ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive | ಆದ್ಯತೆಯಾಗಿದೆ ಆರೋಗ್ಯ ವಿಮೆ...

Last Updated 3 ಮಾರ್ಚ್ 2021, 7:50 IST
ಅಕ್ಷರ ಗಾತ್ರ

‘ಅಯ್ಯೊ, ಈಗೇಕೆ ಆರೋಗ್ಯ ವಿಮೆ? ನಮಗೆ ಅಂಥದ್ದೇನೂ ಆಗಿಲ್ಲ’ ಎನ್ನುವ ಜನರ ದೃಷ್ಟಿಕೋನ ಇದೀಗ ಸಂಪೂರ್ಣ ಬದಲಾಗಿದೆ. ‘ಯಾಕೆ ಬೇಕು ಆರೋಗ್ಯ ವಿಮೆ... ಅದೂ ಈ ವಯಸ್ಸಿನಲ್ಲಿ...’ ಎನ್ನುವ ಉದಾಸೀನತೆ ದೂರವಾಗಿದೆ. ‘ಯಾವುದೇ ವಯೋಮಾನವಿರಲಿ, ಆರೋಗ್ಯ ಸ್ಥಿತಿ ಹೇಗೇ ಇರಲಿ, ಈಗ ಇದ್ದಂತೆ ಮುಂದೆಯೂ ಇರುತ್ತೇವೆ ಎನ್ನುವ ಖಾತರಿ ಯಾರಿಗಿದೆ? ಯಾವುದಕ್ಕೂ ಕುಟುಂಬಕ್ಕೊಂದಾದರೂ ಆರೋಗ್ಯ ವಿಮೆ ಇರಲೇಬೇಕು’ ಎನ್ನುವ ಎಚ್ಚರಿಕೆಯ ಘಂಟೆ ಮೊಳಗಿದೆ.

ಇದು ಕೂಡ ಕೊರೊನಾ ಕಲಿಸಿದ ಪಾಠಗಳಲ್ಲಿ ಒಂದು. ಆರೋಗ್ಯ ವಿಮೆಯ ಬಗ್ಗೆ ಭಾರತೀಯರಿಗಿದ್ದ ಉಡಾಫೆಯ ಭಾವನೆ ದೂರವಾಗಿ ಜಾಗೃತಿ ಮೂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 2020ರ ಮಾರ್ಚ್‌ನಿಂದ ಮೇ ತಿಂಗಳ ಅವಧಿಯಲ್ಲಿ ಆರೋಗ್ಯ ವಿಮೆಗಳ ಸಂಖ್ಯೆ ದ್ವಿಗುಣವಾಗಿರುವುದೇ ಈ ಪ್ರವೃತ್ತಿಗೆ ಸಾಕ್ಷಿ.

ಪಾಲಿಸಿಬಜಾರ್.ಕಾಮ್ ನಡೆಸಿದ ಇತ್ತೀಚಿನ ಸಮೀಕ್ಷೆಯಲ್ಲಿ ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜನರು ಆರೋಗ್ಯ ವಿಮೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎನ್ನುವ ಅಂಶ ವ್ಯಕ್ತವಾಗಿದೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಮನೆಯ ಹಣಕಾಸು, ಹೂಡಿಕೆಗಳು ಮತ್ತು ವಿಮೆಯ ಬಗೆಗಿನ ಗ್ರಾಹಕರ ಮನೋಭಾವವನ್ನು ಅರ್ಥಮಾಡಿಕೊಳ್ಳಲು ಈ ಆನ್‌ಲೈನ್ ಅಧ್ಯಯನವನ್ನು ನಡೆಸಲಾಗಿತ್ತು.

ಶೇ 51ರಷ್ಟು ಜನರು ವಿಮಾ ರಕ್ಷಣೆಯ ಜರೂರು ಎಷ್ಟಿದೆ ಎನ್ನುವುದನ್ನು ಅರಿತುಕೊಂಡಿದ್ದಾರೆ. ಶೇ 80ರಷ್ಟು ಜನರು ವಿಶೇಷವಾಗಿ ಸಾಂಕ್ರಾಮಿಕ ರೋಗಗಳ ಸಮಯದಲ್ಲಿ ವಿಮೆಯ ಅಗತ್ಯ ಬಿದ್ದೇ ಬೀಳುವುದೆನ್ನುವುದನ್ನು ಅರಿತುಕೊಂಡಿದ್ದಾರೆ ಎನ್ನುತ್ತದೆ ಈ ಸಮೀಕ್ಷೆ.

ಈ ಬದಲಾವಣೆ ಕೇವಲ ಆರೋಗ್ಯ ವಿಮೆಗೆ ಸೀಮಿತವಾಗಿಲ್ಲ. ಜೀವ ವಿಮೆಯಲ್ಲೂ ಇದೇ ರೀತಿಯ ಪ್ರವೃತ್ತಿ ಇದೆ. ನಾವು ಎಷ್ಟೇ ಗಟ್ಟಿಮುಟ್ಟಾಗಿದ್ದಾರೂ, ಎಷ್ಟೇ ಆರೋಗ್ಯವಂತರಾಗಿದ್ದರೂ ಯಾವಾಗ ಯಾವ ರೀತಿಯ ಸಾಂಕ್ರಾಮಿಕ ಕಾಯಿಲೆಗಳು ಪ್ರತ್ಯಕ್ಷವಾಗುತ್ತವೆ ಎನ್ನುವುದು ಗೊತ್ತಿಲ್ಲ. ದಿಢೀರನೇ ಯಾವುದೊ ಕಾಯಿಲೆಗೆ ಬಲಿಯಾದಾಗ ತಮ್ಮ ಕುಟುಂಬ ದಿಕ್ಕಿಲ್ಲದಂತಾಗಬಹುದು ಎನ್ನುವ ಕಾರಣಕ್ಕೆ ಜೀವ ವಿಮೆಗೂ ಕೂಡ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಭಾರತೀಯರು.

ಉದ್ಯೋಗದ ಅಭದ್ರತೆ, ಉದ್ಯೋಗ ನಷ್ಟ, ಸಂಬಳದಲ್ಲಿ ಕಡಿತದಂತಹ ವಿಚಾರಗಳನ್ನು ಬದಿಗಿಟ್ಟು ವಿಮೆಯ ಕಡೆ ಹೆಚ್ಚಿನ ಒಲವು ತೋರುತ್ತಿರುವುದು ಮಹತ್ವದ ಬದಲಾವಣೆಯೇ ಸರಿ. ಹಿಂದಿನಿಂದಲೂ ಉಳಿತಾಯ ಮಂತ್ರವನ್ನು ಅನುಸರಿಸುತ್ತ ಬಂದಿರುವ ಭಾರತೀಯರ ಮನೋಭಾವ ಕೊರೊನಾ ತಲ್ಲಣವನ್ನು ಧೈರ್ಯವಾಗಿ ಎದುರಿವಂತೆ ಮಾಡಿತು. ಕೊರೊನಾದಿಂದ ಆರ್ಥಿಕ ವ್ಯವಸ್ಥೆಯ ಮೇಲೆ ಕರಿನೆರಳು ಉಂಟಾದ ಈ ಸಂದರ್ಭದಲ್ಲಿಯೂ ವಿಮೆಯ ಬಗ್ಗೆ ಯೋಚಿಸುತ್ತಿರುವುದರಲ್ಲಿ ಈ ಉಳಿತಾಯದ ಪಾಲೂ ಇದೆ ಎಂದೇ ಅರ್ಥ.

ಕೊರೊನಾ ಕಾಲದ ಆರ್ಥಿಕ ಒತ್ತಡವನ್ನು ಎದುರಿಸಲು ತಾವು ಮೊದಲೇ ಸಿದ್ಧತೆ ಮಾಡಿಕೊಂಡಿದ್ದ ಉಳಿತಾಯ ನೆರವಾಯಿತು ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಪ್ರತಿ ಮೂರು ಜನರಲ್ಲಿ ಇಬ್ಬರು ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲ, ಮುಂದಿನ 12 ತಿಂಗಳಲ್ಲಿ ತಮ್ಮ ಮನೆಯ ವೆಚ್ಚಗಳು ಸ್ಥಿರವಾಗಿರುತ್ತವೆ ಮತ್ತು ಸುಲಭವಾಗಿ ಯಾವುದೇ ಆತಂಕವಿಲ್ಲದೆ ಮುಂದೆಯೂ ಹೀಗೆಯೇ ನಿರ್ವಹಿಸುವ ಭರವಸೆ ಇದೆ ಎನ್ನುವ ಸಮಾಧಾನವನ್ನು ಅನೇಕರು ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಕೇವಲ ಶೇ 15ರಷ್ಟು ಜನರು ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಚಿಂತಿತರಾಗಿದ್ದಾರೆ. ಉದ್ಯೋಗವನ್ನು ಉಳಿಸಿಕೊಳ್ಳುವುದೇ ತಮ್ಮ ಮುಂದಿರುವ ಮೊದಲ ಆದ್ಯತೆ ಎಂದವರ ಸಂಖ್ಯೆ ಶೇ 19ರಷ್ಟಿದೆ.

ವಿಮಾಕ್ಷೇತ್ರದಲ್ಲಿ ಕರಿನೆರಳು

ಆರೋಗ್ಯ ಮತ್ತು ಜೀವ ವಿಮೆಯ ಗ್ರಹಿಕೆಯಲ್ಲಿ ಉಂಟಾದ ಮಹತ್ವದ ಬದಲಾವಣೆ ವಿಮಾ ಕ್ಷೇತ್ರದ ದಿಸೆಯನ್ನೂ ಬದಲಿಸಿದೆ. ವಿಮೆಗಳ ಬಗ್ಗೆ ಪ್ರಚಾರ ಮತ್ತು ಮಾರ್ಕೆಂಟಿಂಗ್‌ ತಂತ್ರಗಳಿಗೆ ಮೊದಲಿನಷ್ಟು ಕೆಲಸವಿಲ್ಲ. ಗ್ರಾಹಕರು ತಾವಾಗಿಯೇ ವಿಮಾ ಕಂಪನಿಗಳ ಬಾಗಿಲು ಬಡಿಯುತ್ತಿದ್ದಾರೆ. ಆದಾಗ್ಯೂ ಕೆಲವು ಅಡೆತಡೆಗಳು, ಕುಂದುಕೊರತೆಗಳು ವಿಮಾ ಕ್ಷೇತ್ರದ ಓಟಕ್ಕೆ ಎಡರುತೊಡರಾಗಿವೆ ಎನ್ನುವುದನ್ನು ಪರಿಗಣಿಸಲೇಬೇಕು. ಅನೇಕ ವಿಮಾ ಕಂಪನಿಗಳು ‘ಷರತ್ತುಗಳು ಅನ್ವಯಿಸುತ್ತವೆ’ ಎನ್ನುವ ತಮ್ಮ ಕತ್ತಲೆ ಕೋಣೆಯಲ್ಲಿ ಅನೇಕ ಗುಟ್ಟುಗಳನ್ನು ಇಟ್ಟಿರುತ್ತಾರೆ. ಅದನ್ನು ಸರಿಯಾಗಿ ನೋಡದ, ನೋಡಿದರೂ ಅರ್ಥೈಸಿಕೊಳ್ಳಲಾಗದ ಗ್ರಾಹಕರು ತಾವು ಕಷ್ಟಪಟ್ಟು ಕಟ್ಟಿದ ವಿಮಾಹಣದ ಸೌಲಭ್ಯಗಳ ಪ್ರಯೋಜನವನ್ನು ಸಕಾಲದಲ್ಲಿ ಪಡೆದುಕೊಳ್ಳಲು ಸಾಧ್ಯವಾಗದೇ ನರಳುವುದೂ ಇದ್ದೇ ಇದೆ.

ಜಾಗೃತಿ ಹೆಚ್ಚಬೇಕು...

‘ಹೌದು, ಕೋವಿಡ್‌–19 ಜೊತೆಗೆ ಆರೋಗ್ಯ ವಿಮೆಯ ಬೇಡಿಕೆಯಲ್ಲಿ ಗಮನಾರ್ಹ ಏರಿಕೆ ಕಂಡಿದೆ. ಆದರೆ ಈ ಕುರಿತು ವಿವರವಾದ ವಿಶ್ಲೇಷಣಾತ್ಮಕ ಉಲ್ಲೇಖದ ಅಗತ್ಯವಿದೆ’ ಎನ್ನುತ್ತಾರೆ ಡಿಜಿಟ್ ಜನರಲ್ ಇನ್ಶುರೆನ್ಸ್ ಲಿಮಿಟೆಡ್‌ನ ಆಕ್ಚುರಿ ಆದರ್ಶ್ ಅಗರ್ವಾಲ್ .

‘ಕೊರೊನಾ ಜನರಿಗೆ ಆರೋಗ್ಯ ವಿಮೆಯ ಮಹತ್ವವನ್ನು ಮನದಟ್ಟು ಮಾಡಿಕೊಟ್ಟಿದೆ ಎನ್ನುವುದು ನಿಜ. ಆದರೆ ವಿಮಾ ಕಂಪನಿಯಾಗಿ ನಾವು ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮಾತ್ರವಲ್ಲದೆ ಆರೋಗ್ಯ ವಿಮಾ ಪಾಲಿಸಿಯ ಬೃಹತ್‌ ವ್ಯಾಪ್ತಿಯ ಬಗ್ಗೆ ಜಾಗೃತಿ ಮೂಡಿಸಬೇಕಿದೆ’ ಎನ್ನುತ್ತಾರೆ ಅವರು.

‘ವಿಮೆಯ ಅಗತ್ಯವನ್ನು ಕೊರೊನಾ ಜೊತೆಗೆ ಸಮೀಕರಿಸಿ ನೋಡುವುದು ಮಾತ್ರವಲ್ಲ, ಅದರ ಅಗತ್ಯ ಎಲ್ಲಾ ಸಂದರ್ಭದಲ್ಲಿಯೂ, ಎಲ್ಲಾ ಕಾಲದಲ್ಲಿಯೂ ಇದೆ, ಇರುತ್ತದೆ ಎನ್ನುವ ಸಂದೇಶವನ್ನು ಜನತೆಗೆ ಮುಟ್ಟಿಸುವ ಕೆಲಸ ವಿಮಾ ಕಂಪನಿಗಳಿಂದ ಆಗಬೇಕು. ಆರೋಗ್ಯ ವಿಮೆಯನ್ನು ಕೇವಲ ತೆರಿಗೆ ಉಳಿಸುವ ಸಾಧನವಾಗಿ ನೋಡಬಾರದು. ಉಳಿತಾಯವನ್ನು ಒಂದು ರೀತಿಯಲ್ಲಿ ಆರ್ಥಿಕ ಹೂಡಿಕೆಯನ್ನಾಗಿ ನೋಡಬೇಕು ಎಂಬ ಅರಿವು ಜನರಲ್ಲಿ ಮೂಡಬೇಕು. ವಿಮಾ ನಿರ್ಧಾರವು ಗ್ರಾಹಕರ ಮನಸ್ಸಿನಲ್ಲಿ ಭಯ, ಆತಂಕ ಮತ್ತು ಪ್ರೇರಣೆಗಳ ಸಂಕೀರ್ಣ ಭಾವನೆಗಳನ್ನು ಹುಟ್ಟುಹಾಕುವ ವಿದ್ಯಮಾನವಾಗಿದ್ದು, ಇಲ್ಲಿ ಅನುಕೂಲದ ಜೊತೆಗೆ ಅಪಾಯವೂ ಇದೆ. ಸರಿಯಾಗಿ ಅರ್ಥೈಸಿಕೊಳ್ಳದ ಹೊರತು ವಿಮಾ ಸೌಲಭ್ಯಗಳನ್ನು ಗ್ರಾಹಕ ಅನುಭವಿಸಲಾರ. ‘ಡಿಜಿಟ್ ಇನ್ಶೂರೆನ್ಸ್‌’ನಲ್ಲಿ ನಾವೂ ಸಹ ಗ್ರೂಪ್‌–ಕೋವಿಡ್‌ ಉತ್ಪನ್ನದ ಅಡಿಯಲ್ಲಿ 20 ಲಕ್ಷ ಜೀವಗಳ ರಕ್ಷಣೆಯ ಹೊಣೆಯನ್ನು ಹೊತ್ತುಕೊಂಡಿದ್ದೇವೆ’ ಎನ್ನುವುದು ಅವರ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT