ಗುರುವಾರ , ಏಪ್ರಿಲ್ 2, 2020
19 °C

ಉಬ್ಬಸ: ಉದಾಸೀನ ಬೇಡ

ಡಾ. ರಾಘವೇಂದ್ರ ಎನ್. ಚಿಂತಾಮಣಿ Updated:

ಅಕ್ಷರ ಗಾತ್ರ : | |

Prajavani

ಉಬ್ಬಸ ಸಮಸ್ಯೆ ಪ್ರಮುಖವಾಗಿ ನಗರ ವಾಸಿಗಳಲ್ಲಿ ಅಧಿಕ. ಕಲುಷಿತ ವಾತಾವರಣ ಹಾಗೂ ಕಲಬೆರಕೆ ಆಹಾರಗಳಿಂದ ದೂರವಿರುವುದು, ಅಲರ್ಜಿ ಪದಾರ್ಥಗಳಿಗೆ ಒಡ್ಡಿಕೊಳ್ಳದಿರುವುದು ಇದಕ್ಕೆ ತಕ್ಕಮಟ್ಟಿನ ಪರಿಹಾರ ನೀಡಬಹುದು.

ಉಸಿರಾಡುವಾಗ, ಉಸಿರಾಟದ ಮಾರ್ಗದಲ್ಲಿ ಅಡಚಣೆ ಉಂಟಾದರೆ ಅದಕ್ಕೆ ಸಂಬಂಧಿಸಿದ ನಾನಾ ವ್ಯಾಧಿಗಳು ತಲೆದೋರುವುದು ಸಾಮಾನ್ಯ. ಕೆಮ್ಮು, ಸೈನುಸೈಟಿಸ್, ಬಿಕ್ಕಳಿಕೆ, ಉಬ್ಬಸ, ಆಸ್ತಮಾ ಇವು ಉಸಿರಾಟಕ್ಕೆ ತೊಂದರೆ ಉಂಟು ಮಾಡುವ ಪ್ರಮುಖ ಕಾಯಿಲೆಗಳು. ಆಯುರ್ವೇದ ಶಾಸ್ತ್ರ ತಿಳಿಸುವಂತೆ ಕೆಮ್ಮನ್ನು ನಿರ್ಲಕ್ಷಿಸಿದರೆ ಮುಂದೆ ಅದೇ ಉಬ್ಬಸಕ್ಕೆ ಕಾರಣವಾಗಬಹುದು.

ಉಬ್ಬಸ, ದಮ್ಮು, ಗೂರಲು, ಆಸ್ತಮಾ ಇವೆಲ್ಲ ತಮಕ ಶ್ವಾಸರೋಗದ ಪರ್ಯಾಯಗಳು. ತಮ ಎಂದರೆ ಕತ್ತಲು ಎಂದರ್ಥ. ಆಸ್ತಮಾ ಎಂಬ ಗ್ರೀಕ್ ಶಬ್ದದ ಅರ್ಥವೂ ಕತ್ತಲೆಗೆ ದೂಡುವುದು ಎಂದಾಗಿದೆ. ಆಯುರ್ವೇದ ಶಾಸ್ತ್ರದಲ್ಲಿ ಶ್ವಾಸರೋಗಕ್ಕೆ ಐದು ವಿಧದ ವಿವರಣೆ ನೀಡಲಾಗಿದೆ. ಅಲರ್ಜಿಕ್ ಬ್ರಾಂಕೈಟಿಸ್ ಮತ್ತು ಬ್ರಾಂಕಿಯಲ್ ಆಸ್ತಮಾ ಇದು ಅಲೋಪತಿಯ ವಿವರಣೆ. ತಮಕಶ್ವಾಸ, ಊರ್ಧ್ವಶ್ವಾಸ, ಛಿನ್ನಶ್ವಾಸ, ಮಹಾಶ್ವಾಸ ಹಾಗೂ ಕ್ಷುದ್ರಶ್ವಾಸ ಎಂಬುದು ಆಯುರ್ವೇದ ಶಾಸ್ತ್ರದ ವಿವರಣೆ.

ತಮಕಶ್ವಾಸದ ಲಕ್ಷಣಗಳು ಬ್ರಾಂಕೈಟಿಸ್ ಮತ್ತು ಆಸ್ತಮಾ ಸಮಸ್ಯೆಗಳ ಸಂಪೂರ್ಣ ವಿವರಣೆ ನೀಡುತ್ತವೆ. ಅಕ್ಯೂಟ್ ಬ್ರಾಂಕೈಟಿಸ್ ವೈರಸ್‌ನಿಂದ ಶುರುವಾಗುತ್ತದೆ. ಚಿಕಿತ್ಸೆ ಸಿಗಲಿ ಅಥವಾ ಬಿಡಲಿ, ಕೇವಲ ಎರಡು ವಾರಗಳಲ್ಲಿ ವ್ಯಾಧಿಕ್ಷಮತ್ವ(ರೋಗ ನಿರೋಧಕ ಶಕ್ತಿ)ದ ಪ್ರಾಬಲ್ಯದಿಂದ ತನ್ನಿಂದ ತಾನೇ ಸಂಪೂರ್ಣ ಗುಣವಾಗುತ್ತದೆ.

ದೀರ್ಘಕಾಲೀನ (ಕ್ರಾನಿಕ್) ಬ್ರಾಂಕೈಟಿಸ್‌ ಸಮಸ್ಯೆಯು ಬ್ಯಾಕ್ಟೀರಿಯಾ, ವಾತಾವರಣದ ಪ್ರಭಾವ, ಧೂಮಪಾನ, ಆಹಾರ– ವಿಹಾರದಿಂದಾಗಿ ಬಹುಕಾಲ ಬಾಧಿಸುತ್ತದೆ. ಮೂರು ನಾಲ್ಕು ತಿಂಗಳಾದರೂ ಕಡಿಮೆಯಾಗದ ಕೆಮ್ಮನ್ನು ಒಳಗೊಂಡ ಉಬ್ಬಸ ಕೆಲವರಿಗೆ ಅನೇಕ ವರ್ಷಗಳಿಂದ ಕಾಡುತ್ತಿರುತ್ತದೆ.

ಬ್ರಾಂಕೈಟಿಸ್ ಹಾಗೂ ಆಸ್ತಮಾ ಲಕ್ಷಣಗಳು ಬಹುತೇಕ ಒಂದೇ ರೀತಿಯಲ್ಲಿ ಇರುವುದರಿಂದ ಅವುಗಳ ಗುಣಲಕ್ಷಣಗಳು ಹಾಗೂ ಚಿಕಿತ್ಸಾ ವಿಧಾನ ಸಹಜವಾಗಿ ಒಂದೇ ಮಾದರಿಯಲ್ಲಿರುತ್ತವೆ.

ಉಬ್ಬಸಕ್ಕೆ ಕಾರಣಗಳು

ಆಸ್ತಮಾ, ಬ್ರಾಂಕೈಟಿಸ್ ಅಥವಾ ತಮಕಶ್ವಾಸಕ್ಕೆ ಕಾರಣಗಳು ಹಾಗೂ ಅವು ಉಲ್ಬಣಗೊಳ್ಳುವ ಸಮಯ ಬಹುತೇಕ ಒಂದೇ ಆಗಿರುವುದರಿಂದ ಅವುಗಳನ್ನು ಸರಳವಾಗಿ ಇಲ್ಲಿ ವಿವರಿಸಲಾಗಿದೆ.

ಅಶುದ್ಧ ಗಾಳಿ, ಧೂಳು, ಹೊಗೆ, ಕಲುಷಿತ ನೀರು ಹಾಗೂ ಆಹಾರ, ಮರ್ಮಸ್ಥಾನಕ್ಕೆ ಉಂಟಾಗುವ ಪೆಟ್ಟು, ತಂಪು ಪದಾರ್ಥಗಳ ಅಧಿಕ ಸೇವನೆ, ತಂಗಾಳಿ, ಅಜೀರ್ಣ, ಹೊಟ್ಟೆಯುಬ್ಬರ, ಮಲಬದ್ಧತೆ, ಅಧಿಕ ವ್ಯಾಯಾಮ, ಧೂಮಪಾನ, ಶೀತ ವಾತಾವರಣ, ಸದಾ ಹವಾ ನಿಯಂತ್ರಣ ಅಥವಾ ಫ್ಯಾನ್ ಬಳಕೆ, ಹೇಮಂತ ಹಾಗು ಶಿಶಿರ ಋತುವಿನ ಕಾಲ, ಅನುವಂಶೀಯತೆ.. ಹೀಗೆ ಉಬ್ಬಸಕ್ಕೆ ಕಾರಣಗಳು ಹಲವು. ಇವುಗಳಿಗೆ ಪದೇ ಪದೇ ಮೈಯೊಡ್ಡಿದರೆ, ಆಹಾರ– ವಿಹಾರಗಳ ಬಗ್ಗೆ ಗಮನ ಇಲ್ಲದಿದ್ದರೆ ಉಬ್ಬಸ ಉಲ್ಬಣಗೊಳ್ಳುತ್ತದೆ.

ಲಕ್ಷಣಗಳು

ಒಳಗೆ ಸಂಚಿತವಾದ ಕಫವನ್ನು ದೇಹ ಸಹಿಸದೆ ಅದನ್ನು ಹೊರಹಾಕುವಲ್ಲಿ ನಿರತವಾಗುತ್ತದೆ. ಅದೇ ಪದೇ ಪದೇ ಕೆಮ್ಮಲು ಕಾರಣ. ಕೆಮ್ಮಿ ಕೆಮ್ಮಿ ಕಫ ಸ್ವಲ್ಪ ಹೊರ ಬಂದರೆ ಸ್ವಲ್ಪ ಆರಾಮ ಎನಿಸುತ್ತದೆ. ರಾತ್ರಿಯಲ್ಲಿ ಕಫ ಮತ್ತು ಕೆಮ್ಮು ಅಧಿಕಗೊಂಡು ನಿದ್ದೆಗೆ ಅಡಚಣೆಯುಂಟಾಗುತ್ತದೆ. ಎದ್ದು ಕುಳಿತುಕೊಂಡರೆ ಸ್ವಲ್ಪ ಹಿತವೆನಿಸಿದರೂ, ವ್ಯಕ್ತಿಯ ನಿದ್ದೆ ಸಂಪೂರ್ಣ ಏರುಪೇರಾಗುತ್ತದೆ. ಎದೆ ಪಕ್ಕೆಗಳಲ್ಲಿ ನೋವು, ಮೂಗು ಕಟ್ಟಿಕೊಳ್ಳುವುದು, ಕಫಯುಕ್ತ ಹಾಗೂ ಕಫರಹಿತ ಸುದೀರ್ಘ ಕೆಮ್ಮು, ಕಣ್ಣು ಕತ್ತಲೆಗಟ್ಟುವುದು, ಕುತ್ತಿಗೆ ಹಿಸುಕಿದಂಥ ಅನುಭವ, ಎದೆ ಭಾಗದಲ್ಲಿ ಚುಚ್ಚಿದಂತೆ ಭಾಸವಾಗುವುದು, ಬೆನ್ನಿನ ಭಾಗದಲ್ಲಿ ಸ್ವಲ್ಪ ನೋವು, ವ್ಯಕ್ತಿ ಕೃಶನಾಗುವುದು, ಬೆಳವಣಿಗೆ ಕುಂಠಿತಗೊಳ್ಳುವುದು, ಸುಸ್ತು, ನಡೆದಾಡಲು ಆಯಾಸ, ಉಸಿರಾಡಲು ಬಾಧೆ ಹೀಗೆ ಅನೇಕ ತೊಂದರೆಗಳು ವ್ಯಕ್ತಿಯನ್ನು ನಿತ್ರಾಣಗೊಳಿಸುತ್ತದೆ.

ನಿವಾರಣೆ ಹೇಗೆ?

ಮೇಲೆ ತಿಳಿಸಿದ ಕಾರಣಗಳಿಂದ ದೂರ ಉಳಿಯುವುದು, ಚಳಿಗಾಲದಲ್ಲಿ ಬಿಸಿ ನೀರಿನ ಸೇವನೆ, ರೋಗ ನಿರೋಧಕ ಶಕ್ತಿ ವೃದ್ಧಿಯಾಗುವ ಪದಾರ್ಥಗಳ ಸೇವನೆ, ಉತ್ತಮ ಹಾಗೂ ಹಿತಕರವಾದ ವ್ಯಾಯಾಮ ಮತ್ತು ಕ್ರೀಡೆ, ಪ್ರಾಣಾಯಾಮ, ಯೋಗ, ಧ್ಯಾನ, ಬಿಸಿನೀರಿನ ಸೇವನೆ, ಸೂಕ್ತ ರೀತಿಯ ಔಷಧಗಳ ಸೇವನೆ, ಪಂಚಕರ್ಮ ಚಿಕಿತ್ಸೆ, ರಸರಸಾಯನಗಳ ಸೂಕ್ತ ಸೇವನೆ ಇತ್ಯಾದಿಗಳಿಂದ ಈ ಶ್ವಾಸರೋಗನ್ನು ಸಂಪೂರ್ಣ ಹತೋಟಿಗೆ ತರಬಹುದು ಹಾಗೂ ನಿವಾರಣೆ ಮಾಡಬಹುದು.

ಇವುಗಳಿಂದ ದೂರವಿರಿ

ಮೊಸರು, ಐಸ್‌ಕ್ರೀಂ, ಬೇಕರಿ ಪದಾರ್ಥ, ಥಂಡಿ ಆಹಾರಗಳು, ತಂಪು ಪಾನೀಯ, ಹವಾ ನಿಯಂತ್ರಣ ಬಳಕೆ, ರಾತ್ರಿ ಜಾಗರಣೆ, ತಂಗಳು ಆಹಾರ ಸೇವನೆ, ಅಧಿಕ ಪರಿಶ್ರಮ, ಧೂಮಪಾನ, ಒಗ್ಗದ ವಾತಾವರಣದಿಂದ ದೂರ ಇರುವುದು (ರಾಸಾಯನಿಕ ದ್ರವ್ಯಗಳ ಸಂಪರ್ಕ, ಪೇಂಟ್ ವಾಸನೆ, ಸಾಕು ಪ್ರಾಣಿಗಳ ರೋಮ), ಶೀತ ಹಾಗೂ ವಾತವನ್ನು ಹೆಚ್ಚಿಸುವ ಆಹಾರಗಳ ಸೇವನೆ (ಸೌತೆಕಾಯಿ, ಹಲಸು, ಸೀಮೆಬದನೆ ಇತ್ಯಾದಿ), ಚಳಿಗೆ ಮೈಯೊಡ್ಡುವುದು, ಹಗಲು ನಿದ್ದೆ, ಗಂಜಿ ಬಸಿಯದ ಅನ್ನ, ಹಸಿ ತರಕಾರಿಗಳ ಅಧಿಕ ಸೇವನೆ.. ಹೀಗೆ ಯಾವುದೆಲ್ಲಾ ಕಫ ಮತ್ತು ವಾತವನ್ನು ಹೆಚ್ಚಿಸಲು ಕಾರಣವಾಗುತ್ತವೋ ಅವುಗಳಿಂದ ದೂರವಿರುವುದು ಉತ್ತಮ.

ಮಕ್ಕಳಲ್ಲಿ ಉಬ್ಬಸ

ಅನುವಂಶೀಯತೆ ಹಾಗೂ ವಾತಾವರಣದಲ್ಲಿರುವ ಮಾಲಿನ್ಯ ಮಕ್ಕಳಲ್ಲಿನ ಉಬ್ಬಸಕ್ಕೆ ಪ್ರಮುಖ ಕಾರಣಗಳು. ರೋಗ ನಿರೋಧಕ ಶಕ್ತಿಯ ಹೆಚ್ಚಳಕ್ಕೆ ಪೋಷಕರು ಹೆಚ್ಚಿನ ಗಮನಹರಿಸಿ ಸೂಕ್ತ ಆಹಾರ ಮತ್ತು ಪಥ್ಯಗಳನ್ನು ಅಳವಡಿಸಿಕೊಳ್ಳುವುದು ಅತಿಮುಖ್ಯ. 

ಯಾವುದು ಉತ್ತಮ?

ಆಹಾರದಲ್ಲಿ ಶುಂಠಿ, ಬೆಳ್ಳುಳ್ಳಿ ಸೇವನೆ, ಬಿಸಿ ನೀರು, ಕಾಳು ಮೆಣಸು, ಹಿಪ್ಪಲಿ, ಜೇನುತುಪ್ಪ, ಒಣದ್ರಾಕ್ಷಿ, ಕುದಿಸಿದ ನೀರಿಗೆ ಎರಡು ಮೂರು ತೊಟ್ಟು ನೀಲಗಿರಿ ತೈಲ ಹಾಕಿ ಹಬೆ ತೆಗೆದುಕೊಳ್ಳುವುದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರತಿನಿತ್ಯ ಒಂದು ಬೆಟ್ಟದ ನೆಲ್ಲಿಕಾಯಿಯನ್ನು ಸೇವಿಸುವುದು, ಸೇಬು, ದಾಳಿಂಬೆ, ಪರಂಗಿಹಣ್ಣು ಇತ್ಯಾದಿಗಳ ಸೇವನೆ, ಸೂಕ್ತ ಔಷಧೋಪಚಾರ, ಹಿತಮಿತ ವ್ಯಾಯಾಮ, ಯೋಗ ಇತ್ಯಾದಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು