ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆಯುತ್ತ.. ನಿಸರ್ಗದ ಬೆರಗನ್ನು ನೋಡುತ್ತ...

Last Updated 23 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಕೋವಿಡ್‌–19ನಿಂದಾಗಿ ಬಹುತೇಕರ ಮಾನಸಿಕ ಆರೋಗ್ಯ ಏರುಪೇರಾಗಿದ್ದು ಗೊತ್ತೇ ಇದೆ. ಇದನ್ನು ಸರಿಪಡಿಸಲು ಹತ್ತಾರು ಮಾರ್ಗಗಳನ್ನು ಹುಡುಕುವ ಯತ್ನ ನಡೆದಿದೆ. ಅದರಲ್ಲೊಂದು ‘ನಡಿಗೆಯ ಜೊತೆ ವೀಕ್ಷಣೆ’.

ಮುಂಜಾವಿನ ಅಥವಾ ಸಾಯಂಕಾಲದ ನಡಿಗೆ ಅಭ್ಯಾಸ ಮಾಡಿಕೊಂಡಿದ್ದೀರಾ? ಹಾಗಿದ್ದರೆ ಈ ಅಭ್ಯಾಸ ಹಲವರಲ್ಲಿ ಯಾಂತ್ರಿಕವಾಗಿ ಬದಲಾಗುವ ಸಾಧ್ಯತೆಯೇ ಹೆಚ್ಚು. ಕುಟುಂಬದ ಸಮಸ್ಯೆಯೋ, ಕೆಲಸದ ಒತ್ತಡವೋ ಅಥವಾ ಈಗಂತೂ ಕೋವಿಡ್‌ ತಂದಿತ್ತ ಸಮಸ್ಯೆಗಳ ಬಗ್ಗೆಯೋ ಯೋಚಿಸುತ್ತ ನಡೆದುಕೊಂಡು ಹೋದರೆ ನಿಮಗೆ ದೈಹಿಕವಾಗಿ ವ್ಯಾಯಾಮ ಸಿಗಬಹುದು ಅಷ್ಟೆ. ಹಾಗೆ ನಡೆದುಕೊಂಡು ಹೋಗುವಾಗ ನಿಮ್ಮ ಸುತ್ತಲಿನ ಪ್ರಕೃತಿಯನ್ನು, ಆಗುಹೋಗುಗಳನ್ನು, ಸಣ್ಣಪುಟ್ಟ ಬೆರಗನ್ನು, ಬೆಡಗನ್ನು ಗಮನಿಸದೆ ಇವತ್ತಿನ ಒಂದು ತಾಸೋ, ಅರ್ಧ ತಾಸೋ ವಾಕಿಂಗ್‌ ಮುಗಿಯಿತು.. ಇನ್ನೇನಿದ್ದರೂ ನಾಳೆ ಎಂದುಕೊಂಡರೆ ಮನಸ್ಸಿನ ದುಗುಡ ಹಾಗೆಯೇ ಪಟ್ಟಾಗಿ ಕುಳಿತುಬಿಡುತ್ತದೆ. ಅದರ ಬದಲು ಎಲ್ಲವನ್ನೂ ವೀಕ್ಷಿಸುತ್ತ, ಬೆರಗುಪಡುತ್ತ, ಆ ಬೆರಗಿನ ಸುಖವನ್ನು ಅನುಭವಿಸುತ್ತ ಸಾಗಿದರೆ ಇದು ಮಾನಸಿಕ ಆರೋಗ್ಯ ಸುಧಾರಣೆಗೆ ಒತ್ತು ನೀಡುತ್ತದೆ. ಸರಳವಾಗಿ ಹೇಳುವುದಾದರೆ ಇದು ‘ವಾಕಿಂಗ್‌ ಮತ್ತು ವಾಚಿಂಗ್‌’.

ಬೆರಗು ಮೂಡಿಸುವ ಉಲ್ಲಾಸ

ಈ ಕುರಿತು ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ನಡೆಸಿದ ಅಧ್ಯಯನವೊಂದರ ಪ್ರಕಾರ, ನಡೆದುಕೊಂಡು ಹೋಗುವಾಗ ಸುತ್ತಲಿನ ವಸ್ತುಗಳು, ಗಿಡಮರಗಳು, ಅಲ್ಲಿ ನಡೆಯುವ ಸಣ್ಣಪುಟ್ಟ ಘಟನೆಗಳತ್ತ ಕಣ್ಣು ಹಾಯಿಸಿದರೆ ಮನಸ್ಸಿನಲ್ಲಿ ಬೆರಗು ಮೂಡಿ ಪ್ರಫುಲ್ಲವಾಗುತ್ತದೆ: ಈ ಸಂತಸ ಕ್ರಮೇಣ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆಗಳನ್ನು ತುಂಬುತ್ತದೆ. ಅದೇನೇ ಇದ್ದರೂ ಇಂತಹ ನಡಿಗೆಯ ನಂತರ ಅನುಭವಿಸುವ ಉಲ್ಲಾಸವಿದೆಯಲ್ಲ, ಅದು ಖಂಡಿತ ನಮ್ಮಲ್ಲಿನ ಆತಂಕವನ್ನು ಕಡಿಮೆ ಮಾಡಬಲ್ಲದು.

ಈ ಬೆರಗು ಮೂಡಿಸುವ ಭಾವನೆಯೇ ವಿಶೇಷವಾದದ್ದು. ಉದಾಹರಣೆಗೆ ಪಾರ್ಕ್‌ನಲ್ಲಿ ಏನನ್ನೋ ಯೋಚಿಸುತ್ತ ವೇಗದ ನಡಿಗೆಯಲ್ಲಿ ನಿರತರಾದಾಗ, ಆಕಸ್ಮಿಕವಾಗಿ ಒಂದು ಚೆಂದದ ಪಕ್ಷಿ ನಿಮ್ಮ ಕಣ್ಣಿಗೆ ಬೀಳುತ್ತದೆ ಎಂದುಕೊಳ್ಳಿ. ಆಗ ಮನಸ್ಸಿನ ತುಂಬ ನವಿರಾದ ಭಾವನೆಗಳು ಮೂಡಿ ಪುಳಕ ಉಂಟಾಗುತ್ತದೆ. ಆ ಹಕ್ಕಿ ಕಣ್ಣಿಗೆ ಬೀಳದಿದ್ದರೂ ಉಲಿಯುವ ಇಂಚರ ಕೂಡ ಮನದಲ್ಲಿ ಸಂತಸದ ಅಲೆಗಳನ್ನು ಎಬ್ಬಿಸುತ್ತದೆ. ಇಷ್ಟು ಚೆಂದದ ಕೂಗಿನ ಹಕ್ಕಿ ಯಾವುದಿರಬಹುದು ಎಂದು ಮನಸ್ಸು ಜಂಜಾಟದ ಯೋಚನೆಯಿಂದ ಅತ್ತ ಸರಿಯುತ್ತದೆ. ಈ ಬದಲಾವಣೆಗಳನ್ನು ಪ್ರತಿಯೊಬ್ಬರೂ ಅನುಭವಿಸಿರುತ್ತೇವೆ. ಆದರೆ ಇದನ್ನು ನಿತ್ಯದ ನಡಿಗೆಯ ಸಂದರ್ಭದಲ್ಲಿ ಅಳವಡಿಸಿಕೊಂಡಿರುವುದಿಲ್ಲ ಅಷ್ಟೇ.

ವಿಶೇಷವಾಗಿ ಈ ಕೋವಿಡ್‌ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಇಂತಹದೊಂದು ಮಾನಸಿಕ ಹಾಗೂ ಭಾವನಾತ್ಮಕ ಚಿಕಿತ್ಸೆ ಅಗತ್ಯ ಎನ್ನುತ್ತಾರೆ ಆಪ್ತ ಸಮಾಲೋಚಕರು. ‘ಕೋವಿಡ್‌ ಎನ್ನುವುದು ಬಹುತೇಕ ಜನರಲ್ಲಿ ಅದರಲ್ಲೂ ಹಿರಿಯರಲ್ಲಿ ದುಗುಡ, ಆತಂಕ ಹಾಗೂ ಖಿನ್ನತೆಯನ್ನು ಹೆಚ್ಚಿಸಿದೆ. ನಿತ್ಯದ ಬದುಕಿನ ಮೇಲೆ ಪರಿಣಾಮ ಬೀರಿದ್ದು, ಹಿರಿಯರಲ್ಲಿ ಇನ್ನಷ್ಟು ಒಂಟಿತನ, ಏಕತಾನತೆಯನ್ನು ಮೂಡಿಸಿದೆ. ಹೀಗಾಗಿ ಅವರ ಮನಸ್ಸಿನಲ್ಲಿ ಆಶಾಭಾವನೆ ಹುಟ್ಟಿಸುವುದು, ಮಾನಸಿಕ ಆರೋಗ್ಯವನ್ನು ಸುಧಾರಿಸುವುದು ಪ್ರಸ್ತುತ ಕಠಿಣ ಸವಾಲಾಗಿದೆ’ ಎನ್ನುತ್ತಾರೆ ಆಪ್ತ ಸಮಾಲೋಚಕಿ ಪ್ರಮೀಳಾ ಎಸ್‌.

ವೀಕ್ಷಣೆಯಲ್ಲಿ ಮನಸ್ಸು ತೊಡಗಿಸಿ

ಪಾರ್ಕ್‌ ಅಥವಾ ಪಾದಚಾರಿ ಮಾರ್ಗದಲ್ಲಿ ಓಡಾಡುವುದೂ ಈ ಸಂದರ್ಭದಲ್ಲಿ ಅಪಾಯಕಾರಿ ಎಂದುಕೊಂಡರೆ ಮನೆಯ ಟೆರೇಸ್‌ನಲ್ಲಿ ಅಥವಾ ಬಾಲ್ಕನಿಯಲ್ಲೇ ನಾಲ್ಕು ಹೆಜ್ಜೆ ಹಾಕಬಹುದು. ಅಂತಹ ಸಂದರ್ಭದಲ್ಲಿ ಇನ್ನೊಂದು ಕಟ್ಟಡವನ್ನು ಸೂಕ್ಷ್ಮವಾಗಿ ವೀಕ್ಷಿಸುವುದು, ಆಕಾಶದಲ್ಲಿನ ಮೋಡಗಳ ಬಣ್ಣವನ್ನು ಪ್ರಶಂಸಿಸುವುದು ಕೂಡ ಮನಸ್ಸಿನಲ್ಲಿ ಹೆಪ್ಪುಗಟ್ಟಿರುವ ದುಗುಡವನ್ನು ಕರಗಿಸಿಬಿಡುತ್ತದೆ. ಒಟ್ಟಿನಲ್ಲಿ ಹೊರಗಡೆಯ ಜಗತ್ತಿನತ್ತ ಹೆಚ್ಚು ಹೆಚ್ಚು ಮನಸ್ಸನ್ನು ಕೇಂದ್ರೀಕರಿಸುತ್ತ ಹೋದ ಹಾಗೆ ಅಂತರಂಗದ ಆತಂಕ ಕಡಿಮೆಯಾಗುತ್ತ ಹೋಗುವುದು ಸಹಜವೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT