ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿದುಳು ಜಠರಗಳ ನಡುವೆ ಒಂದು ಹೆದ್ದಾರಿ..

Last Updated 15 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಮಾನಸಿಕ ಭಾವಗಳನ್ನು ಜೀರ್ಣಾಂಗಗಳ ವ್ಯಾಪಾರವೆಂಬಂತೆ ಸೂಚಿಸುವ ನುಡಿಗಟ್ಟುಗಳು ನಮ್ಮ ಭಾಷೆಗಳಲ್ಲಿ ಹೇರಳವಾಗಿವೆ. ಮಾತ್ಸರ್ಯವಿದ್ದಾಗ ಹೊಟ್ಟೆ ಉರಿಯುವುದು, ತೀವ್ರಶೋಕವಾದಾಗ ಕರುಳು ಕಿವುಚಿದಂತಾಗುವುದು, ಜೀವಕ್ಕೆ ಹಾಯೆನಿಸಿದಾಗ ಹಾಲು ಕುಡಿದಂತಾಗುವುದು ನಮ್ಮೆಲ್ಲರ ಮಾತಿನಲ್ಲಿ ಅನುಭವದಲ್ಲಿ ಯಥೇಷ್ಟವಾಗಿವೆ. ತೀರಾ ಸಾಮಾನ್ಯವೆಂಬಂತೆ ತೋರುವ ಈ ನುಡಿಗಟ್ಟುಗಳು ಶರೀರದ ಒಳಗಿನ ಕ್ರಿಯೆಗಳಲ್ಲಿರುವ ಸೂಕ್ಷ್ಮಸಂಬಂಧವೊಂದನ್ನು ಸೂಚಿಸುತ್ತಿವೆ.

ಶರೀರದ ಎಲ್ಲ ಅವಯವಗಳೂ ಮಿದುಳಿನ ಜೊತೆ ನರಗಳ ಮೂಲಕ, ವಿವಿಧ ರಾಸಾಯನಿಕಗಳ ಮೂಲಕ ಸಂಬಂಧ ಹೊಂದಿರುವುದು ಗೊತ್ತಿರದ ವಿಚಾರವೇನಲ್ಲ. ಇಂತಹ ಸಂಬಂಧದಿಂದ ಮಿದುಳು ಶರೀರದ ವಿವಿಧ ಭಾಗಗಳಿಂದ ಬೇಕಾದ ಮಾಹಿತಿಯನ್ನು ಸಂಗ್ರಹಿಸಿ, ಸರಿಯಾಗಿ ಯೋಜಿಸಿ, ಶರೀರಸ್ಥಿತಿಗೆ ಯುಕ್ತವಾದ ಪ್ರತಿಕ್ರಿಯೆಗಳನ್ನೇರ್ಪಡಿಸುತ್ತದೆ. ಎಲ್ಲ ಅವಯವಗಳೊಂದಿಗೆ ಮಿದುಳಿಗೆ ಇಂಥ ಸಂಬಂಧವಿದೆಯಾದರೂ ಜೀರ್ಣಾಂಗಗಳ ಜೊತೆ ಅದಕ್ಕಿರುವ ನಿಕಟತೆ ವಿಶಿಷ್ವವಾದದ್ದು.

ಈ ನಿಕಟತೆಯನ್ನು ಗುರುತಿಸಿ ವೈದ್ಯಶಾಸ್ತ್ರ ಮಿದುಳು-ಜಠರಗಳ ನಡುವೆ ಒಂದು ಮಾಹಿತಿ ವಿನಿಮಯದ ಹೆದ್ದಾರಿಯೇ ಇದೆ ಎಂದು ಕಲ್ಪಿಸಿದೆ. ಈ ಹೆದ್ದಾರಿಯನ್ನು ಬ್ರೇನ್-ಗಟ್ ಏಕ್ಸಿಸ್ ಎಂದು ಕರೆಯುತ್ತಾರೆ. ಈ ಹೆದ್ದಾರಿಯ ಮೂಲಕ ಮನಸ್ಸು ಜೀರ್ಣಕ್ರಿಯೆಗಳ ಮೇಲೆ, ಜೀರ್ಣಕ್ರಿಯೆಗಳು ಮನಸ್ಸಿನ ಮೇಲೆ ಶೀಘ್ರಪರಿಣಾಮವನ್ನು ಬೀರುತ್ತಿರುತ್ತವೆ. ಎಷ್ಟರಮಟ್ಟಿಗೆಂದರೆ, ಜೀರ್ಣಾಂಗಗಳ ಸಮಸ್ಯೆಯಿರುವ ಸುಮಾರು ಐವತ್ತು ಪ್ರತಿಶತ ರೋಗಿಗಳಲ್ಲಿ ಮಾನಸಿಕ ಅನಾರೋಗ್ಯವೇ ಜೀರ್ಣಕ್ರಿಯೆ ಬಿಗಡಾಯಿಸುವುದಕ್ಕೆ ಮೂಲಕಾರಣ ಎಂಬುದನ್ನು ಕಂಡುಕೊಳ್ಳಲಾಗಿದೆ.

ಇಷ್ಟೇ ಅಲ್ಲ. ನಮ್ಮ ಜೀರ್ಣಾಂಗಗಳ ಸ್ಥಿತಿ ನಮ್ಮ ಸ್ವಭಾವವನ್ನೇ ನಿಯಂತ್ರಿಸುತ್ತಿರಬಹುದೆಂಬ ಸೋಜಿಗದ ಸಂಗತಿ ಈಚಿನ ಸಂಶೋಧನೆಗಳಿಂದ ತೋರಿಬರುತ್ತಿದೆ. ಸ್ಟೀಫನ್ ಕಾಲಿನ್ಸ್ ಎಂಬ ವೈದ್ಯವಿಜ್ಞಾನಿಯ ನೇತೃತ್ವದಲ್ಲಿ ನಡೆಯುತ್ತಿರುವ ಸಂಶೋಧನೆಗಳು ಈ ದಿಶೆಯಲ್ಲಿ ಮಹತ್ವದ್ದಾಗಿವೆ. ಅವರ ಒಂದುವೈಜ್ಞಾನಿಕಪ್ರಯೋಗವನ್ನು ಇಲ್ಲಿ ಉದಾಹರಿಸಬಹುದು. ಸ್ವಭಾವದಿಂದಲೇ ಭಿನ್ನವಾಗಿದ್ದ ಇಲಿಗಳ ಎರಡು ತಳಿಗಳನ್ನು ಪ್ರಯೋಗಕ್ಕೆ ಆಯ್ದುಕೊಳ್ಳಲಾಯಿತು. ಒಂದು ತಳಿಯ ಇಲಿಗಳು ಸಂಕೋಚ ಸ್ವಭಾವದವುಗಳಾಗಿದ್ದರೆ ಇನ್ನೊಂದು ತಳಿಯವು ಸ್ವಾಭಾವಿಕವಾಗಿಯೇ ಹೊರಮುಖವಾಗಿರುತ್ತಿದ್ದವು.

ಸಂಶೋಧಕರು ಆ್ಯಂಟಿಬಯಾಟಿಕ್‌ಗಳ ಬಳಕೆಯಿಂದ ಈ ಇಲಿಗಳ ಜಠರದ ಪ್ರಾಕೃತಿಕ ಸೂಕ್ಷ್ಮಕ್ರಿಮಿಗಳನ್ನು ಇಲ್ಲವಾಗಿಸಿ, ಅವುಗಳ ಜಾಗದಲ್ಲಿ ವಿರುದ್ಧ ತಳಿಯ ಜಠರದ ಸೂಕ್ಷ್ಮಕ್ರಿಮಿಗಳನ್ನು ಭರಿಸಿದರು. ಏನಾಶ್ಚರ್ಯ! ಸಂಕೋಚ ಸ್ವಭಾವದ ಇಲಿಗಳು ಹೊರಮುಖವಾಗಿಬಿಟ್ಟವು, ಹೊರಮುಖವಾಗಿಯೇ ಇರುತ್ತಿದ್ದವು ನಾಚಿಕೆಯಿಂದ ಹಿಂದೆ ಸರಿಯುವಂಥವುಗಳಾಗಿಬಿಟ್ಟವು. ಜಠರದ ಸೂಕ್ಷ್ಮಕ್ರಿಮಿಗಳು ಮತ್ತು ಅವುಗಳಿಂದ ರೂಪುಗೊಂಡ ಜೀರ್ಣಾಂಗಗಳ ಸ್ಥಿತಿ ಮನಸ್ಸಿನ ಮೇಲೆ ಎಷ್ಟು ವ್ಯಾಪಕವಾದ ಪ್ರಭಾವವನ್ನು ಬೀರಬಲ್ಲದು ಎಂಬುದನ್ನು ಈ ವೈಜ್ಞಾನಿಕ ಪ್ರಯೋಗ ಸೂಚಿಸುತ್ತಿದೆ. ಈ ನಿಟ್ಟಿನಲ್ಲಿ ಮತ್ತಷ್ಟು ಅಧ್ಯಯನಗಳು ಸಾಗುತ್ತಿವೆ.

ಬ್ರೇನ್-ಗಟ್ ಏಕ್ಸಿಸ್‌ನ ವೈಜ್ಞಾನಿಕವಿಶ್ಲೇಷಣೆ ಈಚಿನ ತಿಳಿವಳಿಕೆಯಾದರೂ, ಮೇಲಿನ ನುಡಿಗಟ್ಟುಗಳು ಸೂಚಿಸುವಂತೆ ಮಿದುಳು-ಜಠರಗಳ ನಡುವಣ ನಿಕಟ ಸಂಬಂಧ ಬಹುಕಾಲದಿಂದ ತಿಳಿದಿರುವ ವಿಷಯವೇ. ಆಯುರ್ವೇದದ ಆರ್ಷಗ್ರಂಥವಾದ ಚರಕಸಂಹಿತೆಯಲ್ಲಿ ಸ್ವಾರಸ್ಯಕರವಾದ ಶ್ಲೋಕವೊಂದಿದೆ:

ಮಾತ್ರಯಾsಪ್ಯಭ್ಯವಹೃತಂ ಪಥ್ಯಂ ಚಾನ್ನಂ ನ ಜೀರ್ಯತಿ ‌|

ಚಿಂತಾ-ಶೋಕ-ಭಯ-ಕ್ರೋಧ-ದುಃಖಶಯ್ಯಾ- ಪ್ರಜಾಗರೈಃ||

‘ಸರಿಯಾದ ಪ್ರಮಾಣದಲ್ಲೇ ಆಹಾರವನ್ನು ಸೇವಿಸಿರಬಹುದು. ಒಳ್ಳೆಯ ಪಥ್ಯವಾದ ಅನ್ನವನ್ನೇ ಭುಂಜಿಸಿರಬಹುದು. ಆದರೂ ಕೆಲವೊಮ್ಮೆ ತಿಂದ ಅನ್ನ ಮೈಸೇರದು. ಕಾರಣ: ಚಿಂತೆ, ಶೋಕ, ಭಯ, ಕ್ರೋಧಾದಿಗಳಿಂದ ಉಪತಪ್ತವಾದ ಮನಸ್ಸು!’

ಭೋಜನಕ್ಕೆ ಕುಳಿತ ಶಾಲಾಬಾಲಕನನ್ನು ಅವನ ಪರೀಕ್ಷೆಯ ಫಲಿತಾಂಶ ಕಳಪೆಯಾಯಿತೆಂದು ಹಂಗಿಸುವುದಿರಬಹುದು, ‘ಬ್ರೇಕ್ ಫಸ್ಟ್ ಮೀಟಿಂಗ್‌’ಗಳಲ್ಲಿ ಉದ್ವೇಗಕಾರಿಯಾದ ರಾಜಕಾರಣವನ್ನು ಚರ್ಚಿಸುವುದಿರಬಹುದು, ಇಲ್ಲವೇ ಕಾಮಕ್ರೋಧಗಳನ್ನು ಕೆರಳಿಸುವ ಟಿ.ವಿಯ ಧಾರಾವಾಹಿಗಳನ್ನು ನೋಡುತ್ತಾ ಅನ್ಯಮನಸ್ಕರಾಗಿ ಊಟ ಮಾಡುವುದಿರಬಹುದು, ಅನಾರೋಗ್ಯಕ್ಕೆ ಕಾರಣವಾಗಬಲ್ಲ ಭೋಜನವೃತ್ತಗಳು ನಮ್ಮ ದಿನನಿತ್ಯದ ಜೀವನದಲ್ಲಿ ಹಲವಾರು. ಇವುಗಳನ್ನು ಅರಿತು ಸರಿಪಡಿಸಿಕೊಳ್ಳುವುದು ಸ್ವಾಸ್ಥ್ಯರಕ್ಷಣೆಗೆ ನಿತಾಂತವಾಗಿ ಆವಶ್ಯಕ.

ಇಂತಹ ಪ್ರಮಾದಗಳು ಆಗದಿರಲೆಂದೇ ಪೂರ್ವಿಕರು ಭೋಜನವೃತ್ತವನ್ನು ಒಂದುಯಜ್ಞಕಾರ್ಯವೇನೋ ಎಂಬಂತೆ ಭಾವಿಸಿದ್ದಾರೆ. ಜಠರದಲ್ಲಿ ಸ್ಥಿತನಾದ ವೈಶ್ವಾನರಾಗ್ನಿಗೆ ನಿಯತಕಾಲದಲ್ಲಿ ಭಕ್ತಿಯಿಂದ ಸಮರ್ಪಿಸುವ ಸಾತ್ತ್ವಿಕಾಹಾರವೆಂಬ ಹವಿಸ್ಸು ತನುಮನಗಳೆರಡನ್ನೂ ಪೋಷಿಸಿ ಸಲಹುವಯಜ್ಞದ್ರವ್ಯ. ಪವಿತ್ರಭಾವಗಳಿಂದ ಸೇವಿಸುವ ಆಹಾರ ಶರೀರಕ್ಕೆ ಅಮೃತಪ್ರಾಯವಾದೀತೆಂಬುದು ಈಯಜ್ಞಯಕಲ್ಪನೆಯ ಆಶಯ. ಅನ್ನಪೂರ್ಣೆಯನ್ನು ಸ್ತುತಿಸಿ, ಅನ್ನದಾತನನ್ನು ಸ್ಮರಿಸಿ, ದೇಹವೆಂಬ ದೇವಾಲಯದ ರಕ್ಷಕನಾದ ವೈಶ್ವಾನರಾಗ್ನಿಗೆ ತೃಪ್ತಿಯನ್ನು ಉಂಟುಮಾಡುವುದು ಈ ಕಲ್ಪನೆಯ ತಾತ್ಪರ್ಯ. ಹಿಂದಿನಂತೆಯೇ ಈ ನಮ್ಮ ಆಧುನಿಕ ಕಾಲಕ್ಕೂ ಅತ್ಯಂತವಾಗಿ ಪ್ರಸ್ತುತವಾಗುವ ಸತ್ಕಲ್ಪನೆಯಲ್ಲವೇ ಇದು? ಭಗವದ್ಗೀತೆಯ ಈ ಶ್ಲೋಕ ಮನನೀಯ:

ಅಹಂ ವೈಶ್ವಾನರೋ ಭೂತ್ತ್ವಾ
ಪ್ರಾಣಿನಾಂ ದೇಹಮಾಶ್ರಿತಃ |

ಪ್ರಾಣಾಪಾನಸಮಾಯುಕ್ತಃ
ಪಚಾಮ್ಯನ್ನಂ ಚತುರ್ವಿಧಮ್ ||

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT