ಸೋಮವಾರ, ಜೂನ್ 21, 2021
30 °C

ಶಂಕಿತ ಕೋವಿಡ್‌ ರೋಗಿಯಲ್ಲಿ ಗಿಲ್ಲೆನ್‌ ಬಾರ್ರೆ ಲಕ್ಷಣ : ಏನಿದು, ಹೇಗೆ ಬರುತ್ತೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

- ರಶ್ಮಿ ಬೇಲೂರು / ಅಖಿಲ್ ಕಡಿದಾಳ್‌

ಬೆಂಗಳೂರು: ವೈರಾಣು ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತಿದ್ದ ಗಿಲ್ಲೆನ್‌ ಬಾರ್ರೆ ನರರೋಗ ನಗರದ ಆಸ್ಪತ್ರೆಗೆ ದಾಖಲಾಗಿರುವ 53 ವರ್ಷದ ವ್ಯಕ್ತಿಯೊಬ್ಬರಲ್ಲಿ ಪತ್ತೆಯಾಗಿದೆ. ಇತ್ತೀಚೆಗೆ ಯಾವುದೇ ರೀತಿಯ ವೈರಾಣು ಸೋಂಕು ಅವರಿಗೆ ತಗುಲದಿದ್ದರೂ ಈ ರೋಗಲಕ್ಷಣ ಕಾಣಿಸಿಕೊಂಡಿರುವುದು ಕೋವಿಡ್‌–19 ಪರಿಣಾಮ ಇರಬಹುದೇ ಎಂಬ ಶಂಕೆ ವೈದ್ಯರಲ್ಲಿ ಮೂಡಿದೆ.

ವೈರಾಣು ಸೋಂಕಿಗೆ ಒಳಗಾದವರಲ್ಲಿ ಮಾಂಸಖಂಡಗಳ ದೌರ್ಬಲ್ಯ ಅಥವಾ ಪಾರ್ಶ್ವವಾಯುವಿನಿಂದ ಗಿಲ್ಲೆನ್‌ ಬಾರ್ರೆ ರೋಗ ಕಂಡುಬರುತ್ತಿತ್ತು. ದೇಹದ ರೋಗ ನಿರೋಧಕ ಶಕ್ತಿಯು ನರ ಕೋಶಗಳ ಮೇಲೆ ದಾಳಿಮಾಡಿ, ಹಾನಿ ಉಂಟು ಮಾಡುವುದರ ಪರಿಣಾಮವಾಗಿ ಈ ರೋಗ ಕಾಣಿಸಿಕೊಳ್ಳುತ್ತದೆ. ಕಾಲಿನ ಕೆಳಭಾಗದಲ್ಲಿ ಕಾಣಿಸಿಕೊಳ್ಳುವ ಈ ರೋಗ, ಬಹುಬೇಗ ದೇಹವನ್ನು ವ್ಯಾಪಿಸಿಕೊಂಡು ಪ್ರಾಣಕ್ಕೇ ಎರವಾದ ಉದಾಹರಣೆಗಳೂ ಇವೆ.

ಹಾಸನದ ಶಿವರಾಜು (ಹೆಸರು ಬದಲಿಸಲಾಗಿದೆ) ಮಂಗಳವಾರ ಬೆಳಿಗ್ಗೆ ಕಾಲಿನ ಕೆಳಭಾಗದಲ್ಲಿ ಜೋಮು ಹಿಡಿದಂತಾಗಿ ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿನ ವೈದ್ಯರ ಶಿಫಾರಸಿನಂತೆ ಅದೇ ದಿನ ರಾತ್ರಿ ಬೆಂಗಳೂರಿಗೆ ಕರೆತಂದು ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಇದೊಂದೇ ಪ್ರಕರಣವಲ್ಲ. ಕೋವಿಡ್‌–19 ಪರಿಣಾಮದಿಂದಾಗಿ ಗಿಲ್ಲೆನ್‌ ಬಾರ್ರೆ ರೋಗದ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ’ ಎಂದು ನಿಮ್ಹಾನ್ಸ್‌ ಆಸ್ಪತ್ರೆಯ ನರರೋಗ ತಜ್ಞರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ರೋಗಿಗೆ ಮಂಗಳವಾರವೇ ಆರ್‌ಟಿ–ಪಿಸಿಆರ್‌ ಪರೀಕ್ಷೆ ನಡೆಸಲಾಗಿತ್ತು. ನೆಗೆಟಿವ್‌ ವರದಿ ಬಂದಿದೆ. ಈ ವ್ಯಕ್ತಿಗೆ ತಿಂಗಳ ಹಿಂದೆ ಕರುಳಿನ ಉರಿಯೂತ ಕಾಣಿಸಿಕೊಂಡಿತ್ತು. ಅದು ಕೂಡ ಗಿಲ್ಲೆನ್‌ ಬಾರ್ರೆ ಕಾಯಿಲೆಗೆ ಕಾರಣವಾಗಿರಬಹುದು’ ಎನ್ನುತ್ತಾರೆ ನಿಮ್ಹಾನ್ಸ್‌ ಸಿಬ್ಬಂದಿ.

ಕೋವಿಡ್‌ ನಂತರ ಹೆಚ್ಚು ಪತ್ತೆ: ಈ ರೋಗದ ಕುರಿತು ವಿವರಿಸಿದ ಹಳೆ ಮದ್ರಾಸ್‌ ರಸ್ತೆಯ ಮಣಿಪಾಲ್‌ ಆಸ್ಪತ್ರೆಗಳ ನರರೋಗ ವಿಭಾಗದ ಮುಖ್ಯಸ್ಥ ಡಾ. ಪ್ರಮೋದ್‌ ಕೃಷ್ಣನ್‌, ‘ಸಾಮಾನ್ಯವಾಗಿ ಮುಂಗಾರಿನ ಅವಧಿಯಲ್ಲಿ ಗಿಲ್ಲೆನ್‌ ಬಾರ್ರೆ ರೋಗ ಪ್ರಕರಣಗಳು ಹೆಚ್ಚುತ್ತವೆ. ಇಕೋವೈರಸ್‌, ಇನ್‌ಫ್ಲುಯೆಂಝಾ, ಅರೆಬೆಂದ ಕೋಳಿ ಪದಾರ್ಥಗಳಲ್ಲಿ ಇರಬಹುದಾದ ಕ್ಯಾಂಪಿಲೋಬ್ಯಾಕ್ಟರ್‌ ಹೆಸರಿನ ಬ್ಯಾಕ್ಟೀರಿಯಾ ಸೋಂಕಿತರಲ್ಲೂ ಗಿಲ್ಲೆನ್‌ ಬಾರ್ರೆ ಕಾಣಿಸಿಕೊಳ್ಳುತ್ತದೆ. ಈಗ ಕೋವಿಡ್‌–19 ಸೋಂಕಿತರಲ್ಲಿ ಹೆಚ್ಚು ಪತ್ತೆಯಾಗುತ್ತಿದೆ’ ಎಂದರು.

‘ಈ ವ್ಯಕ್ತಿಗೆ ಇತ್ತೀಚಿನ ದಿನಗಳಲ್ಲಿ ಯಾವುದೇ ರೀತಿಯ ವೈರಾಣು ಸೋಂಕು ತಗುಲಿರಲಿಲ್ಲ. ಸೋಮವಾರ ಬೆಳಿಗ್ಗೆ ಪಾದ, ಕಾಲು ಮತ್ತು ತೋಳುಗಳಲ್ಲಿ ಅತಿಯಾದ ನೋವು ಇದೆ ಎಂದು ಹೇಳಿಕೊಂಡರು. ನಿಮ್ಹಾನ್ಸ್‌ ವೈದ್ಯರು ಇದರು ಗಿಲ್ಲೆನ್‌ ಬಾರ್ರೆ ರೋಗ ಎಂದು ಗುರುತಿಸಿದ್ದಾರೆ. ಈ ರೋಗದ ಕುರಿತು ನಾವು ಹಿಂದೆಂದೂ ಕೇಳಿರಲಿಲ್ಲ’ ಎಂದು ರೋಗಿಯ ಸಂಬಂಧಿಯೊಬ್ಬರು ಹೇಳಿದರು.

ಲಸಿಕೆ ಕಾರಣವಾಯಿತೆ?: ಶಿವರಾಜು 15 ದಿನಗಳ ಹಿಂದಷ್ಟೇ ಕೋವಿಶೀಲ್ಡ್‌ ಲಸಿಕೆಯ ಮೊದಲ ಡೋಸ್‌ ಪಡೆದಿದ್ದರು. ಲಸಿಕೆಯ ಅಡ್ಡ ಪರಿಣಾಮಗಳಿಂದ ಗಿಲ್ಲೆನ್‌ ಬಾರ್ರೆ ರೋಗ ಬಂದಿರಬಹುದೆ ಎಂಬ ಶಂಕೆಯೂ ಕಾಡುತ್ತಿದೆ.

‘ಕೋವಿಶೀಲ್ಡ್‌ ಲಸಿಕೆಯ ಪ್ರಾಯೋಗಿಕ ಹಂತದಲ್ಲಿ ಕೆಲವರಲ್ಲಿ ಇದೇ ರೀತಿಯ ಅಡ್ಡ ಪರಿಣಾಮಗಳು ಕಂಡುಬಂದಿರುವುದು ವರದಿಯಾಗಿತ್ತು. ದುಬೈನಲ್ಲಿ ಕೋವಿಡ್‌ ರೋಗದಿಂದ ಗುಣಮುಖರಾದವರು ಮತ್ತು ಕೋವಿಡ್‌ ಲಸಿಕೆ ಪಡೆದವರಲ್ಲಿ ಗಿಲ್ಲೆನ್‌ ಬಾರ್ರೆ ಪತ್ತೆಯಾಗಿದೆ. ಆದರೆ, ಭಾರತದಲ್ಲಿ ಇಂತಹ ಪ್ರಕರಣಗಳು ವಿರಳ’ ಎನ್ನುತ್ತಾರೆ ಜಯದೇವ ಹೃದ್ರೋಗ ಸಂಸ್ಥೆಯ ಹಿರಿಯ ಹೃದ್ರೋಗ ತಜ್ಞ ಡಾ.ಕೆ.ಎಸ್‌. ರವೀಂದ್ರನಾಥ್‌.

ಬ್ರೈನ್‌ ನ್ಯೂರೊ ಸ್ಪೈನ್‌ ಆಸ್ಪತ್ರೆಯ ನರರೋಗ ತಜ್ಞ ಡಾ.ಎನ್‌.ಕೆ. ವೆಂಕಟರಮಣ ಅವರ ಪ್ರಕಾರ, ‘ಕೋವಿಡ್‌ ಲಸಿಕೆ ಮಾತ್ರವಲ್ಲ, ಯಾವುದೇ ಲಸಿಕೆಯಿಂದಲೂ ಇಂತಹ ಅಡ್ಡ ಪರಿಣಾಮ ಉಂಟಾಗಬಹುದು. ಹಿಂದಿನ ಸಣ್ಣ ಪ್ರಮಾಣದ ಸೋಂಕು ಕೂಡ ಇದಕ್ಕೆ ಕಾರಣವಾಗಿರಬಹುದು’.

ಚಿಕಿತ್ಸೆ ದುಬಾರಿ

ಗಿಲ್ಲೆನ್‌ ಬಾರ್ರೆ ರೋಗದ ಚಿಕಿತ್ಸಾ ವೆಚ್ಚ ದುಬಾರಿ. ಕೇವಲ ಐದು ಡೋಸ್‌ ಐಜಿಐವಿ ಇಮ್ಯುನೋಗ್ಲೋಬುಲಿನ್‌ ಚುಚ್ಚುಮದ್ದಿಗೆ ₹ 2.5 ಲಕ್ಷ ವೆಚ್ಚವಾಗುತ್ತದೆ. ಕಾಲಿನ ಕೆಳಭಾಗದಲ್ಲಿ ಜೋಮು ಹಿಡಿದ ಅನುಭವ ಉಂಟಾದಲ್ಲಿ ತಕ್ಷಣವೇ ವೈದ್ಯಕೀಯ ಸಲಹೆ ಪಡೆಯಬೇಕು ಎಂದು ವೈದ್ಯರು ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು