ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಟಿಲೇಟರ್ ಎಂಬ ಜೀವರಕ್ಷಕ

Last Updated 24 ಮೇ 2020, 7:32 IST
ಅಕ್ಷರ ಗಾತ್ರ

ಕೋವಿಡ್‌–19 ಪಿಡುಗಿನ ಭಯ ವ್ಯಾಪಿಸಿದಾಗಿಂದ, ಪ್ರತಿಯೊಬ್ಬ ಶ್ರೀಸಾಮಾನ್ಯನಿಗೂ ವೈದ್ಯವಿಜ್ಞಾನದ ಶಸ್ತ್ರಾಗಾರದ ವೆಂಟಿಲೇಟರ್
ಎಂಬ ಅಸ್ತ್ರದ ಪರಿಚಯ ಆಗತೊಡಗಿದೆ. ಆದರೆ, ಸರಿ ಮಾಹಿತಿಯ ಜೊತೆಗೆ ಸಾಕಷ್ಟು ತಪ್ಪು ಗ್ರಹಿಕೆಗಳೂ ಜನರಲ್ಲಿ ಮನೆಮಾಡಿವೆ.

ವೆಂಟಿಲೇಟರ್‌ಗೆ ಕೃತಕ ಶ್ವಾಸಯಂತ್ರ ಅನ್ನಬಹುದು. ಮನುಷ್ಯನ ಉಸಿರಾಟ ಕ್ರಿಯೆಯನ್ನು ತಾತ್ಪೂರ್ತಿಕವಾಗಿ ಯಂತ್ರದಿಂದ ಮಾಡಿಸುವ ತಂತ್ರಜ್ಞಾನ. ಉಸಿರಾಟ ಕ್ರಿಯೆಯ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ ತಾನೆ? ಪ್ರಾಣವಾಯುವು ಪುಪ್ಪುಸಗಳೊಳಕ್ಕೆ ಹೊಕ್ಕು, ದೇಹಕ್ಕೆಆಮ್ಲಜನಕ ಒದಗಿಸಿ, ಇಂಗಾಲದ ಡೈಆಕ್ಸೆಡ್ ಪಡೆದು ಹೊರಬಂದು ಗಾಳಿಯಲ್ಲಿ ಲೀನವಾಗುವ ಕ್ರಿಯೆಯೇ ಉಸಿರಾಟ. ನಮ್ಮ ಗಮನಕ್ಕೇ ಬರದೇ ಜೀವನದುದ್ದಕ್ಕೂ ನಡೆದುಕೊಂಡು ಹೋಗುವ ಈ ಕ್ರಿಯೆಯ ಯಾವುದೇ ಹಂತದಲ್ಲಿ ಅಡಚಣೆಯುಂಟಾದರೆ ಜೀವಕ್ಕೇ ಕುತ್ತು. ಆಗ ಕೃತಕ ಉಸಿರಾಟದ ಅವಶ್ಯಕತೆ ಎದುರಾಗುತ್ತದೆ.

ಕೃತಕ ಉಸಿರಾಟದ ಒಂದು ವಿಧ ನಿಮಗೆ ಈಗಾಗಲೇ ಗೊತ್ತಿರಲಿಕ್ಕೂ ಸಾಕು. ಪ್ರಥಮ ಚಿಕಿತ್ಸೆಯಲ್ಲಿ ಬಾಯಿಗೆ ಬಾಯಿಟ್ಟು ಶ್ವಾಸಕೋಶದವರೆಗೆ ಗಾಳಿ ಊದುವುದು. ಅದರಿಂದ ಕೆಲವು ನಿಮಿಷಗಳವರೆಗೆ ಕೃತಕ ಉಸಿರಾಟ ನೀಡಬಹುದು. ಅದೇ, ಆಸ್ಪತ್ರೆಯ ಸನ್ನಿವೇಶದಲ್ಲಾದರೆ, ಬಾಯಿ ಮತ್ತು ಮೂಗನ್ನು ಆವರಿಸುವ ಮಾಸ್ಕ್ ಮುಖಾಂತರ ಗಾಳಿಚೀಲದಿಂದ ಗಾಳಿಯೂದುತ್ತ ಕೃತಕ ಉಸಿರಾಟ ನೀಡಲಾಗುತ್ತದೆ. ಮಾಸ್ಕ್ ಬದಲು, ಶ್ವಾಸನಾಳದೊಳಕ್ಕೆ ನಳಿಕೆ ತೂರಿಸಿದರೆ, ಪುಪ್ಪುಸಗಳವರೆಗಿನ ದಾರಿ ಸುಗಮಗೊಳಿಸಬಹುದಲ್ಲದೇ ಗಾಳಿಯ ಸೋರಿಕೆ ನಿಲ್ಲಿಸಬಹುದಾಗಿರುತ್ತದೆ. ಆದರೆ, ಶ್ವಾಸಕ್ರಿಯೆಗೆ ರೋಗಿಯ ದೇಹ ತುಂಬಾ ಸಮಯದವರೆಗೆ ಅಸಮರ್ಥವಾಗಿದ್ದು ದೀರ್ಘಕಾಲ ಕೃತಕ ಉಸಿರಾಟದ ಅವಶ್ಯಕತೆ ಇದ್ದಲ್ಲಿ, ಉಪಯೋಗಕ್ಕೆ ಬರುವುದೇ ವೆಂಟಿಲೇಟರ್.

ವೆಂಟಿಲೇಟರು ನೇರ ವಿದ್ಯುಚ್ಛಕ್ತಿ ಅಥವಾ ಬ್ಯಾಟರಿಯಿಂದ ನಡೆಯುತ್ತದೆ. ವೈದ್ಯರು ಪೂರ್ವನಿರ್ಧರಿಸಿದ ಪ್ರಮಾಣದಷ್ಟು ಗಾಳಿಯನ್ನು ಎಷ್ಟು ಬೇಕೋ ಅಷ್ಟು ಒತ್ತಡದಲ್ಲಿ ಶ್ವಾಸನಳಿಕೆಯಲ್ಲಿ ಪಂಪ್ ಮಾಡುತ್ತದೆ. ಶ್ವಾಸಕೋಶದಿಂದ ಹೊರಬರುವ ಗಾಳಿಯನ್ನು ಯಂತ್ರದ ಕೊಳವೆಗಳೊಳಗೆ ಹರಿದಾಡಿಸಿ, ಅನಿಲಗಳ ಪ್ರಮಾಣವನ್ನು ಮತ್ತೆ ಸರಿದೂಗಿಸಿ, ನಂತರದ ಉಸಿರನ್ನು ಮತ್ತೆ ಒಳದೂಡುತ್ತದೆ. ಆಮ್ಲಜನಕ, ಸಾರಜನಕ, ಇಂಗಾಲದ ಡೈಆಕ್ಸೆಡ್ ಇತ್ಯಾದಿ ಅನಿಲಗಳನ್ನು ಬೇಕಾದ ಪ್ರಮಾಣದಲ್ಲಿ ಮಿಶ್ರಗೊಳಿಸುವುದಲ್ಲದೇ, ವಾಯುವಿನ ಆರ್ದ್ರತೆ ಮತ್ತು ಗಾಳಿಯ ರಭಸವನ್ನು ಕರಾರುವಾಕ್ಕಾಗಿ ನಿಯಂತ್ರಿಸುವ ಸೌಲಭ್ಯವಿರುತ್ತದೆ.

ವೆಂಟಿಲೇಟರಿನ ಉಪಯೋಗ ಎಲ್ಲೆಲ್ಲಿ, ಯಾವಾಗ?
ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ, ಪೂರ್ಣ ಅರಿವಳಿಕೆ (ಜನರಲ್ ಅನೆಸ್ಥೀಸಿಯಾ) ನೀಡಲಾದ ರೋಗಿಗಳಿಗೆ ವೆಂಟಿಲೇಟರ್‌ನಿಂದ ಕೃತಕ ಉಸಿರಾಟ ನೀಡುವುದು ಸರ್ವೇಸಾಮಾನ್ಯ. ಅದು ಹೊರತುಪಡಿಸಿ, ಶ್ವಾಸಕೋಶದ ರೋಗವೇನಾದರೂ ಉಲ್ಬಣಿಸಿ ನೈಸರ್ಗಿಕ ಶ್ವಾಸಕ್ರಿಯೆ ಅನಿಲ ವಿನಿಮಯದಲ್ಲಿ ಅಸಮರ್ಥವಾದಾಗ ವೆಂಟಿಲೇಟರ್ ಬೇಕಾಗುತ್ತದೆ. ಅದಲ್ಲದೇ, ದೇಹದ ಇನ್ನಾವುದೇ ಅಂಗದಲ್ಲಾಗಲೀ, ರೋಗವೊಂದು ತೀವ್ರ ಸ್ವರೂಪ ಪಡೆದುಕೊಂಡಾಗ ಇತರ ಅಂಗಗಳಿಗೂ ವಿಷಮ ಪರಿಸ್ಥಿತಿ ಪಸರಿಸಬಲ್ಲದು. ಅಂತಹ ಅಂಗಗಳಲ್ಲಿ ಶ್ವಾಸಕೋಶವೇ ಮೊದಲು. ಅಷ್ಟಲ್ಲದೆ, ಮೆದುಳಿಗೆ ಸಂಬಂಧಿಸಿದ ಸಮಸ್ಯೆಯಿದ್ದಾಗ ಅಥವಾ ಆಮ್ಲ-ಪ್ರತ್ಯಾಮ್ಲಗಳ ಏರುಪೇರು ಉಂಟಾದಾಗಲೂ ವೆಂಟಿಲೇಟರ್ ಅಳವಡಿಸಿ ಕೃತಕ ಉಸಿರಾಟ ನೀಡಬೇಕಾಗಿ ಬರುತ್ತದೆ. ರೋಗಿಯ ದೇಹಸ್ಥಿತಿಗೆ ಅನುಗುಣವಾಗಿ, ಸ್ವಲ್ಪ ಮಟ್ಟಿಗೆ ನೈಸರ್ಗಿಕ ಉಸಿರಾಟ ಇದ್ದಲ್ಲಿ, ಅವಶ್ಯವಿದ್ದಷ್ಟು ಆಸರೆ ಮಾತ್ರ ಒದಗಿಸಬಹುದು. ಅಥವಾ ಸಂಪೂರ್ಣ ಉಸಿರಾಟವನ್ನೇ ಅವಶ್ಯವಿರುವಷ್ಟು ಕಾಲ ಯಂತ್ರಕ್ಕೆ ಒಪ್ಪಿಸಬಹುದು. ಏನೇ ಆದರೂ, ಇದೊಂದು ತಾತ್ಕಾಲಿಕ ಪರಿಹಾರವೇ ಹೊರತು, ವೆಂಟಿಲೇಟರ್‌ನ ಮೇಲೇ ಬದುಕಿರಲು ಆಗದು.

ಅರಿವಳಿಕೆ ಸಂದರ್ಭವೊಂದನ್ನು ಹೊರತುಪಡಿಸಿ, ವೆಂಟಿಲೇಟರ್‌ನ ಅವಶ್ಯಕತೆ ಬರುವುದು ತೀವ್ರ ಸನ್ನಿವೇಶಗಳಲ್ಲಿ ಮಾತ್ರ. ಇಷ್ಟಾಗಿ,
ಶ್ವಾಸನಾಳದೊಳಗೆ ನಳಿಕೆ ಹಾಕಿ ವೆಂಟಿಲೇಟರ್‌ಗೆ ಅಳವಡಿಸಿದಾಗ ರೋಗಿಯನ್ನು ಸಂಪೂರ್ಣ ನಿಶ್ಚೇತನ ಸ್ಥಿತಿಯಲ್ಲಿ ಇರಿಸಬೇಕಾಗಿರುತ್ತದೆ. ಅಂತಹ ಕೆಲವು ಸಂದರ್ಭಗಳಲ್ಲಿ ಕೆಲವರು ರೋಗಿ ಸತ್ತೇಹೋಗಿರುವುದಾಗಿ ಭಾವಿಸಿ, ಬದುಕಿಸಲು ಪ್ರಯತ್ನಿಸುತ್ತಿರುವ ವೈದ್ಯರನ್ನೇ ಅನುಮಾನಿಸಿರುವುದೂ ಉಂಟು!

ಹಗ್ಗದ ಮೇಲಿನ ನಡಿಗೆ
ವಿಪರ್ಯಾಸವೆಂದರೆ, ಕೊರೊನಾ ಸಂಕಷ್ಟದ ಆತಂಕದಲ್ಲಿ ಕೆಲವರು ‘ವೆಂಟಿಲೇಟರ್ ಖರೀದಿಸಲು ಎಷ್ಟಾಗುತ್ತೆ?’ ಎಂದು ಪ್ರಶ್ನಿಸಿದ್ದೂ ಇದೆ. ಕೃತಕ ಉಸಿರಾಟವೇನೂ ಸಾಧಾರಣದ ಮಾತಲ್ಲ. ವೆಂಟಿಲೇಟರ್ ಯಂತ್ರವೊಂದು ಇದ್ದ ಮಾತ್ರಕ್ಕೆ ಮುಗಿಯುವುದೂ ಅಲ್ಲ. ಕೃತಕ
ಉಸಿರಾಟವು ಹಗ್ಗದ ಮೇಲಿನ ನಡಿಗೆ. ಸ್ವಲ್ಪ ಸಮತೋಲನ ತಪ್ಪಿದರೂ ಪ್ರಾಣಕ್ಕೇ ಕುತ್ತು. ಯಾವ ರೋಗಿಗೆ, ಯಾವ ಹಂತದಲ್ಲಿ
ವೆಂಟಿಲೇಟರಿನ ಸಹಾಯ ನೀಡಬೇಕು? ಯಾವ ಮೋಡ್‌ನಲ್ಲಿ ಯಾವ ಪ್ರಮಾಣದಲ್ಲಿ ಎಷ್ಟು ಕೃತಕ ಉಸಿರಾಟ ಮಾಡಿಸಬೇಕು ಅಲ್ಲದೇ
ಯಾವಾಗ ಮತ್ತು ಹೇಗೆ ಅದರಿಂದ ಹೊರತರಬೇಕೆಂದು ಅರ್ಥಮಾಡಿಕೊಳ್ಳಲು ದಶಕಗಟ್ಟಲೇ ಹಂತಹಂತದ ತರಬೇತಿ ಬೇಕಾಗುತ್ತದೆ.
ಆದ್ದರಿಂದ ಪರಿಣಿತ ತಜ್ಞವೈದ್ಯರು ಮತ್ತು ಅನುಭವಿ ನರ್ಸಿಂಗ್ ಹಾಗೂ ಬಯೋಮೆಡಿಕಲ್ ತಂತ್ರಜ್ಞರ ತಂಡ ಮಾತ್ರ ಐಸಿಯು ಸೌಲಭ್ಯದ ಆಸರೆಯಲ್ಲಿ ವೆಂಟಿಲೇಟರ್‌ ಅನ್ನು ಯಶಸ್ವಿಯಾಗಿ ಉಪಯೋಗಿಸಬಲ್ಲುದಾಗಿದೆ.

ಕೆಲವೇ ದಶಕಗಳ ಹಿಂದೆ, ವೆಂಟಿಲೇಟರ್‌ಗಳು ಇಷ್ಟೊಂದು ಚಾಲ್ತಿಯಲ್ಲಿ ಇರಲಿಲ್ಲ. ಆಗ ಸಾವೇ ಅನಿವಾರ್ಯವಾಗಿದ್ದ ಎಷ್ಟೊಂದು
ರೋಗಗಳಿಗೆ ಈಗ ವೆಂಟಿಲೇಟರಿನಿಂದಾಗಿ ಚಿಕಿತ್ಸೆ ಲಭ್ಯವಿದೆ. ಮುಂದುವರಿದ ದೇಶಗಳಲ್ಲಿ ಈ ವಿಜ್ಞಾನವು ಮೊದಲಿನಿಂದಲೇ
ಜನಸಾಮಾನ್ಯರಿಗೆ ಸಾಕಷ್ಟು ಪರಿಚಿತವಿದ್ದು, ವ್ಯಾಪಕವಾಗಿ ಲಭ್ಯವಿದೆ. ಆದರೆ, ಭಾರತದಲ್ಲಿ ಬಡತನದಿಂದಾಗಿಯೋ, ಅಜ್ಞಾನದಿಂದಾಗಿಯೋ ಅಥವಾ ಆಧುನಿಕ ವೈದ್ಯವಿಜ್ಞಾನದೆಡೆಗಿನ ಅಪನಂಬಿಕೆಯಿಂದಾಗಿಯೋ, ವೆಂಟಿಲೇಟರ್‌ಗಳ ಉಪಯೋಗ ಕಡಿಮೆಯೇ. ಪ್ರತಿ ಲಕ್ಷ ಜನಸಂಖ್ಯೆಗೆ ಲಭ್ಯವಿರುವ ವೆಂಟಿಲೇಟರ್‌ಗಳ ಸಂಖ್ಯೆ ಅಮೆರಿಕದಲ್ಲಿ 19 ಮತ್ತು ರಷ್ಯಾದಲ್ಲಿ 27. ಭಾರತದಲ್ಲಿ
ಕೇವಲ ಮೂರು!

(ಲೇಖಕರು ಬೆಂಗಳೂರಿನಲ್ಲಿ ಸಿಟಿಯಲ್ಲಿ ಪ್ಲಾಸ್ಟಿಕ್ ಸರ್ಜನ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT