ಗುರುವಾರ , ಡಿಸೆಂಬರ್ 3, 2020
20 °C

ಮಕ್ಕಳಿಗೆ ಜ್ವರದ ಲಸಿಕೆ ಕೊಡಿಸಬೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಈ ಚಳಿಗಾಲದ ಸಂದರ್ಭದಲ್ಲಿ ಮಕ್ಕಳಿಗೆ ಜ್ವರ, ನೆಗಡಿ, ಕೆಮ್ಮು ಸಾಮಾನ್ಯ. ಆದರೆ ಅದು ಸಾಮಾನ್ಯ ನೆಗಡಿಯೇ ಅಥವಾ ಕೊರೊನಾ ಸೋಂಕೇ ಎಂದು ತಿಳಿದುಕೊಳ್ಳುವುದು ಹೇಗೆ ಎಂಬುದು ಬಹುತೇಕ ಪೋಷಕರಲ್ಲಿರುವ ಗೊಂದಲ. ಏಕೆಂದರೆ ಎರಡರ ಲಕ್ಷಣಗಳೂ ಆರಂಭದಲ್ಲಿ ಬಹುತೇಕ ಒಂದೇ ತರಹ ಇರುತ್ತವೆ.

‘ಮಕ್ಕಳಿಗೆ ನೆಗಡಿ ಬಂದಾಗ ಐದು ದಿನಗಳವರೆಗೆ ಕಾಯುವುದು ಸೂಕ್ತ. ಏಕೆಂದರೆ ಎರಡರ ಲಕ್ಷಣಗಳೂ ಒಂದೇ ತರಹ ಇದ್ದು ತಕ್ಷಣಕ್ಕೆ ಕಂಡು ಹಿಡಿಯುವುದು ಕಷ್ಟ. ಐದು ದಿನಗಳ ನಂತರವೂ ಔಷಧಿಗೆ ಬಗ್ಗದಿದ್ದರೆ ಕೊರೊನಾ ಪರೀಕ್ಷೆ ಮಾಡಿಸಬೇಕಾಗುತ್ತದೆ’ ಎನ್ನುತ್ತಾರೆ ಬೆಂಗಳೂರಿನ ಮಕ್ಕಳ ತಜ್ಞ ಡಾ. ಎಂ.ಡಿ.ಸೂರ್ಯಕಾಂತ.

ಮಕ್ಕಳು ಕೊರೊನಾ ವೈರಸ್‌ಗೆ ಎಕ್ಸ್‌ಪೋಸ್‌ ಆಗಿದ್ದಾರೆಯೇ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅಂದರೆ ಜನ ಸೇರುವ ಸ್ಥಳಗಳಾದ ಮದುವೆ, ಮಾರುಕಟ್ಟೆ ಮೊದಲಾದ ಕಡೆ ಮಕ್ಕಳನ್ನು ಕರೆದುಕೊಂಡು ಹೋಗಿದ್ದರೆ ಸೂಕ್ತ ಪರೀಕ್ಷೆ ಮಾಡಿಸಿ ನೆಗೆಟಿವ್‌ ಬಂದ ನಂತರ ನಿರಾಳರಾಗಬಹುದು. ಇಲ್ಲದಿದ್ದರೆ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ.

ಈ ವರ್ಷದ ಚಳಿಗಾಲ ಎಂದಿನಂತಲ್ಲ. ಅಂದರೆ ಮಾಮೂಲು ಚಳಿ– ಜ್ವರದ ಜೊತೆ ಕೋವಿಡ್‌–19 ಕೂಡ ಇದೆ. ಹೀಗಾಗಿ ಮಕ್ಕಳಿಗೆ ಜ್ವರದ ಲಸಿಕೆ ಕೊಡಿಸಿದರೆ ಆಸ್ಪತ್ರೆಗೆ ಹೋಗುವುದನ್ನು ತಪ್ಪಿಸಬಹುದು.

ಮಕ್ಕಳಲ್ಲಿ ಕೋವಿಡ್‌–19 ಸಾಮಾನ್ಯ ಲಕ್ಷಣಗಳೆಂದರೆ ಕೆಮ್ಮು ಮತ್ತು ಜ್ವರ ಇರಬಹುದು. ಹಾಗೆಯೇ ಜ್ವರ, ಭೇದಿ ಅಥವಾ ಕಫದ ಲಕ್ಷಣಗಳು ತಲೆದೋರಬಹುದು. ತಲೆನೋವು, ಉಸಿರಾಟದ ತೊಂದರೆ ಕೂಡ ಕಾಣಿಸಿಕೊಳ್ಳಬಹುದು. ಆದರೆ ಇತರ ಜ್ವರ ಬಂದಾಗಲೂ ಕೆಲವು ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವರು ಲಕ್ಷಣರಹಿತರಾಗಿರುತ್ತಾರೆ.

ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಹೊರಗೆಲ್ಲೂ ಕರೆದುಕೊಂಡು ಹೋಗದೆ ಲಕ್ಷ್ಯ ವಹಿಸಬೇಕು. ಮಗುವಿಗೆ ಜ್ವರ ಬಂದರೆ ಮನೆಯಿಂದ ಹೊರಗಡೆ ಆಡಲು ಕಳಿಸಬೇಡಿ. ಕನಿಷ್ಠ ಒಂದು ದಿನ ನೋಡಿ. ಜ್ವರ ಕಡಿಮೆಯಾಗದಿದ್ದರೆ ಮುಂದಿನ ತಪಾಸಣೆ ನಡೆಸಬಹುದು.

ಇನ್ನು ಮಕ್ಕಳಿಗೆ ಜ್ವರದ ಲಸಿಕೆ ಹಾಕಿಸಬೇಕೆ ಎಂಬುದು ಹಲವು ಪೋಷಕರ ಪ್ರಶ್ನೆ. ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ, ಬೇರೆ ಕಾಯಿಲೆಗಳಿದ್ದರೆ ಫ್ಲು ಲಸಿಕೆ ಹಾಕಿಸಬಹುದು’ ಎನ್ನುತ್ತಾರೆ ಡಾ.ಸೂರ್ಯಕಾಂತ.

ಸಾಮಾನ್ಯವಾಗಿ ಎಚ್‌1ಎನ್‌1 ಮತ್ತು ಇನ್‌ಫ್ಲುಯೆಂಜಾ (ಕಾಮನ್‌ ಫ್ಲು)ಗೆ ಈ ಲಸಿಕೆಯನ್ನು ಹಾಕುತ್ತಾರೆ. ಮಕ್ಕಳಿಗೆ ವರ್ಷಕ್ಕೊಮ್ಮೆ ಇದನ್ನು ಹಾಕಿಸಬಹುದು. ಈ ವರ್ಷ ‘ಕ್ವಾಡ್ರಿ ಫ್ಲು’ ಎಂಬ ಲಸಿಕೆ ಬಂದಿದ್ದು, ಇದು ನಾಲ್ಕು ಬಗೆಯ ವೈರಸ್‌ಗಳಿಂದ ರಕ್ಷಣೆ ನೀಡುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು