ಶನಿವಾರ, ಡಿಸೆಂಬರ್ 4, 2021
24 °C

ಏನಾದ್ರು ಕೇಳ್ಬೋದು: ಸ್ವಾತಂತ್ರ್ಯವನ್ನು ನಾವೇ ಪಡೆದುಕೊಳ್ಳಬೇಕು..

ನಡಹಳ್ಳಿ ವಸಂತ್‌ Updated:

ಅಕ್ಷರ ಗಾತ್ರ : | |

1. 30ರ ಯುವಕ. ತಂದೆಯವರು ಸಮಾಜದಲ್ಲಿ ಗಣ್ಯವ್ಯಕ್ತಿ. ತಮ್ಮ ಪ್ರತಿಷ್ಠೆಗಾಗಿ ಯಾರನ್ನಾದರೂ ಬಲಿಕೊಡುತ್ತಾರೆ. ನನಗಾಗಲೀ ಮನೆಯವರಿಗಾಗಲೀ ಸ್ವತಂತ್ರವಾಗಿ ಜೀವಿಸುವ ಹಕ್ಕು ಕಸಿದುಕೊಂಡಿರುತ್ತಾರೆ. ಆತ್ಮವಿಶ್ವಾಸ ಕುಂದಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲಾಗುತ್ತಿಲ್ಲ. ಜೀವನ ಜಟಿಲವಾದಂತೆ ಅನಿಸುತ್ತದೆ. ಪರಿಹಾರವೇನು?

ಹೆಸರು, ಊರು ತಿಳಿಸಿಲ್ಲ.

ಸ್ವಾತಂತ್ರ್ಯ ಎಂದರೆ ಯಾರಾದರೂ ಕೊಡುವ ವಸ್ತು ಎಂದುಕೊಂಡಿದ್ದೀರೇನು? ಅದನ್ನು ನಾವೇ ಪಡೆದುಕೊಳ್ಳಬೇಕು. ನಿಮ್ಮೆಲ್ಲರ ಮೌನದ ನಿಷ್ಕ್ರಿಯವಾದ ಸಹನೆಯೇ ತಂದೆಯವರ ದಬ್ಬಾಳಿಕೆಗೆ ಹೆಚ್ಚಿನ ಬಲ ನೀಡುತ್ತಿದೆಯಲ್ಲವೇ? ಎಲ್ಲರೂ ಸೇರಿ ಅಥವಾ ಯಾರ ಬೆಂಬಲವಿಲ್ಲದಿದ್ದರೂ ನೀವಾದರೂ ಸ್ವಾತಂತ್ರ್ಯವನ್ನು ಪಡೆಯಬೇಕಾದರೆ ಪ್ರತಿಭಟಿಸಲೇಬೇಕು. ತಾತ್ಕಾಲಿಕವಾಗಿ ಸಂಬಂಧಗಳು ಹದಗೆಡಬಹುದು. ಈಗ ಇರುವುದು ಮಾಲೀಕ-ಸೇವಕರು ಎನ್ನುವ ರೀತಿಯ ಸಂಬಂಧವಲ್ಲವೇ? ಅದನ್ನು ಉಳಿಸಿಕೊಂಡು ಪಡೆಯುವುದಾದರೂ ಏನನ್ನು? ಸ್ವಾತಂತ್ರ್ಯವನ್ನು ಪಡೆಯಲು ನಿಮ್ಮೊಳಗಿರುವ ಹಿಂಜರಿಕೆಯನ್ನು ಹೇಗೆ ನಿವಾರಿಸಿಕೊಳ್ಳುವುದು ಎಂದು ಮೊದಲು ಯೋಚಿಸಿ. ತಂದೆಯವರನ್ನು ದೂಷಿಸುತ್ತಾ ನಿಮ್ಮ ಬದುಕನ್ನೇಕೆ ಹಾಳುಮಾಡಿಕೊಳ್ಳುತ್ತೀರಿ?

2. ಯುವತಿ. ವಿವಾಹವಾಗಿ 6 ತಿಂಗಳಾಗಿದೆ. ಅತ್ತೆಯವರು ನಾನು ಮಾಡುವ ಪ್ರತಿಯೊಂದು ಕೆಲಸಕ್ಕೂ ತಕರಾರು ಮಾಡುತ್ತಾ ‘ನಾನು ಹೀಗೆ ಮಾಡುತ್ತಿದ್ದೆ’ ಎನ್ನುತ್ತಿರುತ್ತಾರೆ. ಸಣ್ಣಪುಟ್ಟ ಸಹಾಯವನ್ನೂ ಮಾಡುವುದಿಲ್ಲ. ಕೋಪಬಂದರೂ ತೋರಿಸಿಕೊಳ್ಳುವಂತಿಲ್ಲ. ಕಡೆಗಣಿಸಿದರೂ ಕೋಪ ಹೆಚ್ಚಾಗುತ್ತದೆ. ಏನು ಮಾಡಲಿ?

- ಹೆಸರು, ಊರು ತಿಳಿಸಿಲ್ಲ.

ನೀವೇಕೆ ನಿಮ್ಮ ಕೋಪವನ್ನು ಹೊರಹಾಕುತ್ತಿಲ್ಲ? ಇದಕ್ಕೆ ನಿಮ್ಮೊಳಗಿರುವ ಹಿಂಜರಿಕೆಗಳೇನು? ಅದನ್ನು ನಿವಾರಿಸಿಕೊಳ್ಳುವುದು ಹೇಗೆ ಎಂದು ಯೋಚಿಸಿ. ಕೋಪವನ್ನು ಕೂಗಾಡಿಯೇ ಹೊರಹಾಕಬೇಕೆಂದೇನೂ ಇಲ್ಲವಲ್ಲ. ನಿಮ್ಮ ಮೌನ ಅವರ ಅಧಿಕಾರವನ್ನು ಹೆಚ್ಚಿಸುತ್ತದೆಯಲ್ಲವೇ? ಅವರ ವರ್ತನೆಯ ಬಗೆಗಿನ ನಿಮ್ಮ ಬೇಸರವನ್ನು ಸಮಾಧಾನದಿಂದಲೇ ಸ್ಪಷ್ಟ ಮಾತುಗಳಲ್ಲಿ ಹೊರಹಾಕಿ. ಸಹಾಯದ ನಿರೀಕ್ಷೆ ಇದ್ದಾಗ ಕೇಳಿ. ಅದು ಸಿಗದಿದ್ದಾಗ ನಿಮಗೆ ಸಾಧ್ಯವಾಗುವಷ್ಟನ್ನು ಮಾತ್ರ ಮಾಡಿ. ಒಟ್ಟಿನಲ್ಲಿ ನಿಮ್ಮ ವ್ಯಕ್ತಿತ್ವವನ್ನು ನೀವೇ ರಕ್ಷಿಸಿಕೊಳ್ಳದಿದ್ದರೆ ಇನ್ನಾರು ಅದನ್ನು ರಕ್ಷಿಸುತ್ತಾರೆ?

3. ಹಿಂದಿನ ಒಂದು ತಪ್ಪು ನಿರ್ಧಾರದಿಂದ ಇಕ್ಕಟ್ಟಿನಲ್ಲಿದ್ದೇನೆ. ನನ್ನ ಮೂಲಕ ಸ್ನೇಹಿತರು ಮತ್ತು ಪರಿಚಯದವರಿಗೆ ಕಂಪನಿಯೊಂದರಲ್ಲಿ ಹಣ ಹೂಡಿಸಿದೆ. ಈಗ ಅದರ ಮಾಲೀಕ ಮಾಯವಾಗಿದ್ದಾನೆ. ಎಲ್ಲರೂ ನನ್ನ ಹಿಂದೆ ಬಿದ್ದಿದ್ದಾರೆ. ಹೊರಗೆ ಹೋಗುವುದೇ ಕಷ್ಟವಾಗಿದೆ. ಏನು ಮಾಡಬೇಕು ಎಂದು ತಿಳಿಯದೆ ಮನೆಯವರೆಲ್ಲರೂ ಕಷ್ಟದಲ್ಲಿದ್ದೇವೆ. ಸಹಾಯಮಾಡಿ.

- ಹೆಸರು, ಊರು ತಿಳಿಸಿಲ್ಲ.

ನಿಮ್ಮ ತಪ್ಪು ನಿರ್ಧಾರದಿಂದಾಗಿ ಕಾನೂನಿನ ಪ್ರಕಾರ ನಿಮ್ಮ ಮೇಲೆ ಹಣದ ಹೊರೆ ಬರುತ್ತದೆಯೇ ಎನ್ನುವುದನ್ನು ವಕೀಲರ ಮೂಲಕ ತಿಳಿದುಕೊಳ್ಳಿ. ಎಲ್ಲರಿಂದ ತಪ್ಪಿಸಿಕೊಂಡು ಹೋಗುವುದರಿಂದ ಅವರ ಸಿಟ್ಟನ್ನು ಹೆಚ್ಚುಮಾಡುವುದರ ಹೊರತಾಗಿ ನೀವೇನು ಸಾಧಿಸುತ್ತಿದ್ದೀರಿ? ಸುಳ್ಳುಗಳು ನಿಮ್ಮನ್ನು ಎಷ್ಟು ದಿನ ಕಾಪಾಡಬಲ್ಲವು? ಎಲ್ಲರನ್ನು ನೀವಾಗಿಯೇ ಭೇಟಿಮಾಡಿ ಪ್ರಾಮಾಣಿಕವಾಗಿ ಕ್ಷಮೆ ಕೇಳಿ. ಅವರ ನೋವು, ಸಿಟ್ಟುಗಳನ್ನು ಎದುರಿಸಿ. ಎಲ್ಲರೂ ಸೇರಿ ಕಂಪನಿ ಮಾಲಿಕರ ವಿರುದ್ಧ ಕಾನೂನು ಹೋರಾಟ ಮಾಡುವುದು ಹೇಗೆಂದು ಯೋಚಿಸಿ. ಆಗ ಮಾತ್ರ ನೀವು ಮತ್ತೆ ದುಡಿಯುವ ದಾರಿ ಹುಡುಕಿಕೊಳ್ಳಬಹುದಲ್ಲವೇ?

4. ಎಂಬಿಬಿಎಸ್‌ ವಿದ್ಯಾರ್ಥಿ. ಬಾಲ್ಯದಿಂದಲೂ ಹೆಚ್ಚಿನ ಜನಸಂಪರ್ಕ ಇಲ್ಲ. ಅಕ್ಕಪಕ್ಕದವರೊಡನೆಯೂ ಮಾತನಾಡುವುದಿಲ್ಲ. ಎಲ್ಲಾ ಕಡೆಯೂ ಏಕಾಂಗಿಯಾಗಿರುತ್ತೇನೆ. ಮನೆಯವರೆಲ್ಲರೂ ಜನರ ಜೊತೆ ಬೆರೆಯಲು, ವೇದಿಕೆಯಲ್ಲಿ ಮಾತನಾಡಲು ಸಲಹೆ ಕೊಡುತ್ತಾರೆ. ಆದರೆ ನಾನು ಹಿಂಜರಿಯುತ್ತೇನೆ. ನಾನು ಸಾಮಾಜಿಕವಾಗಿ ಮುಕ್ತಮನಸ್ಸಿನವನಲ್ಲ ಎನ್ನಿಸುತ್ತದೆ. ಏನು ಮಾಡಲಿ?

- ಹೆಸರು, ಊರು ತಿಳಿಸಿಲ್ಲ.

ನಮಗೆಲ್ಲರಿಗೂ ಮನುಷ್ಯ ಸಂಪರ್ಕದ ಹಸಿವು ಸಹಜವಾಗಿಯೇ ಇರುತ್ತದೆ. ನಿಮಗೆ ಎಲ್ಲರೊಡನೆ ಸಹಜವಾಗಿ ಬೆರೆಯಲು ಸಾಧ್ಯವಾಗದಿದ್ದರೆ ಅದರ ಮೂಲ ನಿಮ್ಮ ಬಾಲ್ಯದ ಅನುಭವಗಳಲ್ಲಿರುತ್ತದೆ. ಅಂತಹ ಅನುಭವಗಳು ನಿಮ್ಮಲ್ಲಿ ಮೂಡಿಸಿರುವ ಹಿಂಜರಿಕೆಗಳೇನು? ಅವು ನಿಮ್ಮ ಬಗ್ಗೆ ನಿಮ್ಮೊಳಗೇ ಸೃಷ್ಟಿಸಿರುವ ಅಭಿಪ್ರಾಯಗಳೇನು? ಇವೆಲ್ಲವನ್ನು ಪಟ್ಟಿಮಾಡಿಕೊಂಡು ಅವುಗಳ ಸತ್ಯಾಸತ್ಯತೆಗಳನ್ನು ಪರೀಕ್ಷೆ ಮಾಡುತ್ತಾ ಹೋಗಿ. ಅಗತ್ಯವಿದ್ದರೆ ತಜ್ಞ ಮನೋಚಿಕಿತ್ಸಕರ ಸಹಾಯ ಪಡೆಯಿರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು