ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯಲ್ಲಿ ತಂಪು ದಾರಿಗಳು

Last Updated 18 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಬೇಸಿಗೆಯ ದಿನಚರಿ ಹೇಗಿರಬೇಕು? ಎಲ್ಲಾ ಕಾಲದಂತೆಯೇ ಬೇಸಿಗೆಯು ಒಂದು ಕಾಲ ಅದರಲ್ಲೇನು ವಿಶೇಷ ಎಂದೆನಿಸಬಹುದು. ಆದರೆ ವಸಂತದ ಪ್ರಾರಂಭದೊಂದಿಗೆ ಶುರುವಾಗುವ ಸೆಕೆ, ಬೇಸಿಗೆ ಮುಂದುವರೆದಂತೆ ಹೆಚ್ಚುತ್ತಾ ಹೋಗಿ ತಡೆಯಲಾರದ ಸ್ಥಿತಿ ತಲುಪುತ್ತದೆ. ಉಷ್ಣಾಂಶ 30 ಡಿಗ್ರಿಯ ಆಸುಪಾಸಿಗೆ ತಲುಪಲು ಪ್ರಾರಂಭವಾಗುತ್ತಿದ್ದಂತೆ, ಚಳಿಗಾಲದ ಶೀತದಿಂದಾಗಿ ದೇಹದಲ್ಲಿ ಸಂಚಯವಾದ ಕಫವು ವಸಂತದ ಅಲ್ಪವಾದ ಬಿಸಿಲಿನಿಂದಾಗಿ ಕರಗಿ ನೀರಾಗಿ ಜೀರ್ಣಶಕ್ತಿಯನ್ನು ಕಡಿಮೆ ಮಾಡಿ ಕಫ ಸಂಬಂಧವಾದ ತೊಂದರೆ ಉಂಟು ಮಾಡುತ್ತದೆ; ಎಂದರೆ ಅಜೀರ್ಣ, ಉಬ್ಬಸ, ನೆಗಡಿ, ತಲೆನೋವು, ಜ್ವರ, ಮುಂತಾದ ವ್ಯಾಧಿಗಳನ್ನು ಉತ್ಪತ್ತಿ ಮಾಡುತ್ತದೆ. ನಿಧಾನವಾಗಿ ಗ್ರೀಷ್ಮದ ಲಕ್ಷಣ ಬರುತ್ತಿದ್ದಂತೆ ಮೈ ಕೈ ಉರಿ, ಕಣ್ಣುಗಳ ಉರಿ, ಮೂತ್ರವಿಸರ್ಜನೆಯಲ್ಲಿ ತೊಂದರೆ, ಅತಿಯಾದ ದ್ರವಮಲ ಪ್ರವೃತ್ತಿ – ಹೀಗೆ ಕೆಲವು ಬಾಧೆಗಳು ಪ್ರಾರಂಭವಾಗುತ್ತವೆ. ಇವುಗಳಿಂದ ದೂರವಿರಲು ನಮ್ಮ ದಿನಚರ್ಯೆ, ಆಹಾರ, ವಿಹಾರಗಳಲ್ಲಿ ಕೆಲವೊಂದು ಬದಲಾವಣೆ ಅನಿವಾರ್ಯವಾಗುತ್ತದೆ.

ಬೇಸಿಗೆಯ ಸೆಕೆಗೆ ರಾತ್ರಿ ನಿದ್ರೆ ಬರುವುದೇ ಕಷ್ಟ. ಬೆಳಗಿನ ತಂಪು ವಾತಾವರಣದಲ್ಲಿ ನಿದ್ರೆ ಬಂದರೆ ಸೂರ್ಯ ಮೇಲೆ ಬಂದಮೇಲೂ ಕೆಲವರಿಗೆ ಏಳಲು ಮನಸ್ಸಾಗುವುದಿಲ್ಲ. ಆದರೆ ಮೇಲೆ ಹೇಳಿದ ರೋಗಗಳನ್ನು ತಡೆಗಟ್ಟಲು, ವಾತಪಿತ್ತಕಫಗಳು ಸಮಸ್ಥಿತಿಯಲ್ಲಿರಲು ಸೂರ್ಯೋದಯಕ್ಕೆ ಮೋದಲೇ ಅಥವಾ ಸೂರ್ಯೋದಯದ ಹೊತ್ತಿಗಾದರು ನಿದ್ರೆಯಿಂದ ಏಳಲೇಬೇಕು. ಬಿಸಿಲ ಬೇಗೆಯಿಂದಾಗುವ ಬಳಲಿಕೆಯನ್ನು ತಡೆಯಲು ಮಧ್ಯಾಹ್ನ ಸ್ವಲ್ಪ ಮಲಗಿ ವಿಶ್ರಾಂತಿ ಪಡೆಯಬಹುದು. ಬೇಸಿಗೆ ಹೆಚ್ಚಾಗುತ್ತಿದ್ದಂತೆ ಅತಿಯಾದ ವ್ಯಾಯಾಮ ವಾತ–ಪಿತ್ತಗಳ ಪ್ರಕೋಪವನ್ನು ಉಂಟುಮಾಡಿ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಬೆವರು ಬರಲು ಪ್ರಾರಂಭವಾದಾಗ ವ್ಯಾಯಾಮವನ್ನು ನಿಲ್ಲಿಸಬೇಕು. ತಂಪಿನ ವಾತಾವರಣದಲ್ಲಿ ಮಾಡುವಂತೆ ಹೆಚ್ಚು ಕಾಲ ವ್ಯಾಯಾಮ ಮಾಡುವುದು, ವಿಪರೀತವಾದ ದೇಹದಂಡನೆ ಒಳಿತಲ್ಲ. ಆದರೆ ವ್ಯಾಧಿ ನಿವೃತ್ತಿಯಾಗಲು ವಿಧಿಸಿರುವ ವ್ಯಾಯಾಮ ಮಾಡುತ್ತಿದ್ದರೆ ಮುಂದುವರೆಸಬೇಕು. ವ್ಯಾಯಾಮದ ನಂತರ ಅನುಕೂಲ ಇರುವವರು ಶ್ರೀಗಂಧ, ಲಾವಂಚ, ಇಲ್ಲದಿರುವವರು ಅರಿಸಿನ, ಸೀಗೆಕಾಯಿ ಮುಂತಾದುವುಗಳ ಚೂರ್ಣದಿಂದ ಮೈಯನ್ನು ತಿಕ್ಕಿಕೊಳ್ಳಬೇಕು. ಇದರಿಂದ ಕಫರೋಗಗಳು ಹಾಗೂ ಹೃದಯಸಂಬಂಧಿ ರೋಗಗಳು ಬರುವುದಿಲ್ಲ.

ಸ್ನಾನಕ್ಕೆ ಅತಿ ಬಿಸಿಯೂ ಅಲ್ಲದ, ತಂಪೂ ಅಲ್ಲದ ಬೆಚ್ಚಗಿನ ನೀರು ಒಳ್ಳೆಯದು. ಸಾಧ್ಯವಾದಲ್ಲಿ ಅತ್ತಿ, ಆಲ, ಅಶ್ವತ್ಥ, ಮಾವು, ಹಲಸು, ಮುಂತಾದ, ಪಿತ್ತವನ್ನು ಕಡಿಮೆ ಮಾಡುವ ಮರಗಳ ಚಕ್ಕೆ ಅಥವಾ ಚೂರ್ಣದಿಂದ ನೀರನ್ನು ಕಾಯಿಸಿ ಸ್ನಾನಕ್ಕೆ ಬಳಸುವುದು, ಚರ್ಮಕ್ಕೆ ಸಂಬಂಧಿಸಿದ ವ್ಯಾಧಿಗಳಿಂದ ದೂರವಿರಿಸುತ್ತದೆ.

ಇನ್ನು ಆಹಾರದ ವಿಷಯವನ್ನು ಗಮನಿಸಿದರೆ ವಸಂತದ ಪ್ರಾರಂಭದಲ್ಲಿ ಸಿಹಿ–ಕಹಿಗಳ ಮಿಶ್ರಣದ ಬಳಕೆ ಅಗತ್ಯ. ಅದಕ್ಕಾಗಿ ಯುಗಾದಿಯ ಆಚರಣೆಯನ್ನು ಬೇವು–ಬೆಲ್ಲದ ಮೂಲಕ ಮಾಡುತ್ತಾರೆ. ಈ ಕಾಲದಲ್ಲಿ ಪಡವಲ, ಹೀರೆ, ಬೂದುಗುಂಬಳ ಕಾಯಿಗಳ ಸೇವನೆ ಅಗತ್ಯ, ಕುಡಿಯುವ ನೀರಿಗೆ ಕೊನ್ನಾರಿಗಡ್ಡೆ, ಶುಂಠಿ, ಕರ್ಪೂರ, ಶ್ರೀಗಂಧ, ಕಾಚು, ಲಾವಂಚ ಇವುಗಳಲ್ಲಿ ಒಂದೋ ಎರಡೋ ಅಥವಾ ಸಿಕ್ಕರೆ ಎಲ್ಲವನ್ನೂ ಪುಡಿಮಾಡಿ ಒಂದೆರಡು ಚಿಟಿಕೆಯಷ್ಟನ್ನು ನೀರಿಗೆ ಹಾಕಿ ಕುದಿಸಿ ತಣಿಸಿ ಕುಡಿಯುವುದರಿಂದ ಅತಿಸಾರವೇ ಮೊದಲಾದ ಜೀರ್ಣಾಂಗಕ್ಕೆ ಸಂಬಂಧಿಸಿದ ರೋಗಗಳನ್ನು ತಡೆಗಟ್ಟಬಹುದು. ಅಲ್ಲದೆ ಬೆವರುವುದರಿಂದ ಮತ್ತು ಬಾಯಾರಿಕೆಯಿಂದ ದೇಹದಲ್ಲಿ ದ್ರವಾಂಶ ಕಡಿಮೆಯಾಗುವುದನ್ನು ತಡೆಗಟ್ಟಬಹುದು.

ಬೇಸಿಗೆ ಹೆಚ್ಚಾದಂತೆ ನೀರು ಮಜ್ಜಿಗೆಗೆ ಉಪ್ಪು, ಶುಂಠಿಯ ತಿಳಿರಸ ಹಾಕಿ ಸೇವಿಸುವುದು ಒಳ್ಳೆಯದು. ಮಜ್ಜಿಗೆಗೆ ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಹಾಕಿ ಒಗ್ಗರಣೆ ಮಾಡಿ ಸೇವಿಸಬಾರದು. ಪಾನಕವನ್ನು ಬೇಲದಹಣ್ಣು, ನಿಂಬೆ, ಬಿಲ್ವಫಲದ ತಿರುಳು, ಪುನರ್ಪುಳಿ ಅಥವಾ ಮುರುಗಲಹುಳಿ, ಸೋಗದೇಬೇರು, ಗುಲಾಬಿ ಎಸಳು ಇವುಗಳಿಂದ ತಯಾರಿಸಬಹುದು. ಇವು ಬೇಸಿಗೆಯ ರೋಗಗಳಿಗೆ ಚಿಕಿತ್ಸೆಯಾಗಿಯೂ, ಕಾಲದ ಪರಿಣಾಮವನ್ನು ಉಪಶಮನಗೊಳಿಸುವ ಪಾನೀಯವಾಗಿಯೂ ಹಿತಕರ. ಹೆಸರುಕಾಳು ಅಥವಾ ಬೇಳೆಯನ್ನು ನೆನೆಸಿ, ರುಬ್ಬಿ, ಹಾಲು ತೆಗೆದು, ಬೆಲ್ಲ ಸೇರಿಸಿ ಸೇವಿಸುವ ಪಾನಕವಂತೂ ಬೇಸಿಗೆಗೆ ಹೇಳಿ ಮಾಡಿಸಿದ ಪಾನೀಯ. ರೆಫ್ರಿಜರೇಟರ್‌ನಲ್ಲಿಟ್ಟ ಆಹಾರ, ಐಸ್‌ ಹಾಕಿದ ಆಹಾರ–ಪಾನೀಯಗಳು ಸರ್ವಥಾ ನಿಷಿದ್ಧ. ಹುಳಿ ಒಗರುಗಳೇ ಪ್ರಧಾನವಾದ ‘ಸಾಫ್ಟ್‌ ಡ್ರಿಂಕ್‌’ಗಳು ಮುಂತಾದ ದ್ರವಗಳ ಸೇವನೆ ಮನಸ್ಸಿಗೆ ಹಿತ ಎನಿಸಿದರೂ ದೇಹದಲ್ಲಿ ಆಮ್ಲತೆ ಜಾಸ್ತಿಯಾಗಿ ಚರ್ಮವನ್ನು ಒರಟಾಗಿಸುತ್ತದೆ ಮತ್ತು ಕಪ್ಪಾಗಿಸುತ್ತದೆ.

ಬೇಸಿಗೆ ಹೆಚ್ಚಾದಂತೆ ಕಹಿಯನ್ನು ತೊರೆದು ಸಿಹಿಪ್ರಧಾನವಾದ ದ್ರವಪದಾರ್ಥಗಳನ್ನು ಸೇವಿಸಬೇಕು. ಹುಳಿ–ಉಪ್ಪುಗಳು ಕಡಿಮೆಯೂ, ಖಾರ–ಕಹಿಗಳು ಅತಿ ಕಡಿಮೆಯೂ ಇರಬೇಕು. ಹಾಲು, ಹಾಲಿನಿಂದ ತಯಾರಾದ ಸಿಹಿಗಳು, ಪಾಯಸ, ಬಾಸುಂದಿ, ಕುಂದ ಮುಂತಾದ ಸಿಹಿತಿಂಡಿಗಳು, ಅದೇ ರೀತಿ ಮೊಸರಿನಿಂದ ತಯಾರಿಸಿದ ಶ್ರೀಖಂಡ ಇತ್ಯಾದಿಗಳಿಂದ ಆರೋಗ್ಯ ವೃದ್ಧಿಯಾಗುತ್ತದೆ. ಬೆವರು ಹೆಚ್ಚು ಬರುವ ಪ್ರದೇಶಗಳಲ್ಲಿ ಕೇರಳ, ಕರಾವಳಿಗಳಲ್ಲಿ ತಯಾರಿಸುವ ಕೆಂಪಕ್ಕಿ ಅಥವಾ ಕುಸುಬಲು ಅಕ್ಕಿಯ ಗಂಜಿ, ವಿಧವಿಧವಾದ ತಂಬುಳಿಗಳು ಆರೋಗ್ಯಕರ. ಸೊಪ್ಪುಗಳಲ್ಲಿ ಹುಳಿಸೊಪ್ಪು, ಚಕ್ರಮುನಿ (ವಿಟಮಿನ್ ಸೊಪ್ಪು) – ಇವುಗಳ ತಂಬುಳಿ ಹಿತಕರ. ಹಾಗೆಯೇ ಹಸಿ ಈರುಳ್ಳಿಯು ಬಿಸಿಲಿನ ಬೇಗೆಯನ್ನು ತಡೆಯುವಲ್ಲಿ ಸಹಕಾರಿ (ಕೆಮ್ಮು ದಮ್ಮು ಇರುವವರು ಸೇವಿಸಬಾರದು). ಬೆಣ್ಣೆ ತೆಗೆದ (ಕೇವಲ ಕೆನೆ ತೆಗೆದದ್ದು ಅಲ್ಲ) ಮಜ್ಜಿಗೆಗೆ ಹೆಚ್ಚು ನೀರು ಸೇರಿಸಿ ಮಡಕೆಯಲ್ಲಿಟ್ಟು ಸೇವಿಸುವುದು ಹಿತಕರ ಮತ್ತು ಆರೋಗ್ಯಕರ.

ಸೆಕೆ ಹೆಚ್ಚಾದಂತೆ, ನಿತ್ಯ ಮಾಂಸಾಹಾರಿಗಳಲ್ಲದವರು ಬೆಳ್ಳುಳ್ಳಿ, ಕರಿಮೆಣಸು ಮತ್ತು ಹಸಿ ಮೆಣಸಿನಕಾಯಿಯನ್ನು ಆಹಾರದಲ್ಲಿ ಬಳಸುವುದು ಅಮ್ಲಪಿತ್ತ, ಉರಿಮೂತ್ರ, ಮಲಮೂತ್ರಗಳಲ್ಲಿ ರಕ್ತಪ್ರವೃತ್ತಿ ಮುಂತಾದ ರೋಗಗಳಿಗೆ ಕಾರಣವಾಗುತ್ತದೆ. ಕಲ್ಲಂಗಡಿ, ಕರಬೂಜ ಹಿತಕರವಾದ ಹಣ್ಣುಗಳಾದರೂ ಇವುಗಳೊಡನೆ ಹೆಚ್ಚು ನೀರು ಸೇವಿಸುವುದು ಉರಿಶೀತವನ್ನು ಕಡಿಮೆ ಮಾಡುತ್ತದೆ. ಬಿಸಿಲಿನಲ್ಲಿ ತಿರುಗಾಡುವವರಿಗೆ ಬಾಳೆಹಣ್ಣು, ಬೇಯಿಸಿದ ಬಾಳೆಹಣ್ಣಿನಿಂದ ತಯಾರಿಸಿದ ಹಲ್ವ, ರಸಾಯನಗಳು ಆರೋಗ್ಯಕರ. ಆದರೆ ಯಾವುದೇ ಹಣ್ಣುಗಳೊಡನೆ ಹಾಲನ್ನು ಬೆರೆಸಿ ಸೇವಿಸುವುದು (ಮಿಲ್ಕ್ ಶೇಕ್, ಫ್ರುಟ್ ಸಲಾಡ್‌ನೊಂದಿಗೆ ಐಸ್‌ಕ್ರೀಮ್‌) ಆನಾರೋಗ್ಯಕ್ಕೆ ನಾಂದಿ ಹಾಡಿದಂತೆ.

ಬಿಸಿಲು ಹೆಚ್ಚಾದಂತೆ ವಾತಾವರಣವನ್ನು ತಂಪಾಗಿಸಲು ಬಳಸುವ ವಾತಾಯನಗಳು ದೇಹವನ್ನು ಅತಿ ತಂಪಾಗಿಸಬಾರದು. ಆದ್ದರಿಂದ ಅವುಗಳನ್ನು 23 ಡಿಗ್ರಿಗಳ ಅಸುಪಾಸಿನಲ್ಲಿರುವುದು ಹಿತಕರ. ಗಾಳಿಯು ದೇಹಕ್ಕೆ ನೇರವಾಗಿ ಒತ್ತಡದಲ್ಲಿ ಬೀಳದಂತೆ ಫ್ಯಾನಿನ ದಿಕ್ಕನ್ನು ಬದಲಿಸಿಡಬೇಕು. ಒತ್ತಡದಲ್ಲಿ ಬೀಸುವ ಗಾಳಿಯು ರಕ್ತದೊತ್ತಡವನ್ನು ಹೆಚ್ಚು ಮಾಡಿ ಪಕ್ಷಾಘಾತವೇ ಮೊದಲಾದ ರೋಗಗಳಿಗೆ ನಾಂದಿ ಹಾಡುತ್ತದೆ.

ಹೀಗೆ ನಮ್ಮ ಆಹಾರ, ಆಚಾರ, ವಿಚಾರ, ವಿಹಾರಗಳನ್ನು ವಿವೇಚನೆಯಿಂದ ಅನುಸರಿಸಿದರೆ ಬೇಸಿಗೆಯಲ್ಲೂ ಆರೋಗ್ಯಕರವಾಗಿರಬಹುದು.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT