ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್ ನಂತರ ಮುಂದೇನು?

Last Updated 21 ನವೆಂಬರ್ 2022, 20:30 IST
ಅಕ್ಷರ ಗಾತ್ರ

ಜನರಿಗೆ ಕ್ಯಾನ್ಸರ್‌(ಅರ್ಬುದ ರೋಗ) ಬಗ್ಗೆ ಹೆಚ್ಚಿನ ಹೆದರಿಕೆ. ಅದಕ್ಕೆ ಕಾರಣವೂ ಇದೆ. ಕ್ಯಾನ್ಸರ್‌ ಎಲ್ಲ ರೋಗಗಳಂತಲ್ಲ. ಕೆಲವು ಮಾತ್ರೆ, ಚುಚ್ಚುಮದ್ದುಗಳಿಗೆ ಗುಣವಾಗಿಬಿಡುವಂಥ ಕಾಯಿಲೆಯಲ್ಲ ಇದು. ಗೊತ್ತಾಗದಂತೆ ದೇಹದೊಳಗೆ ಸೇರಿಕೊಂಡು ಹಂತಹಂತವಾಗಿ ಪಸರಿಸುತ್ತ ಒಂದು ಅಂಗವನ್ನು, ಕೊನೆಗೆ ದೇಹವನ್ನೇ ತಿಂದು ಹಾಕುವ ಮಾರಕ ರೋಗ ಇದು.

ಒಂದು ಅಂಕಿ-ಅಂಶದ ಪ್ರಕಾರ ಜಗತ್ತಿನಲ್ಲಿ ಸುಮಾರು ಒಂದು ಕೋಟಿ ಜನರು ಪ್ರತಿವರ್ಷ ಕ್ಯಾನ್ಸರ್ ರೋಗದಿಂದ ಮರಣಹೊಂದುತ್ತಿದ್ದಾರೆ. ಭಾರತದಲ್ಲೂ ಕ್ಯಾನ್ಸರ್ ರೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಕ್ಯಾನ್ಸರ್ ಉಂಟಾಗಲು ಅನೇಕ ಕಾರಣಗಳಿವೆ. ಕೆಲವು ವೈರಸ್ಸುಗಳು, ವಾತಾವರಣ ಮತ್ತು ಆಹಾರದಲ್ಲಿರುವ ‘ಕಾರ್ಸಿನೋಜನ್’ ಎಂದು ಕರೆಯಲ್ಪಡುವ ಕ್ಯಾನ್ಸರ್ ಉಂಟುಮಾಡುವ ಕಣಗಳು ಮತ್ತು ಕೆಲಮಟ್ಟಿಗೆ ಆನುವಂಶೀಯತೆ ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಲ್ಲುವು.

ಇಂದಿನ ಆಧುನಿಕ ಪ್ರಪಂಚದಲ್ಲಿ ಕ್ಯಾನ್ಸರ್ ರೋಗಕ್ಕೆ ಅನೇಕ ವಿಧದ ಚಿಕಿತ್ಸೆಗಳಿವೆ. ಅವುಗಳಲ್ಲಿ ಮೂರು ಪ್ರಮುಖವಾದ ಚಿಕಿತ್ಸೆಗಳೆಂದರೆ ಶಸ್ತ್ರಚಿಕಿತ್ಸೆ, ವಿಕಿರಣಚಿಕಿತ್ಸೆ (ರೇಡಿಯೋಥೆರಪಿ) ಮತ್ತು ಔಷಧಿಚಿಕಿತ್ಸೆ (ಕಿಮೋಥೆರಪಿ)- ಇವು ಕ್ಯಾನ್ಸರ್ ರೋಗವನ್ನು ಭಾಗಶಃ ನಿಯಂತ್ರಿಸುವುದರಿಂದ ಹಿಡಿದು ಸಂಪೂರ್ಣ ನಿರ್ಮೂಲನೆವರೆಗೂ ಪರಿಣಾಮಕಾರಿಯಾಗಿವೆ. ಕೆಲವೊಮ್ಮೆ ಕ್ಯಾನ್ಸರ್ ಮರುಕಳಿಸುವುದೂ ಉಂಟು. ಅಪರೂಪಕ್ಕೆ ಕ್ಯಾನ್ಸರ್ ರೋಗಿಯಲ್ಲಿ ಇನ್ನೊಂದು ಅಂಗದ ಕ್ಯಾನ್ಸರ್ ಕೂಡ ಕಾಣಿಸಿಕೊಳ್ಳುವ ಸಂಭವವಿರುತ್ತದೆ.

ಒಮ್ಮೆ ರೋಗಿಯಲ್ಲಿ ಕ್ಯಾನ್ಸರ್ ಕಾಣಿಸಿಕೊಂಡರೆ ಜೀವನಪೂರ್ತಿ ಅದರ ಮೇಲೆ ನಿಗಾ ಇಡಬೇಕಾಗುತ್ತದೆ. ಇದರರ್ಥ ಜೀವನವಿಡೀ ರೋಗಿಗಳು ಚಿಂತೆಯಲ್ಲಿ ಕೊರಗಬೇಕು ಅಂತ ಅಲ್ಲ! ಅವರ ಜೀವನದಲ್ಲಿ ಕ್ಯಾನ್ಸರ್ ಮರುಕಳಿಸದಂತೆ ನೋಡಿಕೊಳ್ಳುವುದು ಮತ್ತು ಅಕಸ್ಮಾತ್ ಮರುಕಳಿಸಿದರೆ ಆರಂಭಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ಕೊಡಿಸಿ ಅವರು ಮತ್ತೆ ಸಹಜವಾಗಿ ಬದುಕುವಂತೆ ನೋಡಿಕೊಳ್ಳುವುದೇ ಈ ನಿಗಾ ಇಡುವುದರ ಮುಖ್ಯ ಉದ್ದೇಶ. ಆದ್ದರಿಂದ ಕ್ಯಾನ್ಸರ್ ರೋಗಿಗಳು ಚಿಕಿತ್ಸೆಯಿಂದ ಗುಣಮುಖರಾದ ನಂತರ ಯಾವ ರೀತಿ ಮುಂದೆ ಕಾಳಜಿ ವಹಿಸಬೇಕು, ಯಾವ ಚಿಕಿತ್ಸೆಗೂ ಬಗ್ಗದೆ ಕ್ಯಾನ್ಸರ್ ರೋಗ ಉಲ್ಬಣಾವಸ್ಥೆಗೆ ತಲುಪಿದಾಗ ಏನಾಗುತ್ತದೆ ಎನ್ನುವುದನ್ನು ಕೊಂಚ ತಿಳಿದುಕೊಳ್ಳೋಣ.

ಕೆಲವು ಕ್ಯಾನ್ಸರ್ ರೋಗಗಳಿಗೆ ಮೇಲೆ ತಿಳಿಸಿದಂತೆ ಮೂರೂ ವಿಧದ ಚಿಕಿತ್ಸೆಗಳ ಅವಶ್ಯವಿರುತ್ತದೆ. ಅಲ್ಲದೆ ಈ ಚಿಕಿತ್ಸೆಗಳು ಸಂಪೂರ್ಣವಾಗಬೇಕಾದರೆ ಸುಮಾರು 6-9 ತಿಂಗಳು ಸಮಯ ಕೂಡ ಬೇಕಾಗುತ್ತದೆ. ಜೊತೆಗೆ ಚಿಕಿತ್ಸೆಯ ಪಾರ್ಶ್ವಪರಿಣಾಮಗಳಿಂದ ದೇಹ ಕೂಡ ಜರ್ಜರಿತವಾಗಿರುತ್ತದೆ. ಈ ಎಲ್ಲ ಕಾರಣಗಳಿಂದ ರೋಗಿಗಳು ನಿಃಶಕ್ತರಾಗುವುದು ಸಹಜ. ಆದ್ದರಿಂದ ರೋಗಿಯ ಆಹಾರದ ಬಗ್ಗೆ ಹೆಚ್ಚು ಗಮನ ನೀಡುವುದು ಈ ಹಂತದಲ್ಲಿ ಬಹುಮುಖ್ಯ. ಸತ್ವಯುತವಾದ ಪ್ರೊಟೀನ್‌ಯುಕ್ತ ಆಹಾರ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಮಾಂಸಖಂಡಗಳು ಸದೃಢವಾಗಿ ರೋಗಿಯು ಮೊದಲಿನಂತೆ ಸಕ್ರಿಯವಾಗಿ ಓಡಾಡಲು ಸಹಕಾರಿಯಾಗುತ್ತದೆ.

ಆರಂಭದಲ್ಲಿ ರೋಗನಿರೋಧಕಶಕ್ತಿ ನಶಿಸಿರುವುದರಿಂದ ರೋಗಿಯನ್ನು ಹೆಚ್ಚು ಜನಸಂದಣಿಯಲ್ಲಿ ಅಥವಾ ಇನ್ಯಾವುದೇ ಕಾಯಿಲೆ ಇರುವ ವ್ಯಕ್ತಿಗಳ ಸಂಪರ್ಕದಲ್ಲಿ ಇರದಂತೆ ನೋಡಿಕೊಳ್ಳಬೇಕು. ರೋಗಿಯ ಕೋಣೆಯನ್ನು ಮತ್ತು ಬಟ್ಟೆಬರೆಗಳನ್ನು ಶುಚಿಯಾಗಿಟ್ಟು ಯಾವುದೇ ಸೋಂಕು ತಗುಲದಂತೆ ನೋಡಿಕೊಳ್ಳಬೇಕು. ಕಾಲಕಾಲಕ್ಕೆ ವೈದ್ಯರನ್ನು ಸಂಪರ್ಕಿಸಿ ಅವರ ಸೂಚನೆಗಳನ್ನು ಪಾಲಿಸುತ್ತಾ ರೋಗಿಯು ಗುಣಹೊಂದುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಕೆಲವು ವರ್ಷಗಳ ನಂತರ ರೋಗ ಮರುಕಳಿಸುವ ಸಾಧ್ಯತೆಗಳು ಕಡಿಮೆಯಾಗಿರುತ್ತವೆಯಾದರೂ ವರ್ಷಕ್ಕೆ ಒಂದೆರಡು ಬಾರಿ ತಜ್ಞವೈದ್ಯರನ್ನು ಭೇಟಿಮಾಡಿ ರೋಗಿಯ ದೇಹಸ್ಥಿತಿಯ ಬಗ್ಗೆ ಸಮಾಲೋಚಿಸುವುದು ಒಳ್ಳೆಯದು. ಈ ಹಂತದಲ್ಲಿ ಬಹುತೇಕ ರೋಗಿಗಳು ಆರೋಗ್ಯವಂತರಾಗಿ ಸಾಮಾನ್ಯ ಜನರಂತೆ ತಮ್ಮ ಜೀವನವನ್ನು ಸಾಗಿಸುತ್ತಿರುತ್ತಾರೆ. ಆದರೆ ಕೆಲವು ರೋಗಿಗಳು ಇವರಷ್ಟು ಅದೃಷ್ಟಶಾಲಿಗಳಲ್ಲ. ಕೆಲವರ್ಷಗಳ ನಂತರ ಇವರಲ್ಲಿ ಕ್ಯಾನ್ಸರ್ ಕಾಣಿಸದಿದ್ದರೂ ಕ್ಯಾನ್ಸರ್ ಚಿಕಿತ್ಸೆ ಇವರನ್ನು ತುಂಬ ನಿತ್ರಾಣ ಮಾಡಿಬಿಟ್ಟಿರುತ್ತದೆ. ಉದಾಹರಣೆಗೆ, ಗಂಟಲು ಅಥವಾ ಶ್ವಾಸಕೋಶದ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಕೆಲವರು ಉಸಿರಾಟದ ತೊಂದರೆಯಿಂದ ಬಳಲುತ್ತಿರುತ್ತಾರೆ. ಅವರಿಗೆ ಆಮ್ಲಜನಕದ ನಳಿಕೆಯ ಅಥವಾ ಕೃತಕ ಧ್ವನಿಪೆಟ್ಟಿಗೆಯ ಅವಶ್ಯಕತೆ ಇರುತ್ತದೆ. ಅದೇ ರೀತಿ ಬಾಯಿ, ದವಡೆ ಅಥವಾ ಹೊಟ್ಟೆಯಲ್ಲಿನ ಅಂಗಗಳ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರು ಆಹಾರ ಪಚನಕ್ರಿಯೆಯಲ್ಲಿ ತೊಂದರೆ ಅನುಭವಿಸುತ್ತಿರುತ್ತಾರೆ. ಅವರಿಗೆ ಕೊಳವೆಯ ಮೂಲಕ ಆಹಾರ ನೀಡಬೇಕಾಗುತ್ತದೆ. ಮಲವಿಸರ್ಜನೆ ಕೂಡ ಕಷ್ಟವಾಗಿ ‘ಕೊಲೊಸ್ಟೊಮಿ’ (ಹೊಟ್ಟೆಗೆ ಒಂದು ರಂಧ್ರ ಮಾಡಿ ಕರುಳಿನ ಮೂಲಕ ಮಲವಿಸರ್ಜಿಸುವುದು) ಚೀಲವನ್ನೇ ಅವಲಂಬಿಸಬೇಕಾಗುತ್ತದೆ. ಇವರು ಮೊದಲಿನ ಗುಂಪಿನ ರೋಗಿಗಳ ತರಹ ಸ್ವಚ್ಛಂದವಾಗಿ ಓಡಾಡಿಕೊಂಡಿರಲು ಸಾಧ್ಯವಿಲ್ಲದಿದ್ದರೂ ಸೂಕ್ತ ಪೋಷಣೆಯ ಮೂಲಕ ಇವರೂ ಉತ್ತಮ ಜೀವನವನ್ನು ನಡೆಸಬಹುದು.

ಇನ್ನು ಮೂರನೆಯ ಗುಂಪಿನ ರೋಗಿಗಳಲ್ಲಿ ಅಲ್ಪ ಸ್ವಲ್ಪ ಉಳಿದ ಕ್ಯಾನ್ಸರ್, ಮತ್ತೆ ಮರುಕಳಿಸಿ ರೋಗಿಗೆ ನೋವು, ರಕ್ತಸ್ರಾವ, ಉಸಿರಾಟದ ತೊಂದರೆ, ಪಚನಕ್ರಿಯೆ, ಮಲವಿಸರ್ಜನೆಯ ತೊಂದರೆಗಳು ಹೆಚ್ಚಾಗುತ್ತಲೇ ಹೋಗುತ್ತವೆ. ಕೆಲವೊಮ್ಮೆ ರೋಗ ಉಲ್ಬಣಾವಸ್ಥೆ ತಲುಪಿದ ನಂತರವೇ ಪತ್ತೆಯಾಗಿ ಚಿಕಿತ್ಸೆಯ ಎಲ್ಲ ದ್ವಾರಗಳು ಮುಚ್ಚಿಬಿಟ್ಟಿರುತ್ತವೆ. ಇವರ ನರಳಾಟವಂತೂ ಹೇಳತೀರದು. ಇಲ್ಲಿ ಕ್ಯಾನ್ಸರ್ ಚಿಕಿತ್ಸೆಗಿಂತ ಹೆಚ್ಚಾಗಿ ಮೇಲಿನ ತೊಂದರೆಗಳಿಗೇ ಕೊಂಚಮಟ್ಟಿಗಾದರೂ ಚಿಕಿತ್ಸೆ ನೀಡಲು ಪ್ರಯತ್ನಿಸುತ್ತಾರೆ.

ಈ ಎರಡು ಮತ್ತು ಮೂರನೆಯ ಗುಂಪಿನ ರೋಗಿಗಳನ್ನು ನೋಡಿಕೊಳ್ಳಲು ನೋವು ಮತ್ತು ಉಪಶಮನಕಾರಿ ಚಿಕಿತ್ಸಾಘಟಕಗಳಿರುತ್ತವೆ. ಇವು ದೊಡ್ಡ ಆಸ್ಪತ್ರೆಗಳಷ್ಟು ಸೌಲಭ್ಯಗಳನ್ನು ಹೊಂದಿರದಿದ್ದರೂ ನುರಿತ ದಾದಿಯರು, ಸಾಮಾಜಿಕ ಆರೋಗ್ಯಕಾರ್ಯಕರ್ತೆಯರು ಮತ್ತು ನೋವುನಿವಾರಣಾ ತಜ್ಞರ ಸಹಾಯದಿಂದ ರೋಗಿಗಳಿಗೆ ಗುಣಮಟ್ಟದ ಸೇವೆಯನ್ನು ನೀಡುತ್ತವೆ. ಇತರ ಅದೃಷ್ಟಶಾಲಿ ಕ್ಯಾನ್ಸರ್ ರೋಗಿಗಳ ಜೊತೆ ಸಮಾಲೋಚನೆಗಳೂ ಇಲ್ಲಿ ನಡೆಯುತ್ತವೆ. ರೋಗಿಯ ಜೀವನದ ಕಡೆಯ ದಿನಗಳ ಆರೈಕೆ ಮಾಡುವ (End of life care) ವ್ಯವಸ್ಥೆಯೂ ಇಲ್ಲಿರುತ್ತದೆ.

ಆ ಕೊನೆಯ 48 ಘಂಟೆಗಳು!

ರೋಗಿಯು ಪ್ರಾಣ ತ್ಯಜಿಸುವ ಮೊದಲಿನ ಕೆಲವು ಘಂಟೆಗಳ ಅವಧಿಯಲ್ಲಿ ರೋಗಿಯು ಹೆಚ್ಚು ಕಡಿಮೆ ಅರೆಪ್ರಜ್ಞಾವಸ್ಥೆಯಲ್ಲಿರುತ್ತಾನೆ. ಎಲ್ಲ ರೀತಿಯ ಚಿಕಿತ್ಸೆಗಳನ್ನು ನಿಲ್ಲಿಸಲಾಗಿರುತ್ತದೆ. ಆಹಾರಸೇವನೆ ಕೂಡ ಇರುವುದಿಲ್ಲ. ಬಹುತೇಕ ಸಂದರ್ಭಗಳಲ್ಲಿ ಈ ಸಮಯವನ್ನು ಮನೆಯಲ್ಲಿಯೇ ಕಳೆಯಲು ಅನುವು ಮಾಡಿಕೊಟ್ಟಿರುತ್ತಾರೆ. ವೈದ್ಯ ಕೂಡ ಇಲ್ಲಿ ರೋಗಿಯ, ಸಂಬಂಧಿಕರ ಹಿತೈಷಿಯಂತೆ ಸ್ಪಂದಿಸುತ್ತಾನೆ. ರೋಗಿಯ ಸಂಬಂಧಿಕರು ತಮ್ಮ ಪ್ರೀತಿಪಾತ್ರರಿಲ್ಲದೇ ಮುಂದಿನ ದಿನಗಳನ್ನು ಕಳೆಯಲು ಮಾನಸಿಕ ಸಿದ್ಧತೆಗೆ ಅಣಿಯಾಗುವ ಸಮಯ ಇದು. ಸಾವಿನಲ್ಲೂ ಕೂಡ ರೋಗಿಯ ಹಿತಾಸಕ್ತಿಯನ್ನು ಕಾಪಾಡಿ ರೋಗಿಯು ಪ್ರಾಣ ತ್ಯಜಿಸುವಾಗ ನೋವಿ ಲ್ಲದೇ, ನರಳಾಡದಂತೆ ನೋಡಿಕೊಳ್ಳುವುದು ಮತ್ತು ಸಂಬಂಧಿಕರಲ್ಲಿ ಸೇವೆಯ ಸಾರ್ಥಕಭಾವ ಮೂಡಿಸುವುದು ಈ ಅವಧಿಯ ಪ್ರಮುಖ ಉದ್ದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT