ಶುಕ್ರವಾರ, ಆಗಸ್ಟ್ 19, 2022
27 °C

ಲಸಿಕೆ ಬಂದರೂ ಇರಲಿ ಎಚ್ಚರ!

ಡಾ. ಕಿರಣ ಪೇಟಕರ Updated:

ಅಕ್ಷರ ಗಾತ್ರ : | |

ಕೋವಿಡ್ ಲಸಿಕೆ ಬಂದಾಯ್ತು. ಇನ್ನೇನು ಸಾಮಾಜಿಕ ಅಂತರವಾಗಲೀ ಮುಖಗವುಸಾಗಲೀ ಅವಶ್ಯವಿಲ್ಲವೆಂದು ಅಸಡ್ಡೆ ಮಾಡುವವರು ನೀವಾಗಿದ್ದರೆ, ಕೊಂಚ ತಾಳಿ. ‘ಲಸಿಕೆಯು ಕೋವಿಡ್ ವಿರುದ್ಧದ ನಮ್ಮ ಹೋರಾಟದ ಒಂದು ಪೂರಕ ಸಾಧನವೇ ಹೊರತು ಅದೊಂದರಿಂದಲೇ ಮಹಾಮಾರಿಯನ್ನು ಮುಗಿಸಲು ಸಾಧ್ಯವಿಲ್ಲ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರಾದ ಟೆಡ್ರೋಸ್ ಅವರೇ ಎಚ್ಚರಿಸಿದ್ದಾರೆ.

ನಿಜ. ಕಳೆದ ಕೆಲ ಶತಮಾನಗಳಲ್ಲಿ ಲಸಿಕೆಗಳು ಮೈಲಿ, ಪೋಲಿಯೊ, ಡಿಪ್ತೀರಿಯಾದಂತಹ ಸುಮಾರು ಸಾಂಕ್ರಾಮಿಕ ರೋಗಗಳನ್ನು ಸಂಪೂರ್ಣವಾಗಿ ಜಗತ್ತಿನಿಂದಲೇ ತೊಡೆದು ಹಾಕಿರುವುದಲ್ಲದೇ ದಡಾರ, ನಾಯಿಕೆಮ್ಮು ಇತ್ಯಾದಿ ರೋಗಗಳ ಪ್ರಮಾಣವನ್ನು ಗಣನೀಯವಾಗಿ ಕಡಿಮೆಯಾಗಿಸಿವೆ. ಆದರೆ ಅದನ್ನು ಸಾಧ್ಯವಾಗಿಸಲು ದಶಕಗಳೇ ಬೇಕಾಯಿತು ಎಂಬುದನ್ನು ಮರೆಯಕೂಡದು. ಇದೀಗ ಅದೇ ತರದ ಕಾರ್ಯವು ತ್ವರಿತಗತಿಯಲ್ಲಿ ನಡೆದು ಹೋಗಿಬಿಡಬಲ್ಲದು ಎಂಬ ನಮ್ಮ ಅಪೇಕ್ಷೆ ಕೇವಲ ಕನಸಿನ ಮಾತು. ಈ ಅಪ್ರಿಯ ಸತ್ಯವನ್ನು ಎಲ್ಲರಿಗೂ ಬೇಗ ಮನಗಾಣಿಸಿದರೇ ಕ್ಷೇಮ.

ಬಿಲಿಯನ್‌ಗಟ್ಟಲೇ ಇರುವ ನಮ್ಮ ದೇಶದ ಜನಸಂಖ್ಯೆಗೆ ತಲಾ ಎರಡು ಚುಚ್ಚುಮದ್ದು ಒದಗಿಸುವಲ್ಲಿನ ಸವಾಲುಗಳನ್ನು ಅವಲೋಕಿಸಿ ನೋಡಿ. ಅಷ್ಟೊಂದು ಲಸಿಕೆಗಳನ್ನು ತಯಾರಿಸುವುದು ಅಥವಾ ಆಮದು ಮಾಡುವುದು, ಶೈತ್ಯಾಗಾರದಲ್ಲಿ ಶೇಖರಿಸುವುದು, ದೇಶದ ಮೂಲೆಮೂಲೆಗಳಿಗೆ ಶೀತವಾಹನಗಳ ಮುಖಾಂತರ ವಿತರಿಸುವುದು ಒಂದು ಮಹತ್ಕಾರ್ಯವೇ ಸರಿ. ನಮ್ಮಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ವ್ಯವಸ್ಥೆಗಳಿಂದಾಗಿ, ಇದೇನೂ ಅಸಾಧ್ಯವಲ್ಲವಾದರೂ, ಸಾಕಷ್ಟು ಸಮಯ ಹಿಡಿಯುವುದರಲ್ಲಿ ಸಂಶಯವಿಲ್ಲ.

ಲಸಿಕೆಗಳನ್ನು ಸೋಂಕಿನ ಅಪಾಯ ಮತ್ತು ಅವಶ್ಯಕತೆಗನುಗುಣವಾಗಿ ವಿವಿಧ ವರ್ಗಗಳಿಗೆ ನಿರ್ದಿಷ್ಟ ಹಂತಗಳಲ್ಲಿ ಒದಗಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಮೊದಲ ಹಂತದಲ್ಲಿ ಆರೋಗ್ಯ ಮತ್ತು ಸಾಮಾಜಿಕ ಕಾರ್ಯಕರ್ತರಿಗೆ, ಎರಡನೇ ಹಂತದಲ್ಲಿ ಗರಿಷ್ಠ ವಯೋಮಾನದವರೂ ಮತ್ತು ಇತರ ಹೆಚ್ಚಿನ ಅಪಾಯದಲ್ಲಿರುವವರಿಗೆ ಲಸಿಕೆ ನೀಡಬೇಕೆಂದು ಸೂಚಿಸಿದೆ. ಈ ಹಂತದ ನಂತರ ಕೊರೊನಾದಿಂದ ಸಾವನ್ನಪ್ಪುವವರ ಸಂಖ್ಯೆ ಕಡಿಮೆಯಾಗಬಲ್ಲುದೇ ಹೊರತು, ರೋಗಸಂಕ್ರಮಣ ಜಾರಿಯಲ್ಲಿರುತ್ತದೆ. ಅಲ್ಲದೇ, ಲಸಿಕೆ ತಯಾರಿಕೆಯಲ್ಲಿ ನೋಂದಾಯಿತ ರಾಷ್ಟ್ರಗಳ ಪೈಕಿ ಪ್ರತಿಯೊಂದು ರಾಷ್ಟ್ರಕ್ಕೆ ಅಲ್ಲಿ ಜನಸಂಖ್ಯೆಯ ಶೇ ಇಪ್ಪತ್ತರಷ್ಟು ಲಸಿಕೆ ಪೂರೈಕೆಯಾಗದ ಹೊರತು ಮತ್ತೊಂದು ದೇಶಕ್ಕೆ ಹೆಚ್ಚಿನ ಲಸಿಕೆ ಪೂರೈಸಲಾಗುವುದಿಲ್ಲವೆಂಬ ನಿಯಮ ಕೂಡ ರೂಪಿಸಿದೆ. ಹೀಗಿರುವಾಗ ನಿಮ್ಮ ಬಳಿ ಲಸಿಕೆ ತಲುಪುವುದು ಯಾವಾಗ ಎಂದು ಅಂದಾಜಿಸುವುದು ಕೊಂಚ ಕಷ್ಟ.

ಇಷ್ಟಾಗಿ, ಲಸಿಕೆಯ ಎಲ್ಲಾ ಡೋಸ್ ಪಡೆದ ನಂತರವೂ ರೋಗನಿರೋಧಕತೆ ಬರಲು ವಾರಗಟ್ಟಲೇ ಸಮಯ ಬೇಕಾಗುತ್ತದೆ. ಅಲ್ಲದೇ, ಲಸಿಕೆಯ ಮಹತ್ವ ವ್ಯಕ್ತಿಗತ ರೋಗನಿರೋಧಕತೆಗಿಂತ ಸಮಾಜದ ಮೇಲೆ ಹೆಚ್ಚು ಪ್ರಸ್ತುತ. ಲಸಿಕೆಯ ಪರಿಣಾಮ ನೂರಕ್ಕೆ ನೂರು ಪ್ರತಿಶತ ಇಲ್ಲದೇ ಹೋದರೂ, ಗುಂಪುರೋಗನಿರೋಧಕತೆಯಿಂದಾಗಿ ಸಾಂಕ್ರಾಮಿಕ ಸರಪಳಿಯನ್ನು ತುಂಡರಿಸಬಹುದು. ಆದರೆ ಅದಕ್ಕಾಗಿ ಸುಮಾರು ಶೇ 90ಕ್ಕಿಂತ ಜಾಸ್ತಿ ಜನರಿಗೆ ಲಸಿಕೆ ತಲುಪಿರಬೇಕು. ಇದನ್ನು ಸಾಧಿಸಲು ಖಂಡಿತ ಸಮಯ ಬೇಕು. ಈ ನಡುವೆ ಲಸಿಕೆ ವಿರೋಧಿಸುವವರೂ, ಊಹಾಪೋಹಗಳೂ, ಗಾಳಿಸುದ್ದಿಗಳೂ ಲಸಿಕಾ ಕಾರ್ಯಕ್ರಮಗಳ ವೇಗವನ್ನು ನಿಧಾನಗೊಳಿಸುವ ಆತಂಕ ಕೂಡ ಇದೆ.

ಒಟ್ಟಿನಲ್ಲಿ, ಅಭೂತಪೂರ್ವವಾದ ಬೃಹತ್ ಲಸಿಕಾ ಕಾರ್ಯಕ್ರಮವೊಂದು ವಿಶ್ವದಾದ್ಯಂತ ನಡೆಯಲಿದೆ. ಮುಂದಿನ ವರ್ಷಪೂರ್ತಿ ಮತ್ತು ಅದರಾಚೆಗೂ ಅದು ವಿಸ್ತರಿಸಲಿದೆ. ಅದು ದಡ ಕಾಣುವುದು ಮತ್ತು ಯಶಸ್ವಿಯಾಗುವುದು ಯಾವಾಗ ಎಂಬುದನ್ನು ಕಾಲವೇ ನಿರ್ಧರಿಸಲಿದೆ. ಅಲ್ಲಿಯವರೆಗೆ, ಲಸಿಕಾ ಕಾರ್ಯಕ್ರಮದ ಜೊತೆಜೊತೆಗೆ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಯ್ಡುಕೊಳ್ಳುವುದು, ಪರೀಕ್ಷೆ, ರೋಗಿಯ ಆರೈಕೆ, ಸಂಪರ್ಕಿತರನ್ನು ಪ್ರತ್ಯೇಕಿಸುವುದು, ಗುಂಪುಗೂಡದಿರುವುದು, ಸ್ವರಕ್ಷಣೆ, ಸಮಾಜ ರಕ್ಷಣೆ ಇತ್ಯಾದಿ ಕ್ರಮಗಳ ನಮ್ಮೆಲ್ಲರಿಗೆ ಹಾಗೂ ಆಡಳಿತಯಂತ್ರಕ್ಕೆ ಅನಿವಾರ್ಯವಾಗಿದೆ. ಆಶಾವಾದಿಯಾಗಿದ್ದುಕೊಂಡೇ ಜಾಗರೂಕರಾಗಿರುವುದೇ ಸರಿಯಾದ ಮಾರ್ಗ‌.

(ಲೇಖಕರು, ಬೆಂಗಳೂರಿನ ಕಾವೇರಿ ಆಸ್ಪತ್ರೆಯಲ್ಲಿ ವೃತ್ತಿನಿರತ ಪ್ಲಾಸ್ಟಿಕ್ ಸರ್ಜನ್)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು