ಶುಕ್ರವಾರ, ಮಾರ್ಚ್ 5, 2021
29 °C

ಅಂಧತ್ವ ತಡೆಗೆ ಎ ವಿಟಮಿನ್‌

ಡಾ. ಕರವೀರಪ್ರಭು ಕ್ಯಾಲಕೊಂಡ Updated:

ಅಕ್ಷರ ಗಾತ್ರ : | |

ಅತಿ ಸೂಕ್ಷ್ಮವಾದ ಅಂಗ ಕಣ್ಣು. ಕಣ್ಣಿಗೆ ಕೇವಲ ಬಾಹ್ಯ ಉಪಚಾರ ಮಾತ್ರವಲ್ಲ, ಆಂತರಿಕವಾಗಿಯೂ ಪೌಷ್ಟಿಕಾಂಶಗಳ ಅವಶ್ಯಕತೆ ಬಹು ಮುಖ್ಯ. ಈ ಪೌಷ್ಟಿಕಾಂಶಗಳನ್ನು ಆಹಾರದ ಮೂಲಕ ಪಡೆಯುವುದು ಹೇಗೆ?

ಪಂಚೇಂದ್ರಿಯಗಳಲ್ಲಿ ಕಣ್ಣು ಅಗ್ರಮಾನ್ಯ. ವ್ಯಕ್ತಿ ಪಡೆಯುವ ಜ್ಞಾನದಲ್ಲಿ ಪ್ರತಿಶತ 80ರಷ್ಟನ್ನು ಕಣ್ಣುಗಳ ಸಹಾಯದಿಂದ ಪಡೆಯುತ್ತಾನೆ. ವಿಶ್ವದಲ್ಲೇ ಈಗಾಗಲೇ 10– 15 ದಶಲಕ್ಷ ಕುರುಡರಿದ್ದು, ಈ ಶತಮಾನದ ಅಂತ್ಯದ ಸುಮಾರಿಗೆ ಈ ಸಂಖ್ಯೆ ಮೂರು ಪಟ್ಟಾಗುವ ಸಂಭವವಿದೆ. ಭಾರತದಲ್ಲೇ ಹದಿಮೂರರಲ್ಲಿ ಒಬ್ಬ ವ್ಯಕ್ತಿ ಕಣ್ಣಿನ ಬೇನೆಯಿಂದ ಬಳಲುತ್ತಿದ್ದಾನೆ ಎನ್ನುತ್ತದೆ ವರದಿ. ಇದರ ಪ್ರಕಾರ ಈ ಬೇನೆಯಿಂದ ಬಳಲುವ ರೋಗಿಗಳಲ್ಲಿ ಏಳು ಮಂದಿಯಲ್ಲಿ ಒಬ್ಬ ಸಂಪೂರ್ಣ ಕುರುಡ. ಭಾರತದಲ್ಲೇ ಎರಡು ದಶಲಕ್ಷ ಮಕ್ಕಳು ಅಂಧತ್ವದ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಅಂಕಿಸಂಖ್ಯೆಗಳು ಅಂಧತ್ವ ಹಾಗೂ ಅದರ ನಿವಾರಣೆಯ ಮಹತ್ವವನ್ನು ಸಾರಿ ಹೇಳುತ್ತವೆ.

ಎ ಜೀವಸತ್ವದ ಕೊರತೆಯ ಆಹಾರ ಸೇವನೆ, ಕಡಿಮೆ ಆಹಾರ ಸೇವನೆ, ಕರುಳಿನಲ್ಲಿ ಹೀರುವಿಕೆಯ ದೋಷಗಳು, ಹೆಚ್ಚಿನ ಪ್ರಮಾಣದಲ್ಲಿ ವಿಸರ್ಜಿಸಲ್ಪಡುವುದು ಎ ಜೀವಸತ್ವದ ಕೊರತೆ ತಲೆದೋರುವಂತೆ ಮಾಡುತ್ತವೆ. ಮೇಲಿನ ಕಾರಣಗಳಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಈ ಸಮಸ್ಯೆಗೆ ಕಾರಣವಿರಬಹುದು.

ಎ ಜೀವಸತ್ವದ ಕೊರತೆಯಿಂದ ಮಕ್ಕಳಲ್ಲಿ ರೋಗ ಪ್ರತಿರೋಧಕ ಶಕ್ತಿ ಕುಗ್ಗುತ್ತದೆ. ಇದರಿಂದಾಗಿ ಆ ಮಗು ಸೋಂಕು ರೋಗಗಳಿಗೆ ಸುಲಭವಾಗಿ ತುತ್ತಾಗಬಹುದು. ಪೋಷಣೆಯ ಕೊರತೆ ಇರುವ ಮಕ್ಕಳಲ್ಲಿ ಕಣ್ಣುಮಾರಿಯ ಹಾವಳಿ ಶೇ 70ರಷ್ಟು ಇರುತ್ತದೆ. ಸೋಂಕು ರೋಗಗಳಿಂದ ತತ್ತರಿಸುವಾಗ ಎ ಜೀವಸತ್ವದ ಬೇಡಿಕೆ ಹೆಚ್ಚಾಗಿ, ಅದು ಅಕಸ್ಮಾತ್ ಪೂರೈಕೆ ಆಗದಿದ್ದಲ್ಲಿ ಗೊತ್ತಿಲ್ಲದಂತೆ ಎ ಜೀವಸತ್ವ ಕೊರತೆಯ ಲಕ್ಷಣಗಳು ಹೆಚ್ಚಾಗುತ್ತವೆ.

ಕೊರತೆಯ ಲಕ್ಷಣಗಳು

ಕಣ್ಣಿನ ರೆಪ್ಪೆಯು ಸಾಮಾನ್ಯವಾಗಿ ತೇವಾಂಶದಿಂದ ಕೂಡಿರುತ್ತದೆ. ಕಣ್ಣಿನ ರೆಪ್ಪೆಯ ಮಿಸುಕಾಟದಿಂದ ತೆಳುವಾದ ಪೊರೆಯಂತೆ ಅದರ ಮೇಲೆ ದ್ರಾವಣವು ಆವೃತವಾದಂತೆ ಇರುತ್ತದೆ. ಇದು ಕಣ್ಣನ್ನು ಶುದ್ಧವಾಗಿಡಲು ಮತ್ತು ಸೋಂಕಿನಿಂದ ರಕ್ಷಿಸಲು ಅವಶ್ಯಕ. ಆಹಾರದಲ್ಲೇ ಎ ಜೀವಸತ್ವದ ಕೊರತೆ ಇದ್ದಾಗ ಈ ಲಕ್ಷಣಗಳು ಕಾಣಿಸುತ್ತವೆ.

* ಕಣ್ಣಿನ ಆರ್ದ್ರ ಚರ್ಮವು ಮಿತಿ ಮೀರಿ ಒಣಗುತ್ತದೆ.

* ಕಣ್ಣನ್ನು ಸ್ವಲ್ಪಕಾಲ ತೆರೆದುಕೊಂಡಿದ್ದರೆ, ಕಣ್ಣಿನ ಆರ್ದ್ರ ಚರ್ಮವು ಕೂಡಲೇ ಸುಕ್ಕಾಗುತ್ತದೆ.

* ಕಣ್ಣಿನ ಆರ್ದ್ರ ಚರ್ಮ ಹೊಳಪಿನಿಂದ ಮಿಂಚುವುದಿಲ್ಲ, ಕಳೆಗುಂದಿದಂತೆ ಕಾಣುತ್ತದೆ.

* ರೋಗಿಗೆ ಪ್ರಕಾಶಮಾನವಾದ ಬೆಳಕಿನ ಮುಂದೆ ನಿಲ್ಲಲು ಸಾಧ್ಯವಾಗುವುದಿಲ್ಲ.

* ರೋಗಿಗೆ ರಾತ್ರಿ ಕಾಲದಲ್ಲಿ ಕಣ್ಣು ಕಾಣಿಸುವುದಿಲ್ಲ.

* ಕಣ್ಣುಗುಡ್ಡೆಯ ಮೇಲೆ ಬಿಳಿಯ ಬೂದು ಬಣ್ಣದ ತ್ರಿಕೋನಾಕಾರದ ಪೊರೆ ಕಂಡುಬರುತ್ತದೆ.

ಎ ಜೀವಸತ್ವದ ಅಭಾವದಿಂದ ಬರುವ ಕಣ್ಣುಮಾರಿ ರೋಗ ವಿವಿಧ ಹಂತಗಳಲ್ಲಿ ಬರುತ್ತದೆ.

ಪ್ರಾಥಮಿಕ ಹಂತ

* ಕಾರ್ನಿಯಾ ಒಣಗುವಿಕೆ

* ಚುಕ್ಕೆಗಳು

* ಕಣ್ಣಿನ ಪಾರದರ್ಶಕ ಪಟಲದ ಒಣಗುವಿಕೆ

* ಕಣ್ಣಿನ ಪಾರದರ್ಶಕ ಪಟಲದ ಗಾಯ ಮತ್ತು ಒಣಗುವಿಕೆ

* ಕಣ್ಣುಮಾರಿ

ದ್ವಿತೀಯ ಹಂತ

* ಇರುಳುಗಣ್ಣು

* ಒಳಗಣ್ಣು

ಎ ಜೀವಸತ್ವದ ಕೊರತೆಯಿಂದ ಚರ್ಮದಲ್ಲಿ ಕೂಡ ಬದಲಾವಣೆಗಳಾಗುತ್ತವೆ. ಕೆಲವು ಸಲ ಚರ್ಮದ ಬಣ್ಣ ಬಿಳಿಮಿಶ್ರಿತ ಹಳದಿಯಾಗಬಹುದು. ಅಲ್ಲದೆ, ಒಣಗಿದಂತಾಗಿ ಪೊರೆ ಬಿಟ್ಟಂತೆ ಆಗಬಹುದು. ಚರ್ಮದ ಒಣಗುವಿಕೆ, ಕಡಿತದ ಸಣ್ಣ ಸಣ್ಣ ಗುಳ್ಳೆಗಳು ಏಳುವುದು ಕಂಡುಬರಬಹುದು. ಕೂದಲು ಬಿರುಸಾಗಿ ಕಳೆಗುಂದಿ ಉದುರಿಹೋಗಬಹುದು. ಬಾಯಿ ಒಣಗಿದಂತಾಗುತ್ತದೆ. ದ್ವನಿಯಲ್ಲಿ ಬದಲಾವಣೆ ಕಾಣಿಸಬಹುದು. 

ಪ್ರತಿಬಂಧಕೋಪಾಯ

ನಿಮ್ಮ ಅಲಕ್ಷ್ಯದಿಂದ ನಿಮ್ಮ ಮಗು ಜೀವನ ಪರ್ಯಂತ ಅಂಧವಾಗುವುದು ಬೇಡ. ನಿಮ್ಮ ಮಗುವಿನ ಸರಿಯಾದ, ಸಮಯೋಚಿತ ಪಾಲನೆ–ಪೋಷಣೆ ಹಾಗೂ ತಾಯಿಗೆ ಪೌಷ್ಟಿಕ ಆಹಾರವನ್ನು ಒದಗಿಸಿಕೊಟ್ಟರೆ ಸಾಕು. ಮಹಿಳೆ ಗರ್ಭಿಣಿಯಾದಾಗ ಆಹಾರದಲ್ಲಿ ಈಗಾಗಲೇ ಹೇಳಿದ ಪದಾರ್ಥಗಳನ್ನು ಹೆಚ್ಚಿಗೆ ಬಳಸಬೇಕಲ್ಲದೆ ವಿಶೇಷವಾಗಿ ಹಾಲು, ತುಪ್ಪ, ಹಣ್ಣು ಹಂಪಲು, ಹಸಿರು ತೊಪ್ಪಲು ಪಲ್ಲೆ, ಕೋಳಿಯ ತತ್ತಿ, ಬೆಣ್ಣೆ, ವಿಶೇಷವಾಗಿ ಗಜ್ಜರಿಯನ್ನು ಹೆಚ್ಚಿಗೆ ಬಳಸಬೇಕು.

ಜೀವಸತ್ವಗಳು ಸಾಕಷ್ಟು ಪ್ರಮಾಣದಲ್ಲಿ ಸಮತೋಲನದಲ್ಲಿರುವಂತೆ ನೋಡಿಕೊಳ್ಳಬೇಕು. ಎ ಜೀವಸತ್ವವನ್ನು ಹನಿಗಳ ರೂಪದಲ್ಲಿ ಮಗುವಿಗೆ ಕೊಡಿಸಬೇಕು. ಮಗುವಿಗೆ 9 ತಿಂಗಳು ತುಂಬಿದ ಮೇಲೆ ದಡಾರ ಲಸಿಕೆಯ ಜೊತೆಗೆ ಒಮ್ಮೆ, ನಂತರ ಪ್ರತಿ ಆರು ತಿಂಗಳಿಗೊಂದು ಬಾರಿಯಂತೆ ಮಗು ಐದು ವರ್ಷದ್ದಾಗುವವರೆಗೆ (ಒಟ್ಟು 9 ಸಲ) ಕೊಡಿಸಿದರೆ ಎ ಜೀವಸತ್ವದಿಂದ ತಲೆದೋರುವ ಕುರುಡುತನವನ್ನು ಸಂಪೂರ್ಣ ನಿರ್ಮೂಲನ ಮಾಡಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು