ಶನಿವಾರ, ಅಕ್ಟೋಬರ್ 16, 2021
22 °C

ಸೌಂದರ್ಯ: ಚಳಿಗಾಲದ ಚರ್ಮ ಸಮಸ್ಯೆಗೆ ವಿಟಮಿನ್‌ ಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂದೆ ಬರುವ ಚಳಿಗಾಲಕ್ಕೆ ನಾವು ತಯಾರಾಗಬೇಕಿದೆ. ಚಳಿಗಾಲ ಎಂದಾಕ್ಷಣ ಮೊದಲು ನಮ್ಮ ನೆನಪಿಗೆ ಬರುವುದು ಒಣಗಿದ ಚರ್ಮ. ಅದರ ಜೊತೆಗೆ ಬರುವ ತುರಿಕೆ, ಅದರಿಂದ ಪುಡಿಪುಡಿಯಾಗಿ ಉದುರುವ ಒಣಚರ್ಮ. ಈ ರೀತಿ ಆಗುವುದು ತುಸು ಮಟ್ಟಿಗೆ ಮುಜುಗರವೇ ಸರಿ. ಸೂರ್ಯ ಬಿಸಿಲಿಗೆ ತೆರೆದುಕೊಂಡಾಗ ಚರ್ಮ ಹಾಳಾಗುವುದು. ಒಂದೊಂದು ಕಾಲಕ್ಕೆ ಒಂದೊಂದು ರೀತಿಯ ಚರ್ಮದ ಸಮಸ್ಯೆ. ಇದಕ್ಕೆಲ್ಲಾ ಪರಿಹಾರ ‘ವಿಟಮಿನ್‌ ಸಿ’ ಎನ್ನುವುದು ತಜ್ಞರ ಅಭಿಪ್ರಾಯ.

ವಿಟಮಿನ್‌ ಸಿ ನಮ್ಮ ಚರ್ಮದ ಅಂದವನ್ನು, ಕಾಂತಿಯನ್ನು ಹೆಚ್ಚಿಸುವಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಚರ್ಮದ ಕೋಶಗಳ ಬಲವರ್ಧನೆಯಲ್ಲೂ ಇದರ ಪಾತ್ರ ಪ್ರಮುಖವಾದುದು. ಹವಾಗುಣದಿಂದ ಬರುವ ಚರ್ಮದ ಎಲ್ಲಾ ಸಮಸ್ಯೆಗಳಿಗೂ ವಿಟಮಿನ್‌ ಸಿ ಉತ್ತಮ ಮದ್ದಾಗಿದೆ.

ಹಾಗಾದರೆ, ವಿಟಮಿನ್‌ ಸಿ ನಮ್ಮ ಚರ್ಮದ ಆರೋಗ್ಯಕ್ಕೆ ಹೇಗೆ ಉತ್ತಮವಾಗಿದೆ, ಬನ್ನಿ ನೋಡೋಣ:

ಹೊರ ವಾತಾವರಣದಿಂದ ಉಂಟಾಗುವ ಹಲವು ಚರ್ಮ ಸಂಬಂಧಿ ಸಮಸ್ಯೆಗಳಿಗೆ ಇದು ರಾಮಬಾಣ. ಚರ್ಮಕ್ಕೆ ನೇರವಾಗಿ ಬೀಳುವ ಅತಿ ನೇರಳೆಯಂಥ ಕಿರಣಗಳಿಂದ ವಿಟಮಿನ್‌ ಸಿ ನಮ್ಮ ಚರ್ಮವನ್ನು ಕಾಪಾಡುತ್ತದೆ. ಮೊದಲೇ ಹೇಳಿದ ಹಾಗೆ ವಿಟಮಿನ್‌ ಸಿ, ಚರ್ಮದ ಕೋಶಗಳ ಬಲವನ್ನು ಹೆಚ್ಚಿಸುವ ಕಾರಣದಿಂದ ಹೊರಗಿನ ಇಂಥ ಕಿರಣಗಳಿಂದ ಚರ್ಮವನ್ನು ಕಾಪಾಡುತ್ತದೆ.

* ಚರ್ಮ ಒಡೆಯುವ ಸಮಸ್ಯೆಗೆ ಮತ್ತು ಎಣ್ಣೆ ಚರ್ಮಕ್ಕೆ ವಿಟಮಿನ್‌ ಸಿ ಉತ್ತಮ ಔಷಧವಾಗಿದೆ. ಇದು, ಚರ್ಮದಲ್ಲಿನ ಜಿಡ್ಡಿನ ಅಂಶವನ್ನು ತೆಗೆದುಹಾಕುವುದರ ಜೊತೆಗೆ, ಚರ್ಮವನ್ನು ನುಣುಪುಗೊಳಿಸುತ್ತದೆ. ಚರ್ಮದಿಂದ ಉಂಟಾಗುವ ಉರಿಯನ್ನು ಸಹ ಈ ವಿಟಮಿನ್‌ ಸರಿಪಡಿಸುತ್ತದೆ.

* ಚರ್ಮದಲ್ಲಿನ ಕಲೆಗಳನ್ನು ತಡೆಯುವುದರಲ್ಲಿ ವಿಟಮಿನ್‌ ಸಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿರುವ ಟೈರೊಸಿನೇಸ್‌ ಎನ್ನುವ ಅಂಶವು ಈ ಕೆಲಸವನ್ನು ಮಾಡುತ್ತದೆ.

* ಮ್ಯಾಗ್ನೇಷಿಯಂ ಅಸ್ಕೊರೊಬೈಲ್‌ ಫಾಸ್ಪೇಟ್‌ ಎನ್ನುವ ಅಂಶ ವಿಟಮಿನ್‌ ಸಿ ನಲ್ಲಿ ಇರುವುದರಿಂದ, ಇದು ಚರ್ಮ ಒಣಗುವುದನ್ನು ತಡೆಗಟ್ಟುತ್ತದೆ. ಚರ್ಮವು ತೇವವನ್ನು ಹಿಡಿದಿಟ್ಟುಕೊಳ್ಳುವಂತೆ ಇದು ಮಾಡುತ್ತದೆ.

* ಕೊಲಿಜನ್‌ ಎನ್ನುವುದು ಒಂದು ರೀತಿಯ ಪ್ರೊಟೀನ್‌. ಇದು ಚರ್ಮದ ಆರೋಗ್ಯಕ್ಕೆ ತುಂಬಾ ಪೂರಕವಾದ ಪ್ರೊಟೀನ್‌ ಆಗಿದೆ. ವಿಟಮಿನ್‌ ಸಿ ಈ ಪ್ರೊಟೀನ್‌ ಅಂಶವನ್ನು ದೇಹದಲ್ಲಿ ಹೆಚ್ಚಿಸುತ್ತದೆ. ಇದು ಚರ್ಮದ ಎಲ್ಲಾ ರೀತಿಯ ಸಮಸ್ಯೆಯಿಂದ ಪರಿಹಾರ ಒದಗಿಸುತ್ತದೆ.

ಚಳಿಗಾಲದಲ್ಲಿ ವಿಟಮಿನ್‌ ಸಿ ಯುಕ್ತ ಹಣ್ಣು, ತರಕಾರಿಗಳನ್ನು ಹೆಚ್ಚು ಹೆಚ್ಚು ಸೇವಿಸುವುದು ಉತ್ತಮ ರೂಢಿ. ಕಿತ್ತಳೆ, ಪೇರಳೆ ಹಣ್ಣು, ಕಿವಿ ಹಣ್ಣು, ಪಪಾಯ, ಸ್ಟ್ರಾಬೆರಿ, ಕ್ಯಾಪ್ಸಿಕಮ್‌, ನಿಂಬೆಹಣ್ಣುಗಳನ್ನು ನಮ್ಮ ಆಹಾರದಲ್ಲಿ ಹೆಚ್ಚು ಹೆಚ್ಚು ಸೇವಿಸುವುದರಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ವಿಟಮಿನ್‌ ಸಿ ಚರ್ಮದ ಸಮಸ್ಯೆಗಳಿಗೆ ಉತ್ತಮ ಮದ್ದು ಎನ್ನುವುದರಲ್ಲಿ ಅನುಮಾನವೇ ಬೇಡ. ಮೇಲೆ ತಿಳಿಸಿದ ಎಲ್ಲದರ ಬಗ್ಗೆ ಗಮನ ಹರಿಸಲು ಸಾಧ್ಯವಾಗಲಿಲ್ಲ ಎಂದಾದರೆ ಬಿಡಿ, ಸುಮ್ಮನೆ ಅಂಗಡಿಗೆ ಹೋಗಿ ವಿಟಮಿನ್‌ ಸಿ ಇರುವ ಸೀರಂ ಒಂದನ್ನು ಖರೀದಿ ಮಾಡಿ ದೇಹಕ್ಕೆ ಹಚ್ಚಿಕೊಳ್ಳಿ. ಬೇರೆ ಏನನ್ನೂ ಮಾಡುವ ಯೋಚನೆ ಇಲ್ಲ. ಇದು ಚರ್ಮದ ಸಂಪೂರ್ಣ ಆರೋಗ್ಯವನ್ನು ನೋಡಿಕೊಳ್ಳುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು