ಗುರುವಾರ , ಮಾರ್ಚ್ 30, 2023
24 °C
ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಳದಿಂದ ಜ್ವರ ಸಂಬಂಧಿ ಪ್ರಕರಣ ಹೆಚ್ಚಳ

ಬಿಸಿಲ ಬೇಗೆ: ಅನಾರೋಗ್ಯ ಬಾಧೆ- ಇಲ್ಲಿದೆ ವೈದ್ಯರ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಳ, ದೂಳಿನ ಕಣಗಳಿಂದಾಗಿ ನಗರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜ್ವರ ಪೀಡಿತರಾಗುತ್ತಿದ್ದಾರೆ. ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿರುವ ಹೊರರೋಗಿಗಳಲ್ಲಿ ಶೇ 30ರಷ್ಟು ಮಂದಿ ಜ್ವರ ಸಂಬಂಧಿ ಸಮಸ್ಯೆಗಳಿಗೆ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. 

ಬಿಸಿಲ ಧಗೆ ದಿನದಿಂದ ದಿನಕ್ಕೆ ಏರತೊಡಗಿದೆ. ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್‌ ಇದ್ದರೆ, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿ
ಯಸ್‌ವರೆಗೂ ಇಳಿಕೆಯಾಗುತ್ತಿದೆ. ಈ ರೀತಿ ತಾಪಮಾನದಲ್ಲಿ ಆಗುತ್ತಿರುವ ವ್ಯತ್ಯಾಸಕ್ಕೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ
ಅಸ್ವಸ್ಥರಾಗುತ್ತಿದ್ದಾರೆ. ಆಸ್ಪತ್ರೆಗಳ ದಾಖಲಾತಿಯಲ್ಲಿ ಅರ್ಧದಷ್ಟು ಮಂದಿ ವೈರಾಣು ಸೇರಿ ವಿವಿಧ ಮಾದರಿಯ ಜ್ವರ, ಉಸಿರಾಟ ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿರುವವರಾಗಿದ್ದಾರೆ. 

ವಿಕ್ಟೋರಿಯಾ, ಜಯನಗರ ಸಾರ್ವಜನಿಕ ಆಸ್ಪತ್ರೆ, ಕಿಮ್ಸ್, ಮಣಿಪಾಲ್, ಫೋರ್ಟಿಸ್, ಅಪೋಲೊ, ನಾರಾಯಣ ಹೆಲ್ತ್ ಸೇರಿದಂತೆ ಪ್ರಮುಖ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿರುವ ಹೊರ ರೋಗಿಗಳಲ್ಲಿ ಶೇ 10 ಹಾಗೂ ಅದಕ್ಕಿಂತ ಅಧಿಕ ರೋಗಿಗಳು ಉದರಬೇನೆ, ಕಾಲರಾ, ಬೆವರು ಗುಳ್ಳೆಯಂಥ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

ಕೆಲ ದಿನಗಳಿಂದ ಕೋವಿಡ್‌ನಿಂದ ಆಸ್ಪತ್ರೆ ದಾಖಲಾತಿಯೂ ಹೆಚ್ಚಾಗಿದೆ. ಸಕ್ರಿಯ ಪ್ರಕರಣಗಳು 300ರ ಆಸುಪಾಸಿನಲ್ಲಿದೆ. ಸದ್ಯ 50 ಮಂದಿ ಆಸ್ಪತ್ರೆ ಚಿಕಿತ್ಸೆಗೆ ಒಳಗಾಗಿದ್ದಾರೆ. ಕಳೆದ ತಿಂಗಳ ಆರಂಭದಲ್ಲಿ ಈ ಸಂಖ್ಯೆ ಒಂದರ ಆಸುಪಾಸಿನಲ್ಲಿತ್ತು. ಸದ್ಯ 12 ಮಂದಿ ಐಸಿಯು, ಮೂವರು ಎಚ್‌ಡಿಯು, ಇಬ್ಬರು ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 

ಈ ವರ್ಷ ರಾಜ್ಯದಲ್ಲಿ 10 ಎಚ್‌1ಎನ್1 ಪ್ರಕರಣಗಳು ವರದಿಯಾಗಿವೆ. ಡೆಂಗಿ ಸಂಬಂಧ ನಗರದಲ್ಲಿ 1,500ಕ್ಕೂ ಅಧಿಕ ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. 500ಕ್ಕೂ ಅಧಿಕ ಮಂದಿಯ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದ್ದು, 265 ಮಂದಿಯಲ್ಲಿ ಡೆಂಗಿ ದೃಢಪಟ್ಟಿದೆ. ಚಿಕೂನ್‌ಗುನ್ಯಾ ಸಂಬಂಧ 400ಕ್ಕೂ ಅಧಿಕರನ್ನು ತಪಾಸಣೆ ಮಾಡಲಾಗಿದ್ದು, 34 ಮಂದಿಯಲ್ಲಿ ಈ ಜ್ವರ ದೃಢಪಟ್ಟಿದೆ. 

ಶುದ್ಧ ನೀರು ಬಳಸಿ: ‘ಬೇಸಿಗೆಯಲ್ಲಿ ನೀರಿನಿಂದಲೇ ಹೆಚ್ಚು ರೋಗಗಳು ಹರಡುತ್ತವೆ. ಹೀಗಾಗಿ, ಶುದ್ಧ ನೀರು ಕುಡಿಯುವುದು ಮುಖ್ಯ. ರಸ್ತೆ ಬದಿಯ ಆಹಾರ ಪದಾರ್ಥ, ಕತ್ತರಿಸಿದ ಹಣ್ಣುಗಳನ್ನು ತಿನ್ನುವುದರಿಂದ ರೋಗಾಣುಗಳು ಹರಡಿ, ಸಾಂಕ್ರಾಮಿಕ ರೋಗ ಕಾಣಿಸಿ
ಕೊಳ್ಳುತ್ತದೆ’ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು.

‘ಪ್ರತಿ ವರ್ಷ ಈ ಅವಧಿಯಲ್ಲಿ ವೈರಾಣು ಜ್ವರ ಉಲ್ಬಣವಾಗುತ್ತದೆ. ಇದು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಮುಖಗವಸು ಧರಿಸಿದರೆ ಸೋಂಕಿತ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ ಹೊರಹೊಮ್ಮುವ ಹನಿಯು ಗಾಳಿಗೆ ಸೇರದಂತೆ ತಡೆಯಬಹುದು. ಟೈಫಾಯಿಡ್ ಸೇರಿ ವಿವಿಧ ಜ್ವರಗಳ ಚಿಕಿತ್ಸೆಗೆ ರೋಗಿಗಳು ಬರಲಾರಂಭಿಸಿದ್ದಾರೆ. ಈ ಅವಧಿಯಲ್ಲಿ ನೀರು, ಆಹಾರ ಸೇವಿಸುವಾಗ ಜಾಗ್ರತೆ ವಹಿಸಬೇಕು’ ಎಂದು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕ ಡಾ. ಸಂಜಯ್ ಕೆ.ಎಸ್. ಹೇಳಿದರು.

ವೈರಾಣು ಜ್ವರದ ಪ್ರಮುಖ ಲಕ್ಷಣಗಳು

* ತೀವ್ರ ಆಯಾಸ, ದಣಿವು, ಮೈ ಕೈ ನೋವು

* ತಲೆನೋವು,  ನೆಗಡಿ, ಜ್ವರ

* ಕೆಮ್ಮು, ಮೂಗು ಕಟ್ಟುವುದು

* ಕಣ್ಣುಗಳಲ್ಲಿ ಅಸ್ವಸ್ಥತೆ, ಗಂಟಲು ಉರಿ

ವೈದ್ಯರು ನೀಡಿದ ಪ್ರಮುಖ ಸಲಹೆಗಳು

* ರಸ್ತೆ ಬದಿಯ ಆಹಾರ ಸುರಕ್ಷಿತವಲ್ಲ

* ದ್ರವ ರೂಪದ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು

* ಕಾಯಿಸಿ, ಆರಿಸಿದ ಶುದ್ಧ ನೀರನ್ನು ಕುಡಿಯಬೇಕು

* ಆಹಾರ ಸೇವಿಸುವ ಮೊದಲು ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು

* ತಾಜಾ ಹಾಗೂ ಪೌಷ್ಟಿಕ ಆಹಾರ ಸೇವಿಸಬೇಕು

* ಹತ್ತಿಯ ಬಟ್ಟೆಯನ್ನು ಧರಿಸಬೇಕು
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು