ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಷೇಮ–ಕುಶಲ: ಹಲ್ಲುಗಳುಜ್ಜಿ ಮೌತ್‌ವಾಶ್ ಮಾಡಿ

Published : 10 ಸೆಪ್ಟೆಂಬರ್ 2024, 0:30 IST
Last Updated : 10 ಸೆಪ್ಟೆಂಬರ್ 2024, 0:30 IST
ಫಾಲೋ ಮಾಡಿ
Comments

‘ಯಾಕೋ ಬಾಯಲ್ಲಿ ಕೆಟ್ಟ ವಾಸನೆ ಬರ್ತಿದೆ. ಫ್ರೆಂಡ್ಸ್ ಜೊತೆ ಮಾತಾಡೋಕೆ ಒಂಥರ ಮುಜುಗರ ಆಗುತ್ತೆ. ಏನು ಮಾಡೋದು ಗೊತ್ತಿಲ್ಲ! ಡಾಕ್ಟರು ನೋಡಿದ್ರೆ ಬ್ರಷ್ ಮಾಡು ಅಂತಾರೆ. ಬಸ್ ತಪ್ಪುವ ಗಡಿಬಿಡಿಯಲ್ಲಿ ಅದಕ್ಕೆಲ್ಲ ಟೈಮ್ ಎಲ್ಲಿದೆ? ಏನ್ ಮಾಡೋದು ಗೊತ್ತಿಲ್ಲ’ – ಇದು  ಕಾಲೇಜು ಯುವತಿಯೊಬ್ಬಳ ಅಳಲು.

‘ನನಗೂ ಅಷ್ಟೇ ಕಣೆ; ಅದಕ್ಕೇ ದಿನಾ ಮೌತ್‌ವಾಶ್ ಯೂಸ್ ಮಾಡ್ತೀನಿ. ಕ್ವಿಕ್ ಮತ್ತೆ ಈಸಿ... ನೀನೂ ಹಾಗೇ ಮಾಡು.’ ಅವಳಿಗೆ ಗೆಳತಿಯ ಸಲಹೆ.

ಅಂತೂ ಮೌತ್‌ವಾಶ್ ಬಳಕೆಯಿಂದ ಬಾಯಿ ಫ್ರೆಶ್; ಇಬ್ಬರೂ ಖುಷ್!

ಶಾಲಾ–ಕಾಲೇಜಿಗೆ ಓಡಬೇಕಾದ ವಿದ್ಯಾರ್ಥಿಗಳು, ಟ್ರಾಫಿಕ್ ದಾಟಿ ಆಫೀಸಿಗೆ ಸಮಯಕ್ಕೆ ಸರಿಯಾಗಿ ತಲುಪಬೇಕಾದ ಬೇಕಾದ ಉದ್ಯೋಗಿಗಳು, ಬ್ರಶ್ ಮಾಡಿಸಲು ತೊಂದರೆ ಕೊಡುವ ಚಿಕ್ಕ ಮಕ್ಕಳ ಪೋಷಕರು – ಹೀಗೆ ಸಮಯಕ್ಕಾಗಿ ಪರದಾಡುತ್ತಿರುವ ಬಹಳಷ್ಟು ಜನರಿಗೆ ‘ಮೌತ್‌ವಾಶ್’ ಎನ್ನುವುದು ದಂತಾರೋಗ್ಯವನ್ನು ಕಾಪಾಡಲು ಸುಲಭವಾದ ವಿಧಾನ. ಆದರೆ ನೆನಪಿನಲ್ಲಿಡಬೇಕಾದ ಅಂಶವೆಂದರೆ ಮೌತ್‌ವಾಶ್ ಬ್ರಶಿಂಗ್‌ಗೆ ಬದಲಿಯಲ್ಲ; ಪೂರಕ ಮಾತ್ರ!

ಮೌತ್‌ವಾಶ್‌ಗಳಲ್ಲಿ ಮುಖ್ಯವಾಗಿ ಎರಡು ವಿಧಗಳು. ಮೊದಲನೆಯದ್ದು, ಆಹ್ಲಾದಕರ ಸುಗಂಧಕ್ಕಾಗಿ ಬಳಸುವಂಥದ್ದು. ಮಾರುಕಟ್ಟೆಯಲ್ಲಿ ಸಿಗುವ ನಾನಾ ರುಚಿ, ಸುವಾಸನೆಯ ಈ ಮೌತ್‌ವಾಶ್‌ಗಳು ಬಾಯಿಯಲ್ಲಿ ಉಂಟಾಗುವ ದುರ್ವಾಸನೆಯನ್ನು ತಾತ್ಕಾಲಿಕವಾಗಿ ನಿಯಂತ್ರಿಸಿ, ತಾಜಾತನದ ಅನುಭವವನ್ನು ನೀಡುತ್ತವೆ. ಎರಡನೆಯದ್ದು, ಔಷಧಯುತವಾದದ್ದು. ಇವುಗಳಲ್ಲಿ ಸೂಕ್ಷ್ಮಾಣುಜೀವಿಗಳನ್ನು ಕೊಲ್ಲುವ ರಾಸಾಯನಿಕಗಳಿರುತ್ತವೆ. ಫ್ಲೋರೈಡ್ ಇರುವ ಮೌತ್‌ವಾಶ್‌ಗಳು ಹಲ್ಲುಗಳನ್ನು ಬಲಪಡಿಸುತ್ತವೆ. ಬಾಯಲ್ಲಿರುವ ಹಾನಿಕಾರಕ ಸೂಕ್ಷ್ಮಾಣುಜೀವಿಗಳನ್ನು ನಿಯಂತ್ರಿಸುತ್ತದೆ; ಉತ್ಪತ್ತಿಯಾಗುವ ಆ್ಯಸಿಡ್ ವಿರುದ್ಧ ಹೋರಾಡುತ್ತವೆ ಮತ್ತು ಆ ಮೂಲಕ ಹಲ್ಲುಗಳ ಹುಳುಕನ್ನು ನಿಯಂತ್ರಿಸುವಲ್ಲಿ ಸಹಾಯಕ ಎನ್ನಲಾಗುತ್ತದೆ. ವಸಡಿನ ಉರಿಯೂತ ಮತ್ತು ಮೂಳೆಯ ಸೋಂಕು ಇದ್ದಾಗಲೂ ಬಾಯಿಯನ್ನು ರೋಗಾಣುಗಳಿಂದ ದೂರವಿಡಲು ಇವುಗಳನ್ನು ಬಳಸಲಾಗುತ್ತದೆ. ಕೆಲವು ಬಾರಿ ‘ಫಂಗಲ್’ ಸೋಂಕು ಇದ್ದಾಗ ವಿಶೇಷ ರೀತಿಯ ಮೌತ್ ವಾಶ್‌ಗಳನ್ನು ಬಳಸುವ ಸೂಚನೆಯನ್ನು ನೀಡಲಾಗುತ್ತದೆ. ಹೀಗೆ ಆಯಾ ಪರಿಸ್ಥಿತಿಗೆ ತಕ್ಕ ರೀತಿಯಲ್ಲಿ ಮೌತ್‌ವಾಶ್‌ಗಳ ರಾಸಾಯನಿಕಗಳು ಭಿನ್ನವಾಗಿರುತ್ತವೆ. ಹೀಗಾಗಿ ದಂತವೈದ್ಯರ ಸಲಹೆಯನ್ನು ಪಡೆದು ಸೂಕ್ತವಾದ ಮೌತ್‌ವಾಶನ್ನು ಬಳಸುವುದು ಒಳ್ಳೆಯದು.

ಮೌತ್‌ವಾಶ್‌ಗಳಲ್ಲಿ ಕೆಲವನ್ನು ಹಾಗೇ ನೇರವಾಗಿ ಬಳಸಿದರೆ, ಮತ್ತೆ ಕೆಲವನ್ನು ನೀರಿನೊಡನೆ ಬೆರೆಸಿ ಉಪಯೋಗಿಸಬೇಕಾಗುತ್ತದೆ. ತೆಗೆದುಕೊಳ್ಳಬೇಕಾದ ಪ್ರಮಾಣವೂ ಕಂಪನಿಗಳ ಮೇಲೆ ನಿರ್ಧಾರವಾಗಿರುತ್ತದೆ. ಹಾಗಾಗಿ ಬಳಸುವ ವಿಧಾನವನ್ನು ಕುರಿತು ತಯಾರಕರು, ಬಾಟಟ್‌ನ ಮೇಲೆ ಮುದ್ರಿಸಿರುವ ಸೂಚನೆಗಳನ್ನು ಬಳಸುವ ಮುನ್ನ ಓದಬೇಕು. ಸಾಧಾರಣವಾಗಿ 15-20 ಮಿ. ಲೀ. ಮೌತ್‌ವಾಶ್ ಅನ್ನು ಮೂವತ್ತು ಸೆಕೆಂಡ್‌ಗಳಷ್ಟು ಬಾಯಲ್ಲಿಟ್ಟುಕೊಂಡು, ಅದು ಬಾಯಿಯ ಎಲ್ಲ ಕಡೆಗೂ ತಾಗುವಂತೆ ಚಲನೆ ಮಾಡಬೇಕು. ನಂತರ ಮೌತ್‌ವಾಶ್‌ನಿಂದ ಒಂದು ನಿಮಿಷ ಬಾಯಿಯನ್ನು ಮುಕ್ಕಳಿಸಬೇಕು. ಇದರಿಂದ ಬಾಯಿಯ ಮತ್ತು ನಾಲಿಗೆಯ ಹಿಂಭಾಗ ತೊಳೆಯಲ್ಪಡುತ್ತದೆ. ಕಡೆಯಲ್ಲಿ, ಮೌತ್‌ವಾಶನ್ನು ನುಂಗದೇ ಹೊರಗೆ ಉಗುಳುವುದೂ ಮುಖ್ಯ. ಇಲ್ಲದಿದ್ದಲ್ಲಿ ಅದರಲ್ಲಿರುವ ರಾಸಾಯನಿಕಗಳು ಹೊಟ್ಟೆಗೆ ಸೇರುತ್ತವೆ.

ಮಕ್ಕಳು ಬಳಸಬಹುದೇ?

ಮಕ್ಕಳಿಗೆ ಹಲ್ಲುಗಳ ಬ್ರಶ್ ಮಾಡಿಸುವಾಗ ಅವರು ಗಲಾಟೆ ಮಾಡುವುದು ಸಹಜ. ಆಗ ಸಮಯವನ್ನು ಉಳಿಸಲು ಅಥವಾ ಕೆಲಸವನ್ನು ಸುಲಭಮಾಡಿಕೊಳ್ಳಲು ಪೋಷಕರು ಮೌತ್‌ವಾಶ್‌ಗೆ ಮೊರೆ ಹೋಗುವುದು ಸಾಮಾನ್ಯ. ಆರು ವರ್ಷಕ್ಕಿಂತಲೂ ಕೆಳಗಿನ ಮಕ್ಕಳಿಗೆ ಈ ಪದ್ಧತಿ ಎರಡು ಕಾರಣಗಳಿಂದ ಅಪಾಯಕಾರಿ. ಮೊದಲನೆಯದಾಗಿ. ಮಕ್ಕಳಿಗೆ ನುಂಗದೆಯೇ ಮೌತ್‌ವಾಶ್ ಅನ್ನು ಉಗಿಯಲು ಗೊತ್ತಾಗುವುದಿಲ್ಲ. ಹೀಗಾಗಿ ಅದನ್ನು ಅವರು ನುಂಗಿದರೆ ಮೌತ್‌ವಾಶ್‌ನ ರಾಸಾಯನಿಕಗಳು ಅವರ ಹೊಟ್ಟೆಗೆ ಸೇರಬಹುದು. ಎರಡನೆಯದಾಗಿ, ಒಂದು ವೇಳೆ ಮೌತ್‌ವಾಶ್‌ ದ್ರಾವಣದಲ್ಲಿ ಹೆಚ್ಚಿನ ಪ್ರಮಾಣದ ಫ್ಲೋರೈಡ್ ಇದ್ದು, ಅದನ್ನು ಮಕ್ಕಳು ಸೇವಿಸಿದರೆ ಅದರಿಂದ ಅವರ ಹಲ್ಲುಗಳ ಬಣ್ಣವೇ ಬದಲಾಗಬಹುದು. ಆರರಿಂದ ಹನ್ನೆರಡು ವರ್ಷದ ಮಕ್ಕಳಲ್ಲಿ ಬಳಸುವಾಗ ಪೋಷಕರು ಕಾಳಜಿಯನ್ನು ವಹಿಸಿ, ಅದನ್ನು ಬಳಸುವ ವಿಧಾನವನ್ನು ಕಲಿಸಿಕೊಡಬೇಕು. ಗಮನದಲ್ಲಿಡಬೇಕಾದಂಥ ಇನ್ನೊಂದು ಪ್ರಮುಖ ಅಂಶ ಎಂದರೆ ಮೌತ್‌ವಾಶ್ ಬಾಟಲಿಯು ಮಕ್ಕಳ ಕೈಗೆ ಸಿಗದಂತೆ ಎತ್ತರ ಮತ್ತು ಸುರಕ್ಷಿತ ಸ್ಥಳದಲ್ಲಿಡುವುದು. ಬಣ್ಣಬಣ್ಣದ ಆಕರ್ಷಕ ದ್ರಾವಣವನ್ನು ಮಕ್ಕಳು ‘ಜ್ಯೂಸ್’ ಎಂದು ಭಾವಿಸಿ ಕುಡಿಯಲೂಬಹುದು. ಹಾಗಾಗಿ ಮನೆಯಲ್ಲಿ ಹಿರಿಯರು ಈ ವಿಷಯದಲ್ಲಿ ಎಚ್ಚರದಿಂದಿರಬೇಕು.

ಮೌತ್‌ವಾಶ್ ಉಪಯೋಗಿಸುವುದೇನೋ ಸರಿ; ಆದರೆ ಬ್ರಶ್, ಫ್ಲಾಸ್ ಮಾಡುವ ಮುನ್ನ ಅಥವಾ ನಂತರ ಇದನ್ನು ಬಳಸಬೇಕೇ ಎಂದೂ ಅನುಮಾನ ಬರುವುದು ಸಹಜ. ನಮ್ಮ ದಿನಚರಿಯಲ್ಲಿ ಈ ಮೂರನ್ನೂ ಸರಿಯಾಗಿ ಬಳಸಿ ಬಾಯಿಯನ್ನು ಸ್ವಚ್ಛವಾಗಿಡುವುದು ಮುಖ್ಯವೇ ಹೊರತು ‘ಯಾವುದರ ನಂತರ ಯಾವುದು’ ಎಂಬುದು ಮಹತ್ವದ ವಿಷಯವಲ್ಲ. ಆದರೂ ಪಾಲಿಸಬಹುದಾದ ಕ್ರಮ ಹೀಗಿದೆ. ಮೊದಲು ಫ್ಲಾಸ್ ಬಳಸಿ, ಹಲ್ಲಿನ ಸಂದಿಗಳಲ್ಲಿ ಸಿಲುಕಿರುವ ಆಹಾರದ ಸಣ್ಣ ಕಣಗಳನ್ನು ತೆಗೆಯಬೇಕು. ಸ್ವಚ್ಛ ಶುದ್ಧ ನೀರಿನಲ್ಲಿ ಬಾಯಿಯನ್ನು ಮುಕ್ಕಳಿಸಿ ಆ ಸಣ್ಣ ಕಣಗಳನ್ನು ಉಗಿಯಬೇಕು. ಬಳಿಕ ಮೌತ್‌ವಾಶ್ ಬಳಸಿ ಚೆನ್ನಾಗಿ ಬಾಯಿಯನ್ನು ಮುಕ್ಕಳಿಸಬೇಕು. ಬಾಯಿಗೆ ನೀರನ್ನು ಹಾಕದೇ ಪೇಸ್ಟ್ ಮತ್ತು ಬ್ರಶ್ ಅನ್ನು ಉಪಯೋಗಿಸಿ ಮೂರು ನಿಮಿಷಗಳ ಕಾಲ ಹಲ್ಲುಗಳನ್ನು ಉಜ್ಜಬೇಕು. ಕಡೆಯಲ್ಲಿ ಪೇಸ್ಟ್‌ನ ನೊರೆಯನ್ನು ಉಗಿಯಬೇಕು. ಕೂಡಲೇ ಬಾಯಿಗೆ ನೀರನ್ನು ಹಾಕಿ ತೊಳೆಯಬಾರದು. ಏಕೆಂದರೆ ಪೇಸ್ಟ್ ಮತ್ತು ಮೌತ್‌ವಾಶ್‌ನಲ್ಲಿರುವ ಉಪಯುಕ್ತ ವಸ್ತುಗಳ ಪರಿಣಾಮದಲ್ಲಿ ವ್ಯತ್ಯಾಸವಾಗುತ್ತದೆ. 

ಅಡ್ಡಪರಿಣಾಮ
ಮೌತ್‌ವಾಶ್‌ಗಳನ್ನು ಉಪಯೋಗಿಸುವುದರಿಂದ ಅನುಕೂಲಗಳಿವೆ ನಿಜ. ಆದರೆ ಹಲ್ಲುಗಳು ಕಂದುಬಣ್ಣಕ್ಕೆ ತಿರುಗುವುದು, ಬಾಯಿ ಉರಿಯುವಿಕೆ, ರುಚಿಯಲ್ಲಿ ವ್ಯತ್ಯಾಸ, ರಾಸಾಯನಿಕಗಳಿಂದ ಅಲರ್ಜಿ – ಹೀಗೆ ಕೆಲವು ಅಡ್ಡಪರಿಣಾಮಗಳೂ ಎದುರಾಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಬಾಯಿಯ ಸ್ವಚ್ಛತೆಗೆ ಬ್ರಶಿಂಗ್ ಕಡ್ಡಾಯ. ಇದನ್ನು ನಿರ್ಲಕ್ಷಿಸಿದಾಗ ಬಾಯಿ, ಹಲ್ಲುಗಳು ಮತ್ತು ನಾಲಗೆಯಲ್ಲಿ ಕೊಳೆಯು ಸೇರಿ ಬಾಯಿಯಿಂದ ಕೆಟ್ಟ ವಾಸನೆ (ಹಾಲಿಟೋಸಿಸ್) ಹೊರಹೊಮ್ಮುತ್ತದೆ. ಇದನ್ನು ಹೋಗಲಾಡಿಸಲೆಂದೇ ಅನೇಕರು ಮೌತ್ ವಾಶ್‌ಗಳ ಮೊರೆ ಹೋಗುತ್ತಾರೆ. ಈ ದ್ರಾವಣಗಳಿಂದ ತಾತ್ಕಾಲಿಕವಾಗಿ ಕೆಟ್ಟ ವಾಸನೆ ಕಡಿಮೆಯಾಗಬಹುದು. ಆದರೆ ದುರ್ವಾಸನೆಯ ಮೂಲ ಸ್ವಚ್ಛತೆಯಲ್ಲಿಯ ಕೊರತೆಯ ಕಡೆಗೆ ಗಮನವನ್ನು ಕೊಡಬೇಕು. ಹಲ್ಲಿನಲ್ಲಿ ಗಾರೆ ಕಟ್ಟುವಿಕೆಯನ್ನೂ ತಡೆಗಟ್ಟುವ ಕ್ರಮಗಳನ್ನು ಅನುಸರಿಸಬೇಕು. ಕೇವಲ ಮೌತ್ ವಾಶ್‌ಗಳನ್ನಷ್ಟೆ ಬಳಸುವುದರಿಂದ ಮೂಲ ಸಮಸ್ಯೆ ಹಾಗೇ ಮುಂದುವರೆದು, ಹಲ್ಲುಗಳ ರೋಗ್ಯಕ್ಕೆ ಹಾನಿಯಾಗುತ್ತದೆ.

ನೆನಪಿರಲಿ: ಮೌತ್‌ವಾಶ್‌ಗಳು ಬಾಯಿಯನ್ನು ‘ಫ್ರೆಶ್’ ಆಗಿಟ್ಟರೂ, ಅದು ಬ್ರಶಿಂಗ್‌ಗೆ ಪರ್ಯಾಯವಲ್ಲ, ಪೂರಕ ಮಾತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT