ಶನಿವಾರ, ಮೇ 30, 2020
27 °C

ಮದ್ಯವ್ಯಸನ ಹಿಂದೆಗೆತ: ಇಲ್ಲಿವೆ ಪರಿಹಾರಗಳು

ಡಾ. ಎಂ.ಡಿ. ಸೂರ್ಯಕಾಂತ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಕುಡಿಯಲು ಮದ್ಯ ಇಲ್ಲದ್ದರಿಂದ ಕೆಲವು ಮದ್ಯವ್ಯಸನಿಗಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ, ಇನ್ನು ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇಂತಹ ಸಮಸ್ಯೆಗೆ ಕಾರಣಗಳೇನು? ಇದಕ್ಕೆ ಪರಿಹಾರಗಳಿಲ್ಲವೇ?

ಮದ್ಯಪಾನವೆಂಬುದು ದೈಹಿಕ ಹಾಗೂ ಮಾನಸಿಕವಾಗಿ ತೊಂದರೆ ಉಂಟು ಮಾಡುವಂತಹ ದುರಭ್ಯಾಸ. ಇದು ಮಿತಿಮೀರಿದರೆ ಹೇಗೆ ಸಮಸ್ಯೆ ಕಾಣಿಸಿಕೊಳ್ಳುವುದೋ ಹಾಗೆಯೇ ಕುಡಿಯುವುದನ್ನು ನಿಲ್ಲಿಸಿದಾಗಲೂ ಹಲವು ತೊಂದರೆಗಳು ತಲೆದೋರುತ್ತವೆ. ದೀರ್ಘಕಾಲ ಮತ್ತು ಅತಿಯಾದ ಮದ್ಯಪಾನ ಮಾಡುವ ವ್ಯಕ್ತಿಯು ಇದ್ದಕ್ಕಿದ್ದಂತೆ ಕುಡಿಯುವುದನ್ನು ನಿಲ್ಲಿಸಿದಾಗ ಕೆಲವು ಮನೋದೈಹಿಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಸ್ಥಿತಿಯನ್ನು ಆಲ್ಕೋಹಾಲ್ ಹಿಂದೆಗೆದುಕೊಳ್ಳುವ ಅಪಾಯ(ವಿದ್‌ಡ್ರಾವಲ್ ಸಿಂಡ್ರೋಮ್) ಎನ್ನುತ್ತಾರೆ.

ಇದು ಸತತವಾಗಿ ವರ್ಷಗಟ್ಟಲೆ ಮತ್ತು ಅಧಿಕವಾಗಿ ಕುಡಿಯುವವರಲ್ಲಿ ಮತ್ತು ಅಂಗಾಂಗ ಹಾನಿ ಮಾಡಿಕೊಂಡವರಲ್ಲಿ ಸಾಮಾನ್ಯ. ಅಮೆರಿಕದ ಸಿ.ಡಿ.ಸಿ.(ಸೆಂಟರ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಅಂಡ್‌ ಪ್ರಿವೆನ್ಶನ್‌) ಪ್ರಕಾರ ಅತಿಯಾದ ಮದ್ಯಸೇವನೆ ಎಂದರೆ ವಾರಕ್ಕೆ 8 ಡ್ರಿಂಕ್ಸ್‌ಗಿಂತ ಅಧಿಕ ಸೇವನೆ ಮಾಡುವ ಮಹಿಳೆ ಅಥವಾ ವಾರಕ್ಕೆ 15 ಡ್ರಿಂಕ್ಸ್ ಮಾಡುವ ಪುರುಷ (ಒಂದು ಡ್ರಿಂಕ್ಸ್= 1.5 ಔನ್ಸ್‌ ಮದ್ಯ, 12 ಔನ್ಸ್‌ ಬಿಯರ್‌)

ಲಕ್ಷಣಗಳು

* ನಡುಕ: ಇದು ಮದ್ಯ ಸೇವನೆ ನಿಲ್ಲಿಸಿದ 5–10 ಗಂಟೆಯೊಳಗೆ ಕಾಣಿಸಿಕೊಂಡು, 24–48 ಗಂಟೆಯೊಳಗೆ ಅಧಿಕವಾಗುತ್ತದೆ. ಇದರ ಜೊತೆ ನಾಡಿಮಿಡಿತ, ರಕ್ತದೊತ್ತಡ, ಉಸಿರಾಟದ ವೇಗ ಹೆಚ್ಚಾಗುತ್ತದೆ. ಬೆವರು, ವಾಕರಿಕೆ, ವಾಂತಿ, ಆತಂಕ, ದುಃಸ್ವಪ್ನ, ನಿದ್ರಾಹೀನತೆ ಸಾಮಾನ್ಯ.

* ಭ್ರಮೆ: ಸೇವನೆ ನಿಲ್ಲಿಸಿದ 12–24 ಗಂಟೆಯೊಳಗೆ ಕಾಣಿಸಿಕೊಂಡು ಎರಡು ದಿನ ಇರುತ್ತದೆ. ನೈಜವಲ್ಲದ ವಿಷಯಗಳನ್ನು ನೋಡಬಹುದು ಅಥವಾ ಅನುಭವಿಸಬಹುದು. ನೆಲದ ಮೇಲೆ ನಾಣ್ಯಗಳು ಅಥವಾ ವಸ್ತುಗಳು ಓಡಾಡಿದಂತೆ ಭಾಸವಾಗುತ್ತದೆ.

* ಅಪಸ್ಮಾರ: ಮದ್ಯಪಾನ ನಿಲ್ಲಿಸಿದ ಎರಡು ದಿನದೊಳಗೆ ಕಾಣಿಸಿಕೊಳ್ಳಬಹುದು. ದೇಹದ ಒಂದು ಭಾಗಕ್ಕೆ ಅಥವಾ ಇಡೀ ದೇಹದಲ್ಲಿ ಅಪಸ್ಮಾರ ಸಾಧ್ಯ.

* ಡೆಲಿರಿಯಮ್ ಟ್ರೆಮೆನ್ಸ್: ಇದೊಂದು ಗಂಭೀರ ಲಕ್ಷಣವಾಗಿದ್ದು, ಶೇ 5– 20 ಮದ್ಯಪಾನಿಗಳಲ್ಲಿ ಸಾಮಾನ್ಯ. ಸೇವನೆ ನಿಲ್ಲಿಸಿದ 2–3 ದಿನಗಳ ನಂತರ ಅಥವಾ ಕೆಲವರಲ್ಲಿ ತಡವಾಗಿ ಕಾಣಬಹುದು. ಗೊಂದಲ, ದಿಗ್ಭ್ರಮೆ, ಪ್ರಜ್ಞಾಹೀನತೆ, ಏಕಾಗ್ರತೆ ಇಲ್ಲದಿರುವುದು, ಏರಿದ ರಕ್ತದೊತ್ತಡ, ನಿರ್ಜಲೀಕರಣ ಸಾಮಾನ್ಯ. ಈ ಲಕ್ಷಣಗಳು 5–6 ದಿನಗಳ ಕಾಲ ಇರುತ್ತವೆ.

ಈ ಎಲ್ಲ ತೊಂದರೆಗಳಿಗೆ ಮೂಲ ಕಾರಣ ಮೆದುಳಿಗೆ ಅಸಮರ್ಪಕ ರಕ್ತ ಸರಬರಾಜು ಮತ್ತು ಡೋಪಾಮೈನ್ ಎಂಬ ರಾಸಾಯನಿಕದ ಕೊರತೆ.

ಚಿಕಿತ್ಸೆ

ಆರಂಭಿಕ ಲಕ್ಷಣಗಳು ಕಂಡಾಕ್ಷಣ ಮನೋವೈದ್ಯ ಅಥವಾ ಆಪ್ತ ಸಮಾಲೋಚಕರನ್ನು ಸಂಪರ್ಕಿಸಿರಿ. ಕೆಲವು ಜಿಲ್ಲಾ ಆಸ್ಪತ್ರೆ, ಮನೋಚಿಕಿತ್ಸಾ ಕೇಂದ್ರ, ಬೆಂಗಳೂರಿನ ನಿಮ್ಹಾನ್ಸ್, ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ವ್ಯಸನ ಬಿಡಿಸುವ ಹಾಗೂ ಮನೋಕ್ಷೋಭೆಗೆ ಚಿಕಿತ್ಸೆ ನೀಡುವ ‘ಡಿ-ಅಡಿಕ್ಷನ್ ಸೆಂಟರ್’ ಎಂಬ ವಿಶೇಷ ಕೇಂದ್ರಗಳಿವೆ.

ಮದ್ಯಪಾನ ಹಿಂದೆಗೆತದ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿವಾರಿಸಲು ಕೆಲವು ಔಷಧಿಗಳು ಲಭ್ಯ. ಚಿಕಿತ್ಸೆ ಪಡೆಯದಿದ್ದರೆ ಮೆದುಳಿಗೆ ಹಾನಿ ಮತ್ತು ಜೀವಕ್ಕೆ ಅಪಾಯವಾಗಬಹುದು.

ಈಗ ಲಾಕ್‌ಡೌನ್‌ನಿಂದಾಗಿ ಮದ್ಯದಂಗಡಿಗಳು ಬಂದ್‌ ಆಗಿವೆ. ಸಾರಾಯಿ ಅಂಗಡಿಯನ್ನು ಹುಡುಕುವುದು ಅಥವಾ ಸ್ನೇಹಿತರನ್ನು ಸಂಪರ್ಕಿಸುವುದು ಮಾಡಬೇಡಿ. ಮತ್ತು ಬರಿಸುವ ಅಥವಾ ಜೀವ ಹಾನಿ ಮಾಡುವ ರಾಸಾಯನಿಕ ಸೇವಿಸಬೇಡಿ. ಕುಡಿತ ಬಿಡಲು ಇದೊಂದು ಉತ್ತಮ ಅವಕಾಶ ಎಂದು ತಿಳಿದು, ನಿಲ್ಲಿಸಲು ಪ್ರಯತ್ನಿಸಿ.

ಸಾಧ್ಯವಾದಷ್ಟು ನಿದ್ರೆ ಮಾಡಿ. ಪುಸ್ತಕ ಓದಿ. ಧ್ಯಾನ, ಯೋಗ ಮಾಡಿ.

ಮದ್ಯದ ಬದಲಾಗಿ ಇವುಗಳನ್ನು ಸೇವಿಸಿ

* ಬಿಸಿ ಚಹಾ, ಕಾಫಿ ಅಥವಾ ತಣ್ಣಗಿನ ಚಹಾ, ಐಸ್‌ ಬೆರೆತ ಕಾಫಿ

* ಕೊಂಬುಚಾ (ಹಸಿರು ಮತ್ತು ಕಪ್ಪು ಚಹಾದ ಪೇಯ)

* ಸೋಡಾ, ಹಣ್ಣಿನ ರಸ

* ಸಕ್ಕರೆಯುಕ್ತ ಸಿರಪ್ ಜೊತೆ ಕ್ಲಬ್ ಸೋಡಾ

* ಕೆಫಿನ್‌ಯುಕ್ತ ತಂಪು ಪಾನಿಯ

* ಮಸಾಲೆಯುಕ್ತ ಸೇಬಿನ ರಸ

* ವನಸ್ಪತಿ ಬೆರೆತ ಸೋಡಾ ವಾಟರ್

* ಎಳನೀರು (ಇದರಲ್ಲಿನ ಪೊಟ್ಯಾಶಿಯಂ ವ್ಯಸನ ನಿರೋಧಕ)

(ಲೇಖಕರು ಬೆಂಗಳೂರಿನಲ್ಲಿ ತಜ್ಞ ವೈದ್ಯರು)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು