡಿಸುವ ಮೂಲಕ, ಶ್ರವಣ ಸಮಸ್ಯೆ ಎದುರಿಸುತ್ತಿರುವವರು ಚಿಕಿತ್ಸೆ ಪಡೆಯುವಂತೆ ಮಾಡಬೇಕಿದೆ. ಆಗ ಆ ಜನರೂ ಜನ ಸಾಮಾನ್ಯರಂತೆ ಸಮಾಜದಲ್ಲಿ ಬದುಕು ನಡೆಸಲು ಸಾಧ್ಯವಾಗುತ್ತದೆ. ಅಂತಹದ್ದೊಂದು ಪರಿಸ್ಥಿತಿಯನ್ನು ರೂಪಿಸುವ ಜವಾಬ್ದಾರಿ ನಮ್ಮ–ನಿಮ್ಮೆಲ್ಲರ ಮೇಲೆ ಇದೆ.

ಲೇಖಕ: ಎಂ.ಎಸ್‌.ಜೆ.ನಾಯಕ್‌, ಭಾರತೀಯ ವಾಕ್‌–ಶ್ರವಣ ಸಂಘದ ಬೆಂಗಳೂರು ಶಾಖೆಯ ಅಧ್ಯಕ್ಷ

– ಎಂ.ಎಸ್‌.ಜೆ.ನಾಯಕ್‌

– ಎಂ.ಎಸ್‌.ಜೆ.ನಾಯಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT