ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ ಕುಶಲ: ಅಭ್ಯಂಗ ಸ್ನಾನದ ವೈವಿಧ್ಯ

Last Updated 2 ನವೆಂಬರ್ 2021, 4:51 IST
ಅಕ್ಷರ ಗಾತ್ರ

ಅಭ್ಯಂಗ ಎಂದರೆ ಮೈಗೆ ಎಣ್ಣೆ ಹಚ್ಚುವುದು ಎಂದು ಎಲ್ಲರಿಗೆ ತಿಳಿದಿದೆ. ಎಣ್ಣೆ ಹೇಗಿರಬೇಕು? ‘ತೋಡಕುಕ್ಕಿನಾರ್’ ಎಂಬ ತುಳು ಪಾಡ್ದನ(ಹಾಡುಗಬ್ಬ)ದ ಮಾಹಿತಿಗಳಿಂತಿವೆ. ಇವು ಕನ್ನಡದ ರೂಪಾಂತರಿತ ಮಾಹಿತಿಗಳಾಗಿವೆ. ಗಾಣದೆಣ್ಣೆಯೇ ಪ್ರಶಸ್ತ. ಆರು, ಹನ್ನೆರಡು, ಇಪ್ಪತ್ತನಾಲ್ಕು ಕೈಗಾಣದೆಣ್ಣೆ ತರಿಸಿದರು. ಎಣ್ಣೆ ಹಚ್ಚಿದ ಅನಂತರ ಶುದ್ಧ ನೀರಿನಲ್ಲಿ ಜಳಕ ಮಾಡುವುದು. ಈ ಭಾಷ್ಯದಲ್ಲಿ ಅಪ್ಪಟ ಆಯುರ್ವೇದ ಮಾಹಿತಿಗಳೇ ಅಡಗಿವೆ. ನಿತ್ಯವೂ ತಲೆ, ಮೈ, ಕೈಗೆ ಎಣ್ಣೆ ಹಚ್ಚುವ, ವಿಶೇಷತಃ ನೆತ್ತಿ, ಕಿವಿ, ಮತ್ತು ಪಾದಗಳಿಗೆ ಹಚ್ಚುವ ವಿಧಾನ ವಿವರಿತ. ಅಂತೆಯೇ ಋತುಗನುಗುಣವಾಗಿ ಹದ ಬಿಸಿ ಶುದ್ಧ ಜಲ ಜಳಕದ ಆಚರಣೆಗಳಿವೆ.

‘ತೋಡಕುಕ್ಕಿನಾರ್’ ಹಾಡುಗಬ್ಬದಲ್ಲಿ ಕಾಣುವ ಅಭ್ಯಂಗ ವಿಧಿಗೆ ಆಯ್ಕೆಗೊಳುವ ದೇಹದ ಒಂಬತ್ತು ಅಂಗ, ಪ್ರತ್ಯಂಗ ಹಾಗೂ ಎಣ್ಣೆಯ ಪ್ರಕಾರಗಳ ಬಣ್ಣನೆ ವಿಶಿಷ್ಟ ಹಾಗೂ ಅನುಕರಣೀಯ. ‘ನೆತ್ತಿಗೆ ನೆಯ್ಯೆಣ್ಣೆ, ಕಣ್ಣ್‍ಗ್ ಸೆಲಿಯೆಣ್ಣೆ, ಮೂಂಕುಗ್ ನಚ್ಚಿದೆಣ್ಣೆ, ತಿಗಲೆಗ್ ಮಿಂಚೆಣ್ಣೆ, ಕೆಬಿಕ್ಕ್ ಕೀಲೆಣ್ಣೆ, ಸಂದ್‍ಗ್ ಸಂದೆಣ್ಣೆ, ಬೆರಿಕ್ಕ್ ಬೆಪ್ಪೆಣ್ಣೆ, ಉಗುರುಗ್ ಉರಿಯೆಣ್ಣೆ, ಪಾದೊಗ್ ಪನಿಯಣ್ಣೆ ಪಾದೊಡ್ದು ಬತ್ತಿನ ತೇಜಮುಟ್ಟ ಮೈಮುರಿಯಪ್ಪ ಎಣ್ಣೆ ಪಾಡಾಯೆರ್, ತಾನ್ ತೋಡಾಯಿನ ಕೆರೆತ್ತಲ್ಪ ಏಳ್ ಕೈತ್ತಕೊಪ್ಪರಿಗೆಡ್ ಸಾವಿರ ಕಡ್ಯ ಬೆಂದ್ರ್‍ಡ್ ಸಾವಿರ ಕಡ್ಯ ಚಂಡಿರ್‍ಡ ತಂಪಾಯೆರ್, ಎಣ್ಣೆ ಶುದ್ಧನೀರ್‍ಡ್ ಜಳಕ ಕರಿತ್ತೆರ್.’ ಈ ಹಾಡುಗಬ್ಬದ ಕನ್ನಡ ತರ್ಜುಮೆ ಮತ್ತು ಇದರ ವೈಶಿಷ್ಟ್ಯ ಅರಿಯೋಣವೆ?

ದೇಹದ ಉತ್ತಮಾಂಗ ಶಿರಸ್ಸು. ದೇಹವೆಂಬ ಹಾರ್ಡ್‍ವೇರ್‌ನಲ್ಲಿ ಮೆದುಳು ಮತ್ತು ನರಮಂಡಲವೆಂಬ ಸಾಫ್ಟ್‌ವೇರ್ ಇದೆಯಲ್ಲ. ಅದರಲ್ಲಾಗುವ ವೇರ್ ಎಂಡ್ ಟೇರ್ ಪ್ರತಿಬಂಧಕೋಪಾಯವೇ ಅಭ್ಯಂಗ ಎಂದು ಪೂರ್ವಿಕರು ಅರಿತಿದ್ದರು. ‘ನೈ’ ಎಂದರೆ ತುಪ್ಪ. ಅದರ ಸಂಗಡ ಎಣ್ಣೆ ಕೂಡಿಸಿದರೆ ನೈಯೆಣ್ಣೆ. ಅದನ್ನು ಯಮಕ ಸ್ನೇಹ ಎಂಬ ಪರಿಭಾಷೆಯಡಿ ಆಯುರ್ವೇದ ಸಂಹಿತೆಗಳು ಗುರುತಿಸುವವು. ನಿತ್ಯವೂ ನೆತ್ತಿ ತಂಪಾಗಿಸುವ ಉಪಾಯವಿದು. ದೀಪಾವಳಿಯ ಅನಂತರದ ಚಳಿಗಾಲದಲ್ಲಿ ನೆತ್ತರು ಚಲನೆ ಏರುಪೇರಾಗದಂತೆ, ಹೃದಯಾಘಾತ, ಲಕ್ವದಂತಹ ಗಂಭೀರ ತೊಂದರೆಗಿದು ಖಂಡಿತ ಪ್ರತಿಬಂಧಕ ಕ್ರಮ. ಎಳ್ಳೆಣ್ಣೆ ಅಥವಾ ತೆಂಗಿನೆಣ್ಣೆ ಉತ್ತಮ. ಹರಳೆಣ್ಣೆ, ಸಾಸಿವೆ ಎಣ್ಣೆಗಳೂ ಮೈಮನಗಳ ದುಗುಡ ದುಮ್ಮಾನ ಕಳೆಯುವ ಸುಲಭ ಸಾಧನಗಳು. ಕಣ್ಣಿನ ಶಕ್ತಿ ಪ್ರಖರವಾಗಿಡಲು ಕಣ್ಣೆವೆ ಮೇಲೆ ತಿಳಿಯಾದ ಜಿಡ್ಡಿನ ಲೇಪನದಿಂದ ಲಾಭವಿದೆ. ನಿದ್ರಿಸುವ ಮುನ್ನ ಮಾಡಿ ನೋಡಿರಿ. ಸುಖನಿದ್ದೆಗಿದುವೆ ಸುಲಭದ ಹಾದಿ.

ಮೂಗಿಗೆ ಬಿಡುವ ಎಣ್ಣೆಯ ಉಪಚಾರಕ್ಕೆ ಆಯುರ್ವೇದವು ನಸ್ಯ ಎನ್ನುತ್ತದೆ. ಅಂತಹ ಉಪಚಾರಕ್ಕೆ ತುಳುವರು ಒತ್ತು ನೀಡಿದ್ದಾರೆ. ಶಿರಸ್ಸಿಗೆ ನೇರ ದಾರಿ ಮೂಗು ಎಂಬ ಮಾತು ಆಯುರ್ವೇದ ಗ್ರಂಥ ಪ್ರಸಿದ್ಧ. ಅಂತಹ ಗ್ರಂಥಸ್ಥ ಮಾಹಿತಿ ಮೌಖಿಕ ಪರಂಪರೆಯಲ್ಲಿ ಉಳಿದಿದ್ದು ಅಚ್ಚರಿಯೇ ಸೈ. ಎದೆ ಮತ್ತು ಬೆನ್ನು ಭಾಗಕ್ಕೆ ಬಿಸಿಯಾದ ಎಣ್ಣೆ ಮಾಲೀಶು ಮಾಡುವ ವಿಧಾನದಿಂದ ಉಸಿರಾಟ ಗತಿ ಸಹಜವಾಗುತ್ತದೆ. ಎದೆ ಗೂಡಿನ ಮಾಂಸಪೇಶೀಗಳ ಸ್ಥಿತಿಸ್ಥಾಪಕತೆ ಯಥಾವತ್ ಕಾಪಾಡಲು ವ್ಯವಸ್ಥೆ ಆಗುತ್ತದೆ. ಆಸ್ತಮಾದ ಏದುಸಿರು ಪಡುವ ಸ್ಥಿತಿಯಲ್ಲಿ ಇಂತಹ ಪ್ರಥಮ ಚಿಕಿತ್ಸೆ ಲಾಭದಾಯಕ. ನಿತ್ಯ ಮಾಡಲಡ್ಡಿಯಿಲ್ಲ. ಕಿವಿಯು ವಾತಸ್ಥಾನ. ಎರಡೂ ಕಿವಿಗೆ ಹದ ಬಿಸಿ ಎಣ್ಣೆ ತೊಟ್ಟಿಕ್ಕಿಸುವ ವಿಧಾನಕ್ಕೆ ಪಾಡ್ದನ ಸಲಹೆ ನೀಡುತ್ತದೆ. ಆಯುರ್ವೇದಗ್ರಂಥಸ್ಥ ಮಾಹಿತಿಯಿದು. ಕೀಲೆಣ್ಣೆ ಎಂದರೆ ಗಾಡಿ ಗಾಲಿಯ ಅಚ್ಚಿಗೆ ಎಣ್ಣೆ ಹಾಕಿದರೆ ಚಕ್ರ ಉರುಳಲು ಸಲೀಸು. ಅಂತಹದೇ ನಿದರ್ಶನ ಪಾಡ್ದನ ನೀಡಿದೆ. ಕಿವಿಯೊಳಗಿನ ಶಂಕುರಚನೆಯ ಸಂದುಗಳ ಸೂಕ್ಷ್ಮಮಾಹಿತಿ ಪೂರ್ವಿಕರಿಗಿತ್ತು. ಹಾಗಾಗಿ ಕಿವಿಯೆಂಬ ಯಂತ್ರಕ್ಕೆ ಕೀಲೆಣ್ಣೆ ಬಿಡುವ ವಿಧಾನ ಪಾಡ್ದನದಲ್ಲಿದೆ.

ದೇಹವೆಂಬ ಯಂತ್ರದಲ್ಲಿವೆ ಅನೇಕಾನೇಕ ಸಂದುಗಳು. ಅವು ಉಜ್ಜಿ ಸವಕಳಿಯಾಗದಂತೆ ಸಂದೆಣ್ಣೆ ಮಾಲೀಶು ಉದ್ದೇಶ ಎಂದೆಂದಿಗೂ ಸಫಲ. ಉಗುರು ಮತ್ತು ಕೂದಲು ಖಂಡಿತವಾಗಿಯೂ ಡೆಡ್ ಟಿಶ್ಯೂ ಅಲ್ಲ. ಅವು ಜೀವಂತ ಇವೆ. ಅದರ ಸಹಜ ಸ್ಥಿತಿಗೆ ಕೊಂಚ ಏರುಬಿಸಿಯ ಉರಿಯುವಷ್ಟು ಶಾಖದ ಎಣ್ಣೆ ಉಗುರಿಗೆ ತೊಟ್ಟಿಕ್ಕಿಸಿದರೆ ಆರೋಗ್ಯ ಖಂಡಿತ. ಅದರ ಶಾಖ ಒಳಗಿಳಿದು ನರಾಗ್ರಗಳಿಗೆ ಉತ್ತೇಜನ ಲಭ್ಯ. ಅಭ್ಯಂಗಾರ್ಹ ಒಂಬತ್ತನೆಯ ಸ್ಥಾನ ಪಾದ. ನಿತ್ಯ ಪಾದಗಳಿಗೆ ಹಚ್ಚಿಸಿಕೊಂಡರೆ ಕಣ್ಣಿಗೆ ಹಿತ ಎನ್ನುತ್ತದೆ ಆಯುರ್ವೇದ ಮೂಲಸಂಹಿತೆ. ಚೈನೀಸ್ ಫೂಟ್ ಮಸಾಜ್ ಎಂಬ ವಿಶೇಷ ವಿಧಾನ ಅಲ್ಲಿ ಇಂದಿಗೂ ಜೀವಂತ. ಯೋಜನಗಟ್ಟಲೆ ದಿನದಿನವೂ ನಡೆದ ಬೌಧ್ಧಬಿಕ್ಷುಗಳು ಮಾಹಾಚೀನ ಸೇರಿದ್ದರು. ಅಲ್ಲಿ ಇಂದಿಗೂ ಪಾದಾಭ್ಯಂಗದ ಪದ್ಧತಿ ಜೀವಂತವಾಗಿದೆ. ಮರದ ಆರೋಗ್ಯ ಸರಿ ಇರಬೇಕೆ? ಬೇರು ಆರೋಗ್ಯ ಕಾಪಾಡಿರಿ. ಹಾಗೆಯೇ ದೇಹವೆಂಬ ಮರದ ಸಹಜಾರೋಗ್ಯಕ್ಕೆ ಪಾದವೆಂಬ ಬೇರಿನ ಪುನರುಜ್ಜೀವನ ಅತ್ಯಗತ್ಯ. ಪಾಡ್ದನದ ಕೊನೆ ಚರಣ ಸಾವಿರ ಕೊಡ ಬಿಸಿನೀರ ಸ್ನಾನದ್ದು. ಅನಂತರ ತಣ್ಣೀರಿದ್ದು. ಇಂತಹ ಸ್ನಾನವೈಭವ ಈ ದೀವಳಿಗೆಗೆ ನಿಮ್ಮದಾಗಿಸಿಕೊಳ್ಳಿರಿ. ಆರೋಗ್ಯವಂತರಾಗಿರಿ. ರೋಗ ಮತ್ತು ಮುಪ್ಪು ಬಾರದ ಸುಖಾಯುಷ್ಯ ನಿಮ್ಮದಾಗಲಿ.

(ಲೇಖಕರು ಆಯುರ್ವೇದವೈದ್ಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT